ಕಲಬುರಗಿ ವಿಮಾನ ನಿಲ್ದಾಣಕ್ಕೆ ಒಂದು ವರ್ಷದ ಸಂಭ್ರಮ: ಮತ್ತಷ್ಟು ಗರಿಗೆದರಲು ಸಜ್ಜಾದ ಏರ್​ಪೋರ್ಟ್​

  • KUSHAL V
  • Published On - 19:40 PM, 22 Nov 2020

ಕಲಬುರಗಿ: ಜಿಲ್ಲೆಯಲ್ಲೊಂದು ವಿಮಾನ ನಿಲ್ದಾಣ ಆಗಬೇಕು. ಅಲ್ಲಿಂದ ವಿಮಾನ ಹಾರಾಡಬೇಕು ಎಂಬ ಕನಸು ಈಡೇರಿ ಇಂದಿಗೆ ಒಂದು ವರ್ಷವಾಗಿದೆ. ಕಳೆದ ನವೆಂಬರ್​ 22ರಿಂದ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಶುರುವಾಗಿದೆ.

ಕಲಬುರಗಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ. ಬೆಂಗಳೂರಿನಿಂದ ಬಹಳಷ್ಟು ದೂರದಲ್ಲಿ ಇದೆ. ಹಾಗಾಗಿ, ಅಲ್ಲೊಂದು ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ದಶಕಗಳ ಕನಸಾಗಿತ್ತು. ಹಾಗೇ ಅದು ನಿರ್ಮಾಣವಾಗಿ, ವಿಮಾನಗಳ ಹಾರಾಟವೂ ಶುರುವಾಗಿ ಒಂದು ವರ್ಷದಲ್ಲಿ, ನಿರೀಕ್ಷೆಗೂ ಮೀರಿ ಬರೋಬ್ಬರಿ 37,016 ಮಂದಿ ಪ್ರಯಾಣಿಸಿದ್ದಾರೆ.
2006ರಲ್ಲಿ ಅಡಿಗಲ್ಲು.. ಆದ್ರೆ 2019ರಲ್ಲಿ ಲೋಕಾರ್ಪಣೆ
ಜಿಲ್ಲೆಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ 2006ರಲ್ಲೇ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಅಡಿಗಲ್ಲು ಸ್ಥಾಪಿಸಿದ್ದರು. ಆದರೆ, ವಿಮಾನ ನಿಲ್ದಾಣ ಕಾಮಗಾರಿ ಮುಗಿದು, ವಿಮಾನ ಹಾರಾಟ ಪ್ರಾರಂಭವಾಗಲು ಅನೇಕ ವರ್ಷಗಳೇ ಹಿಡಿದವು. ಅನೇಕರ ಪ್ರಯತ್ನದ ಫಲವಾಗಿ 2019 ರ ನವೆಂಬರ್ 22ರಂದು ವಿಮಾನ ಹಾರಾಟ ಪ್ರಾರಂಭವಾಯಿತು.

ಅಂದ ಹಾಗೆ, ವಿಮಾನ ನಿಲ್ದಾಣದ ಅಡಿಗಲ್ಲು ಹಾಕಿದ್ದ ಸಿಎಂ ಯಡಿಯೂರಪ್ಪನವರೇ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಕೂಡ ಮಾಡಿದ್ದರು. ಇದೀಗ, ಕಳೆದ ಒಂದು ವರ್ಷದಲ್ಲಿ 924 ವಿಮಾನಗಳು ಹಾರಾಟ ನಡೆಸಿವೆ. ಆರಂಭದಲ್ಲಿ ಕೇವಲ ಒಂದೇ ವಿಮಾನ ಬೆಂಗಳೂರಿನಿಂದ ಕಲಬುರಗಿ, ಕಲಬುರಗಿಯಿಂದ ಬೆಂಗಳೂರಿಗೆ ವಾರದಲ್ಲಿ 3 ದಿನ ಮಾತ್ರ ಹಾರಾಟ ನಡೆಸುತ್ತಿತ್ತು. ಆದ್ರೆ ಇದೀಗ ಬೆಂಗಳೂರಿಗೆ 2 ವಿಮಾನಗಳು ಸೇವೆ ಒದಗಿಸುತ್ತಿದೆ. ಜೊತೆಗೆ, ಈಗ ಕಲಬುರಗಿಯಿಂದ ದೆಹಲಿಯ ಹಿಂಡನ್ ವಿಮಾನ ನಿಲ್ದಾಣಕ್ಕೆ ಕೂಡಾ ವಿಮಾನಸೇವೆ ಕಲ್ಪಿಸಲಾಗಿದೆ. ಮುಂದೆ ಕಲಬುರಗಿ ವಿಮಾನ ನಿಲ್ದಾಣದಿಂದ ತಿರುಪತಿ, ಮುಂಬೈ, ಬೆಳಗಾವಿ, ಗೋವಾ, ಹುಬ್ಬಳ್ಳಿಗೆ ಕೂಡಾ ವಿಮಾನಸೇವೆ ಕಲ್ಪಿಸುವ ಚಿಂತನೆ ನಡೆದಿದೆ.

ಕಲಬುರಗಿ ವಿಮಾನ ನಿಲ್ದಾಣದಿಂದ ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಪ್ರಯಾಣ ಮಾಡುತ್ತಿದ್ದಾರೆ. ರಾಜ್ಯ ಮತ್ತು ದೇಶದ ಬೇರಡೆ ಕೂಡಾ ವಿಮಾನಗಳ ಹಾರಾಟಕ್ಕೆ ಇದೀಗ ಬೇಡಿಕೆ ಹೆಚ್ಚಾಗಿದೆ. ರಾತ್ರಿ ವೇಳೆ ಕೂಡಾ ವಿಮಾನಗಳ ಲ್ಯಾಂಡಿಂಗ್ ಸೇವೆ ಆರಂಭಿಸಲಾಗುತ್ತದೆ. ವಿಮಾನಯಾನ ತರಬೇತಿ ಕೇಂದ್ರ ಕೂಡಾ ಬರುವ ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ತಿಳಿಸಿದ್ದಾರೆ.