ಮತ್ತೆ ಭುಗಿಲೆದ್ದ ಇರಾನ್-ಅಮೆರಿಕ ಸಂಘರ್ಷ: ಅಮೆರಿಕ ಏರ್​ಬೇಸ್ ಮೇಲೆ ರಾಕೆಟ್ ದಾಳಿ

ಟೆಹ್ರಾನ್: ಜನರಲ್ ಖಾಸಿಂ ಸುಲೇಮಾನಿ ಹತ್ಯೆ ಬಳಿಕ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದೆ. ಒಂದು ರೀತಿ ಇಡೀ ವಿಶ್ವದ ಮೇಲೆ ಮೂರನೇ ಮಹಾಯುದ್ಧದ ಆತಂಕ ಆವರಿಸಿದೆ. ಸೇಡಿನ ಶಪಥ ಮಾಡಿರೋ ಇರಾನ್ ವಿಶ್ವದ ದೊಡ್ಡಣ್ಣನ ವಿರುದ್ಧ ಪದೇ ಪದೆ ಪರೋಕ್ಷ ಯುದ್ಧಕ್ಕೆ ಇಳೀತಿದೆ.

ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ:
ಜನವರಿ 8ರಂದು ಇರಾಕ್​ನಲ್ಲಿರೋ ಅಮೆರಿಕದ ಎರಡು ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ಇರಾನ್ ಸೇಡಿನ ಸಮರಕ್ಕೆ ಮುನ್ನುಡಿ ಬರೆದಿತ್ತು. ಇದೀಗ ಅಮೆರಿಕ ಸೈನಿಕರಿದ್ದ ಇರಾಕ್​ನ ಅಲ್ ಬಲಾದ್ ಏರ್​ಬೇಸ್​ ಮೇಲೂ ರಾಕೆಟ್ ದಾಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಅಂತ ಇರಾಕ್ ಸೇನೆ ದಾಳಿಯನ್ನ ಖಚಿತಪಡಿಸಿದೆ. ಜೊತೆಗೆ ಕತ್ಯುಶ ಮಾದರಿಯ 8 ರಾಕೆಟ್​ಗಳಿಂದ ದಾಳಿ ನಡೆದಿದ್ದು, ಇರಾನೇ ಇದನ್ನ ನಡೆಸಿರಬಹುದು ಎನ್ನಲಾಗ್ತಿದೆ.

ಅಂದ್ಹಾಗೆ ಇರಾಕ್ ರಾಜಧಾನಿ ಬಾಗ್ದಾದ್​ನಿಂದ 80 ಕಿಲೋ ಮೀಟರ್ ಉತ್ತರ ಭಾಗದಲ್ಲಿರೋ ಅಲ್ ಬಲಾದ್ ಏರ್​ಬೇಸ್​ ಇರಾಕ್​ನ ಪ್ರಮುಖ ವಾಯುನೆಲೆಯಾಗಿದೆ. ಅಮೆರಿಕದಿಂದ ಇರಾಕ್ ಖರೀದಿಸಿರೋ ಎಫ್​-16 ಯುದ್ಧ ವಿಮಾನಗಳು ಈ ಏರ್​ಬೇಸ್​ನಲ್ಲಿವೆ. ಇಲ್ಲಿ ಅಮೆರಿಕ ಏರ್​ಫೋರ್ಸ್​ನ ಒಂದು ತಂಡ ಹಾಗೂ ಇರಾಕ್​ ಯೋಧರಿದ್ದರು. ಆದ್ರೆ ಇತ್ತೀಚೆಗೆ ಅಮೆರಿಕ ಹಾಗೂ ಇರಾನ್ ಸಂಘರ್ಷ ಹೆಚ್ಚಾದ ಹಿನ್ನೆಲೆ ಸಾಕಷ್ಟು ಜನರನ್ನ ಈ ಏರ್​ಬೇಸ್​ನಿಂದ ಬೇರೆಡೆ ಸ್ಥಳಾಂತರಿಸಲಾಗಿತ್ತು. ನಿನ್ನೆ ರಾಕೆಟ್ ದಾಳಿ ನಡೆದಾಗ ಕೇವಲ 15 ಮಂದಿ ಅಮೆರಿಕ ಯೋಧರು ಹಾಗೂ ಒಂದು ಎಫ್-16 ವಿಮಾನ ಮಾತ್ರವಿತ್ತು ಎನ್ನಲಾಗಿದೆ.

ಸದ್ಯ ಅಲ್ ಬಲಾದ್ ಏರ್​ಬೇಸ್​ ಮೇಲೆ ನಡೆದಿರೋ ರಾಕೆಟ್ ದಾಳಿಯ ಹೊಣೆಯನ್ನ ಇರಾನ್ ಹೊತ್ತುಕೊಂಡಿಲ್ಲ. ಆದ್ರೆ ಮೇಲ್ನೋಟಕ್ಕೆ ಇರಾನೇ ಈ ದಾಳಿ ನಡೆಸಿರಬಹುದು ಅಂತ ಹೇಳಲಾಗ್ತಿದೆ. ತನ್ನ ಏರ್​ಬೇಸ್ ಮೇಲಿನ ದಾಳಿಗೆ ವಿಶ್ವದ ದೊಡ್ಡಣ್ಣ ಅಮೆರಿಕ ಹೇಗೆ ಪ್ರತಿಕ್ರಿಯಿಸುತ್ತೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.

Related Tags:

Related Posts :

Category:

error: Content is protected !!