ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ, ಅವರು ಎಲ್ಲೂ ನಿಯತ್ತಾಗಿ ಇರುವುದಿಲ್ಲ: ಸಾ.ರಾ.ಮಹೇಶ್

ವಿಶ್ವನಾಥ್ ಎಲ್ಲೂ ನಿಯತ್ತಾಗಿ ಇರುವುದಿಲ್ಲ. ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ. ಅವರ ವೈಯಕ್ತಿಕ ಇಚ್ಚೆಗಳು ಈಡೇರದೇ ಹೋದರೆ ಎಲ್ಲರಿಗೂ ಬಯ್ಯುತ್ತಾರೆ. ಕಾಂಗ್ರೆಸ್‌ಗೆ ವಿಶ್ವನಾಥ್ ಮದುವೆಯಾಗಿದ್ದರು.

  • TV9 Web Team
  • Published On - 17:13 PM, 14 Jan 2021
ಎಚ್​.ವಿಶ್ವನಾಥ್, ಸಾ.ರಾ.ಮಹೇಶ್​

ಮೈಸೂರು: ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ಸಿಎಂ ಯಡಿಯೂರಪ್ಪ ವಿರುದ್ದ ಎಂಎಲ್ಸಿ ವಿಶ್ವನಾಥ್ ವಾಗ್ದಾಳಿ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸದಂತೆ, ವಿಶ್ವನಾಥ್‌ ಅವರನ್ನು ಜೆಡಿಎಸ್‌ ಶಾಸಕ ಸಾ.ರಾ ಮಹೇಶ್ ಮತ್ತೊಮ್ಮೆ ಕುಟುಕಿದ್ದಾರೆ.

ವಿಶ್ವನಾಥ್ ಎಲ್ಲೂ ನಿಯತ್ತಾಗಿ ಇರುವುದಿಲ್ಲ. ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ. ಅವರ ವೈಯಕ್ತಿಕ ಇಚ್ಚೆಗಳು ಈಡೇರದೇ ಹೋದರೆ ಎಲ್ಲರಿಗೂ ಬಯ್ಯುತ್ತಾರೆ. ಕಾಂಗ್ರೆಸನ್ನು ವಿಶ್ವನಾಥ್ ಮದುವೆಯಾಗಿದ್ದರು. ಅವರು ಜೆಡಿಎಸ್‌ಗೆ ಬಂದಾಗ ನಾವು ಕೂಡಾವಳಿ ಮಾಡಿಕೊಂಡೆವು. ಅವರು ಬಂದಾಗಲೇ ಕಾಂಗ್ರೆಸ್​ನ ಹಲವು ಮುಖಂಡರು ಹೇಳಿದ್ದರು. ಇವರು ಸರಿ ಇಲ್ಲ ಅಂತಾ. ಆದರೂ ನಾವು ನಂಬಿದೆವು. ನಮ್ಮ ಪಕ್ಷದಲ್ಲಿ 15-20 ತಿಂಗಳು ಇದ್ದರು. ನಂತರ ಪಾರ್ಟ್ ಪೇಮೆಂಟ್​ನಲ್ಲಿ ಬಿಜೆಪಿ ಅವರು ಕರೆದುಕೊಂಡು ಹೋಗಿದ್ದರು.

ಈ ಪರಿಸ್ಥಿತಿ ನಿಮಗೆ ಬರುತ್ತೇ ಅಂತಾ ಮೊದಲೇ ಹೇಳಿದ್ದೇ. ಆಗ ವೈಯಕ್ತಿಕ ದ್ವೇಷದಿಂದ ಹೇಳಿದರು ಅಂದುಕೊಂಡಿದ್ದರು. ಜೆಡಿಎಸ್ ಬಿಟ್ಟಿದ್ದು ವೈಯಕ್ತಿಕ ಆಸೆಗಳಿಗೆ ಅಂತಾ ಹೇಳಿದ್ದೆ. ಎಷ್ಟಕ್ಕೆ ಸೇಲಾಗಿದ್ರಿ ಅಂತಾನೂ ಕೇಳಿದ್ದೆ. ಅದಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು. ಈಗ ಸತ್ಯ ಎಲ್ಲರಿಗೂ ಗೊತ್ತಾಗಿದೆ ಎಂದರು.

ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪುವವರಲ್ಲ..
ಅಲ್ಲದೆ ವಿಶ್ವನಾಥ್‌ ರಾಜಕಾರಣದ ದುರಂತ ವ್ಯಕ್ತಿಯಾಗುತ್ತಾರೆ ಅಂತಾ ಹೇಳಿದ್ದೆ. ಯಾರು ನಂಬಲಿಲ್ಲ ಈಗ ಸತ್ಯವಾಗಿದೆ. ನಾನು 20 ವರ್ಷದಿಂದ ಯಡಿಯೂರಪ್ಪ ಅವರನ್ನು ನೋಡಿದ್ದೇನೆ. ಅವರು ಕೊಟ್ಟ ಮಾತಿಗೆ ತಪ್ಪುವವರಲ್ಲ. 15 ಜನರನ್ನು ಮಂತ್ರಿ ಮಾಡಿದ್ದಾರೆ. ಆದರೆ ನಿಮಗೆ ಕೃತಜ್ಞತೆ ಇಲ್ಲ. ನೀವು ಸಹಾಯ ಮಾಡಿದವರನ್ನೇ ದೂರುತ್ತೀರಾ. ಅದೇ ಕಾರಣಕ್ಕೆ ಕಾಂಗ್ರೆಸ್‌ನಿಂದ ತಿರಸ್ಕೃತರಾದಿರಿ. ಜೆಡಿಎಸ್‌ನಿಂದ ಹೋದ್ರಿ, ಈಗ ಬಿಜೆಪಿ ಅವರು ಕೈ ಬಿಟ್ಟಿದ್ದಾರೆ.

ಅನರ್ಹ ಎಂದು ನ್ಯಾಯಾಲಯ ತೀರ್ಪು ಕೊಟ್ಟಿರುವಾಗ  ಹೇಗೆ ಮಂತ್ರಿ ಮಾಡುತ್ತಾರೆ ? ಸಿಎಂ ಆದವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಸ್ವಾರ್ಥಕ್ಕೆ ಪಕ್ಷದ ನಾಯಕರು ಕಾರ್ಯಕರ್ತರಿಗೆ ಮೋಸ ಮಾಡಿದರೆ ಏನಾಗುತ್ತೇ ಅನ್ನೋದಕ್ಕೆ ಇದು ಎಲ್ಲರಿಗೂ ಪಾಠ.  ನಿಮ್ಮ ಈ ಸ್ಥಿತಿಗೆ ನಿಮ್ಮ ದುರಾಸೆ ಕಾರಣ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರಣ ಅಲ್ಲ. ನಾಲ್ಕು ಬಾರಿ ಸಿಎಂ ಆದವರು ಯಡಿಯೂರಪ್ಪ. ಅವರನ್ನು ಪ್ರೀತಿಯಿಂದ ಗೆಲ್ಲಬಹುದು ಹೆದರಿಸಿ ಗೆಲ್ಲಲು ಸಾಧ್ಯವಿಲ್ಲ.

ಎಂಎಲ್​ಸಿ ಸ್ಥಾನ ಸಹ ಕಳೆದುಕೊಳ್ಳುತ್ತೀರಾ.
ಇನ್ನಾದರೂ ವಿಶ್ವನಾಥ್ ಕಥೆ ಬರೆಯುತ್ತಾರಲ್ಲ ಅದನ್ನು ಮಾಡಲಿ. ಬೆಂಗಳೂರಿನಿಂದ ಬಾಂಬೆವರೆಗೂ ಕಥೆ ಬರೆಯುತ್ತೇನೆ ಅಂದಿದ್ದೀರಲ್ಲಾ ಅದನ್ನು ಬರೆದುಕೊಂಡು ಇರಿ ಎಂದರು. ಯಡಿಯೂರಪ್ಪ ಅವರನ್ನು ಯಡಿಯೂರು ಸಿದ್ದಲಿಂಗೇಶ್ವರನ ಬಳಿ ಕರೆದ ವಿಚಾರಕ್ಕೆ ಸಂಬಂಧಿಸದಂತೆ ಮಾತಾನಾಡಿದ ಸಾ.ರಾ.ಮಹೇಶ್​, ಒಮ್ಮೆ ಗ್ರಾಮದೇವತೆ ಬಳಿ ಬಂದು ಮಂತ್ರಿ ಸ್ಥಾನ ಕಳೆದುಕೊಂಡಿದ್ದೀರಾ. ಈಗ ಸಿದ್ಧಲಿಂಗೇಶ್ವರ ಬಳಿ ಕರೆಯುತ್ತಿದ್ದೀರಾ, ಇರುವ ಎಂ.ಎಲ್‌ಸಿ ಸ್ಥಾನ ಸಹ ಕಳೆದುಕೊಳ್ಳುತ್ತೀರಾ. ಅವರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೇ. ನೀವು ಬಿಜೆಪಿ ಎಂಎಲ್‌ಸಿ ಆಗಿದ್ದೀರಾ ಅಲ್ಲಾದರೂ ನಿಯತ್ತಾಗಿರಿ ಎಂದು ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ್ ಹಳ್ಳಿ ಹಕ್ಕಿ ವಿರುದ್ದ ಗುಟುರು ಹಾಕಿದರು.

ಯಡಿಯೂರಪ್ಪನವರೇ.. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನ ಸಿದ್ಧಲಿಂಗೇಶ್ವರನು ಕ್ಷಮಿಸೋಲ್ಲ: H.ವಿಶ್ವನಾಥ್