ಕನ್ನಡಾಂಬೆಯ ದೇಗುಲವಿದು -ಭುವನೇಶ್ವರಿಯ ನಿತ್ಯ ಆರಾಧಿಸುವ ಸ್ಥಳವಿದು

  • TV9 Web Team
  • Published On - 21:13 PM, 31 Oct 2020

ನವೆಂಬರ್ ಬಂತೆಂದರೆ ಸಾಕು ಕರುನಾಡಿನಲ್ಲಿ ಕೆಂಪು ಹಳದಿ ಬಾವುಟಗಳು ರಾರಾಜಿಸುತ್ತವೆ. ಗಡಿ ಜಿಲ್ಲೆ ಚಾಮರಾಜನಗರದಿಂದ ರಾಯಚೂರಿನವರೆಗೂ ಕನ್ನಡದ ಕಹಳೆ ಮೊಳಗುತ್ತದೆ. ನವೆಂಬರ್ ತಿಂಗಳು ಸಂಪೂರ್ಣವಾಗಿ ಕನ್ನಡಮಯವಾಗಿರುತ್ತದೆ. ಆದರೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಮಾತ್ರ ಪ್ರತಿನಿತ್ಯ ಕನ್ನಡಾಂಬೆ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ ಅಭಿಷೇಕದಿಂದ ಆರಂಭವಾಗಿ ಹೂವಿನ ಅಲಂಕಾರ, ಆಭರಣಗಳ ಅಲಂಕಾರ ಸೇರಿ ಕನ್ನಡದ ದೇವತೆಯ ಸೇವೆ ನಿತ್ಯ ನಿರಂತರವಾಗಿ ಸಾಗುತ್ತಿರುತ್ತದೆ.

ಹೌದು, ಇದು ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪದ ಕನ್ನಡಾಂಬೆಯ ಭುವನೇಶ್ವರಿ ದೇವಸ್ಥಾ‌ನ. ಈ ದೇವಸ್ಥಾನವಿರುವುದು ವಿಶ್ವವಿಖ್ಯಾತ ಮೈಸೂರು ಅರಮನೆಯ ಒಳ ಆವರಣದಲ್ಲಿ. ಈ ದೇವಸ್ಥಾನವನ್ನು 1951ರಲ್ಲಿ ಯದುವಂಶದ ಅರಸು ಜಯಚಾಮರಾಜೇಂದ್ರ ಒಡೆಯರ್ ಅವರು ನಿರ್ಮಾಣ ಮಾಡಿದ್ದರು. ಯದುವಂಶದ ಅಧಿದೇವತೆ ನಾಡದೇವತೆ ತಾಯಿ ಚಾಮುಂಡೇಶ್ವರಿ.

ದೈವ ಭಕ್ತರಾರಾಗಿದ್ದ ಯದುವಂಶದ ಅರಸರು ಮೈಸೂರು ಅರಮನೆಯ ಒಳ ಆವರಣ ಮತ್ತು ಹೊರ ಆವರಣದಲ್ಲಿ ಸಾಕಷ್ಟು ದೇವಸ್ಥಾನಗಳು ಗುಡಿಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಪ್ರಮುಖವಾದವು ಕೋಟೆಯ ಹೊರಗಿರುವ ಕೋಟೆ ಆಂಜನೇಯ, ಕೋಟೆ ಗಣಪತಿ, ಕೋಟೆ ಮಾರಮ್ಮ ದೇವಸ್ಥಾನಗಳು. ಇನ್ನು ಕೋಟೆಯ ಒಳಗೆ ಇರುವ ತ್ರಿಣೇಶ್ವರ, ವೇಣುಗೋಪಾಲಸ್ವಾಮಿ, ವರಹಾ ದೇವಸ್ಥಾನಗಳು ಪ್ರಮುಖವಾದವು. ಇದರ ಜೊತೆಗೆ ಕನ್ನಡಾಂಬೆಗೂ ನಿತ್ಯ ಪೂಜೆ ಸಲ್ಲಬೇಕು ಅನ್ನುವ ಕಾರಣಕ್ಕೆ ಭುವನೇಶ್ವರಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.

ದೇವಸ್ಥಾನದ ವಿಶೇಷತೆ
ಈ ದೇವಾಲಯವನ್ನು 1951 ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದರು. ಮೈಸೂರಿನ ಪ್ರಸಿದ್ಧ ಶಿಲ್ಪಿ ಸಿದ್ದಲಿಂಗಸ್ವಾಮಿಯವರು ಭುವನೇಶ್ವರಿಯ ಮುಖ್ಯ ವಿಗ್ರಹವನ್ನು ಕೆತ್ತಿದ್ದಾರೆ.

ದೇವಾಲಯದ ಸುತ್ತಲೂ ಕೋಟೆಯನ್ನು ನಿರ್ಮಿಸಲಾಗಿದೆ. ಭುವನೇಶ್ವರಿಯ ವಿವಿಧ ರೂಪಗಳನ್ನು ಕೆತ್ತಲಾಗಿದೆ. ಈ ದೇವಾಲಯದಲ್ಲಿ ಸೂರ್ಯ, ಮಹಾ ವಿಷ್ಣು, ಮಹೇಶ್ವರ, ರಾಜರಾಜೇಶ್ವರಿ, ಗಣಪತಿ ಮತ್ತು ಚಾಮುಂಡೇಶ್ವರಿ ಪ್ರತಿಮೆಗಳಿವೆ.

ಈ ದೇವಾಲಯವು ದೊಡ್ಡ ಸೂರ್ಯಮಂಡಲವನ್ನು ಹೊಂದಿದೆ. ಫೆಬ್ರವರಿ- ಮಾರ್ಚ್‌ನಲ್ಲಿ ಆಚರಿಸುವ ರಥಸಪ್ತಮಿ ಹಬ್ಬದ ವೇಳೆ ಹಾಗೂ ಕನ್ನಡ ರಾಜ್ಯೋತ್ಸವದ ದಿನ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇನ್ನು ಈ ದೇವಸ್ಥಾನದ ಒಳಗೆ ಇರುವ ಬನ್ನಿ ಮರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿವರ್ಷ ಯದುವಂಶದ ಅರಸರು ವಿಜಯದಶಮಿ ದಿವಸ ವಿಜಯಯಾತ್ರೆಯ ಮೂಲಕ ಆಗಮಿಸಿ ದೇವಸ್ಥಾನದ ಆವರಣದಲ್ಲಿರುವ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಪರಂಪರೆ ಈಗಲೂ ಆಚರಣೆಯಲ್ಲಿದೆ‌.

ದೇವಸ್ಥಾನದಲ್ಲಿದೆ ವಿಶೇಷ ಶಕ್ತಿ ಯಂತ್ರ
ಕನ್ನಡಾಂಬೆಯ ದೇಗುಲದಲ್ಲಿ ಸಾಕಷ್ಟು ಶಕ್ತಿಶಾಲಿ ಭುವನೇಶ್ವರಿ ಯಂತ್ರವಿದೆ. ಇದನ್ನು ಸೂರ್ಯಯಂತ್ರದ ಒಳಗೆ ಇರಿಸಲಾಗಿದೆ. ಇದರ ಒಳಗೆ ಬೀಜಾಕ್ಷರ ಮಂತ್ರವನ್ನು ಬರೆಯಲಾಗಿದೆ. ವೈಜ್ಞಾನಿಕ ಅಂಶಗಳನ್ನು ಅಳವಡಿಸಿ ಇದನ್ನು ತಯಾರಿಸಲಾಗಿದೆ. ಇದನ್ನು ನೋಡಿದರೆ ವರ್ಚಸ್ಸು ವೃದ್ದಿಯಾಗಲಿದೆ. ಈ ಪವಿತ್ರ ಯಂತ್ರ ಪೂಜಿಸಿ ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಸಿದ್ದಿಸುತ್ತದೆ ಅನ್ನೋ ನಂಬಿಕೆ ಸಹ ಇದೆ.

ಕನ್ನಡಾಂಬೆಗೆ ನಿತ್ಯೋತ್ಸವ..
ಇನ್ನು ಪ್ರತಿನಿತ್ಯ ಅರಮನೆಯ ಭುವನೇಶ್ವರಿ ದೇಗುಲದಲ್ಲಿ ಕನ್ನಡಾಂಬೆಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣ ಶಾಸ್ತ್ರಿಗಳು ಬೆಳಗ್ಗೆ ಮತ್ತು ಸಂಜೆ ಶ್ರದ್ದಾಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ದೇವಸ್ಥಾನಕ್ಕೆ ಬರುವ ಸೂರ್ಯನಾರಾಯಣ ಶಾಸ್ತ್ರಿಗಳು ಭುವನೇಶ್ವರಿಗೆ ನೀರಿನ ಅಭಿಷೇಕ‌ ಮಾಡಿಸುತ್ತಾರೆ.

ನಂತರ ಸ್ವಚ್ಛಗೊಳಿಸಿ ಅಮ್ಮನವರಿಗೆ ವಸ್ತ್ರಧಾರಣೆ ಮಾಡಿ ವಿವಿಧ ಹೂವುಗಳಿಂದ ಅಲಂಕಾರ ಮಾಡುತ್ತಾರೆ. ಆಭರಣಧಾರಣೆ ಮಾಡಿದ ನಂತರ ಮಂಗಳಾರತಿ ಸೇವೆ ನೆರವೇರಿಸಲಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ಸಹ ನೀಡಲಾಗುತ್ತದೆ.

ಅರ್ಚಕ ಸೂರ್ಯನಾರಾಯಣರ ಮಾತು..
ನಿತ್ಯ ಭುವನೇಶ್ವರಿಯ ಸೇವೆ ಮಾಡುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಕಳೆದ 23 ವರ್ಷಗಳಿಂದ ನಾನು ಇಲ್ಲಿ ಪೂಜೆ ಸಲ್ಲಿಸುತ್ತಿದ್ದೇನೆ. ಪ್ರತಿನಿತ್ಯ ಕನ್ನಡಾಂಬೆಗೆ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದು ನನ್ನ ಪೂರ್ವಜನ್ಮದ ಪುಣ್ಯ ಅಂತಾ ಕಾಣಿಸುತ್ತದೆ. ಅದಕ್ಕಾಗಿ ಭುವನೇಶ್ವರಿ ಸನ್ನಿಧಿ ನನಗೆ ಪ್ರಾಪ್ತಿಯಾಗಿದೆ. ಪ್ರತಿನಿತ್ಯ ಭಕ್ತರು ಬಂದು ಕನ್ನಡಾಂಬೆಗೆ ಪೂಜೆ ಸಲ್ಲಿಸುತ್ತಾರೆ‌‌. ನನ್ನ ಕೊನೆಯ ಉಸಿರಿರುವವರೆಗೂ ನಾನು ಕನ್ನಡತಾಯಿಯ ಪೂಜೆಯನ್ನು ಮಾಡುತ್ತೇನೆ.
-ಸೂರ್ಯನಾರಾಯಣ ಶಾಸ್ತ್ರಿ, ಅರ್ಚಕರು

ಈ ದೇವಸ್ಥಾನ ನಿಜಕ್ಕೂ ಅಪರೂಪದಲ್ಲಿ ಅಪರೂಪದ ದೇವಸ್ಥಾನ. ರಾಜ್ಯದ ಏಕೈಕ ಕನ್ನಡದೇವಿಯ ದೇಗುಲ ಅನ್ನೋ ಹೆಗ್ಗಳಿಕೆಗೆ ಇದು ಭಾಜನವಾಗಿದೆ. ಇದರ ಜೊತೆಗೆ ಈ ದೇವಸ್ಥಾನ ಯದುವಂಶದ ಅರಸರು ಕನ್ನಡ ಭಾಷೆಯ ಬಗ್ಗೆ ಹೊಂದಿದ್ದ ಕಳಕಳಿ ಹಾಗೂ ಭಾಷಾ ಪ್ರೇಮಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆ, ನವೆಂಬರ್‌ನಲ್ಲಿ ಮಾತ್ರ ಕನ್ನಡ ಕನ್ನಡ ಎನ್ನುವವರ ಮಧ್ಯೆ ಸಾಂಸ್ಕೃತಿಕ ರಾಜಧಾನಿಯಲ್ಲಿ ಸದ್ದಿಲ್ಲದೆ ಕನ್ನಡಾಂಬೆಗೆ ನಿತ್ಯ ಉತ್ಸವ ನಡೆಯುತ್ತಿದೆ.
-ರಾಮ್