ಸಾಲ ಪಡೆಯದಿದ್ರೂ ರೈತರ ಮನೆ ಬಾಗಿಲಿಗೆ ನೋಟಿಸ್.. ಸಹಕಾರಿ ಸಕ್ಕರೆ ಕಾರ್ಖಾನೆಯಿಂದ್ಲೇ ನಡೀತಾ ವಂಚನೆ?

ಕೊರೊನಾ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು. ಜನರ ಬದುಕೇ ಉಲ್ಟಾ ಆಗೋಗಿದೆ. ಖುಷಿಯಾಗಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ. ರೈತರಂತೂ ಅಕ್ಷರಶಃ ನಲುಗಿ ಹೋಗಿದ್ದಾರೆ. ಒಂದ್ಕಡೆ ಸಾಲಗಾರರ ಕಾಟ ಹೆಚ್ಚಾಗಿದ್ರೆ, ಮತ್ತೊಂದ್ಕಡೆ ಬಂಗಾರದಂತಹ ಬೆಳೆ ಬಂದಿದ್ರೂ ಪ್ರಯೋಜನ ಇಲ್ಲದಂತೆ ಆಗಿದೆ. ಇಂತಹ ಹೊತ್ತಲ್ಲೇ ಇಲ್ಲಿನ ರೈತರು ಮತ್ತಷ್ಟು ಆತಂಕಗೊಂಡಿದ್ದಾರೆ. ಸಾಲವೇ ಮಾಡದಿದ್ರೂ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಸಾಲ ಪಡೆಯದಿದ್ರೂ ರೈತರ ಮನೆ ಬಾಗಿಲಿಗೆ ನೋಟಿಸ್.. ಸಹಕಾರಿ ಸಕ್ಕರೆ ಕಾರ್ಖಾನೆಯಿಂದ್ಲೇ ನಡೀತಾ ವಂಚನೆ?
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ

ಬಾಗಲಕೋಟೆ: ಎರಡನೇ ಅಲೆಯ ಹೊಡೆತ. ಲಾಕ್ಡೌನ್ ಅನ್ನೋ ಕಟ್ಟು ಪಾಡುಗಳಿಂದ ರೈತರ ಬದುಕೇ ಅತಂತ್ರಕ್ಕೆ ಸಿಲುಕಿದೆ. ಅದೆಷ್ಟೋ ರೈತರು ಬಂಗಾರದಂತಹ ಬೆಳೆಯನ್ನ ತಮ್ಮ ಕೈಯ್ಯಾರೆ ನಾಶ ಮಾಡಿದ್ದಾರೆ. ಉಪವಾಸ ಇದ್ದು ಜೀವನ ಕಳೀತಿದ್ದಾರೆ. ಬಾಗಲಕೋಟೆಯ ರೈತರು ಕೂಡ ಸಂಕಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡ್ತಿದ್ದಾರೆ. ಇಂತಹ ಸಮಯದಲ್ಲಿ ರೈತರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ್ಲೇ ರೈತರಿಗೆ ಮಹಾ ಮೋಸ ಆಗಿದೆ. ಅಂದ್ರೆ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ 62 ಕೋಟಿ ಸಾಲ ಪಡೆಯಲಾಗಿದೆ. ಅದು ಕೂಡ ಕಾರ್ಖಾನೆ ರೈತರು ಸೇರಿದಂತೆ ಕಾರ್ಖಾನೆಯ ಕಾರ್ಮಿಕರ ಹೆಸರಲ್ಲಿ ಸಾಲ ಪಡೆದಿದೆ. ಆದ್ರೆ, ಅದನ್ನು ಮರುಪಾವತಿ ಮಾಡದೆ ಹಾಗೆ ಬಿಟ್ಟಿದೆ. ಇದು ರೈತರ ಕೃಷಿಗೆ ಹೊಡೆತ ನೀಡುತ್ತಿದೆ. ಜೊತೆಗೆ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಮುಧೋಳ, ಬೀಳಗಿ ತಾಲೂಕಿನ 903 ಮಂದಿ ರೈತರಿಗೆ ನೊಟೀಸ್ ಬಂದಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.

ಇನ್ನು, 20ವರ್ಷಗಳ ಹಿಂದೆಯೇ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ರೈತರೇ ಆರಂಭಿಸಿದ್ರು. ಡಿಸಿಎಂ ಆಗಿರೋ ಗೋವಿಂದ ಕಾರಜೋಳ ಕಾರ್ಖಾನೆಗೆ ಮೊದ್ಲು ಅಧ್ಯಕ್ಷರಾಗಿದ್ರು. ನಂತರ ಬಿಜೆಪಿ ಮುಖಂಡ ಕಾರಜೋಳ ಆಪ್ತ ರಾಮಣ್ಣ ತಳೇವಾಡ ಅಧ್ಯಕ್ಷರಾಗಿದ್ರು. ಆದ್ರೆ, ಸತತ 20 ವರ್ಷಗಳ ಕಾಲ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ದಿವಾಳಿ ಮಾಡಿದ್ದಾರೆ ಎಂದು ರೈತರು ಆರೋಪಿಸ್ತಿದ್ದಾರೆ. ಅಲ್ದೆ, ಕಾರ್ಖಾನೆ ಮೇಲೆ ನೂರಾರು ಕೋಟಿ ಸಾಲ ಇದೆ. ಹೀಗಿದ್ರೂ ಕಾರ್ಖಾನೆಯನ್ನು ಲೀಜ್ ಮೇಲೆ ಖಾಸಗಿಯವರಿಗೆ ಕೊಡುವ ಪ್ರಯತ್ನ ನಡೀತಿದೆಯಂತೆ. ಈ ಎಲ್ಲಾ ಗೊಂದಲಗಳ ಬಗ್ಗೆ ಸಹಕಾರಿ ಇಲಾಖೆ ಉಪ ನಿಬಂಧಕರನ್ನು ಕೇಳಿದ್ರೆ, ತಮ್ಮ ‌ಕೈಯಲ್ಲಿ ಏನು ಇಲ್ಲ ಅಂತಾ ಸುಮ್ಮನಾಗಿದ್ದಾರೆ.

ಒಟ್ನಲ್ಲಿ, ಒಂದ್ಕಡೆ ಲಾಕ್ಡೌನ್ ಹೊಡೆತ ಮತ್ತೊಂದ್ಕಡೆ ಕಾರ್ಖಾನೆಯ ಕಳ್ಳಾಟದಿಂದ ರೈತರು ಮತ್ತಷ್ಟು ಆತಂಕಗೊಂಡಿದ್ದಾರೆ. ಕೈಗೆ ನೋಟಿಸ್ ಬರ್ತಿದ್ದರಂತೆ ನಾವು ಸಾಲವೇ ಪಡೆದಿಲ್ಲ. ಹೇಗ್ ನೋಟಿಸ್ ಬಂತು ಅಂತಾ ಶಾಕ್ ಆಗುತ್ತಿದ್ದಾರೆ. ಇಷ್ಟೇ ಅಲ್ಲ, ಈ ಬಗ್ಗೆ ಡಿಸಿಎಂ ಕಾರಜೋಳ ಹಾಗೂ ಅಧಿಕಾರಿಗಳು ತಕ್ಷಣ ಗಮನ ಕೊಡ್ಬೇಕು ಅಂತಾ ರೈತರು ಆಗ್ರಹಿಸ್ತಿದ್ದಾರೆ.

ಇದನ್ನೂ ಓದಿ: ಡ್ರೋನ್ ಮೂಲಕ ಔಷಧಿ ಪೂರೈಕೆಗೆ ಚಿಕ್ಕಬಳ್ಳಾಪುರದಲ್ಲಿ ಸಿದ್ಧತೆ; ವೈದ್ಯಕೀಯ ಸುಧಾರಣೆಗೆ ದೇಶದಲ್ಲೇ ಮೊದಲ ಪ್ರಯೋಗ