ಕಡಲ ತೀರದಲ್ಲಿ ಕನ್ನಡ ರಾಜ್ಯೋತ್ಸವ! ಬೆಂಗಳೂರಿನ ಯುವ ತಂಡದಿಂದ ಕನ್ನಡ ಹಬ್ಬದ ವಿಶಿಷ್ಟ ಆಚರಣೆ

ನೋಡಿದಷ್ಟೂ ಮುಗಿಯದ ಕಡಲ ಕಿನಾರೆ, ತೆಂಗಿನ ಮರಗಳ ಸಾಲು, ಹಾಲಕ್ಕಿ ಜಾನಪದ ಹಾಡು.. ಹಾಲಕ್ಕಿ ಸಮುದಾಯದ ಜೊತೆ ಕನ್ನಡ ರಾಜ್ಯೋತ್ಸವ ಆಚರಣೆಯ ಸ್ವಾರಸ್ಯಕರ ವರದಿಯೊಂದು ಇಲ್ಲಿದೆ.

  • guruganesh bhat
  • Published On - 13:43 PM, 26 Nov 2020
ರಾಜ್ಯೋತ್ಸವ ಸಂಭ್ರಮದಲ್ಲಿ ಹಾಲಕ್ಕಿ ಸಮುದಾಯದ ತಾಯಂದಿರು

ಉತ್ತರ ಕನ್ನಡ: ಕನ್ನಡ ಎನೆ ಕುಣಿದಾಡುವುದೆನ್ನದೆ ಕನ್ನಡ ಎನೆ ಕಿವಿ ನಿಮಿರುವುದು.. ಕನ್ನಡದ ಮಾತು ಕೇಳಿದರೆ ಸಾಕು ಮೈಮನಗಳಲ್ಲಿ ರೋಮಾಂಚನವಾಗುತ್ತದೆ. ಉತ್ಸಾಹಿ ಕನ್ನಡಿಗರು ರಾಜ್ಯದ ಮೂಲೆಮೂಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ರೀತಿಯೇ ವೈವಿಧ್ಯಮಯ. ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಮಹಿಳೆಯರ ಜೊತೆ ಬೆಂಗಳೂರಿನ ಉತ್ಸಾಹಿ ತಂಡವೊಂದು ಆಚರಿಸಿದ ಕನ್ನಡ ರಾಜ್ಯೋತ್ಸವವನ್ನು ಟಿವಿ9 ಡಿಜಿಟಲ್ ನಿಮಗಾಗಿ ತೆರೆದಿಟ್ಟಿದೆ.

ಹಾಲಕ್ಕಿಗಳ ಜಾನಪದ ನೃತ್ಯ

ವಿಶಿಷ್ಟ ಸಾಂಸ್ಕೃತಿಕ ಲೋಕ
ಕರ್ನಾಟಕದ ಬಾರ್ಡೋಲಿ ಅಂಕೋಲ, ಕುಮಟಾ, ಕಾರವಾರಗಳು ಹಾಲಕ್ಕಿಗಳ ತವರು. ಭತ್ತದ ಗದ್ದೆಗಳ ಹತ್ತಿರ ಗುಂಪು ಗುಂಪಾಗಿ ಗುಡಿಸಲು. ಮಣ್ಣಿನ ಗೋಡೆಗೆ ಹುಲ್ಲು ಚಾವಣಿಯ ಎರಡು ಅಂಕಣಗಳ ಸಣ್ಣ ಮನೆ. ಅರೆಕ್ಷಣ ಬಿಡುವಿಲ್ಲದೆ ಹಾಲಕ್ಕಿಗಳು ಹಾಡುವ ಜಾನಪದ ಹಾಡು ಕೇಳುತ್ತ ಕೂತರೆ ಹೊತ್ತು ಗೊತ್ತಿನ ಹಂಗೇ ಇರದು. ಪದ್ಮಶ್ರೀ  ಗಾಯಕಿ ಸುಕ್ರಿ ಬೊಮ್ಮು ಗೌಡ ಮತ್ತು ವೃಕ್ಷಮಾತೆ ತುಳಸಿ ಗೌಡರ ಜೊತೆ ಬೆಂಗಳೂರಿನ ಯುಗ ಟ್ರಸ್ಟ್ ಕನ್ನಡ ರಾಜ್ಯೋತ್ಸವ ಆಚರಿಸಿತು. ಪರಿಸರವಾದಿ ದಿನೇಶ ಹೊಳ್ಳ ಕಾರ್ಯಕ್ರಮ ಸಂಯೋಜಿಸಿದ್ದರು.

ಹಾಲಕ್ಕಿ ಮಹಿಳೆಯರು

ಎಲ್ಲಿ ಅಂತೀರಾ?
ಹೌದು, ಎಲ್ಲಿ ಇವರೆಲ್ಲ ಒಟ್ಟಿಗೆ ರಾಜ್ಯೋತ್ಸವ ಆಚರಿಸಿದರು ಎಂದು ನೀವು ಕೇಳಲೇಬೇಕು. ನೋಡಿದಷ್ಟೂ ಮುಗಿಯದ ಕಡಲ ಕಿನಾರೆ, ತೆಂಗಿನ ಮರಗಳ ಸಾಲು..ಹಾಲಕ್ಕಿ ಜಾನಪದ ಹಾಡುಗಳು.. ಕನ್ನಡ ತಾಯಿಯ ಪೂಜೆಗೆ ಹಿನ್ನೆಲೆ ಸಂಗೀತವೆಂಬಂತೆ ಭೋರ್ಗರೆವ ಅರಬ್ಬೀ.. ಅಂಕೋಲಾ ಸಮುದ್ರ ತೀರದಲ್ಲಿ ಯುವ ಮನಸುಗಳು ಹಾಲಕ್ಕಿ ಜನಪದ ಸಂಸ್ಕೃತಿ ಅರಿತವು. ಮುಂದಿನ ಪೀಳಿಗೆಗೆ ದಾಟಿಸುವ ಕೈಂಕರ್ಯ ಕೈಗೊಂಡರು.

ತಯಾರಿಯಲ್ಲಿ ನಿರತ ಯುಗ ಸಂಸ್ಥೆಯ ಸದಸ್ಯರು

ಯಾರೆಲ್ಲಾ ಇದ್ರು?
ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ, ತುಳಸಿ ಗೌಡ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದರು. ಜೊತೆಗೆ ಸಾಂಪ್ರದಾಯಿಕ ಉಡುಗೆ ಧರಿಸಿದ ಹಾಲಕ್ಕಿ ಮಹಿಳೆಯರು, ಅವರ ಜಾನಪದ ಹಾಡು- ಕುಣಿತ- ಸಂಪ್ರದಾಯಗಳು ಜಾನಪದ ಸಂಸ್ಕೃತಿಯ ಅಧ್ಯಯನಕ್ಕೆಂದೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಯುವ ಮನಸುಗಳನ್ನು ಆಕರ್ಷಿಸಿತು. ಯುಗ ಟ್ರಸ್ಟ್​ನ ಕಾರ್ತಿಕ್ ಪಿ ಎನ್, ಶ್ರೀಕಾಂತ್ ವಿ ಎಸ್, ಯತೀಶ್ ಎಂ, ಪರಮೇಶ್, ರಮ್ಯಾ ಕೆ, ಸರಸ್ವತಿ ಅಕ್ಷಯ್,ಸ್ಟಾಲಿನ್, ಭರತ್​ಕುಮಾರ್, ಪ್ರಜ್ವಲ್, ಕೇಶವ ರಾಮ್ ಭಾಗವಹಿಸಿದ್ದರು.

ಇನ್ನೂ ಏನೆಲ್ಲಾ ಇತ್ತು?
ಇದಕ್ಕೂ ಮೊದಲು ಕೊರೊನಾದಿಂದ ಆರ್ಥಿಕ ತೊಂದರೆಗೊಳಗಾದ ಹಾಲಕ್ಕಿ, ಸಿದ್ದಿ ಸಮುದಾಯದ 80ಕ್ಕೂ ಹೆಚ್ಚು ಕುಟುಂಬಗಳಿಗೆ ಯುಗ ಸದಸ್ಯರು ಆಹಾರ, ಶಿಕ್ಷಣ ಸಾಮಗ್ರಿಗಳನ್ನು ವಿತರಿಸಿದರು. ವಿಧಾನಪರಿಷತ್ ಸದಸ್ಯ, ಸಿದ್ದಿ ಸಮುದಾಯದ ಶಾಂತಾರಾಮ ಸಿದ್ದಿಯವರ ಜೊತೆಯೂ ಸಂಸ್ಥೆಯ ಸದಸ್ಯರು ಸಂವಾದ ನಡೆಸಿದರು. ಕಾಡು ಕಡಲಿನ ಒಡನಾಡಿ ಸಿದ್ದಿ-ಹಾಲಕ್ಕಿಗಳ ಜೊತೆ ಕನ್ನಡ ರಾಜ್ಯೋತ್ಸವ ಆಚರಿಸಿ, ಹೀಗೂ ಕನ್ನಡ ಹಬ್ಬವನ್ನು ಸಂಭ್ರಮಿಸಬಹುದು ಎಂದು ಈ ಉತ್ಸಾಹಿಗಳು ಮಾದರಿಯಾದರು.

ಸಾಂಪ್ರದಾಯಿಕ ಉಡುಗೆಯಲ್ಲಿ ಪದ್ಮಶ್ರಿ ತುಳಸಿ ಗೌಡ