ಡೆಕ್ಕನ್ ಹೆರಾಲ್ಡ್ ತಪ್ಪು ವರದಿಗೆ ಹೈಕೋರ್ಟ್ ಅಸಮಾಧಾನ

ಬೆಂಗಳೂರು: ನ್ಯಾಯಾಂಗದ ಬಗ್ಗೆ ಕಪೋಲಕಲ್ಪಿತ ವರದಿ ಮಾಡಿದ ಹಿನ್ನೆಲೆಯಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಇದೀಗ ಸಂಕಷ್ಟ ಎದುರಾಗಿದೆ. ಸಿವಿಲ್ ಕೋರ್ಟ್ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಹಣ ಸಿಕ್ಕಿತ್ತೆಂದು ಸುಳ್ಳು ಸುದ್ದಿ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಡೆಕ್ಕನ್ ಹೆರಾಲ್ಡ್ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು.

ಸುದ್ದಿ ಮೂಲ ಬಹಿರಂಗಪಡಿಸುವಂತೆ ಸೂಚನೆ:
ಅದೇ ದಿನ ತಪ್ಪು ಸುದ್ದಿ ಪ್ರಕಟಿಸಿದ್ದಕ್ಕೆ ಬೇಷರತ್ ಕ್ಷಮೆ ಕೇಳಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಮರುದಿನವೂ ಮುಖಪುಟದಲ್ಲೇ ಕ್ಷಮೆಯಾಚನೆ ಮಾಡಿತ್ತು. ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಆಧರಿಸಿ ಸುದ್ದಿ ಬಿತ್ತರಿಸಿದ್ದ ಮೂರು ಖಾಸಗಿ ಚಾನಲ್​ಗಳ ವಿರುದ್ಧವೂ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಸಮನ್ಸ್ ಜಾರಿಗೊಳಿಸಿತ್ತು. ಇವತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಹಾಗೂ ವರದಿಗಾರರು ಕೋರ್ಟಿಗೆ ಹಾಜರಾಗಿದ್ದರು. ಸುದ್ದಿ ಮೂಲ ಬಹಿರಂಗಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಪತ್ರಿಕೆ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಜನವರಿ 24ಕ್ಕೆ ವಿಚಾರಣೆ ಮುಂದೂಡಿಕೆ:
ಪತ್ರಿಕೆಯ ವರದಿ ನ್ಯಾಯಾಂಗದ ಮೇಲಿನ ದಾಳಿಯಾಗಿದೆ. ಹೈಕೋರ್ಟ್ ವಿಜಿಲೆನ್ಸ್ ವಿಭಾಗಕ್ಕೆ ನ್ಯಾಯಾಧೀಶರ ಮನೆ ಮೇಲೆ ದಾಳಿ ಮಾಡುವ ಅಧಿಕಾರವಿಲ್ಲ. ನಿಮ್ಮ ವರದಿಗಾರರಿಗೆ ಕೋರ್ಟ್ ವರದಿಗಾರಿಕೆಯ ಪ್ರಾಥಮಿಕ ಜ್ಞಾನವಿಲ್ಲ. ಇಂತಹ ವರದಿಗಳಿಂದ ನ್ಯಾಯಾಧೀಶರ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗುತ್ತಿದೆ. ನ್ಯಾಯಾಧೀಶರಾಗಲು ಹಿಂಜರಿಯುವಂತಹ ಪರಿಸ್ಥಿತಿ ಸೃಷ್ಟಿಯಾಗಲಿದೆ. ಇಂತಹ ತಪ್ಪು ವರದಿಗಾರಿಕೆ ಮುಂದುವರಿಯಬಾರದು. ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸುವುದು ನಮ್ಮ ಉದ್ದೇಶವಲ್ಲ. ಆದರೆ ಇಂತಹ ವರದಿಗಾರಿಕೆ ಮುಂದುವರಿಯದಂತೆ ಮಾರ್ಗ ಕಂಡುಹಿಡಿಯಬೇಕು ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ಜನವರಿ 24ಕ್ಕೆ ಮುಂದೂಡಿದೆ.

ಹೈಕೋರ್ಟ್​ ಅಸಮಾಧಾನ:
ಇದೇ ವೇಳೆ ಮೂರು ಖಾಸಗಿ ಚಾನಲ್​ಗಳ ಪರ ವಕೀಲರೂ ಬೇಷರತ್ ಕ್ಷಮೆಯಾಚಿಸಿದ್ರು. ಡೆಕ್ಕನ್ ಹೆರಾಲ್ಡ್ ವರದಿ ಆಧರಿಸಿಯೇ ಸುದ್ದಿ ಪ್ರಸಾರ ಮಾಡಿದ್ದಾಗಿ ಮೂರು ಖಾಸಗಿ ಚಾನಲ್​ಗಳ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ರು. 9 ಕೋಟಿ ಹಣ ಎಣಿಸುವ ವರದಿ ಪ್ರಸಾರ ಮಾಡಿದ್ದ ಚಾನಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು ಈ ಚಾನಲ್ ಸುಳ್ಳು ವಿಡಿಯೋ ತೋರಿಸಿದ್ದೇಕೆ. ಇದನ್ನು ನೋಡಿ ಸಾಮಾನ್ಯ ಜನ ನ್ಯಾಯಾಂಗದ ಬಗ್ಗೆ ಏನೆಂದುಕೊಳ್ಳಬೇಕು. ನೀವು ವಿಡಿಯೋದಲ್ಲಿ ತೋರಿಸಿದ ಹಣವನ್ನು ಸರ್ಕಾರಕ್ಕೆ ನೀಡಿ. ನ್ಯಾಯಾಂಗಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ನೀವು ಹಣ ನೀಡಿದರೆ ಅದನ್ನು ನ್ಯಾಯಾಂಗದ ಸೌಕರ್ಯಕ್ಕೆ ಬಳಸಿಕೊಳ್ಳುತ್ತೇವೆಂದು ಅಭಿಪ್ರಾಯಪಟ್ಟರು. ನಂತರ ಈ ಪ್ರಕರಣಗಳ ವಿಚಾರಣೆಯನ್ನೂ ಜನವರಿ 24ಕ್ಕೆ ಮುಂದೂಡಿದ್ರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!