ಕೊರೊನಾ ಆತಂಕ ನಡುವೆ ಬಿಸಿಲನಾಡಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಜೋರು

ಕಲಬುರಗಿ: ಒಕ್ಕಲಿಗ ಒಕ್ಕದಿದ್ರೆ ಬಿಕ್ಕುವದು ಜಗವೆಲ್ಲಾ ಅನ್ನೋ ಮಾತಿದೆ. ಆದ್ರೆ ಬಿಸಿಲನಾಡು ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಒಂದೆಡೆ ಕೊರೊನಾದ ಆತಂಕ ಹೆಚ್ಚಾಗಿದೆ. ಇನ್ನೊಂದೆಡೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು, ಕೊರೊನಾ ಆತಂಕದ ನಡುವೆ ಕೂಡಾ ಉಳುಮೆ ಪ್ರಾರಂಭಿಸಿದ್ದಾರೆ. ಈಗಾಗಲೇ ಜಿಲ್ಲೆಯ ಅನೇಕ ಕಡೆ ಬಿತ್ತನೆ ಕೂಡಾ ಪ್ರಾರಂಭವಾಗಿದೆ. ಉತ್ತಮ ಮಳೆಯಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆಯಾಗುವುದು ಸಾಮಾನ್ಯವಾಗಿ ಕಡಿಮೆಯೇ. ಹೀಗಾಗಿ ಪ್ರತಿವರ್ಷ ರೈತರು ಸಂಕಷ್ಟ ಪಡುತ್ತಿದ್ದರು. ಆಕಾಶಕ್ಕೆ ಮುಖ ಮಾಡಿ ಮೋಡಗಳನ್ನು ನೋಡುತ್ತಾ, ಎಲ್ಲಿ ಹೋಗುವಿರಿ ಮೋಡಗಳೇ, ಇಲ್ಲಿಯೇ ಸ್ವಲ್ಪ ನಿಲ್ಲಿ. ಇಲ್ಲಿಯೇ ನಿಂತು ಸ್ವಲ್ಪ ಮಳೆ ಸುರಿಸಿ ಅಂತ ಪ್ರಾರ್ಥಿಸುತ್ತಿದ್ದರು. ಬಿತ್ತನೆ ಮಾಡಲಿಕ್ಕೆ ಮಳೆಗಾಗಿ ಕಾದು ಕುಳಿತುಕೊಳ್ಳುತ್ತಿದ್ದರು.

ಮುಂಗಾರು ಮಳೆಗೆ ರೈತರ ಸಂತಸ
ಜಿಲ್ಲೆಯ ಸೇಡಂ, ಚಿಂಚೋಳಿ ತಾಲೂಕನ್ನು ಬಿಟ್ಟರೆ, ಬೇರೆಡೆ ಮಳೆ ಕಡಿಮೆಯಾಗುತ್ತಿತ್ತು. ಹೀಗಾಗಿ ರೈತರು ತೊಗರಿ ಬಿತ್ತನೆ ಮಾಡಲು ಆಗಸ್ಟ್​ವರಗೆ ಕಾಯಬೇಕಿತ್ತು. ಆದ್ರೆ ಈ ಬಾರಿ ಮುಂಗಾರು ಮಳೆ ಜಿಲ್ಲೆಯಾದ್ಯಂತ ಚೆನ್ನಾಗಿ ಆಗಿರುವದರಿಂದ ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಹೆಸರು, ಉದ್ದು ಸೇರಿದಂತೆ ಕಡಿಮೆ ಅವಧಿಯಲ್ಲಿ ಬರುವ ಮುಂಗಾರು ಬೆಳೆಗಳ ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ.

ಇದೀಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಕೊರೊನಾದ ಭಯದಲ್ಲಿ ಮನೆಯಲ್ಲಿಯೇ ಕುಳಿತುಕೊಳ್ಳದೆ ತಮ್ಮ ಜಮೀನುಗಳಿಗೆ ಹೋಗಿ, ಹೊಲಗದ್ದೆಗಳನ್ನು ಹಸನು ಮಾಡಿ, ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ. ಇದೀಗ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅನ್ನದಾತ ಬೆಳದ್ರೆ ಮಾತ್ರ ಉಳಿದವರಿಗೆ ಅನ್ನ ಸಿಗುತ್ತೆ. ನಾವು ಕೊರೊನಾ ಇದೆ ಅಂತ ಕೈಕಟ್ಟಿ ಕೂತರೆ, ದೇಶದ ಜನರ ಹೊಟ್ಟೆಯ ಗತಿಯೇನು ಅಂತ ಹೇಳುವ ರೈತರು, ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಪ್ರತಿ ವರ್ಷ ಕಾಣುತ್ತಿದ್ದ ಬರಗಾಲದ ಛಾಯೆ ಕಾಣಿಸಿಲ್ಲ. ಕೃಷಿಕರು ಮೊಗದಲ್ಲಿ ಮಂದಹಾಸ ಹೆಚ್ಚಾಗಿದೆ. ಆದ್ರೆ ಈ ಮಂದಹಾಸ ಹೀಗೆ ಇರಬೇಕಂದ್ರೆ ಆಗಾಗ ಮಳೆಯಾಗುತ್ತಿದ್ದರೆ ಮಾತ್ರ ಸಾದ್ಯ. ಯಾಕಂದ್ರೆ ಜಿಲ್ಲೆಯ ಬಹುತೇಕ ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಇದೀಗ ಮಳೆ ಬಂದು ಮುಂದೆ ಕೈಕೊಟ್ರೆ ರೈತರ ಸಂಕಷ್ಟ ಮಾತ್ರ ತಪ್ಪೋದಿಲ್ಲ. -ಸಂಜಯ್ ಚಿಕ್ಕಮಠ

Related Tags:

Related Posts :

Category:

error: Content is protected !!