ಬಾಳಲ್ಲಿ ಆವರಿಸಿತು ಅಂಧಕಾರ, ಕುಗ್ಗಲಿಲ್ಲ ಆತ್ಮವಿಶ್ವಾಸ: 3 ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಮೂಲಕ ಮಾದರಿಯಾದ ಅಂಧ ಯುವತಿ

| Updated By: ರಶ್ಮಿ ಕಲ್ಲಕಟ್ಟ

Updated on: Feb 05, 2023 | 5:38 PM

ಹದಿಹರೆಯದ ವಯಸ್ಸಿನಲ್ಲಿ ಯುವತಿ ಬಾಳಲ್ಲಿ ಅಂದಕಾರ ಆವರಿಸಿತು. ಆದರೆ ಭರವಸೆಯನ್ನು ಕಳೆದುಕೊಳ್ಳದ ಆ ಯುವತಿ ಬರೋಬ್ಬರಿ ಮೂರು ಸರಕಾರಿ ನೌಕರಿಗೆ ಆಯ್ಕೆಯಾಗಿ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ.

ಬಾಳಲ್ಲಿ ಆವರಿಸಿತು ಅಂಧಕಾರ, ಕುಗ್ಗಲಿಲ್ಲ ಆತ್ಮವಿಶ್ವಾಸ: 3 ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಮೂಲಕ ಮಾದರಿಯಾದ ಅಂಧ ಯುವತಿ
ಪ್ರೀತಿ ಕಾರುಡಗಿಮಠ
Follow us on

ಬಾಗಲಕೋಟೆ: ಆಕೆ ಹುಟ್ಟುತ್ತಲ್ಲೇ ಅಂಧೆ ಅಲ್ಲ. ಎಲ್ಲ‌ ಮಕ್ಕಳಂತೆ ಬದುಕಿನ ಬಾಲ್ಯದ ಹದಿಹರೆಯದ ಸುಂದರ ಕ್ಷಣಗಳನ್ನು ನೋಡುತ್ತಾ ಆಡುತ್ತಾ ಬೆಳೆದವಳು. ಎಲ್ಲ ಯುವತಿ (girl) ಯರಂತೆ ಇದ್ದ ಆಕೆಗೆ ಯಾವಾಗ ವಯಸ್ಸು 22 ದಾಟಿತೊ ಯುವತಿ ಬಾಳಲ್ಲಿ ಅಂಧಕಾರ ಆವರಿಸಿತು. ಆದರೆ ಭರವಸೆಯನ್ನು ಕಳೆದುಕೊಳ್ಳದ ಆ ಯುವತಿ ಬರೋಬ್ಬರಿ ಮೂರು ಸರಕಾರಿ ನೌಕರಿಗೆ ಆಯ್ಕೆಯಾಗಿ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ. ಬಾಗಲಕೋಟೆ (Bagalkot) ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ನಿವಾಸಿ ಪ್ರೀತಿ ಕಾರುಡಗಿಮಠ ಮೂರು ಸರಕಾರಿ ನೌಕರಿ ಪಡೆದುಕೊಂಡಿರುವ ಯುವತಿ. ಇವರ ಜೀವನ ಎಷ್ಟೋ ಜನರಿಗೆ ಮಾದರಿ ಅಂದರೆ ತಪ್ಪಿಲ್ಲ‌. ಈಕೆ ಕಣ್ಣು ಕಾಣದಿದ್ದರೂ ಆನ್ ಲೈನ್ ಹಾಗೂ ಯುಟ್ಯೂಬ್ ಮೂಲಕ ಅಭ್ಯಾಸ ಮಾಡಿ ಸಹೋದರಿಯರ ಮೂಲಕ ಪುಸ್ತಕ ಓದಿಸಿಕೊಂಡು ವಿದ್ಯಾಭ್ಯಾಸ ಗ್ರಹಣ ಮಾಡಿ ಒಟ್ಟು ಮೂರು ಸರಕಾರಿ ನೌಕರಿಗೆ ಅರ್ಹಳಾಗಿದ್ದಾಳೆ.

ಅದರಲ್ಲಿ ಒಂದು ಸರಕಾರಿ ನೌಕರಿಯಲ್ಲಿ ಕಳೆದ ಮೂರು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾಳೆ. ಪ್ರೀತಿ 2020 ರಲ್ಲಿ 10ನೇ ತರಗತಿ ಮೇಲೆ ಕೋರ್ಟ್​ನಲ್ಲಿ ಪ್ರೊಸೆಸಿಂಗ್ ಸರ್ವರ್ ಹುದ್ದೆ, ನಂತರ 2021ರಲ್ಲಿ ಪಸ್ಟ್ ಗ್ರೇಡ್ ರೆವೆನ್ಯು ಇನ್ಸ್ಪೆಕ್ಟರ್ ಹುದ್ದೆ, ಜೊತೆಗೆ 2021 ರಲ್ಲೇ ಎಫ್​ಡಿಎ ಪಾಸ್ ಆಗಿ ಇದೀಗ ಕರ್ನಾಟಕ ಬಯಲಾಟ ಅಕಾಡೆಮಿಯಲ್ಲಿ ಎಫ್​ಡಿಎ ಆಗಿ ಮೂರು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಚಕ್ರಕ್ಕೆ ಕಂಬ ಸಿಲುಕಿಸಿದರೂ ಬಂಡಿ ಎಳೆದ ಎತ್ತುಗಳು; ಮದಗಜಗಳಂತಿದ್ದ ಎತ್ತುಗಳ ಶಕ್ತಿ ನೋಡಿ, ನೋಡುಗರೆ ಸುಸ್ತು, ಅದರ ಝಲಕ್​ ಇಲ್ಲಿದೆ ನೋಡಿ

ನಾವು ಅಂಧರು, ವಿಕಲಚೇತನರು ಅಂತ ಯಾರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ವಿಕಲತೆಯನ್ನೆ ಮೆಟ್ಟಿಲು ಮಾಡಿಕೊಂಡು ಸಾಧಿಸಬೇಕು. ನನಗೆ ಕಣ್ಣು ಹೋದಾಗ ಸಾಕಷ್ಟು ನೋವಾಗಿದ್ದು ನಿಜ. ಆದರೆ ಅದಕ್ಕೆ ಎದೆಗುಂದದೆ ಓದಿದ ಪರಿಣಾಮ ಇಂತಹ ಸಾಧನೆ ಮಾಡೋಕೆ ಸಾಧ್ಯವಾಯಿತು. ಮುಂದೆ ನಾನು ಕೆಎಎಸ್​ ಅಧಿಕಾರಿಯಾಗಬೇಕೆಂಬ ಗುರಿ ಹೊಂದಿದ್ದೇನೆ ಎನ್ನುವ ಮೂಲಕ ಇತರರಲ್ಲೂ ಸಾಧಿಸುವ ಕಿಚ್ಚು ಹಚ್ಚುವ ಮೂಲಕ ಪ್ರೀತಿಯವರು ಮಾದರಿಯಾಗಿದ್ದಾರೆ.

ಇನ್ನು ಪ್ರೀತಿ ಕಾರುಡಗಿಮಠ ಹುಟ್ಟುತ್ತಲೇ ಅಂದೆಯಲ್ಲ. ಮೊದಲು ಎಲ್ಲ ಮಕ್ಕಳಂತೆ ಕಣ್ಣು ಸ್ಪಷ್ಟವಾಗಿದ್ವು. ಎಲ್ಲರಂತೆ ಓಡಾಡಿಕೊಂಡು ಬದುಕಿನ ಸುಂದರ ಚಿತ್ರಣವನ್ನು ಕಣ್ಣಾರೆ ಕಂಡು ನಲಿದಾಡಿದವಳು. ಆದರೆ ವಯಸ್ಸು ಹದಿನೈದು ದಾಟುತ್ತಿದ್ದಂತೆ ಕನ್ನಡಕ ಬಂತು. ಮುಂದೆ ಕಾಲಕ್ರಮೇಣ 22ನೇ ವಯಸ್ಸಿಗೆ ಪೂರ್ಣದೃಷ್ಟಿ ಕಳೆದುಕೊಳ್ಳಬೇಕಾಯಿತು. ಪ್ರೀತಿ ಮೊದಲಿಂದಲೂ ಪ್ರತಿಭಾವಂತೆ ಬಿಎಸ್​ಸಿಯಲ್ಲಿ 88% ಅಂಕ ಪಡೆದವಳು. ನಂತರ ಎಮ್​ಎಸ್​ಸಿ ಗಣಿತ ವಿಭಾಗದಲ್ಲಿ ಅಧ್ಯಯನದ ವೇಳೆ ಕಣ್ಣು ಕಾಣಿಸದಿದ್ದಾಗ ಎಮ್​ಎಸ್​ಸಿ ಅರ್ಧಕ್ಕೆ ಬಿಡಬೇಕಾಯಿತು.

ಆದರೆ ಹದಿಹರೆಯದ ವಯಸ್ಸಿನಲ್ಲಿ ಕಣ್ಣು ಹೋದರೂ ಛಲ ಬಿಡದ ಪ್ರೀತಿ ಅವರು ಮೊದಲ ಅವಕಾಶದಲ್ಲೇ ಎಫ್​ಡಿಎ ಪಾಸ್ ಆಗಿದ್ದು ವಿಶೆಷ. ಈಕೆಗೆ ಸಹೋದರಿ ದೀಪಾ ಪುಸ್ತಕ ಓದಿ ಹೇಳುತ್ತಾರೆ. ಇನ್ನೊಬ್ಬ ಸಹೋದರಿ ಜ್ಯೋತಿ ಅಂದರಿಗೆ ಅವಕಾಶ ಸ್ಕ್ರೈಬ್ ಪದ್ದತಿಪ್ರಕಾರ ಇವಳ ಪರವಾಗಿ ಪರೀಕ್ಷೆ ಬರೆಯುತ್ತಿದ್ದರು. ತಂದೆ ಪುಸ್ತಕ ಅಭ್ಯಾಸ ಯಾವುದಕ್ಕೂ ಕೊರತೆ ಮಾಡುತ್ತಿರಲಿಲ್ಲ. ತಂದೆ ತಾಯಿ ಸಹೋದರ, ಸಹೋದರಿಯರ ಪ್ರೋತ್ಸಾಹದಿಂದ ಪ್ರೀತಿ ಕಣ್ಣು ಕಾಣದಿದ್ದರೂ ಮೂರು ಸರಕಾರಿ ನೌಕರಿ ಪಡೆಯುವ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ‌.

ಇದನ್ನೂ ಓದಿ: ಪಕ್ಷಾಂತರಗಳು ಇರುತ್ತವೆ, ರಾಜಕೀಯ ಪಕ್ಷಗಳು ಒಡೆಯುತ್ತವೆ, ಆದ್ರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ: ಕೋಡಿಶ್ರೀ ಮತ್ತೊಂದು ಭವಿಷ್ಯ

ಇನ್ನು ಮಗಳ ಸಾಧನೆ ಬಗ್ಗೆ ಆನಂದಭಾಷ್ಪ ಹಾಗೂ ಮದುವೆ ಮಾಡುವ ವಯಸ್ಸಲ್ಲಿ ಕಣ್ಣು ಕಾಣದಾಯಿತಲ್ಲ ಎಂದು ತಾಯಿ ಕಣ್ಣೀರು ಹಾಕುವುದು ನೋಡಿದರೆ ಎಂಥವರಿಗಾದರೂ ಮನಕಲಕುತ್ತದೆ. ಇದೆಲ್ಲ ಒಂದು ಕಡೆ ನೋವು ಇದ್ದರೂ ಮಗಳ ಸಾಧನೆ ಮುಂದೆ ಎಲ್ಲ ಮರೆತ ಕುಟುಂಬ, ವಿಕಲಚೇತನರಿಗೆ, ಅಂದರಿಗೆ ಮೊದಲು ಕುಟುಂಬ ಸಾತ್ ನೀಡಬೇಕು. ಎಲ್ಲರೂ ಪ್ರೋತ್ಸಾಹ ನೀಡಿದ್ದಲ್ಲಿ ವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡುತ್ತಾರೆ. ಇದಕ್ಕೆ ನಮ್ಮ ಸಹೋದರಿಯೇ ಸಾಕ್ಷಿ ಅಂತ ಸಹೋದರ ಹೇಳುತ್ತಾರೆ.

ತಂದೆ ಮಗಳನ್ನು ಐಎಎಸ್ ಮಾಡಬೇಕು ಇಲ್ಲ ಕೆಎಎಸ್ ಅಧಿಕಾರಿ ರೂಪದಲ್ಲಾದರೂ ನೋಡಲೇಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಾಧಿಸುವ ಛಲ ಅಚಲವಾಗಿರಬೇಕು. ಅದಕ್ಕೆ ಕೆಲ ಆಸರೆ ಕೈಗಳು ಬೇಕು ಅಂದಾಗ ಸಾಧನೆಗೆ ಯಾವುದೇ ವೈಕಲ್ಯ ಅಡ್ಡಿಬಾರದು ಎಂಬುದಕ್ಕೆ ಪ್ರೀತಿ ಕಾರುಡಗಿಮಠ ಉದಾಹರಣೆಯಾಗಿದ್ದು, ಇವರ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ.

ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Sun, 5 February 23