Azadi ka amrit mahotsav Part 4: ಇಂದಿರಾ ಗಾಂಧಿ ಬಂಧನ ತಿಹಾರ್ ಜೈಲಿಗೆ – ಭಾರತದಲ್ಲಿ ಟೆಲಿಕಾಂ ಕ್ರಾಂತಿ -1984 ಅ 31ರಂದು ಇಂದಿರಾ ಹತ್ಯೆ

75 Independence Day: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

Azadi ka amrit mahotsav Part 4: ಇಂದಿರಾ ಗಾಂಧಿ ಬಂಧನ ತಿಹಾರ್ ಜೈಲಿಗೆ - ಭಾರತದಲ್ಲಿ ಟೆಲಿಕಾಂ ಕ್ರಾಂತಿ -1984 ಅ 31ರಂದು ಇಂದಿರಾ ಹತ್ಯೆ
ಇಂದಿರಾ ಗಾಂಧಿ ಬಂಧನ ತಿಹಾರ್ ಜೈಲಿಗೆ - ಭಾರತದಲ್ಲಿ ಟೆಲಿಕಾಂ ಕ್ರಾಂತಿ -1984 ರ ಅಕ್ಟೋಬರ್ 31ರಂದು ಇಂದಿರಾ ಹತ್ಯೆ
S Chandramohan

| Edited By: Rakesh Nayak

Aug 14, 2022 | 8:59 AM

Azadi ka amrit mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳು-ಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

 1. 31. ಇಂದಿರಾಗಾಂಧಿ ಬಂಧನ, 15 ದಿನ ತಿಹಾರ್ ಜೈಲಿನಲ್ಲಿದ್ದ ಇಂದಿರಾಗಾಂಧಿ: ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ 3 ಬಾರಿ ಮಾಜಿ ಪ್ರಧಾನಿ ಇಂದಿರಾಗಾಂಧಿರನ್ನು ಬಂಧಿಸಲಾಗಿತ್ತು. 1977ರ ಆಕ್ಟೋಬರ್ 3 ರಂದು ಇಂದಿರಾಗಾಂಧಿ ಮತ್ತು ಇತರೆ ಮೂವರನ್ನು 2 ಪ್ರಕರಣಗಳಲ್ಲಿ ಸಿಬಿಐ ಬಂಧಿಸಿತ್ತು. 104 ಜೀಪ್ ಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡ ಆರೋಪ ಹಾಗೂ ಭಾರತದಲ್ಲಿ ಆಯಿಲ್ ಡ್ರಿಲ್ಲಿಂಗ್ ಅನ್ನು ಫ್ರೆಂಚ್ ಕಂಪನಿ ಹೆಚ್ಚಿನ ಬಿಡ್ ಕೂಗದೇ ಇದ್ದರೂ ನೀಡಿದ ಆರೋಪದಡಿ ಬಂಧಿಸಲಾಗಿತ್ತು. ಮಾರನೇ ದಿನ ಕೋರ್ಟ್ ಗೆ ಹಾಜರುಪಡಿಸಿದಾಗ, ಇಂದಿರಾಗಾಂಧಿರನ್ನು ಕೋರ್ಟ್ ಬೇಷರತ್ತಾಗಿ ಬಿಡುಗಡೆ ಮಾಡಿತ್ತು. ಏಕೆಂದರೇ ಇಂದಿರಾಗಾಂಧಿ ವಿರುದ್ಧ ಪ್ರಬಲ ಸಾಕ್ಷ್ಯಗಳು ಕೇಸ್ ನಲ್ಲಿ ಇರಲಿಲ್ಲ. ಜೀಪ್ ಹಗರಣದಲ್ಲಿ ಸಾಕ್ಷ್ಯ ಇಲ್ಲದೇ ಇಂದಿರಾಗಾಂಧಿರನ್ನು ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಜೀಪ್ ಹಗರಣದ ಬಗ್ಗೆ ಯಾರೊಬ್ಬರು ಬಾಯಿಬಿಡಲಿಲ್ಲ. ಆದರೇ, ಕೇಂದ್ರದ ಮೊರಾರ್ಜಿ ದೇಸಾಯಿ ಸರ್ಕಾರಕ್ಕೆ ಇಂದಿರಾಗಾಂಧಿರನ್ನು ಜೈಲಿಗೆ ಕಳಿಸಲೇಬೇಕು, ಆ ಮೂಲಕ ಇಂದಿರಾಗಾಂಧಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೇಶದ ಜನರ ಎದುರು ಬಿಂಬಿಸಬೇಕೆಂಬ ಉದ್ದೇಶ ಇತ್ತು. ಕೊನೆಗೆ 1978ರ ಆಕ್ಟೋಬರ್ 20ರಂದು ಪಾರ್ಲಿಮೆಂಟ್ ನ ನಿಂದನೆ, ಶಿಷ್ಟಾಚಾರದ ಉಲಂಘನೆಗಾಗಿ ಜೈಲಿಗೆ ಕಳಿಸುವ ತೀರ್ಮಾನವನ್ನು ಲೋಕಸಭೆಯಲ್ಲಿ ಕೈಗೊಳ್ಳಲಾಗಿತ್ತು. 15 ಗಂಟೆ ಚರ್ಚೆ ನಡೆದ ಬಳಿಕ 279 ಮಂದಿ ಸಂಸದರು ಇಂದಿರಾಗಾಂಧಿರನ್ನು ಜೈಲಿಗೆ ಕಳಿಸುವುದರ ಪರ ಮತ ಚಲಾಯಿಸಿದ್ದರು. 138 ಮಂದಿ ಲೋಕಸಭಾ ಸದಸ್ಯರು ಇಂದಿರಾ ಪರ ಮತ ಚಲಾಯಿಸಿದ್ದರು. ಅಂತಿಮವಾಗಿ ಇಂದಿರಾಗಾಂಧಿರನ್ನು ಬಂಧಿಸಿ ದೆಹಲಿಯ ತಿಹಾರ್ ಜೈಲಿಗೆ ಕಳಿಸಲಾಗಿತ್ತು. ಒಂದು ವಾರ ಕಾಲ ಇಂದಿರಾಗಾಂಧಿ ತಿಹಾರ್ ಜೈಲಿನಲ್ಲಿದ್ದರು . 1978ರ ಡಿಸೆಂಬರ್ ನಲ್ಲಿ ಮತ್ತೆ ಇಂದಿರಾಗಾಂಧಿರನ್ನು ಬಂಧಿಸಲಾಗಿತ್ತು. ಇಂದಿರಾಗಾಂಧಿ ಜೊತೆಗೆ ಪುತ್ರ ಸಂಜಯ್ ಗಾಂಧಿರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳಿಸಲಾಗಿತ್ತು. ವಾರದ ಬಳಿಕ ಇಂದಿರಾಗಾಂಧಿ ಜೈಲಿನಿಂದ ಬಿಡುಗಡೆಯಾಗಿದ್ದರು. ಇಂದಿರಾಗಾಂಧಿ ಜೈಲಿನಲ್ಲಿದ್ದಾಗ ಸೊಸೆ ಸೋನಿಯಾಗಾಂಧಿ ತಿಹಾರ್ ಜೈಲಿಗೆ ಮನೆ ಊಟ ತೆಗೆದುಕೊಂಡು ಹೋಗಿ ಅತ್ತೆಗೆ ನೀಡುತ್ತಿದ್ದರು. ಇಂದಿರಾಗಾಂಧಿರನ್ನು ಜೈಲಿಗೆ ಕಳಿಸಿದ್ದು ಇಂದಿರಾ ಪರ ಅನುಕಂಪದ ಅಲೆ ಏಳಲು ಅವಕಾಶ ನೀಡಿತ್ತು. ಜನತಾ ಸರ್ಕಾರಕ್ಕೆ ತಿರುಗುಬಾಣವಾಗಿತ್ತು. ಇಂದಿರಾಗಾಂಧಿರನ್ನು ಬಂಧಿಸಿದ್ದು ತಪ್ಪು ತೀರ್ಮಾನ ಎಂದು ಮಾಜಿ ಪ್ರಧಾನಿ ಚಂದ್ರಶೇಖರ್ ಬಳಿಕ ಹೇಳಿದ್ದರು.
 2. 32. 1980ರಲ್ಲಿ ಮತ್ತೆ ಇಂದಿರಾಗಾಂದಿ ಪ್ರಧಾನಿ ಹುದ್ದೆಗೆ: ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರ್ಕಾರದಲ್ಲಿ ಪರಸ್ಪರ ವಿರೋಧಾಭಾಸಗಳಿದ್ದವು. ನಾಲ್ಕು ರಾಜಕೀಯ ಪಕ್ಷಗಳು ಸರ್ಕಾರದಲ್ಲಿ ಭಾಗಿಯಾಗಿದ್ದವು . ಮೊರಾರ್ಜಿ ದೇಸಾಯಿ ಪ್ರಧಾನಿಯಾದ ಮೇಲೆ ಮೊರಾರ್ಜಿ ದೇಸಾಯಿ ಸರ್ಕಾರದ ವಿರೋಧಿ ಅಲೆ ಶುರುವಾಯಿತು, ಕಾರ್ಮಿಕರ ಮುಷ್ಕರ, ಬೆಲೆ ಏರಿಕೆ ಸೇರಿದಂತೆ ಕೆಲ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಜನತಾ ಸರ್ಕಾರ ವಿಫಲವಾಯಿತು. ಹೀಗಾಗಿ 1980ರಲ್ಲಿ ಮತ್ತೆ ಲೋಕಸಭಾ ಚುನಾವಣೆ ಎದುರಾಯಿತು. ಈ ಚುನಾವಣೆಯಲ್ಲಿ ದೇಶದಲ್ಲಿ ಮತ್ತೆ ಇಂದಿರಾಗಾಂಧಿ ಪರ ಅಲೆ ಎದ್ದಿತ್ತು. ಜನತಾ ಸರ್ಕಾರದ ಅವಧಿಯಲ್ಲಿ ಈರುಳ್ಳಿಯ ಬೆಲೆಯೂ ಏರಿಕೆಯಾಗಿತ್ತು. ಹೀಗಾಗಿ ಇಂದಿರಾಗಾಂಧಿ ಈರುಳ್ಳಿ ಹಾರವನ್ನು ಹಾಕಿಕೊಂಡೇ ಚುನಾವಣಾ ಱಲಿ ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಬೆಲೆ ಏರಿಕೆಗೆ ಕಾರಣವಾದ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ದೇಶದ ಜನರಿಗೆ ಕರೆ ನೀಡಿದ್ದರು. ಮತ್ತೊಂದೆಡೆ ಜನತಾ ಸರ್ಕಾರದಲ್ಲಿದ್ದ ರಾಜಕೀಯ ಪಕ್ಷಗಳು ಪರಸ್ಪರ ದೂರವಾಗಿ ಕಿತ್ತಾಡಿಕೊಂಡಿದ್ದವು. ಇದರಿಂದಾಗಿ ದೇಶದ ಜನರು ಮತ್ತೆ ಇಂದಿರಾ ಪರ ಒಲವು ತೋರಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.42 ರಷ್ಟು ಮತಗಳೊಂದಿಗೆ 353 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿತ್ತು. ಇಂದಿರಾಗಾಂಧಿ ಮತ್ತೊಮ್ಮೆ ದೇಶದ ಪ್ರಧಾನಿ ಹುದ್ದೆಗೇರಿದ್ದರು. ಚೌಧರಿ ಚರಣ್ ಸಿಂಗ್ ಅವರ ಜನತಾ ಪಾರ್ಟಿ ಸೆಕ್ಯುಲರ್ 41 ಕ್ಷೇತ್ರಗಳಲ್ಲಿ ಗೆದ್ದರೇ, ಚಂದ್ರಶೇಖರ್ ನೇತೃತ್ವದ ಜನತಾ ಪಾರ್ಟಿ 31 ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು.
 3. 33. ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿ ಸಾವು:  ಇಂದಿರಾಗಾಂಧಿ ಪುತ್ರ ಸಂಜಯ್ ಗಾಂಧಿ ರಾಜಕೀಯವಾಗಿ ಸಕ್ರಿಯವಾಗಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ದೇಶದಲ್ಲಿ ಇಂದಿರಾ ಪುತ್ರ ಸಂಜಯ್ ಗಾಂಧಿಯೇ ಆಳ್ವಿಕೆ ನಡೆಸುತ್ತಿದ್ದರು. ಯಾವುದೇ ಹುದ್ದೆ, ಅಧಿಕಾರದಲ್ಲಿ ಇಲ್ಲದಿದ್ದರೂ, ತಾಯಿ ಇಂದಿರಾ ಪರವಾಗಿ ಸಂಜಯ್ ಗಾಂಧಿ ಅಧಿಕಾರ ಚಲಾಯಿಸುತ್ತಿದ್ದರು. ಪಿಎಂ ಮನೆಯಿಂದಲೇ ದೇಶದ ಆಡಳಿತ ನಡೆಯುತ್ತಿತ್ತು. ಕಾಂಗ್ರೆಸ್ ವಿರೋಧಿ ರಾಜ್ಯ ಸರ್ಕಾರಗಳನ್ನು ವಜಾ ಮಾಡಲಾಗಿತ್ತು. ಸಂಜಯ್ ಗಾಂಧಿ ತುರ್ತು ಪರಿಸ್ಥಿತಿ ಕಾಲದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಜಾರಿಗೊಳಿಸಿದ್ದರು . ಬಲವಂತದಿಂದ ಜನರಿಗೆ ವಾಸೆಕ್ಟಮಿ ಅಪರೇಷನ್ ಮಾಡಲಾಗಿತ್ತು. ಐಎಂಎಫ್, ವರ್ಲ್ಡ್ ಬ್ಯಾಂಕ್ ಸೂಚನೆ ಮೇರೆಗೆ ಜನಸಂಖ್ಯಾ ನಿಯಂತ್ರಣಕ್ಕೆ ಇಂದಿರಾ, ಸಂಜಯ್ ಮುಂದಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಬಲವಂತದ ವಾಸೆಕ್ಟಮಿ ಅಪರೇಷನ್‌ ಬಾರಿ ಟೀಕೆಗೊಳಗಾಗಿತ್ತು. ಇನ್ನೂ ದೆಹಲಿಯ ತುರ್ಕಮನ್ ಗೇಟ್ ಬಳಿಯಿಂದ ಜಾಮಾ ಮಸೀದಿ ಕಾಣುತ್ತಿರಲಿಲ್ಲ. ಹೀಗಾಗಿ ಅಡ್ಡವಾಗಿದ್ದ ಸ್ಲಂ ಮನೆಗಳನ್ನು ಸಂಜಯ್ ಗಾಂಧಿ ಸೂಚನೆ ಮೇರೆಗೆ ನೆಲಸಮ ಮಾಡಲಾಯಿತು. ಆಗ ವಿರೋಧಿಸಿದ್ದವರ ಮೇಲೆ ಪೊಲೀಸರು ನಡೆಸಿದ ಫೈರಿಂಗ್ ನಲ್ಲಿ 150 ಮಂದಿ ಸಾವನ್ನಪ್ಪಿದ್ದರು . ಸಂಜಯ್ ಗಾಂಧಿಗೆ ವಿಮಾನದ ಪೈಲಟ್ ಆಗುವ ಆಸೆಯೂ ಇತ್ತು. 1980ರ ಜೂನ್ 23 ರಂದು ದೆಹಲಿಯ ಸಫ್ತರ್ ಜಂಗ್ ವಿಮಾನ ನಿಲ್ದಾಣದಲ್ಲಿ ಸಂಜಯ್ ಗಾಂಧಿ, ದೆಹಲಿ ಪ್ಲೈಯಿಂಗ್ ಕ್ಲಬ್‌ನ ಹೊಸ ವಿಮಾನವನ್ನು ಟೇಕಾಫ್ ಮಾಡಿದ್ದರು. ಸಂಜಯ್ ಗಾಂಧಿಯೇ ವಿಮಾನದ ಪೈಲಟ್ ಆಗಿದ್ದರು. ಆದರೇ, ವಿಮಾನ ಟೇಕಾಫ್ ಆದ 12 ನಿಮಿಷದಲ್ಲಿ ನೆಲಕ್ಕೆ ಅಪ್ಪಳಿಸಿ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಸಂಜಯ್ ಗಾಂಧಿ ಸಾವನ್ನಪ್ಪಿದ್ದರು. ಸಂಜಯ್ ಸಾವಿಗೂ ಮುನ್ನ 3 ಬಾರಿ ಹತ್ಯೆ ಯತ್ನಗಳು ನಡೆದಿದ್ದವು.
 4. 34. ದ್ವಿಸದಸ್ಯತ್ವ ವಿವಾದ, ಬಿಜೆಪಿ ಪಕ್ಷ ಆಸ್ತಿತ್ವಕ್ಕೆ: 1977ರಲ್ಲಿ ಕೇಂದ್ರದಲ್ಲಿ ಆಸ್ತಿತ್ವಕ್ಕೆ ಬಂದ ಜನತಾ ಸರ್ಕಾರದಲ್ಲಿ ನಾಲ್ಕು ರಾಜಕೀಯ ಪಕ್ಷಗಳಿದ್ದವು. ಇದರಲ್ಲಿ ಭಾರತೀಯ ಜನಸಂಘವೂ ಒಂದು. ಜನಸಂಘದ ನಾಯಕರು ಆರ್.ಎಸ್.ಎಸ್. ಸದಸ್ಯರೂ ಕೂಡ ಆಗಿದ್ದರು. ಜನತಾ ಸರ್ಕಾರದಲ್ಲಿದ್ದ ಉಳಿದ ಪಕ್ಷಗಳು ಹೀಗೆ ಏಕ ಕಾಲಕ್ಕೆ ಭಾರತೀಯ ಜನಸಂಘ ಹಾಗೂ ಆರ್.ಎಸ್.ಎಸ್. ಸದಸ್ಯತ್ವಗಳೆರೆಡನ್ನೂ ಹೊಂದುವುದು ಸರಿಯಲ್ಲ. ದ್ವಿಸದಸ್ಯತ್ವ ಬಿಟ್ಟು ಯಾವುದಾದರೊಂದು ಸದಸ್ಯತ್ವ ಮಾತ್ರ ಹೊಂದಬೇಕು ಎಂದು ಪಟ್ಟು ಹಿಡಿದರು. 1976ರಲ್ಲಿ ಜುಲೈನಲ್ಲಿ ಚೌಧರಿ ಚರಣ್ ಸಿಂಗ್, ಆರ್‌ಎಸ್ಎಸ್ ಸದಸ್ಯರಾಗಿರುವ ಭಾರತೀಯ ಜನಸಂಘದ ಸದಸ್ಯರು ಸರ್ಕಾರದ ಭಾಗವಾಗಿರಬಾರದು, ದ್ವಿಸದಸ್ಯತ್ವ ಸರಿಯಲ್ಲ ಎಂದರು. ಆದರೇ, ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯಂಥ ಜನಸಂಘದ ನಾಯಕರು ತಮ್ಮ ಮಾತೃಸಂಘಟನೆಯಾದ ಆರ್.ಎಸ್.ಎಸ್. ಸದಸ್ಯತ್ವ ತ್ಯಜಿಸಲು ಒಪ್ಪಲಿಲ್ಲ. ಇದರಿಂದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಭಾರತೀಯ ಜನಸಂಘದ ನಾಯಕರು ಸರ್ಕಾರದಿಂದ ಹೊರಬಂದರು. 1980ರಲ್ಲಿ ತಮ್ಮದೇ ಹೊಸ ಪಕ್ಷ ಭಾರತೀಯ ಜನತಾ ಪಾರ್ಟಿಯನ್ನು ಸ್ಥಾಪಿಸಿದ್ದರು . ಇದೇ ಪಕ್ಷವೇ ಮುಂದೆ ಬೆಳೆದು ಭಾರತೀಯ ರಾಜಕೀಯ ರಂಗದಲ್ಲಿ ಈಗ ಹೆಮ್ಮರವಾಗಿ ಹೊರಹೊಮ್ಮಿದೆ. 2014, 2019ರ ಲೋಕಸಭಾ ಚುನಾವಣೆಗಳಲ್ಲಿ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. 30 ವರ್ಷದ ಬಳಿಕ ಬಿಜೆಪಿ ಪಕ್ಷಕ್ಕೆ ಕೇಂದ್ರದಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ.
 5. 35. ಭಾರತದಲ್ಲಿ ಟೆಲಿಕಾಂ ಕ್ರಾಂತಿ: ಭಾರತದಲ್ಲಿ 1980ರ ನಂತರ ಟೆಲಿಕಾಂ ಕ್ರಾಂತಿ ಪ್ರಾರಂಭವಾಯಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಾರತದಲ್ಲಿ ಟೆಲಿಕಾಂ ಕ್ರಾಂತಿಯ ಕನಸು ಕಂಡಿದ್ದರು. ರಾಜೀವ್ ಗಾಂಧಿ ಸಲಹೆಗಾರ ಸ್ಯಾಮ್ ಪಿತ್ರೋಡಾರನ್ನು ಭಾರತದ ಟೆಲಿಕಾಂ ಕ್ರಾಂತಿಯ ಹಿಂದಿರುವ ಪ್ರಮುಖ ವ್ಯಕ್ತಿ ಎಂದು ಕರೆಯಲಾಗುತ್ತೆ. ಭಾರತದಲ್ಲಿ ಟೆಲಿಕಾಂ ಕ್ರಾಂತಿ ಖಾಸಗಿ ಕಂಪನಿಗಳಿಂದ ಆರಂಭವಾಯಿತು. ಮೊಬೈಲ್ ಪೋನ್ ಗಳಿಂದ ಟೆಲಿಕಾಂ ಕ್ರಾಂತಿಗೆ ವೇಗ ಸಿಕ್ಕಿತ್ತು. 1989ರಲ್ಲಿ ರಾಜೀವ್ ಗಾಂಧಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ದೇಶದಲ್ಲಿ ಶೇ.0.6 ರಷ್ಟು ಮಂದಿ ಮಾತ್ರ ಮೊಬೈಲ ಪೋನ್ ಬಳಸುತ್ತಿದ್ದರು. 1999ರಲ್ಲಿ ಹೊಸ ಟೆಲಿಕಾಂ ನೀತಿಯನ್ನು ಘೋಷಿಸಲಾಯಿತು. 1999ರಲ್ಲಿ ದೇಶದಲ್ಲಿ ಹತ್ತು ಲಕ್ಷ ಮೊಬೈಲ್ ಪೋನ್ ಬಳಕೆದಾರರಿದ್ದಾರೆ ಎಂದು ಹೇಳಲಾಗಿತ್ತು. 1999 ರ ಹೊತ್ತಿಗೆ ದೇಶದಲ್ಲಿ ಶೇ.2.8 ರಷ್ಟು ಮಂದಿ ಮೊಬೈಲ್ ಪೋನ್ ಬಳಸುತ್ತಿದ್ದರು. ಬಳಿಕ ಭಾರತದಲ್ಲಿ ಮೊಬೈಲ್ ಪೋನ್ ಬಳಕೆದಾರರ ಸಂಖ್ಯೆ ರಾಕೆಟ್ ವೇಗದಲ್ಲಿ ಏರಿಕೆಯಾಯಿತು. ಹಳ್ಳಿ-ಹಳ್ಳಿಗೂ ಮೊಬೈಲ್ ಪೋನ್ ಸಂಪರ್ಕ ಸಿಕ್ಕಿತ್ತು. 2006-07ರ ವೇಳೆಗೆ ಹಳ್ಳಿ-ಹಳ್ಳಿಗೂ ಮೊಬೈಲ್ ಸಂಪರ್ಕ ಬಂತು. 2012ರ ವೇಳೆಗೆ ಭಾರತದಲ್ಲಿ 70 ಕೋಟಿ ಮೊಬೈಲ್ ಬಳಕೆದಾರರಿದ್ದರು. 1999ರಲ್ಲಿ 2010 ರ ವೇಳೆಗೆ ಶೇ.15 ರಷ್ಟು ಜನರಿಗೆ ಮೊಬೈಲ್ ಸಂಪರ್ಕ ನೀಡಬೇಕೆಂಬ ಗುರಿ ಇತ್ತು. ಆದರೇ, ಆ ಗುರಿಯನ್ನು ದಾಟಿ 2012 ರ ವೇಳೆಗೆ ಶರವೇಗದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಏರಿಕೆಯಾಗಿತ್ತು. ಈಗ ಮೊಬೈಲ್, 4ಜಿ ಸಂಪರ್ಕ ದೇಶದಲ್ಲಿದೆ. ಇನ್ನೂ ಒಂದೆರೆಡು ತಿಂಗಳಲ್ಲೇ ದೇಶದಲ್ಲಿ 5-ಜಿ ಸಂಪರ್ಕ ಜನರಿಗೆ ಲಭ್ಯವಾಗಲಿದೆ. ಈಗಾಗಲೇ 5-ಜಿ ತರಂಗಾಂತರಗಳನ್ನು ಹರಾಜು ಹಾಕಲಾಗಿದೆ.
 6. 36. 1983ರಲ್ಲಿ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ: ಬ್ರಿಟೀಷರ ದಾಸ್ಯದಿಂದ ಹೊರಬಂದ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜಯೋತ್ಸವ ಆಚರಿಸಿದ್ದು 1983ರ ವಿಶ್ವಕಪ್ ಗೆದ್ದ ಸಮಯದಲ್ಲಿ. ಅದು ಭಾರತೀಯರಿಗೆ ಕೇವಲ ಗೆಲುವಲ್ಲ. 300 ವರ್ಷ ನಮ್ಮನ್ನಾಳಿದವರಿಗೆ ಅವರ ಮನೆಯಂಗಳದಲ್ಲೇ ಸೋಲಿಸಿ, ಸೇಡು ತೀರಿಸಿಕೊಂಡ ಸಮಾಧಾನದ ಸಂಗತಿ. ಜೂನ್ 25 1983.. ಈ ದಿನವನ್ನ ಯಾರು ತಾನೇ ಮರೆಯೋದಕ್ಕೆ ಸಾಧ್ಯ ಹೇಳಿ? ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾದ ದಿನ ಇದು. ಭಾರತ ಚೊಚ್ಚಲ ವಿಶ್ವಕಪ್ ಜಯಿಸಿದ ದಿನ ಇದು. ಭಾರತೀಯ ಕ್ರಿಕೆಟ್​ನ ದಿಕ್ಕು ಬದಲಿಸೋಕೆ ಮುನ್ನುಡಿಯಾದ ದಿನವದು. ಆ ದಿನವನ್ನ ಮೆಲುಕು ಹಾಕಿದ್ರೆ, ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಪ್ರೇಮಿಯ ಮೈ ರೋಮಾಂಚನಗೊಳ್ಳುತ್ತೆ. ಬ್ರಿಟೀಷ​ರ ದಾಸ್ಯದಿಂದ ಹೊರ ಬಂದ ಭಾರತ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜಯೋತ್ಸವ ಆಚರಿಸಿದ್ದು ಇದೇ ಗೆಲುವಿನಿಂದ. ಎಲ್ಲಕ್ಕಿಂತ ಹೆಚ್ಚಾಗಿ ಸಂಭ್ರಮದ ವಿಷಯವೇನಂದ್ರೆ ನಮ್ಮನ್ನಾಳಿದ ಇಂಗ್ಲೀಷ್​ರ ಮನೆಯಂಗಳದಲ್ಲೇ ಕಪಿಲ್ ದೇವ್‌ ಕ್ಯಾಪ್ಟನ್ಸಿಯಲ್ಲಿ ವಿಶ್ವ ಚಾಂಪಿಯನ್ನರಾಗಿ ಹೊರ ಹೊಮ್ಮಿದ್ದು. ಇದೇ ಗೆಲುವು ಭಾರತೀಯ ಕ್ರಿಕೆಟ್​ನಲ್ಲಿ ಸುವರ್ಣಯುಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. 1983ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಡಾರ್ಕ್ ಹಾರ್ಸ್ ಆಗಿ ಎಂಟ್ರಿಕೊಟ್ಟು ಫೈನಲ್ ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು.
 7. 37. ಮಾರುತಿ ಕಾರ್ ಲಾಂಚ್‌: ಭಾರತದ ಮೊದಲ ಕಾರ್ ಮಾರುತಿ 800 ಕಾರ್. 1983, ಡಿಸೆಂಬರ್ 14 ರಂದು ಮಾರುತಿ 800 ಕಾರ್ ಲಾಂಚ್ ಆಯಿತು. ಇಂದಿಗೂ ಭಾರತದ ಯಶಸ್ವಿ ಕಾರ್ ಗಳಲ್ಲಿ ಇದು ಕೂಡ ಒಂದು. ಆಗ ಮಾರುತಿ 800 ಕಾರಿನ ಬೆಲೆ 47,500 ರೂಪಾಯಿ ಮಾತ್ರ. ಭಾರತದ ಜನರು ಕಾರ್ ಹೊಂದುವ ಕನಸುನ್ನು ನನಸಾಗಿಸಿದ್ದು ಮಾರುತಿ 800 ಕಾರ್. ಇದನ್ನು ಜನರ ಕಾರ್ ಎಂದೇ ಕರೆಯಲಾಗುತ್ತಿತ್ತು. 1983ರ ಡಿಸೆಂಬರ್ 14 ರಂದು ಭಾರತದ ಆಗಿನ ಪ್ರಧಾನಿ ಇಂದಿರಾಗಾಂಧಿ ಹರಿಯಾಣದ ಗುರುಗ್ರಾಮದಲ್ಲಿ ಮಾರುತಿ 800 ಕಾರ್ ಫ್ಯಾಕ್ಟರಿಯನ್ನ ಉದ್ಘಾಟಿಸಿದ್ದರು. ಒಟ್ಟು ಉತ್ಪಾದನೆಯಾಗುವ ಕಾರ್ ಗಳಲ್ಲಿ ಶೇ.15 ರಷ್ಟು ಏರ್ ಕಂಡೀಷನ್ ಕಾರ್ ಗಳನ್ನು ಉತ್ಪಾದಿಸಲಾಗುತ್ತಿತ್ತು. ಏರ್ ಕಂಡೀಷನ್ ಕಾರ್ ಗಳ ಬೆಲೆ 70 ಸಾವಿರ ರೂಪಾಯಿ. ಜಪಾನ್ ನ ಸುಜಕಿ ಕಂಪನಿಯ ಸಹಭಾಗಿತ್ವದಲ್ಲಿ ಮಾರುತಿ 800 ಕಾರ್ ಅನ್ನು ಉತ್ಪಾದಿಸಲಾಗುತ್ತಿತ್ತು. ಮಾರುತಿ ಸುಜುಕಿ ಕಂಪನಿಯು ಆಗ ಮಾರುತಿ 800 ಕಾರ್ ಪ್ರತಿ ಲೀಟರ್ ಡೀಸೆಲ್‌ಗೆ 26 ಕಿಲೋಮೀಟರ್ ಮೈಲೇಜ್ ನೀಡುತ್ತೆ ಎಂದು ಹೇಳಿತ್ತು. ಮಾರುತಿ 800 ಕಾರಿನ ಮೊದಲ ಮಾಲೀಕ ಹರ್ಪಲ್ ಸಿಂಗ್ ಗೆ ಪ್ರಧಾನಿ ಇಂದಿರಾಗಾಂಧಿಯೇ ಕಾರಿನ ಕೀ ಹಸ್ತಾಂತರಿಸಿದ್ದರು.
 8. 38. ಗೋಲ್ಡನ್ ಟೆಂಪಲ್ ನಲ್ಲಿ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ: ಭಾರತವನ್ನು ಇಬ್ಬಾಗಿಸಿ ಸಿಖ್ಖರಿಗಾಗಿ ಪ್ರತ್ಯೇಕ ಖಲಿಸ್ತಾನ ದೇಶವನ್ನು ಸ್ಥಾಪಿಸಬೇಕು ಎಂಬುದು ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂಧ್ರೇನ್ ವಾಲಾನ ಆಕಾಂಕ್ಷೆ. 1982 ರಿಂದಲೇ ಇದಕ್ಕಾಗಿ ಗ್ರೌಂಡ್ ವರ್ಕ್ ಆರಂಭಿಸಿದ್ದ. 1983ರ ಹೊತ್ತಿಗೆ ಪಂಜಾಬ್‌ ನಲ್ಲಿ ಜರ್ನೈಲ್ ಸಿಂಗ್ ಭಿಂಧ್ರೇನ್ ವಾಲಾಗೆ ಬೆಂಬಲ ಸಿಗಲಾರಂಭಿಸಿತ್ತು. ಜರ್ನೈಲ್ ಸಿಂಗ್ ಭಿಂಧ್ರೆನವಾಲಾಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲ ಕೊಟ್ಟಿತ್ತು. ದೇಶದ ಐಕ್ಯತೆಗೆ ಜರ್ನೈಲ್ ಸಿಂಗ್ ಭಿಂಧ್ರೆನವಾಲಾ ದೊಡ್ಡ ಬೆದರಿಕೆಯೊಡ್ಡಿದ್ದ. ಭಾರತವನ್ನು ಇಬ್ಬಾಗಿಸಿ ಸಿಖ್ಖರಿಗಾಗಿ ಪ್ರತೇಕ ಖಲಿಸ್ತಾನ ದೇಶ ರಚಿಸಬೇಕೆಂಬ ಬೇಡಿಕೆಯನ್ನು ಭಾರತ ಸರ್ಕಾರದ ಮುಂದೆ ಇಟ್ಟಿದ್ದ. ಈ ಬಗ್ಗೆ ನಿರ್ಣಯ ಅಂಗೀಕರಿಸಬೇಕೆಂದು ಬೇಡಿಕೆ ಇಟ್ಟಿದ್ದ. 1983ರ ಮಧ್ಯಭಾಗದಲ್ಲಿ ಶಸ್ತ್ರ ಸಜ್ಜಿತ ಜರ್ನೈಲ್ ಸಿಂಗ್ ಭಿಂಧ್ರೆನವಾಲಾ ಪಡೆಯ ಉಗ್ರರು ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್ ಗೆ ನುಗ್ಗಿ ಅಲ್ಲಿ ಆಶ್ರಯ ಪಡೆದಿದ್ದರು . ಆಗ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಗೋಲ್ಡನ್ ಟೆಂಪಲ್ ನಿಂದ ಜರ್ನೈಲ್ ಸಿಂಗ್ ಭಿಂಧ್ರೆನವಾಲಾ ಪಡೆಯನ್ನು ಖಾಲಿ ಮಾಡಿಸುವ ಬಗ್ಗೆ ಪ್ರಯತ್ನ ಮಾಡಿದ್ದರು. ಮಾತುಕತೆ ನಡೆಸಿದ್ದರು. ಗೋಲ್ಡನ್ ಟೆಂಪಲ್ ಸಿಖ್ಖರ್ ಪವಿತ್ರ ಸ್ಥಳ. ಅದರ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಜರ್ನೈಲ್ ಸಿಂಗ್ ಭಿಂದ್ರೆನವಾಲಾ ಗ್ಯಾಂಗ್ ಅನ್ನು ಅಲ್ಲಿಂದ ಖಾಲಿ ಮಾಡಿಸಲು ಸಾಧ್ಯವಾಗಲಿಲ್ಲ. ಸರಿ ಸುಮಾರು ಒಂದು ವರ್ಷದವರೆಗೂ ಮಾತುಕತೆ ನಡೆಸಿದ ಬಳಿಕ, ಅಂತಿಮವಾಗಿ ಉಳಿದ ಆಯ್ಕೆ ಅಂದರೇ, ಮಿಲಿಟರಿ ಕಾರ್ಯಾಚರಣೆ ಮಾತ್ರ. ಇದಕ್ಕೆ ಅಪರೇಷನ್ ಬ್ಲೂ ಸ್ಟಾರ್ ಎಂದು ಕೋಡ್ ನೇಮ್ ನೀಡಲಾಗಿತ್ತು. 1984ರ ಜೂನ್ 2 ರ ಮಧ್ಯರಾತ್ರಿ ಅಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಆರಂಭವಾಯಿತು. ಪಂಜಾಬ್ ರಾಜ್ಯದಾದ್ಯಂತ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಗೋಲ್ಡನ್ ಟೆಂಪಲ್ ನಲ್ಲಿ ಮಿಲಿಟರಿ ಅಪರೇಷನ್ ನಡೆಸಿ ಪ್ರತೇಕತಾವಾದಿ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂಧ್ರೆನವಾಲಾನನ್ನು ಹತ್ಯೆ ಮಾಡಲಾಯಿತು. ಬಳಿಕ ಪಂಜಾಬ್‌ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ ಜರ್ನೈಲ್ ಸಿಂಗ್ ಭಿಂಧ್ರೆನವಾಲಾ ಸಹಚರರನ್ನು ಹತ್ಯೆ ಮಾಡಲಾಯಿತು.
 9. 39. 1984ರ ಆಕ್ಟೋಬರ್ 31ರಂದು ಇಂದಿರಾ ಹತ್ಯೆ: ಪಂಜಾಬ್‌ನ ಗೋಲ್ಡನ್ ಟೆಂಪಲ್ ನಲ್ಲಿ ಅಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ವೇಳೆ ಎಡವಟ್ಟು ಒಂದು ನಡೆಯಿತು. ಶೂ ಧರಿಸಿಕೊಂಡು ಮಿಲಿಟರಿ ಯೋಧರು ಗೋಲ್ಡನ್ ಟೆಂಪಲ್ ಒಳಗೆ ಹೋಗಿ ಜರ್ನೈಲ್ ಸಿಂಗ್ ಭಿಂಧ್ರೆನವಾಲಾ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಸಿಖ್ಖರಿಗೆ ಗೋಲ್ಡನ್ ಟೆಂಪಲ್ ಪವಿತ್ರ ದೇವಾಲಯ. ಮಿಲಿಟರಿ ಅಪರೇಷನ್ ನಿಂದ ಅದರ ಪಾವಿತ್ರ್ಯತೆಗೆ ಇಂದಿರಾಗಾಂಧಿ ಸರ್ಕಾರದಿಂದ ಧಕ್ಕೆಯಾಯಿತು ಎಂಬ ಅಸಮಾಧಾನ, ಆಕ್ರೋಶ ಭುಗಿಲೇದ್ದಿತ್ತು . ಹೀಗಾಗಿ ಇಂದಿರಾಗಾಂಧಿ ಅವರಿಗೆ ಅವರ ಸಿಖ್ಖ ಸಮುದಾಯದ ಬಾಡಿಗಾರ್ಡ್ ಗಳನ್ನು ಬದಲಾಯಿಸುವಂತೆ ಉನ್ನತ ಮಟ್ಟದಲ್ಲಿ ಸಲಹೆ ನೀಡಲಾಗಿತ್ತು. ಆದರೇ, ಈ ಸಲಹೆಯನ್ನು ಇಂದಿರಾಗಾಂಧಿ ಸ್ವೀಕರಿಸಲಿಲ್ಲ. ಸಿಖ್ಖ ಬಾಡಿಗಾರ್ಡ್ ಗಳನ್ನು ನಾನು ಬದಲಾಯಿಸಿದರೇ, ಅವರಲ್ಲಿ ನನಗೆ ನಂಬಿಕೆ ಇಲ್ಲ ಎಂಬ ಭಾವನೆ ಬರುತ್ತೆ, ಜೊತೆಗೆ ದೇಶದ ಜಾತ್ಯಾತೀತ ತತ್ವಕ್ಕೆ ವಿರುದ್ಧವಾಗಿ ನಾನು ನಡೆದುಕೊಂಡಂತೆ ಆಗುತ್ತೆ. ಹೀಗಾಗಿ ಸಿಖ್ಖ್ ಸಮುದಾಯದ ಬಾಡಿಗಾರ್ಡ್ ಗಳನ್ನು ನಾನು ಬದಲಾಯಿಸಲಾರೆ ಎಂಬ ತೀರ್ಮಾನಕ್ಕೆ ಇಂದಿರಾಗಾಂಧಿ ಬಂದರು. ಈ ತೀರ್ಮಾನವೇ ಇಂದಿರಾಗಾಂಧಿ ಅವರಿಗೆ ಮುಳುವಾಯಿತು. 1984ರ ಆಕ್ಟೋಬರ್ 31ರಂದು ದೆಹಲಿಯ ಸಫ್ತರ್ ಜಂಗ್ ರಸ್ತೆಯ 1ನೇ ನಂಬರ್ ನಿವಾಸದಿಂದ ಬೆಳಿಗ್ಗೆ ಪಿಎಂ ಕಚೇರಿಗೆ ಹೋಗಲು ಕಾರಿನ ಹತ್ತಿರ ಬಂದಾಗ ಬಾಡಿಗಾರ್ಡ್ ಗಳಾದ ಸತ್ವಂತ್ ಸಿಂಗ್ ಮತ್ತು ಬಿಹಾಂತ್ ಸಿಂಗ್ ಎಂಬ ಇಬ್ಬರು ಬಾಡಿಗಾರ್ಡ್ ಗಳು ಇಂದಿರಾ ಗಾಂಧಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು . ಬಿಹಾಂತ್ ಸಿಂಗ್ ನನ್ನು ಸ್ಥಳದಲ್ಲೇ ಉಳಿದ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದರು. ಸತ್ವಂತ್ ಸಿಂಗ್ ನನ್ನು ಕೋರ್ಟ್ ವಿಚಾರಣೆ ನಡೆಸಿ, 1989ರಲ್ಲಿ ಗಲ್ಲಿಗೇರಿಸಲಾಯಿತು.
 10. 40. ಸಿಖ್ಖ್ ವಿರೋಧಿ ಗಲಭೆ: ಇಂದಿರಾಗಾಂಧಿ ಹತ್ಯೆ ಬಳಿಕ ದೇಶದಲ್ಲಿ ಸಿಖ್ಖ್ ಸಮುದಾಯದ ವಿರುದ್ಧ ಆಕ್ರೋಶ ಭುಗಿಲೇದ್ದಿತ್ತು. ದೇಶಾದ್ಯಂತ ಸಿಖ್ಖ್ ಸಮುದಾಯದ ಜನರನ್ನು ಉದ್ರಿಕ್ತ ಜನರು ಹತ್ಯೆಗೈದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮಾಯಕ ಸಿಖ್ಖ್ ಸಮುದಾಯದ ಜನರನ್ನು ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಭಾರತದ ಇತಿಹಾಸದಲ್ಲಿ ಇದೊಂದು ಅತಿ ದೊಡ್ಡ ನರಮೇಧ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ನವಂಬರ್ 1 ರಿಂದ 4ರವರೆಗೆ 3,500 ಮಂದಿ ಸಿಖ್ಖರನ್ನು ಹತ್ಯೆ ಮಾಡಲಾಯಿತು. ಇದು ಸರ್ಕಾರದ ಅಂದಾಜಿನ ಅಂಕಿಅಂಶ . ದೆಹಲಿ ಮಾತ್ರವಲ್ಲದೇ, ದೇಶದ 40 ನಗರಗಳಲ್ಲಿ ಸಿಖ್ಖ್ ಸಮುದಾಯದ ಜನರ ಮಾರಣಹೋಮವೇ ನಡೆಯಿತು. ದೇಶದಲ್ಲಿ 8 ಸಾವಿರದಿಂದ 17 ಸಾವಿರದವರೆಗೂ ಸಿಖ್ಖ್ ಜನರ ಹತ್ಯೆ ಮಾಡಲಾಗಿದೆ ಎಂಬ ಅಂದಾಜು ಕೂಡ ಇದೆ. ಸಿಖ್ಖರ ನರಮೇಧದಲ್ಲಿ ಭಾಗಿಯಾದವರಿಗೂ ಇದುವರೆಗೂ ಸರಿಯಾದ ಶಿಕ್ಷೆಯಾಗಿಲ್ಲ. ಬಂಧಿಸಿಯೂ ಇಲ್ಲ. ಈಗಲೂ ಸಿಖ್ಖ್ ಸಮುದಾಯದ ಜನರ ಸಾಮೂಹಿಕ ನರಹತ್ಯೆಗೆ ನ್ಯಾಯ ಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ಸಜ್ಜನ್ ಕುಮಾರ್, ಜಗದೀಶ್ ಟೈಟ್ಲರ್ ವಿರುದ್ಧ ಸಿಖ್ಖ ಜನರ ಹತ್ಯೆ ನಡೆಸಿದ ಆರೋಪ ಇದೆ. ಸಜ್ಜನ್ ಕುಮಾರ್ ಗೆ ಮಾತ್ರ ದೆಹಲಿ ಹೈಕೋರ್ಟ್ ಜೀವಾವಧಿ ಜೈಲುಶಿಕ್ಷೆ ವಿಧಿಸಿ ಜೈಲಿಗೆ ಕಳಿಸಿದೆ. ಜಗದೀಶ್ ಟೈಟ್ಲರ್ ವಿರುದ್ಧ ಯಾವುದೇ ಪ್ರಕರಣವೂ ಕೋರ್ಟ್ ನಲ್ಲಿ ಸಾಬೀತಾಗಿಲ್ಲ. (ಮುಂದುವರಿಯುವುದು)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada