ಅಮೀನಗಡ: ಪಿಎಚ್​ಡಿ ಓದಿರುವ ಈ ದಂಪತಿ ಆರಂಭಿಸಿದ್ದು ‘ಆಮ್ ಆದ್ಮಿ ಟೀ ಟೈಂ’

ಡಾಕ್ಟರ್ ದಂಪತಿ ಆರಂಭಿಸಿರುವ ಈ ಆಮ್ ಆದ್ಮಿ ಟೀ ಸ್ಟಾಲ್ ದಿನದ 24 ಗಂಟೆಯೂ ತೆರೆದಿರುತ್ತದೆ. ಸಂಜೆ ನಾಲ್ಕು ಗಂಟೆಯಿಂದ ಬೆಳಗಿನ ವರೆಗೆ ಟೀ ಶಾಪ್ ಹೊಣೆ ಡಾ.ಪ್ರಶಾಂತ ಹೆಗಲಿಗಿದ್ದು, ಹಗಲು ಹೊತ್ತಿನಲ್ಲಿ ಪತ್ನಿ ಕಾವ್ಯಾ ಹಾಗೂ ತಾಯಿ ಶಾಂತಾಬಾಯಿ ನೋಡಿಕೊಳ್ಳುತ್ತಾರೆ.

  • ರವಿ ಮೂಕಿ
  • Published On - 16:30 PM, 21 Feb 2021
ಅಮೀನಗಡ: ಪಿಎಚ್​ಡಿ ಓದಿರುವ ಈ ದಂಪತಿ ಆರಂಭಿಸಿದ್ದು ‘ಆಮ್ ಆದ್ಮಿ ಟೀ ಟೈಂ’
ಪಿಎಚ್​ಡಿ ಪಡೆದ ದಂಪತಿ ಟೀ ವ್ಯಾಪಾರ ಮಾಡುತ್ತಿರುವ ದೃಶ್ಯ

ಬಾಗಲಕೋಟೆ: ಓದಿಗೆ ತಕ್ಕ ಕೆಲಸ ಸಿಗಲಿಲ್ಲ ಎಂದು ಚಿಂತಿಸುವ ಅಥವಾ ಗೊಣಗಿಕೊಳ್ಳುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ. ಸದ್ಯ ಬಾಗಲಕೋಟೆ ಜಿಲ್ಲೆಯಲ್ಲೊಂದು ಜೋಡಿ ಇದಕ್ಕೆ ವಿರುದ್ಧವಾಗಿದ್ದು, ಓದಿರುವುದು ಪಿಎಚ್​ಡಿ ಆದರೂ ಮಾಡುತ್ತಿರುವ ಕೆಲಸ ಮಾತ್ರ ಟೀ ಅಂಗಡಿ ವ್ಯಾಪಾರ. ಡಾ.ಪ್ರಶಾಂತ ನಾಯಕ್ ಮತ್ತು ಡಾ. ಕಾವ್ಯಾ ನಾಯಕ್ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ನಿವಾಸಿಗಳಾಗಿದ್ದು, ಡಾಕ್ಟರೇಟ್ ಪಡೆದಿದ್ದರೂ ಟೀ ವ್ಯಾಪಾರಿಗಳಾಗಿದ್ದಾರೆ.

ಈ ದಂಪತಿ ಪಿಎಚ್​ಡಿ ಪದವಿಯನ್ನು ಪಡೆದಿದ್ದು, ಪ್ರಶಾಂತ್ ಸಸ್ಯಶಾಸ್ತ್ರದಲ್ಲಿ ಪಿಎಚ್​ಡಿ ಮುಗಿಸಿದರೆ ಅವರ ಪತ್ನಿ ಕಾವ್ಯಾ ಕನ್ನಡ ಅಧ್ಯಯನದಲ್ಲಿ ಎಂ​ಎ ಮಾಡಿ ನಂತರ ಲಂಬಾಣಿ ವೇಷಭೂಷಣ ಅಧ್ಯಯನದಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಹೀಗೆ ಪಿಎಚ್​ಡಿ ಮುಗಿಸಿದ್ದ ಇವರಿಗೆ ಒಳ್ಳೆಯ ಕೆಲಸ ಸಿಗಬೇಕಿತ್ತು ನಿಜ, ಆದರೆ ಅದು ಹಾಗಾಗಲಿಲ್ಲ. ಹೀಗಾಗಿ ಈ ಗಂಡ-ಹೆಂಡತಿ ಇಬ್ಬರೂ ಆಯ್ಕೆ ಮಾಡಿಕೊಂಡಿದ್ದು, ಟೀ ವ್ಯಾಪಾರ.

ಓದಿಗೆ ತಕ್ಕ ಕೆಲಸ ಬೇಕು ಎಂದು ಅಹಂ ಪಡದೇ ಸಂಸಾರದ ನೌಕೆ ಸಾಗಿಸುವುದಕ್ಕೆ ಕಳೆದ ಎಂಟು ವರ್ಷಗಳ ಹಿಂದೆ ಟೀ ವ್ಯಾಪಾರ ಆರಂಭಿಸಿದ್ದಾರೆ. ಸದ್ಯ ದಂಪತಿಗಳ ಟೀ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, ತಿಂಗಳಿಗೆ ಏನಿಲ್ಲ ಎಂದರೂ ಸುಮಾರು ₹ 40,000 ಸಂಪಾದನೆ ಮಾಡುತ್ತಿದ್ದಾರೆ.

doctorate couple tea

ಪತಿ ಡಾ. ಪ್ರಶಾಂತ ನಾಯಕ್ ಮತ್ತು ಪತ್ನಿ ಡಾ. ಕಾವ್ಯಾ ನಾಯಕ್

ಪ್ರಶಾಂತ್ ಹಾಗೂ ಕಾವ್ಯಾ ಅವರ ಟೀ ಅಂಗಡಿ ಹೆಸರು ‘ಆಮ್ ಅದ್ಮಿ ಟೀ ಟೈಂ’. ಸದ್ಯ ಟೀ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಅಲ್ಲದೇ ಟೀ ವ್ಯಾಪಾರ ಉತ್ತಮ ಆದಾಯ ತಂದುಕೊಡುತ್ತಿದ್ದು, ಸದ್ಯ ತಮ್ಮದೇ ಆದ ಶಿಕ್ಷಣ ಸಂಸ್ಥೆ ತೆರೆದಿದ್ದಾರೆ. ಪ್ರಶಾಂತ ತಮ್ಮ ತಾಯಿ ಶಾಂತಾಬಾಯಿ ಹೆಸರಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದು ಐವರು ಶಿಕ್ಷಕರಿಗೆ ಉದ್ಯೋಗ ಕೂಡ ನೀಡಿದ್ದಾರೆ.

doctorate couple tea

ಆಮ್ ಅದ್ಮಿ ಟೀ ಟೈಮ್ ಅಂಗಡಿಯ ಚಿತ್ರ

ಪತಿ ಪ್ರಶಾಂತ ಅವರ ಹೆಗಲಿಗೆ ಹೆಗಲು ಕೊಟ್ಟು ಸಾಗುತ್ತಿರುವ ನಾನು ಸರ್ಕಾರಿ ಕೆಲಸಗಳಿಗೆ ಸಾಕಷ್ಟು ಪ್ರಯತ್ನ ಮಾಡಿದ್ದರು, ಆದರೆ ಈಗಿನ ಕಾಲಕ್ಕೆ ಅದು ಕೈಗೆ ಎಟುಕಲೇ ಇಲ್ಲ. ಹಾಗಾಗಿ ನಮ್ಮ ಕುಟುಂಬದ ಪರಿಸ್ಥಿತಿ ನೋಡಿ ನಾವು ಈ ವ್ಯಾಪಾರ ಶುರು ಮಾಡಿದ್ದಿವಿ ಎಂದು ಡಾ.ಕಾವ್ಯಾ ನಾಯಕ್ ಹೇಳಿದ್ದಾರೆ.

doctorate couple tea

ಪ್ರಶಾಂತ ತಮ್ಮ ತಾಯಿ ಶಾಂತಾಬಾಯಿ ಹೆಸರಲ್ಲಿ ಆರಂಭಿಸಿದ ಶಿಕ್ಷಣ ಸಂಸ್ಥೆ

ಡಾಕ್ಟರೇಟ್ ಪಡೆದ ದಂಪತಿ ಆರಂಭಿಸಿರುವ ಈ ಆಮ್ ಆದ್ಮಿ ಟೀ ಸ್ಟಾಲ್ ದಿನದ 24 ಗಂಟೆಯೂ ತೆರೆದಿರುತ್ತದೆ. ಸಂಜೆ ನಾಲ್ಕು ಗಂಟೆಯಿಂದ ಬೆಳಗಿನ ವರೆಗೆ ಟೀ ಶಾಪ್ ಹೊಣೆ ಡಾ.ಪ್ರಶಾಂತ ಹೆಗಲಿಗಿದ್ದು, ಹಗಲು ಹೊತ್ತಿನಲ್ಲಿ ಪತ್ನಿ ಕಾವ್ಯಾ ಹಾಗೂ ತಾಯಿ ಶಾಂತಾಬಾಯಿ ನೋಡಿಕೊಳ್ಳುತ್ತಾರೆ.

 

doctorate couple tea

ಐವರು ಶಿಕ್ಷಕರಿಗೆ ಉದ್ಯೋಗ ನೀಡಿದ ಡಾಕ್ಟರೇಟ್ ದಂಪತಿ

ಒಟ್ಟಿನಲ್ಲಿ ವಿದ್ಯೆ ಪಡೆದುಕೊಳ್ಳುವುದು ಬುದ್ಧಿ ಜೀವನ ಮುನ್ನೆಡಸಲು. ಆದರೆ ಓದಿಗೆ ಹಂಗು ಇರಬಾರದು, ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗ ಮಾಡಿದರು ಅಹಂಕಾರ ಪಡದೆ ಜೀವನವನ್ನು ಸಾಗಿಸಲು ಈ ಡಾಕ್ಟರ್ ದಂಪತಿ ಟೀ ಅಂಗಡಿ ಇಟ್ಟು, ಯಶಸ್ಸು ಕಂಡಿರುವುದು ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಶಾಂತ ನಾಯಕ್ ಸಂಪರ್ಕ ಸಂಖ್ಯೆ 96063 53654.

ಇದನ್ನೂ ಓದಿ: ಜೆಡಿಎಸ್​ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಮಡಿಕೆ ಟೀ ಸವಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ