200 ವರ್ಷದ ಪುರಾತನ ಮನೆ; ಪ್ರವಾಹ ಬಂದರೂ ತನ್ನ ಅಂದ ಕಳೆದುಕೊಳ್ಳದ ನಿವಾಸದಲ್ಲಿ ಬರೋಬ್ಬರಿ 25 ಕೋಣೆಗಳಿವೆ
ಈ ಮನೆಯಲ್ಲಿ 25ಕ್ಕೂ ಹೆಚ್ಚು ಕೊಠಡಿಗಳಿವೆ. ನೂರಾರು ಕಂಬಗಳು ಇವೆ. ಪ್ರತಿಯೊಂದು ಕೊಠಡಿಗಳಲ್ಲೂ ಒಂದೊಂದು ವಿಶೇಷತೆ ಇದೆ. ಇದರಲ್ಲಿ ಈಗ ಸದ್ಯ ನಾಲ್ಕನೇ ತಲೆಮಾರಿನ ಜನ ವಾಸ ಮಾಡುತ್ತಿದ್ದಾರೆ. ಈ ಮನೆಗೆ ಮರು ದುರಸ್ತಿ ಕಾರ್ಯ ಮಾಡಿಲ್ಲ. ಸದ್ಯ ಇದರಲ್ಲಿ ಸುಮಾರು 50 ಜನ ವಾಸ ಮಾಡುತ್ತಿದ್ದಾರೆ.
ಗದಗ: ಹಿಂದಿನ ಕಾಲದ ಹಳೆ ಮನೆಗಳು ಈಗೀನ ಆತ್ಯಾಧುನಿಕ ತಂತ್ರಜ್ಞಾನದ ಮನೆಗಳಿಗಿಂತ ಹೆಚ್ಚು ಬಾಳಿಕೆ ಬರುತ್ತದೆ ಎನ್ನುವ ಮಾತಿಗೆ ಜಿಲ್ಲೆಯ ನರಗುಂದ ತಾಲೂಕಿ ಶಿರೋಳ ಗ್ರಾಮದಲ್ಲಿ ಇರುವ ಮನೆಯೇ ಸಾಕ್ಷಿ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾದ ಈ ಬೃಹತ್ ಮನೆಯನ್ನು ಬರೀ ಕಲ್ಲು ಹಾಗೂ ಹಾಳು ಮಣ್ಣಿನಲ್ಲೇ ಕಟ್ಟಲಾಗಿದೆ. ಇನ್ನೊಂದು ವಿಶೇಷ ಎಂದರೆ ಈ ಮನೆಯಲ್ಲಿ ಎಷ್ಟು ಕೊಠಡಿಗಳು ಇವೆ. ಎಷ್ಟು ಬಾಗಿಲುಗಳಿವೆ. ಎಷ್ಟು ಕಂಬಗಳಿವೆ ಎನ್ನುವುದು ಆ ಮನೆ ಯಜಮಾನರಿಗೂ ಕೂಡ ಗೊತ್ತಿಲ್ಲ. ಇನ್ನು ಪ್ರವಾಹ ಬಂದರೂ ಅಲುಗಾಡದ ಈ ಮನೆಯಲ್ಲಿ ಕಟ್ಟಿಗೆಯಿಂದ ಮಾಡಿದ ಕೆತ್ತನೆ ಕಲೆಗಳು ಆಕರ್ಷಣೀಯವಾಗಿದೆ.
ಸಾಮಾನ್ಯವಾಗಿ ಮನೆ ಕಟ್ಟುವುದು ಒಂದು ಕನಸಾದರೆ ಕಟ್ಟಿರುವ ಮನೆಯನ್ನು ವರ್ಷಗಳ ಕಾಲ ಉಳಿಸಿಕೊಂಡು ಹೋಗಬೇಕು ಎನ್ನವುದು ಒಂದು ಸೋಜಿಗದ ವಿಚಾರ. ಬಹುತೇಕರ ಮನೆ ಅಬ್ಬಬ್ಬ ಅಂದರೆ 50 ವರ್ಷ, ಅದಕ್ಕಿಂತ ಹೆಚ್ಚು ಅಂದರೆ 100 ಬಾಳಿಕೆ ಬರಬಹುದು. ಆದರೆ ಇಲ್ಲೊಂದು ಮನೆ ಇದೆ ಬರೋಬ್ಬರಿ 200 ವರ್ಷಗಳೇ ಈ ಮನೆಗೆ ಕಳೆದಿವೆ. ಆದರೆ ಈ ಮನೆಯ ಅಂದ ಮಾತ್ರ ಇಂದಿಗೂ ಕೂಡ ಮಾಸದಂತೆ ಹಾಗೇ ಇದೆ.
ನರಗುಂದ ತಾಲೂಕಿ ಶಿರೋಳ ಗ್ರಾಮದಲ್ಲಿನ ಈ ಮನೆಯಲ್ಲಿ ಮನೋಹರ್ ವಸ್ತ್ರದ ಕುಟುಂಬ ಈಗ ವಾಸವಾಗಿದೆ. ಈ ಮನೆ ಮೂಲ ಪುರುಷ ಚೆನ್ನವೀರಯ್ಯ ವಸ್ತ್ರದ. ಇದರಲ್ಲಿ ಈಗ ಸದ್ಯ ನಾಲ್ಕನೇ ತಲೆಮಾರಿನ ಜನ ವಾಸ ಮಾಡುತ್ತಿದ್ದಾರೆ. 200 ವರ್ಷವಾದರೂ ಈ ಮನೆ ಮುಕ್ಕಾಗಿಲ್ಲ. 2019-20 ರಲ್ಲಿ ಸತತ ಎರಡು ಭೀಕರ ಪ್ರವಾಹಕ್ಕೆ ಇಡೀ ಗ್ರಾಮವೇ ಮುಳುಗಿ ಹೋಗಿತ್ತು. ಈ ಮನೆಗೂ ಅಪಾರ ನೀರು ನುಗ್ಗಿತ್ತು. ಮಣ್ಣಿನಿಂದ ನಿರ್ಮಾಣ ಮಾಡಿದ ಈ ಮನೆಗೆ ಯಾವಾಗ ಏನಾಗುತ್ತೋ ಎಂಬ ಭಯ ಮಾಲೀರನ್ನು ಕಾಡಿತ್ತು. ಆದರೆ ಈ ಮನೆಗೆ ಮಾತ್ರ ಏನು ಆಗಿಲ್ಲ.
ಈ ಮನೆ ಸಿಮೆಂಟ್ ಇಟ್ಟಿಗೆ, ಸ್ಟೀಲ್ನಿಮದ ನಿರ್ಮಾಣಗೊಂಡಿದ್ದಲ್ಲ. ಬರೀ ಮಣ್ಣು ಅದೂ ಹಾಳು ಮಣ್ಣು. ಇಲ್ಲಿನ ಹಾಳು ಮಣ್ಣಿನಲ್ಲಿ ಈಗಿನ ಸಿಮೆಂಟ್ಗಿಂತಲೂ ಗಟ್ಟಿತನವಿದೆ. ಈ ಮನೆಯ ಒಂದೊಂದು ಗೋಡೆಗಳು ಸುಮಾರ ನಾಲ್ಕು ಫೂಟ್ ಅಗಲವಾಗಿವೆ. ಎರಡು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾದ ಮನೆಯಲ್ಲಿ ಎರಡು ಮುಖ್ಯದ್ವಾರಗಳು ಇವೆ. ಈ ದ್ವಾರಗಳು ಈಗಿನ ಶೈಲಿಯಲ್ಲಿ 200 ವರ್ಷ ಹಿಂದಿನದ್ದಾಗಿದೆ. ಇಡೀ ಮನೆಯನ್ನು ಸಾಗವಾನಿ ಕಟ್ಟಿಗೆಯಿಂದಲೇ ನಿರ್ಮಾಣ ಮಾಡಿದ್ದಾರೆ. ಆ ಸಾಗವಾನಿ ಕಟ್ಟಿಗೆಯಲ್ಲಿ ನಿರ್ಮಾಣ ಮಾಡಿದ ಅಷ್ಟಮುಖದ ಮಂಟಪದ ಮಡಿಗೆ ನೋಡೋಕೆ ಆಕರ್ಷಕವಾಗಿದೆ. ಅಷ್ಟಮುಖ ಮಂಟಪದ ಮಡಿಗೆಯಲ್ಲಿ ಸಾಕಷ್ಟು ಕೆತ್ತನೆಯ ಕಲೆ ಇದ್ದು, ಸುತ್ತಲು ಝೂ ಮರಗಳು ಹಾಕಲಾಗಿದೆ. ಅಂದು ಹಾಕಿದ ಝೂಮರಗಳು ಇಂದಿಗೂ ಹಾಗೆಯೇ ಉಳಿದಿವೆ. ಪ್ರತಿಯೊಂದು ಕೆತ್ತನೆಯಲ್ಲಿ ಒಂದೊಂದು ಕಲೆ ಇದೆ ಎನ್ನುವುದು ವಿಶೇಷ.
200 ವರ್ಷಗಳು ಈ ಮನೆಯಲ್ಲಿ ಗತಿಸಿದ್ರೂ ಈ ಮನೆಯಲ್ಲಿ ಎಷ್ಟು ಕಂಬವಿದೆ ಎನ್ನವುದು ಮನೆಯವರಿಗೆ ಗೊತ್ತಿಲ್ಲ. ಈ ಮನೆಗೆ ನಾಲ್ಕು ತಲೆ ಮಾರಿನ ಇತಿಹಾಸವಿದ್ದು, 200 ವರ್ಷದ ಹಿಂದೆ ಚನ್ನಬಸಯ್ಯ ವಸ್ತ್ರದ ಎಂಬುವರು ಮನೆ ನಿರ್ಮಾಣ ಮಾಡಿದ ಯಜಮಾನ. ಇವ್ರು ಮೂಲತಃ ಆಂಧ್ರ ಪ್ರದೇಶ ರಾಜ್ಯದವರು. ಆಗಿನ ಕಾಲದಲ್ಲಿ ಪ್ಲೇಗ್, ಕಾಲರಾ ರೋಗ ವ್ಯಾಪಕವಾಗಿ ಹರಡುತ್ತಿದ್ದರಿಂದ ಅಂದು ಆಂಧ್ರ ಪ್ರದೇಶ ಬಿಟ್ಟು ಕರ್ನಾಟಕದ ಗದಗ ಜಿಲ್ಲೆಯ ಶಿರೋಳ ಗ್ರಾಮಕ್ಕೆ ಬಂದು ಚನ್ನಬಸಯ್ಯ ವಸ್ತ್ರದ ನೆಲೆಸಿದ್ದಾರೆ. ಇನ್ನು ಇಲ್ಲಿ ನೇಕಾರಿ ಕುಟುಂಬಗಳು ಹೆಚ್ಚಾಗಿದ್ದ ಕಾರಣ ನೇಕಾರರು ತೆಗೆದ ನೂಲಿಗೆ ಬಣ್ಣ ಹಾಕಿ ಇವರು ಮಾರಾಟ ಮಾಡುತ್ತಿದ್ದರಂತೆ. ಆಗ ಭರ್ಜರಿ ವ್ಯಾಪಾರದಲ್ಲಿ ಖ್ಯಾತಿ ಗಳಿಸಿದ ಚನ್ನಬಸಯ್ಯ ವಸ್ತ್ರದ ಈ ಮನೆ ನಿರ್ಮಾಣ ಮಾಡಿದ್ದಾರೆ.
ಈ ಮನೆಯಲ್ಲಿ 25ಕ್ಕೂ ಹೆಚ್ಚು ಕೊಠಡಿಗಳಿವೆ. ನೂರಾರು ಕಂಬಗಳು ಇವೆ. ಪ್ರತಿಯೊಂದು ಕೊಠಡಿಗಳಲ್ಲೂ ಒಂದೊಂದು ವಿಶೇಷತೆ ಇದೆ. ಇದರಲ್ಲಿ ಸದ್ಯ ನಾಲ್ಕನೇ ತಲೆಮಾರಿನ ಜನ ವಾಸ ಮಾಡುತ್ತಿದ್ದಾರೆ. ಈ ಮನೆಗೆ ಮರು ದುರಸ್ತಿ ಕಾರ್ಯ ಮಾಡಿಲ್ಲ. ಸದ್ಯ ಇದರಲ್ಲಿ ಸುಮಾರು 50 ಜನ ವಾಸ ಮಾಡುತ್ತಿದ್ದಾರೆ. ಇವರದು ಅವಿಭಕ್ತ ಕುಟುಂಬವಾಗಿದ್ದು, ಇಂದಿಗೂ ಕೂಡಿ ಬಾಳ್ವೆ ಮಾಡುತ್ತಿದ್ದಾರೆ. ಸುಮಾರು 100 ಎಕರೆ ಜಮೀನಿದ್ದು, ಎಲ್ಲರೂ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಇನ್ನು ಈ ಮನೆಯ ಕೆಲವರು ನೌಕರಿ ಅಂತ ಬೇರೆ ಬೇರೆ ಊರಲ್ಲಿ ವಾಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರೆಗೆ ಎಲ್ಲರೂ ಸೇರುತ್ತಾರೆ.
200 ವರ್ಷ ಪುರಾತನ ಮನೆಯ ವಿಶೇಷತೆ: ಈ ಮನೆಗೆ ಸುಮಾರು 200 ತೊಲೆಗಳಿವೆ. ಸುಮಾರು 25 ಕೋಣೆಗಳಿವೆ, ಸುಮಾರು 25 ಬಾಗಿಲುಗಳು ಇವೆ. 20 ಅಂಕಣಗಳು ಇವೆ. ಜೊತೆಗೆ ಮಹಡಿ ಮನೆ ಇದ್ದು ಮನೆಯ ಒಳಗೆ ಕಾಲಿಡುತ್ತಿದ್ದಂತೆ ಅರಮನೆಯಂತೆ ಕಂಗೊಳಿಸುತ್ತದೆ. ಸುಮಾರು 20 ರಿಂದ 30 ಅಡಿಯಷ್ಟು ಗೋಡೆಗಳು ಇವೆ. ಅಡುಗೆ ಮನೆಯಲ್ಲಿ ಹಳೆಯ ಕಾಲದ ಐದು ಒಲೆಗಳು ಈಗಲೂ ಇವೆ. ಅದರಲ್ಲಿಯೇ ಇಂದಿಗೂ ಅಡಿಗೆ ಮಾಡುತ್ತಾರೆ. ಬೇಸಿಗೆ ಕಾಲಕ್ಕೆ ಹೇಳಿ ಮಾಡಿದಂತಹ ಮನೆಯಾಗಿದ್ದು, ಪ್ರಾಕೃತಿಕ ಎಸಿ ಮನೆಯಂತೆ ಇದೆ. ಕಟ್ಟಿಗೆಯಿಂದ ಮತ್ತು ಮೇಲ್ಚಾವಣಿಗೆ ಮಣ್ಣು ಹಾಕಿದ್ದರಿಂದ ಈ ರೀತಿಯ ವಾತಾವರಣ ಇದೆ. ಇನ್ನು ಇಂತಹ ಮನೆಯಲ್ಲಿ ವಾಸ ಮಾಡೋದಕ್ಕೆ ನಾವು ಪುಣ್ಯ ಮಾಡಿದೀವಿ ಎಂದು ಹೇಳಿದ್ದಾರೆ ಮನೆಯ ಮಾಲೀಕ ಮನೋಹರ.
ಈ ಮನೆಯ ಇನ್ನೊಂದು ವಿಶೇಷ ಅಂದರೆ ಈ ಮನೆಯ ಈಶಾನ್ಯ ದಿಕ್ಕಿನಲ್ಲಿ ಒಂದು ಕೋಣೆಯಿದೆ. ಅದು ಆ ಮನೆಯ ಲಕ್ಷ್ಮಿ ವಾಸಿಸುವ ಸ್ಥಳವಂತೆ. ಇಡೀ ಮನೆಯಲ್ಲಿ ಫ್ಲೋರಿಂಗ್ನಲ್ಲಿ ಟೈಲ್ಸ್ ಹಾಕಿದ್ದಾರೆ. ಆದರೆ ಈ ಕೋಣೆಯಲ್ಲಿ ಇಂದಿಗೂ ಸೆಗಣಿ ರಾಡಿಯಿಂದಲೇ ನೆಲ ಸ್ವಚ್ಚಗೊಳಿಸುತ್ತಾರೆ. ಈ ಕೋಣೆಯಲ್ಲಿ 200 ವರ್ಷಗಳ ಹಳೆಯ ಲಾಕರ್ ಇದೆ. ಇನ್ನು ಹಳೆಯ ಕಾಲದ ಕಾಟ, ಧಾನ್ಯ ಸಂಗ್ರಹಿಸುವ ವಸ್ತುಗಳು ಸೇರಿದಂತೆ ಹಲವು ವಸ್ತುಗಳು ಇಲ್ಲವೆ.
ಆ ಕಾಲದಲ್ಲಿ ದನದ ಕೊಟ್ಟಿಗೆ ದೊಡ್ಡದಾಗಿತ್ತಂತೆ. ಅಲ್ಲಿ ನಾಟಕ ಪ್ರದರ್ಶನ ನಡೆಯುತ್ತಿತ್ತಂತೆ. ಆದರೆ ಕಾಲಕ್ಕೆ ತಕ್ಕಂತೆ ಎಲ್ಲವೂ ಮಾಯವಾಗಿ. ಈಗ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ದನದ ಕೊಟ್ಟಿಗೆ ಮಾಡಿಕೊಂಡಿದ್ದಾರೆ. ಇನ್ನು ಪಂಚಪೀಠದ ಜಗದ್ಗುರುಗಳು ಈ ಭಾಗದಲ್ಲಿ ಎಲ್ಲೇ ಬಂದರು ವಸತಿ ಈ ಮನೆಯಲ್ಲಿಯೇ ನೆಲೆಸುತ್ತಾರೆ. ಇನ್ನು ಹಾನಗಲ್ ಶ್ರೀಗಳು ಈ ಮನೆಗೆ ಬಂದಾಗ ಅವರ ಪಾದುಕೆಗಳು ಇಲ್ಲಿಯೇ ಬಿಟ್ಟು ಹೋಗಿದ್ದಾರಂತೆ. ಇಂದಿಗೂ ಆ ಪಾದುಕೆಗಳಿಗೆ ಈ ಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಇನ್ನು ಪಂಚಪೀಠದ ಲಿಂಗೈಕ್ಯ ವೀರಗಂಗಾಧರ ಶ್ರೀಗಳು ಕೂಡ ಈ ಮನೆಗೆ ಬಂದು ಹೋಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ:
BBK8 Elimination: ಬಿಗ್ ಬಾಸ್ ಮನೆಯಿಂದ ಚಂದ್ರಕಲಾ ಮೋಹನ್ ಎಲಿಮಿನೇಟ್