ಧಾರವಾಡ: ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಧಾರವಾಡಕ್ಕೂ ಅವಿನಾಭಾವ ಸಂಬಂಧವಿದೆ. ತಾವು ವಿದ್ಯಾಭ್ಯಾಸಕ್ಕಾಗಿ ಅನುಭವಿಸಿದ ಸಮಸ್ಯೆಯನ್ನು ಮತ್ಯಾವ ದಲಿತ ಮಕ್ಕಳು ಕೂಡ ಅನುಭವಿಸದಿರಲಿ ಎಂದು ಅವರು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದರು. ಇದೇ ಕಾರಣಕ್ಕೆ ಅವರೇ ಧಾರವಾಡದಲ್ಲಿ ಶಾಲೆ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದು ಇತಿಹಾಸ. ಅವತ್ತು ಅಂಬೇಡ್ಕರ್ ಅವರು ಸ್ಥಾಪಿಸಿದ ಶಾಲೆಯೇ ಧಾರವಾಡ ನಗರದ ಮರಾಠಾ ಕಾಲನಿಯ ಬುದ್ಧ ರಕ್ಕಿತ ಶಾಲೆ.
ಈ ಶಾಲೆ ಆರಂಭಿಸಿದ್ದು ಯಾವಾಗ?
ಧಾರವಾಡದಲ್ಲಿ ಅಂಬೇಡ್ಕರ್ ಈ ವಸತಿ ಶಾಲೆಯನ್ನು ಸ್ಥಾಪಿಸಿದ್ದು 1929 ರಲ್ಲಿ. ಈ ಹೊತ್ತಿನಲ್ಲಿಯೇ ಅವರ ಪತ್ನಿ ರಮಾಬಾಯಿ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡತೊಡಗುತ್ತದೆ. ಅವರು ಆರೋಗ್ಯವಾಗಲು ಧಾರವಾಡವೇ ಸೂಕ್ತ ಪ್ರದೇಶ ಎಂದುಕೊಂಡು ಧಾರವಾಡಕ್ಕೆ ಪತ್ನಿಯನ್ನು ಕಳಿಸಿಕೊಟ್ಟು ವಸತಿ ಶಾಲೆ ನೋಡಿಕೊಳ್ಳಲು ರಮಾಬಾಯಿಗೆ ಹೇಳುತ್ತಾರೆ.
ಪತಿಯ ಸೂಚನೆಯಂತೆ ಧಾರವಾಡಕ್ಕೆ ಆಗಮಿಸಿದಾಗ ವಸತಿ ಗೃಹದ ಹುಡುಗರ ಬಾಡಿದ ಮುಖಗಳನ್ನು ಕಂಡು ಸರಿಯಾಗಿ ಊಟ ಸಿಗುತ್ತಿಲ್ಲ ಎನ್ನುವುದು ರಮಾಬಾಯಿಯವರಿಗೆ ಅರಿವಾಗುತ್ತದೆ. ಕೂಡಲೇ ತಮ್ಮ ಚಿನ್ನಾಭರಣ ಮಾರಿ, ರೇಷನ್ ತಂದು ತಾವೇ ಅಡಿಗೆ ಮಾಡಿ ಬಡಿಸುತ್ತಾರೆ. ಹೀಗೆ ರಮಾಬಾಯಿಯವರು 1935ರವರೆಗೆ ವ್ಯವಸ್ಥಿತವಾಗಿ ವಸತಿ ನಿಲಯ ನೋಡಿಕೊಂಡಿದ್ದರು. ಈ ಅವಧಿಯಲ್ಲಿ ಅಂಬೇಡ್ಕರ್ ನಿರಂತರವಾಗಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದರು.
1929ರಲ್ಲಿ ಶೋಷಿತ ವರ್ಗಗಳ ಶೈಕ್ಷಣಿಕ ಸಂಘವಾಗಿ ಆರಂಭವಾದ ಶಾಲೆ, ಡಾ. ಬಿ.ಆರ್. ಅಂಬೇಡ್ಕರ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಎಂದು ನಾಮಕರಣವಾಗುತ್ತದೆ. ಬಳಿಕ 1984ರಲ್ಲಿ ಬುದ್ಧ ರಕ್ಕಿತ ವಸತಿ ಪ್ರೌಢಶಾಲೆ ಎಂದು ಪುನರ್ ನಾಮಕರಣ ಮಾಡಲಾಗಿದೆ.
ಸಂಸ್ಥೆಗೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಧ್ಯಕ್ಷ:
ಈ ಸಂಸ್ಥೆಗೆ ಸದ್ಯ ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅಧ್ಯಕ್ಷರಾಗಿದ್ದು, ಎಫ್.ಎಚ್. ಜಕ್ಕಪ್ಪನವರು ಕಾರ್ಯದರ್ಶಿಯಾಗಿದ್ದಾರೆ. ಸರ್ಕಾರ ಈ ಶಾಲೆಯನ್ನು 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಶಾಲಾ ಆವರಣದಲ್ಲಿ ಅಂಬೇಡ್ಕರ್ ಸ್ಮಾರಕ ಭವನ, ಸುಸಜ್ಜಿತ ವಸತಿ ಶಾಲೆ, ಅತಿಥಿ ಗೃಹ, ಪ್ರಾರ್ಥನಾ ಮಂದಿರ, ಸಭಾಭವನ ಸೇರಿ ಇತರೆ ಕಾಮಗಾರಿ ನಡೆಸಲಾಗುತ್ತಿದೆ. ಇನ್ನೂ ಕೆಲ ದಿನಗಳಲ್ಲಿ ಕಾಮಗಾರಿ ಪೂರ್ಣವಾಗಿ ಒಂದು ರೀತಿ ಪ್ರೇಕ್ಷಣೀಯ ಸ್ಥಳವಾಗುವಲ್ಲಿ ಸಂದೇಹವಿಲ್ಲ.
ಹತ್ತು ಕೋಟಿ ಅನುದಾನದಲ್ಲಿ ಹತ್ತು ಹಲವು ಕಾರ್ಯ:
ಮೂಲತಃ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಈ ಶಾಲೆಯ ಅಭಿವೃದ್ದಿಯ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. 10 ಕೋಟಿ ರೂಪಾಯಿಯಲ್ಲಿ ಈಗಾಗಲೇ 3 ಕೋಟಿ ರೂಪಾಯಿ ವೆಚ್ಚದಲ್ಲಿ ಬುದ್ಧ ವಿಹಾರ ಮಾಡಲಾಗಿದೆ. ಬುದ್ಧನ ಪುತ್ಥಳಿ ಖರೀದಿ ಸೇರಿದಂತೆ ಅನೇಕ ಕೆಲಸಗಳಿಗೆ ಈ ಹಣವನ್ನು ಬಳಸಿಕೊಳ್ಳಲಾಗಿದೆ.
ಇನ್ನು ಇಲ್ಲಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಬುದ್ಧವಿಹಾರದ ಸುತ್ತಮುತ್ತ ಕೋಣೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇನ್ನುಳಿದ 7 ಕೋಟಿ ರೂಪಾಯಿ ಅನುದಾನ 3 ಕಂತುಗಳಲ್ಲಿ ಬಿಡುಗಡೆಯಾಗಲಿದೆ. ಈ ಅನುದಾನದಲ್ಲಿಯೇ ಅಂಬೇಡ್ಕರ್ ಸ್ಮಾರಕ ಭವನ, ಸುಸಜ್ಜಿತ ವಸತಿ ಶಾಲೆ, ಅತಿಥಿ ಗೃಹ, ಪ್ರಾರ್ಥನಾ ಮಂದಿರ, ಸಭಾಭವನ, ಗ್ರಂಥಾಲಯ, ಅಶೋಕ ಸ್ತಂಭ, 36 ಅಡಿಯ ಕೋರೆಗಾಂವ್ ಸ್ತೂಪ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇನ್ನು ಅಂಬೇಡ್ಕರ್ ಅವರು ಬಂದಾಗ ಉಳಿದುಕೊಳ್ಳುತ್ತಿದ್ದ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಅದರ ಮೇಲ್ಭಾಗದಲ್ಲಿ ಕಟ್ಟಡ ನಿರ್ಮಿಸಿ, ಅಲ್ಲಿಯೇ ಗ್ರಂಥಾಲಯ ಮಾಡಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ.
ಸ್ವತಃ ಅಂಬೇಡ್ಕರ್ ಪ್ರಾರಂಭಿಸಿದ ಈ ಶಾಲೆ ಅಂಬೇಡ್ಕರ್ ವಾದಿಗಳಿಗೆ ಪುಣ್ಯಕ್ಷೇತ್ರವಾಗಿದೆ. ಅಂಬೇಡ್ಕರ್ ವಾಸವಾಗಿದ್ದ ಈ ಸ್ಥಳದ ವೀಕ್ಷಣೆಗೆ ನಿತ್ಯವೂ ಅನೇಕ ಜನರು ಆಗಮಿಸುತ್ತಾರೆ. ಈ ಶಾಲೆಯನ್ನು ಸರ್ಕಾರದ ವತಿಯಿಂದ ಅಭಿವೃದ್ಧಿಪಡಿಸುತ್ತಿರುವುದು ಸಂತಸದ ಸಂಗತಿ ಎಂದು ಬುದ್ಧ ರಕ್ಕಿತ ಶಾಲೆ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ್ ಹೇಳಿದ್ದಾರೆ.
ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?