ಹೆಚ್ಚುವರಿ ಲಗಾನಿಗೆ ಡಿಮ್ಯಾಂಡ್; ಬಾಗಲಕೋಟೆ ಕಬ್ಬು ಬೆಳೆಗಾರರು ಕಂಗಾಲು
Bagalakote news: ನಿರಂತರ ಪ್ರವಾಹ, ಅತೀವೃಷ್ಟಿಯಿಂದ ಬೆಳೆ ರಕ್ಷಿಸಿಕೊಳ್ಳಲು ಪರದಾಡಿದ್ದ ಕಬ್ಬು ಬೆಳೆಗಾರರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾರ್ಖಾನೆ ಆರಂಭವಾಗಿವೆಯಾದರೂ ಪ್ರಾರಂಭದಲ್ಲೆ ಲಗಾನಿ ಹೆಚ್ಚೆಚ್ಚು ಕೊಡುವ ಪರಿಸ್ಥಿತಿ ಇದೆ.
ಬಾಗಲಕೋಟೆ: ಅಂದುಕೊಂಡ ಸಮಯಕ್ಕೆ ಕಬ್ಬು (sugarcane crop) ಕಟಾವು ಆರಂಭವಾಗಿದ್ದರೆ ಜಿಲ್ಲೆಯಲ್ಲಿ ಅದಾಗಲೇ ಶೇ40 ರಿಂದ 50 ರಷ್ಟು ಕಟಾವು ಆಗಿ ಕ್ರಷಿಂಗ್ ಆಗಬೇಕಿತ್ತು. ಆದರೆ ಕಬ್ಬಿಗೆ ಬೆಲೆ ನಿಗದಿ ಮಾಡದೇ ಸತಾಯಿಸಿದ ಕಾರ್ಖಾನೆಗಳ ವಿರುದ್ದ ರೈತರು ಬೀದಿಗೆ ಇಳಿದು ಹೋರಾಟ ಆರಂಭಿಸಿದರು. ಇದಕ್ಕೆ ಜಗ್ಗದ್ದರಿಂದ ಕಾರ್ಖಾನೆ ಬಂದ್ ಮಾಡಿಸಲಾಗಿತ್ತು. ಹೋರಾಟ 53 ದಿನಗಳ ಕಾಲ ನಡೆದಿದ್ದರಿಂದ ಕಬ್ಬು ಕಾರ್ಖಾನೆಗಳಿಗೆ ಕಳುಹಿಸಲು ಬೆಳೆಗಾರರಿಗೆ (Sugarcane growers) ತೊಂದರೆ ಆಗಿತ್ತು. ಇದೀಗ ಹೋರಾಟ ಮುಕ್ತಯವಾಗಿ ಬೆಲೆ ಕೊಡಿಸುವ ವಾಗ್ದಾನವನ್ನು ಜಿಲ್ಲಾಡಳಿತ ಮಾಡಿದ್ದರಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲಾಗುತ್ತಿದೆ. ಈ ನಡುವೆ ಕಬ್ಬು ಬೆಳೆಗಾರರಿಗೆ ಲಗಾನಿ ಹೊರೆ ಬಿದ್ದಿದೆ.
ಪ್ರತಿ ಸಲ ಆರಂಭದಲ್ಲಿ ಕಡಿಮೆ ಲಗಾಣಿ (1000 ರಿಂದ 1500 ರೂ.) ಕೊಡುತ್ತಿದ್ದ ರೈತರಿಗೆ, ಇದೀಗ ಕಟಾವು ತಡವಾಗಿ ಆರಂಭಿಸಿದ್ದರಿಂದ ಕಟಾವು ಮಾಡುವ ಕಾರ್ಮಿಕರು ಒಂದು ಟ್ರ್ಯಾಕ್ಟರ್ (ಜೋಡು ಟ್ರ್ಯಾಲಿ)ಗೆ ಕನಿಷ್ಠ 4 ಸಾವಿರ ರೂ. ಲಗಾನಿ (ಖುಷಿ) ಕೇಳುತ್ತಿದ್ದಾರಂತೆ. ಇದರಿಂದ 10 ಟನ್ ಕಬ್ಬಿಗೆ ಒಂದು ಟನ್ ಕಬ್ಬಿನ ಬೆಲೆ ಕಾರ್ಮಿಕರಿಗೆ ಕೊಡಬೇಕಾಗಿದೆ. ಇದು ರೈತರಿಗೆ ದೊಡ್ಡ ಹೊರೆಯಾಗಿದೆ. ಅವರು ಕೇಳಿದಷ್ಟು ಲಗಾನಿ ಕೊಡದಿದ್ದರೆ ಕಟಾವು ಮಾಡದೇ ಬೇರೆಯವರ ಹೊಲಗಳಿಗೆ ಹೋಗುತ್ತಾರೆ. ಹೀಗಾಗಿ ರೈತರು ಸ್ಪರ್ಧೆ ಬಿದ್ದು ಲಗಾಣಿ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: Shocking News: ಶಾಲೆಯಲ್ಲೇ ಗರ್ಭಿಣಿ ಶಿಕ್ಷಕಿಯ ಕೂದಲು ಹಿಡಿದು ಎಳೆದಾಡಿದ ಬಾಲಕರು; ಕಾರಣ ಕೇಳಿದರೆ ಶಾಕ್ ಆಗ್ತೀರ
“ಬಿಸಿಲು ಹೆಚ್ಚಾದಂತೆ ಕಬ್ಬು ಕಟಾವು ಮಾಡಲು 4 ಸಾವಿರ ರೂಪಾಯಿವರೆಗೆ ಕೇಳುತ್ತಾರೆ. ವಿಧಿ ಇಲ್ಲದೆ ನಾವು ಅವರು ಕೇಳಿದಷ್ಟು ಹಣ ಕೊಡುತ್ತಿದ್ದೇವೆ. ಒಬ್ಬ ಮೂರುವರೆ ಸಾವಿರ ಕೊಡುತ್ತೇನೆ ಎಂದು ಕಟಾವು ಮಾಡುವವರನ್ನು ಕರೆದುಕೊಂಡ ಬಂದರೆ ಮತ್ತೊಬ್ಬರು ನಾವು 4ಸಾವಿರ ಕೊಡುತ್ತೇವೆ ಎಂದು ಅವರನ್ನು ಕರೆದುಕೊಂಡು ಹೋಗುತ್ತಾರೆ.” -ಸಂಗಣ್ಣ ಸಾವಗಿ, ಕಬ್ಬು ಬೆಳೆಗಾರ
ರಾಜ್ಯದಲ್ಲಿ ಕಬ್ಬು ಬೆಳೆಯುವ ಜಿಲ್ಲೆಗಳ ಪೈಕಿ ಬಾಗಲಕೋಟೆ ಎರಡನೇ ಸ್ಥಾನದಲ್ಲಿ ಇದೆ. ಕಳೆದ ವರ್ಷ ಜಿಲ್ಲೆಯಲ್ಲಿ 12 ಸಕ್ಕರೆ ಕಾರ್ಖಾನೆಗಳು ಒಟ್ಟು 1 ಕೋಟಿ 70 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿದ್ದವು. ಅಕ್ಟೋಬರ್ನಲ್ಲಿ ಕ್ರಷಿಂಗ್ ಆರಂಭಿಸಿದರೆ ಫೆಬ್ರುವರಿ, ಮಾರ್ಚ್ ಹೊತ್ತಿಗೆ ಕ್ರಷಿಂಗ್ ಮುಕ್ತಾಯ ಆಗುತ್ತಿತ್ತು. ಬಿಸಿಲು ಹೆಚ್ಚಾದಂತೆ ಲಗಾನಿ ಹೆಚ್ಚಿಗೆ ಕೊಡಬೇಕಿತ್ತು. ಆದರೆ, ಈ ವರ್ಷ 50 ದಿನ ಹೆಚ್ಚು ಕ್ರಷಿಂಗ್ ಮಾಡುವ ಪ್ರಮುಖ ಕಾರ್ಖಾನೆಗಳು ಬಂದ್ ಆಗಿದ್ದರಿಂದ ಇದೀಗ ಒಮ್ಮೆಲೆ ರೈತರು ಕಬ್ಬು ಕಟಾವು ಮಾಡಿಸಲು ಮುಗಿಬಿದ್ದಿದ್ದಾರೆ. ಹೀಗಾಗಿ ಕಬ್ಬು ಕಟಾವು ಮಾಡುವ ತಂಡಗಳು ಲಗಾನಿ ಜಾಸ್ತಿ ಮಾಡುತ್ತಿದ್ದಾರೆ. ಇದು ರೈತರಿಗೆ ಅನಗತ್ಯ ಹೊರೆಯಾಗಿದೆ.
ತಿಂಗಳುಗಟ್ಟಲೇ ಹೋರಾಟ ಮಾಡುವ ರೈತರಿಗೆ ಬೆಳೆದು ನಿಂತ ಕಬ್ಬು ಕಟಾವು ಮಾಡಿಸಲು ಲೆಕ್ಕಕ್ಕಿಲ್ಲದೇ ದುಡ್ಡು ಕೊಡಬೇಕು. ಅಲ್ಲದೇ ಕಬ್ಬು ಕಟಾವು ಹಾಗೂ ಸಾಗಣಿಕೆಗಾಗಿ ಕಾರ್ಖಾನೆಯವರು ರೈತರಿಗೆ ಪ್ರತಿಟನ್ಗೆ ಕನಿಷ್ಠ 500 ರೂ.ಗಳಿಂದ 700 ರೂ.ಗಳ ವರೆಗೂ ಕಡಿತ ಮಾಡಿ ಬಿಲ್ಲು ಕೊಡುತ್ತಾರೆ. ಹೀಗಾಗಿ ರೈತರಿಗೆ ಟನ್ಗೆ ಬೆಲೆ ಎಫ್ಆರ್ಪಿಗಿಂತ ಸ್ವಲ್ಪ ಹೆಚ್ಚಿನ ಬೆಲೆ ಸಿಕ್ಕರೂ ಸಹ ಅದರಲ್ಲಿ ಟನ್ಗೆ ಕಟಾವು, ಸಾಗಾಣಿಕೆ, ಲಗಾಣಿ ಅಂತೆಲ್ಲ ಟನ್ಗೆ 800 ರಿಂದ 900 ರೂ. ಹೋಗುತ್ತಿದೆ. ಹೀಗಾಗಿ ಕಬ್ಬು ಬೆಳೆಗಾರರು ತೊಂದರೆ ಅನುಭವಿಸಬೇಕಾಗುತ್ತದೆ. ಕಾರ್ಖಾನೆ ಕ್ರಷಿಂಗ್ ತಡ ಮಾಡಿದಷ್ಟು ಬಿಸಿಲಿಗೆ ಇಳುವರಿ ಕಡಿಮೆ ಆಗುತ್ತದೆ. ಜೊತೆಗೆ ಹೆಚ್ಚಿನ ಲಗಾಣಿ ಕೊಡಬೇಕಾಗುತ್ತದೆ ಎಂದು ರೈತರು ನೋವು ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: Tomato Price: ಉತ್ತಮ ಇಳುವರಿಯನ್ನು ಕಂಡರೂ ಸಿಗದ ಸೂಕ್ತ ಬೆಲೆ; ಸಂಕಷ್ಟಕ್ಕೆ ಸಿಲುಕಿದ ಟೊಮೆಟೊ ಬೆಳೆಗಾರರು
“ಸರಿಯಾದ ಸಮಯಕ್ಕೆ ಕಬ್ಬುಗಳನ್ನು ಕಟಾವು ಮಾಡಲು ಸಾಧ್ಯವಾಗಿಲ್ಲ. ಇದೀಗ ಬಿಸಿಲು ಕೂಡ ಹೆಚ್ಚಾಗಿದೆ. ಬಿಸಿಲು ಹೆಚ್ಚಾದಂತೆ ಇಳುವರಿ ಕಡಿಮೆಯಾಗುತ್ತಿದೆ. ಸದ್ಯ ಕಬ್ಬು ಬೆಳೆಗಾರರಿಗೆ ತೂಕ ನಷ್ಟದ ಜೊತೆಗೆ ಹೆಚ್ಚುವರಿ ಲಗಾನಿ ನೀಡುವ ಹೊರೆ ಬೀಳುತ್ತಿದೆ.” -ಹನುಮಪ್ಪ, ಕಬ್ಬು ಬೆಳೆಗಾರ
ಒಟ್ಟಾರೆ, 14 ತಿಂಗಳು ಕಷ್ಟಪಟ್ಟು ಕಬ್ಬು ಬೆಳೆದಿರುವ ರೈತರಿಗೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಇದೀಗ ಲಗಾನಿ ಬಿಸಿಗೆ ಕಬ್ಬು ಬೆಳೆಗಾರರು ನಲುಗುವಂತಾಗಿದೆ.
ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Thu, 1 December 22