ಮೆಟ್ರೋಗಾಗಿ ಜಾಗ ಖಾಲಿ ಮಾಡ್ತಿದೆ ಜಯದೇವ ಫ್ಲೈಓವರ್, ತಟ್ಟಲಿದೆ ಟ್ರಾಫಿಕ್‌ ಸಮಸ್ಯೆ

  • TV9 Web Team
  • Published On - 10:41 AM, 21 Jan 2020
ಮೆಟ್ರೋಗಾಗಿ ಜಾಗ ಖಾಲಿ ಮಾಡ್ತಿದೆ ಜಯದೇವ ಫ್ಲೈಓವರ್, ತಟ್ಟಲಿದೆ ಟ್ರಾಫಿಕ್‌ ಸಮಸ್ಯೆ

ಬೆಂಗಳೂರು: ಜಯದೇವ ಪ್ಲೈಓವರ್‌. 15 ವರ್ಷಗಳಿಂದ ಸಂಚಾರ ನಾಡಿಯಾಗಿ, ಟ್ರಾಫಿಗೆ ಸಮಸ್ಯೆಗೆ ಮುಕ್ತಿ ನೀಡಿತ್ತು. ಆದ್ರೆ ಈ ಫ್ಲೈಓವರ್‌ ಮೆಟ್ರೋ ಕಾಮಗಾರಿಗೆ ಬಲಿಯಾಗುತ್ತಿದೆ. ನೆಲಸಮ ಮಾಡುವ ಕೆಲಸ ಭರ್ಜರಿಯಾಗಿ ನಡೆಯುತ್ತಿದ್ರೆ, ವಾಹನ ಸವಾರರು ಆತಂಕ ಹೊರ ಹಾಕುತ್ತಿದ್ದಾರೆ.

ಜಯದೇವ ಪ್ಲೈಓವರ್‌ ಮೇಲೆ 15 ವರ್ಷಗಳಿಂದ ಲಕ್ಷಾಂತರ ವಾಹನಗಳು ಓಡಾಡಿವೆ. ವಾಹನ ಸವಾರರರಿಗೆ ಸಿಲ್ಕ್‌ ಬೋರ್ಡ್‌ನಲ್ಲಿ ಆಗುತ್ತಿದ್ದ ಟ್ರಾಫಿಕ್‌ನಿಂದ ಮುಕ್ತಿ ನೀಡಿದೆ. ಅದೆಷ್ಟೋ ಜನರಿಗೆ ಆಫೀಸ್‌ಗೆ ಲೇಟಾಗಿ ಹೋಗುವುದನ್ನ ತಪ್ಪಿಸಿ, ಸಂಬಳ ಕಟ್ ಆಗುವುದನ್ನ ತಪ್ಪಿಸಿದೆ. ಆದ್ರೆ ಈಗ ಅದೆಷ್ಟೋ ಜನರ ಸಂಚಾರ ನಾಡಿ ಆಗಿದ್ದ ಈ ಜಯದೇವ ಫ್ಲೈಓವರ್‌ನನ್ನ ಮೆಟ್ರೋ ಬಲಿ ಪಡೆದಿದೆ.

ಜಯದೇವ ಫ್ಲೈ ಓವರ್‌ ನುಂಗಿ ಹಾಕಿದ ಮೆಟ್ರೋ!
ನಿಜ.. ಒಂದು ಬೇಕು ಅಂದ್ರೆ ಇನ್ನೊಂದನ್ನ ಕಳೆದುಕೊಳ್ಳಬೇಕು ಅಂತಾರೆ. ಈ ಮಾತು ಈಗ ನಿಜವಾಗಿದೆ. ಯಾಕಂದ್ರೆ ಮೆಟ್ರೋ ಕಾಮಗಾರಿಗಾಗಿ 2004ರಲ್ಲಿ ಉದ್ಘಾಟನೆಯಾದ ಜಯದೇವ ಫ್ಲೈಓವರ್‌ ಬಲಿಯಾಗಿದೆ. ಮೆಟ್ರೊ ಅಭಿವೃದ್ಧಿಗಾಗಿ ಬಿಎಂಆರ್‌ಸಿಎಲ್‌ ಈ ಮೇಲ್ಸೇತುವೆಯನ್ನ ತೆರುವುಗೊಳಿಸುತ್ತಿದೆ.

ಇಪ್ಪತ್ತು ವರ್ಷಗಳ ಹಿಂದೆ ಬರೋಬ್ಬರಿ 13 ಕೋಟಿ 50 ಲಕ್ಷ ಹಣ ಖರ್ಚು ಮಾಡಿ ಕಟ್ಟಿಸಿದ್ದ ಈ 500ಮೀಟರ್ ಅಂತರದ ಈ ಮೇಲ್ಸೇತುವೆ ಬನಶಂಕರಿ, ಕೋರಮಂಗಲ, ಸೌತ್ ಎಂಡ್ ಸರ್ಕಲ್, ಬಿಟಿಎಂ ಲೇಔಟ್, ಬನ್ನೇರುಘಟ್ಟ ಸೇರಿದಂತೆ ಹಲವು ಕಡೆ ಹೋಗುವ ವಾಹನ ಸವಾರರಿಗೆ ಜೀವನಾಡಿಯಾಗಿತ್ತು. ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತಗೋಳಿಸಿತ್ತು. ಆದ್ರೆ ಇಂದು ಮೆಟ್ರೋ ಹೆಸರಲ್ಲಿ ಇದನ್ನ ತೆರುವುಗೊಳಿಸಲಾಗುತ್ತಿದೆ. ನಿನ್ನೆ ರಾತ್ರಿಯಿಂದ ತೆರವು ಮಾಡುವ ಕಾರ್ಯಾಚರಣೆ ಭರದಿಂದ ಸಾಗಿದೆ. ಜೆಸಿಬಿಗಳ ಮೂಲಕ ಹಂತಹಂತವಾಗಿ ತೆರವು ಕಾರ್ಯಚರಣೆ ಮಾಡಲಾಗುತ್ತಿದೆ.

3 ತಿಂಗಳ‌ು ರಾತ್ರಿ ವೇಳೆ ಮಾತ್ರ ಕಾರ್ಯಾಚರಣೆ!
ಜಯದೇವ ಫ್ಲೈಓವರ್ ತೆರವಿಗೆ ಸಕಲ ಸಿದ್ಧತೆ ಕೈಗೊಂಡು ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಫ್ಲೈಓವರ್ ಮೇಲೆ ನಿನ್ನೆ ರಾತ್ರಿಯಿಂದ ಸಂಚರಿಸಲು ಅವಕಾಶ ಇಲ್ಲ ಎಂದು ಸುತ್ತಮುತ್ತ ನೋಟಿಸ್ ಅಂಟಿಸಿ ಮಾಹಿತಿ ನೀಡಲಾಗಿದೆ. ಇನ್ನು ರಾತ್ರಿ 10 ರಿಂದ ಆರಂಭವಾದ ತೆರವು ಕಾರ್ಯಾಚರಣೆ ಬೆಳಗ್ಗೆ 6 ಗಂಟೆ ತನಕ ನಡೆಯಿತು. ಹೀಗೆ ಮೂರು ತಿಂಗಳ ಕಾಲ ಫ್ಲೈಓವರ್ ತೆರವು ಕಾರ್ಯಚರಣೆ ನಡೆಯಲಿದೆ. ಸಾರ್ವಜನಿಕರ ಓಡಾಟಕ್ಕೆ ಸರ್ವಿಸ್ ರಸ್ತೆ ಮುಕ್ತವಾಗಿದ್ರೂ ಟ್ರಾಫಿಕ್ ಸಮಸ್ಯೆ ಕಾಡಲಿದೆ.

ಒಟ್ನಲ್ಲಿ ಟ್ರಾಫಿಕ್‌ನಿಂದ ಪಾರು ಮಾಡುತ್ತಿದ್ದ ಜಯದೇವ ಫ್ಲೈಓವರ್‌ನನ್ನ ಕಳೆದುಕೊಂಡಿರುವ ವಾಹನ ಸವಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅರಾಮಾಗಿ ಫ್ಲೈಓವರ್‌ ಮೇಲೆ ಹೋಗುತ್ತಿದ್ದವರಿಗೆ ಮತ್ತೆ ಟ್ರಾಫಿಕ್‌ ಸಮಸ್ಯೆ ಇಂದಿನಿಂದ ಕಾಡಲಿದೆ. ಮೆಟ್ರೋ ಕಾಮಗಾರಿಗಾಗಿ ಜಯದೇವ ಫ್ಲೈಓವರ್‌ನನ್ನ ಕಳೆದುಕೊಂಡಿದ್ದೇವೆ.