ಸಿನಿಮಾ ಹೀರೋಗಾಗಿ ಬಂಡೀಪುರದಲ್ಲಿ ರಾತ್ರಿ ಸಫಾರಿ! ಕಾನೂನುಬಾಹಿರ ವಿಡಿಯೋ ವೈರಲ್

  • KUSHAL V
  • Published On - 10:50 AM, 23 Oct 2020

ಮೈಸೂರು: ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿದ್ದಾಗಿ ನಟ ಧನ್ವೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಧನ್ವೀರ್​ ರಾತ್ರಿ ಸಫಾರಿ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಸಫಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಧನ್ವೀರ್ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಿರುವುದು ಕಾನೂನುಬಾಹಿರ ಎಂದು ಹಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಿನಿಮಾ ಹೀರೋಗೆ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಲು ಅನುಮತಿ ನೀಡಲಾಗಿದೆ. ಹಾಗಾದ್ರೆ, ಜನಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯಾನಾ ಎಂಬ ಮಾತು ಕೇಳಿಬಂದಿದೆ.

ಬಜಾರ್ ಸಿನಿಮಾ ಖ್ಯಾತಿಯ ಧನ್ವೀರ್​ ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿಕೊಂಡಿದ್ದಾರೆ. ಆದರೆ, ರಾತ್ರಿ ವೇಳೆ ಸಫಾರಿ ಮಾಡುವುದು ಕಾನೂನುಬಾಹಿರ. ಜನಸಾಮಾನ್ಯರು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಹಾಕುತ್ತಾರೆ. ಆದರೆ, ಸೆಲೆಬ್ರಿಟಿಗಳಿಗೆ ಮಾತ್ರ ರೆಡ್ ಕಾರ್ಪೆಟ್ ಹಾಕಿ ಸಫಾರಿ ನಡೆಸಲಾಗುತ್ತಿದೆ.

ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂದು ಸಫಾರಿಗೆ ಸಮಯ ನಿಗದಿ ಮಾಡಲಾಗಿದೆ. ಆದರೆ ಸೆಲೆಬ್ರಿಟಿಗಳಿಗಾಗಿ ಇಷ್ಟ ಬಂದಂತೆ ರಾತ್ರಿ ವೇಳೆ ಸಫಾರಿ ನಡೆಸುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಸಿಟ್ಟು ಹೊರಹಾಕಿದ್ದಾರೆ. ಇನ್ನು ನಟನ ವಿಡಿಯೋ ಬಗ್ಗೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಧನ್ವೀರ್​ ತಮ್ಮ ರಾತ್ರಿ ಸಫಾರಿ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.