ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ; ನದಿ ನೀರಿನ ಅಭಾವದಿಂದ ಬಾಗಲಕೋಟೆ ಜನರ ಆತಂಕ

ತ್ರಿವೇಣಿ ನದಿ ಖಾಲಿಯಾಗಿರುವುದರಿಂದ ಜಲಚರಗಳಿಗಷ್ಟೇ ಅಲ್ಲದೆ ರೈತರ ಜೀವನದ ಮೇಲೆ ಕೂಡ ಕರಿನೆರಳು ಬೀರಿದೆ. ನದಿಯನ್ನು ನಂಬಿ ಬೇಸಿಗೆಯಲ್ಲಿ ಕೃಷಿ ಮಾಡುವ ನದಿ ತೀರದ ರೈತರ ಕೃಷಿಗೆ ನೀರಿನ ಅಭಾವ ಎದುರಾಗುತ್ತದೆ.

  • ರವಿ ಮೂಕಿ
  • Published On - 10:08 AM, 20 Apr 2021
ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ; ನದಿ ನೀರಿನ ಅಭಾವದಿಂದ ಬಾಗಲಕೋಟೆ ಜನರ ಆತಂಕ
ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ನಾಡಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಪವಿತ್ರ ಕ್ಷೇತ್ರ. ಪ್ರತಿನಿತ್ಯವೂ ಈ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿದ್ದರು. ಕೂಡಲಸಂಗಮದಲ್ಲಿ ಮೊದಲಿಗೆ ಎಲ್ಲರ ಗಮನ ಸೆಳೆಯುವುದು ಬಸವಣ್ಣನವರ ಐಕ್ಯಮಂಟಪ. ಇನ್ನು ಐಕ್ಯಮಂಟಪದ ಮುಂದೆಯೇ ಇರುವ ಸಂಗಮನಾಥ ದೇವಾಲಯ ಕೂಡ ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಭಕ್ತರು ಬಸವಣ್ಣನವರ ಐಕ್ಯಮಂಟಪ ದರ್ಶನ ಬಳಿಕ ಸಂಗಮನಾಥನ ದರ್ಶನವನ್ನು ಪಡೆದು ಪುನೀತರಾಗ್ತಾರೆ. ಆದರೆ ಸದ್ಯ ಬಸವಣ್ಣನವರ ಐಕ್ಯಮಂಟಪ ಸಂಗಮನಾಥನ ವ್ಯಾಪ್ತಿಯಲ್ಲಿನ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಎಂಬ ಮೂರು ನದಿಗಳ ಸಂಗಮಸ್ಥಾನ ತ್ರಿವೇಣಿ ಖಾಲಿ ಖಾಲಿಯಾಗಿದ್ದು ತಳಮಳ ಶುರುವಾಗಿದೆ.

ಕೂಡಲಸಂಗಮ ಮೂರು ನದಿಗಳು ಸೇರುವ ಸಂಗಮ ಸ್ಥಾನ. ಆದ್ದರಿಂದಲೇ ಇದಕ್ಕೆ ತ್ರಿವೇಣಿ ಸಂಗಮ ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ ಬಂದು ಸೇರುವ ಮೂರು ನದಿಗಳಿಂದ ತ್ರಿವೇಣಿ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ನದಿ ಖಾಲಿಖಾಲಿಯಾಗುವ ಪರಿಣಾಮ ನದಿ ನಂಬಿ ಬದುಕುವ ಜಲಚರಗಳ ಮಾರಣಹೋಮ ನಡೆಯುತ್ತದೆ ಎಂದರೆ ತಪ್ಪಿಲ್ಲ. ನದಿಯಲ್ಲಿನ ನೀರು ಅತ್ಯಂತ ವೇಗವಾಗಿ ಖಾಲಿ ಆಗುವುದರಿಂದ ಜಲಚರಗಳಾದ ಮೀನು, ಏಡಿ, ಕ್ರಿಮಿಕೀಟಗಳು, ಕಪ್ಪೆಗಳು,ಖಾಲಿಯಾದ ನದಿನೀರಿನ ಕೊಳಚೆಯಲ್ಲಿ ಸಿಕ್ಕು ಸಾವನ್ನಪ್ಪುತ್ತಿವೆ. ಒಂದು ಕಡೆ ಇಂತಹ ಸಣ್ಣ ಜಲಚರಗಳು ಸಾವನ್ನಪ್ಪಿದರೆ, ಜಲಚರಗಳಲ್ಲಿ ಡೇರ್ ಡೆವಿಲ್ ಎಂದು ಕರೆಯುವ ಮೊಸಳೆಗಳು ಇನ್ನೊಂದು ಕಡೆ ಸಾವನ್ನಪ್ಪುತ್ತಿವೆ.

ರೈತರ ಬೆಳೆಗೆ ಕುತ್ತು
ತ್ರಿವೇಣಿ ನದಿ ಖಾಲಿಯಾಗಿರುವುದರಿಂದ ಜಲಚರಗಳಿಗಷ್ಟೇ ಅಲ್ಲದೆ ರೈತರ ಜೀವನದ ಮೇಲೆ ಕೂಡ ಕರಿನೆರಳು ಬಿದ್ದಿದೆ. ನದಿಯನ್ನು ನಂಬಿ ಬೇಸಿಗೆಯಲ್ಲಿ ಕೃಷಿ ಮಾಡುವ ನದಿ ತೀರದ ರೈತರ ಕೃಷಿಗೆ ನೀರಿನ ಅಭಾವ ಎದುರಾಗುತ್ತದೆ. ಈ ನದಿಗಳನ್ನು ನಂಬಿ ಹುನಗುಂದ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ಶೆಂಗಾ ಬೆಳೆ ಬೆಳೆಯುತ್ತಾರೆ. ಆದರೆ ನದಿ ನೀರು ಈ ಪ್ರಮಾಣದಲ್ಲಿ ಖಾಲಿಯಾಗಿರುವುದರಿಂದ ರೈತರ ಬೆಳೆಗಳಿಗೆ ನೀರಿಲ್ಲದೆ ಬೆಳೆಗಳು ಒಣಗಿ ರೈತರು ಬೇಸಿಗೆ ಕೃಷಿ ಮಾಡಿ ಕೈ ಸುಟ್ಟುಕೊಳ್ಳುವಂತಾಗಿದೆ ಎಂದು ಸ್ಥಳೀಯರಾದ ತೀರ್ಥಲಿಂಗ ಹೇಳಿದ್ದಾರೆ.

ನದಿ ಖಾಲಿ ಹಿಂದೆ ಕೈಗಾರಿಕೆಗಳ ಕೈವಾಡ
ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಉತ್ತರಕರ್ನಾಟಕದಲ್ಲಿ ಮೇಲಿಂದ ಮೇಲೆ ಎರಡು ವರ್ಷ ಪ್ರವಾಹ ಬಂದಿದೆ. ಈ ವೇಳೆ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಉಕ್ಕಿ ಹರಿದಿವೆ. ನದಿಗಳ ಅಬ್ಬರಕ್ಕೆ ನದಿ ತೀರದ ರೈತರ ಬೆಳೆಗಳು ಕೊಚ್ಚಿ ಹೋಗಿ, ಗ್ರಾಮಗಳು ಜಲಾವೃತವಾಗಿ ರೈತರ, ಹಳ್ಳಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿರುವುದನ್ನು ಕಂಡಿದ್ದೇವೆ. ಅಷ್ಟರ ಮಟ್ಟಿಗೆ ಬೊರ್ಗರೆದು ಹರಿದು ಅಬ್ಬರಿಸಿದ ನದಿಗಳು ಕೂಡಲ ಸಂಗಮ ಭಾಗದಲ್ಲಿ ಖಾಲಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಕೈಗಾರಿಕೆಗಳು.

ಈ ಭಾಗದ ನದಿ ನೀರನ್ನು ನಾರಾಯಣಪುರ ಜಲಾಶಯದ ಮೂಲಕ ಹೊಸಪೇಟೆ ಭಾಗದ ಜಿಂದಾಲ್ ಸೇರಿದಂತೆ ವಿವಿಧ ಕೈಗಾರಿಕಾ ಕಂಪನಿಗಳು ಪಡೆದುಕೊಳ್ಳುತ್ತವೆ. ಸರ್ಕಾರದ ಪರವಾನಿಗೆ ಮೂಲಕ ನೀರು ಪಡೆಯುತ್ತಿರುವುದಾದರೂ ಕೂಡ ಬೇಸಿಗೆಯಲ್ಲಿ ನೀರನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಕೈಗಾರಿಕಾ ಕಂಪನಿಗಳಿಂದ ನಿರಂತರವಾಗಿ ನೀರನ್ನು ಬೇಸಿಗೆಯಲ್ಲೂ ಪಡೆದುಕೊಳ್ಳುವುದರಿಂದ ನೀರು ಖಾಲಿಯಾಗುತ್ತದೆ. ಸರ್ಕಾರ ಇಂತಹ ಕೈಗಾರಿಕೆಗಳ ಮೇಲೆ ಕಡಿವಾಣ ಹಾಕಬೇಕು. ಆಗ ಮಾತ್ರ ನದಿ ನೀರು ನದಿಯಲ್ಲಿಯೇ ಉಳಿಯುವುದಕ್ಕೆ ಸಾಧ್ಯ. ಇದರಿಂದ ರೈತರಿಗೆ ಜಲಚರಗಳಿಗೆ ಜಾನುವಾರುಗಳಿಗೂ ಅನುಕೂಲ ಆಗುತ್ತದೆ ಎಂದು ಹುನಗುಂದ ಭಾಗದ ರೈತ ಮುಖಂಡರಾದ ಅಂಬರೀಶ್ ನಾಗೂರ ಹೇಳಿದ್ದಾರೆ.

ಕೂಡಲಸಂಗಮದ ತ್ರಿವೇಣಿ ನದಿ ಖಾಲಿ ಆದ ಪರಿಣಾಮ ಭಕ್ತರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಜೊತೆಗೆ ಕೊರೊನಾ ಹಿನ್ನೆಲೆ ಕೂಡ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು ನಿಜ. ಆದರೆ ಇದು ಕೊರೊನಾ ಅವಧಿ ಹೊರತುಪಡಿಸಿಯೂ ಇದೇ ಪರಿಸ್ಥಿತಿ ಪ್ರತಿ ವರ್ಷ ಬೇಸಿಗೆಯಲ್ಲಿ ಕಂಡು ಬರುತ್ತದೆ. ನದಿ ಖಾಲಿಯಾದ ಪರಿಣಾಮ ನದಿಯಲ್ಲಿ ಇರುತ್ತಿದ್ದ ಬೋಟಿಂಗ್ ಪನ್ ಕೂಡ ಬಂದ್ ಆಗುತ್ತದೆ. ನೀರು ಖಾಲಿಯಾದ ಪರಿಣಾಮ ಬೋಟ್​ಗಳು ನಿಂತಲ್ಲೇ ನಿಂತಿವೆ. ಇದಕ್ಕೆಲ್ಲ ಕಾರಣ ನದಿ ನೀರು ಕೈಗಾರಿಕೆಗಳ ಪಾಲಾಗುತ್ತಿರುವುದು ಎಂಬುದು ಮಾತ್ರ ನಿಜ. ಒಟ್ಟಾರೆ ಬೇಸಿಗೆ ಬಂತೆಂದರೆ ಸಾಕು ಬಸವಣ್ಣನ ಐಕ್ಯಮಂಟಪ ಕೂಡಲಸಂಗಮ ತ್ರಿವೇಣಿ ನದಿ ಖಾಲಿ ಖಾಲಿಯಾಗಿದ್ದು, ಬಿಕೋ ಎನ್ನುವ ಪರಿಸ್ಥಿತಿ ಜೊತೆಗೆ ಅನೇಕ ಸಮಸ್ಯೆ ತಂದ್ದೊಡ್ಡಿದೆ.

ಇದನ್ನೂ ಓದಿ: ಕುಡಿಯಲು ಕಲುಷಿತ ಕಾಳಿ ನದಿ ನೀರು; ಬೃಹತ್ ವೆಚ್ಚದ ಯೋಜನೆಗೆ ಸಾರ್ವಜನಿಕರ ವಿರೋಧ

( Bagalkot People are panic as water level down in Krishna Malaprabha and Ghataprabha river in Koodalasangama)