ಹಾಸನ: ಅಪರಿಚಿತ ವೃದ್ಧರೊಬ್ಬರು ಯಗಚಿ ನದಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ. 50 ಅಡಿ ಎತ್ತರದ ಸೇತುವೆ ಮೇಲಿಂದ ನದಿಗೆ ಜಿಗಿದು ಬಿದ್ದ ಬಳಿಕ ವೃದ್ಧ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ರಕ್ಷಣೆಗಾಗಿ ಸ್ಥಳೀಯರು ತೆರಳುವ ವೇಳೆಗೆ ವೃದ್ಧ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗೋ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಜನರ ಕಣ್ಣೆದುರೇ ವ್ಯಕ್ತಿ ನೀರಿನಲ್ಲಿ ಮುಳುಗಿದ್ದಾರೆ. ಹಾಸನ ಜಿಲ್ಲೆ ಬೇಲೂರು ಸಮೀಪ ಈ ಘಟನೆ ನಡೆದಿದೆ. ಕೆಲವರು ತಕ್ಷಣ ನದಿಗಿಳಿದು ರಕ್ಷಣೆ ಮಾಡಲು ಯತ್ನಿಸಿದರು. ಆದರೂ ವೃದ್ಧ ಬದುಕುಳಿಯಲಿಲ್ಲ. ಮೃತ ವೃದ್ಧನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರೇಮ ವೈಫಲ್ಯದ ಹಿನ್ನೆಲೆ ಠಾಣೆ ಎದುರೇ ಪ್ರೇಮಿ ಆತ್ಮಹತ್ಯೆಗೆ ಯತ್ನ:
ಇನ್ನು, ಗದಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪ್ರೇಮ ವೈಫಲ್ಯದ ಹಿನ್ನೆಲೆ ಠಾಣೆ ಎದುರೇ ಪ್ರೇಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಕ್ರಿಮಿನಾಶಕ ಸೇವಿಸಿ ಅಲ್ಲಾ ಭಕ್ಷ್ ಎಂಬ ಪ್ರೇಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹುಡುಗಿ ಮನೆಯವರು ನಮ್ಮ ಮದುವೆಗೆ ನಿರಾಕರಿಸುತ್ತಿದ್ದಾರೆ. ಮದುವೆಗೆ ನಿರಾಕರಣೆ ಮಾಡಿ ಕಿರುಕುಳ ನೀಡ್ತಿದಾರೆ ಎಂದು ಆತ ಆರೋಪ ಮಾಡಿದ್ದಾನೆ. ನಾನು ಮೃತಪಟ್ಟರೆ ಹುಡುಗಿ ಮನೆಯವರೇ ಕಾರಣವೆಂದೂ ಪತ್ರ ಬರೆದಿಟ್ಟಿದ್ದಾನೆ.
ತೀವ್ರವಾಗಿ ಅಸ್ವಸ್ಥಗೊಂಡಿರುವ ಯುವಕ ಅಲ್ಲಾ ಭಕ್ಷ್, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆತನಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
(aged person jumps into yagachi river commits suicide gadag youth tries to commit suicide due to love failure)