ಹಕ್ಕು ಪತ್ರ ನೀಡಲು ವಿಳಂಬ ಧೋರಣೆ, ಮೂಲ ಮನೆ ಬಿಟ್ಟು ಬಾರದ ಸಂತ್ರಸ್ತರು: ಸರ್ಕಾರಿ ಹಣ ನೀರಲ್ಲಿ ಹೋಮ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ ಮಲಪ್ರಭಾ ನದಿ ಉಕ್ಕಿ ಬಂದಾಗ ಕೆಲ ಭಾಗ ಪ್ರವಾಹ ಬಾಧಿತ ಆಗುವ ಪಟ್ಟಣ. ಪ್ರವಾಹ ಬಂದಾಗ ಮನೆ ಮುಳುಗಡೆಯಾದ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿ ಕೊಡಲಾಗಿದೆ. ಹಕ್ಕು ಪತ್ರ ನೀಡಲು ಮಾಡಿದ ವಿಳಂಬ ಧೋರಣೆ. ಮೂಲಮನೆ ಬಿಟ್ಟು ಬಾರದಿರುವುದು ಹೀಗೆ ವಿವಿಧ ಕಾರಣಗಳಿಂದ ಸಂತ್ರಸ್ತರು ಬಂದು ವಾಸ ಮಾಡದಂತಾಗಿದೆ.
ಬಾಗಲಕೋಟೆ, ಸೆಪ್ಟೆಂಬರ್ 9: ಆ ಮನೆಗಳನ್ನು ಮಲಪ್ರಭಾ ನದಿ (Malaprabha River) ಪ್ರವಾಹ ಸಂತ್ರಸ್ತರಿಗೆ ಅಂತ ಕಟ್ಟಿಸಿಕೊಡಲಾಗಿದೆ. ಆದರೆ ಮನೆ ಕಟ್ಟಿಸಿಕೊಟ್ಟು 13 ವರ್ಷಗಳಾದರೂ ಇಂದಿಗೂ ಬಹುತೇಕ ಸಂತ್ರಸ್ತರು ಆ ಮನೆಗಳ ಕಡೆ ತಿರುಗಿಯೂ ನೋಡಲಿಲ್ಲ.ಇದರಿಂದ ಆ ಮನೆಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ ಕೆಲಮನೆಗಳಿಗೆ ಬಾಗಿಲಿಲ್ಲ.ಕೆಲವು ಮನೆಗಳಿಗೆ ಕಿಡಕಿಯೇ ಇಲ್ಲ.ಗೋಡೆಗಳು ಬಿರುಕು ಮೇಲ್ಚಾವಣಿ ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿ.ಕೋಟ್ಯಾಂತರ ರೂ ಖರ್ಚು ಮನೆ ಕಟ್ಟಿಸಿದ್ದು ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ ಮಲಪ್ರಭಾ ನದಿ ಉಕ್ಕಿ ಬಂದಾಗ ಕೆಲ ಭಾಗ ಪ್ರವಾಹ ಬಾಧಿತ ಆಗುವ ಪಟ್ಟಣ. 2009, 2019, 2020 ರಲ್ಲಿ ಪ್ರವಾಹಕ್ಕೆ ಪಟ್ಟಣ ತುತ್ತಾಗಿದೆ. ಆದರೆ 2009ರ ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ಮುಳುಗಡೆಯಾದ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿ ಕೊಡಲಾಗಿದೆ. ಆದರೆ ಮನೆಗಳಿಗೆ ಹಕ್ಕು ಪತ್ರ ನೀಡಲು ಮಾಡಿದ ವಿಳಂಬ ಧೋರಣೆ. ಜೊತೆಗೆ ಮನೆಗಳು ಚಿಕ್ಕದಾಗಿವೆ, ಕಳಪೆ ಮಡ್ಟದ್ದಾಗಿವೆ, ಇನ್ನು ಮೂಲಮನೆ ಬಿಟ್ಟು ಸಂತ್ರಸ್ತರು ಬಾರದಿರುವುದು ಹೀಗೆ ವಿವಿಧ ಕಾರಣಗಳಿಂದ ಸಂತ್ರಸ್ತರು ಬಂದು ವಾಸ ಮಾಡಲೇ ಇಲ್ಲ.
ಇದರಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಮನೆಗಳು ಬೂತ ಬಂಗಲೆಗಳಂತಾಗಿವೆ. ಗೋಡೆ ಬಿರುಕು ಬಿಟ್ಟು ಬೀಳುವಂತಾಗಿವೆ. ಕಿಡಕಿ ಬಾಗಿಲುಗಳನ್ನೇ ಜನರು ಕಿತ್ತೊಯ್ದಿದ್ದಾರೆ. ಮೇಲ್ಚಾವಣಿ ಕತ್ತರಿಸಿ ಬೀಳುತ್ತಿದೆ. ಸರಕಾರ ಕೋಟಿ ಕೋಟಿ ಖರ್ಚು ಮಾಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ. 147 ಮನೆಗಳ ಪೈಕಿ ಮೂರರಿಂದ ನಾಲ್ಕು ಕುಟುಂಬಸ್ಥರು ಇತ್ತೀಚೆಗೆ ಬಂದಿದ್ದು ನೀರು, ವಿದ್ಯುತ್, ರಸ್ತೆ ಚರಂಡಿ ಮೂಲಭೂತ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.
ಕಮತಗಿ ಸಂತ್ರಸ್ತರ ಪುನರ್ವಸತಿಗಾಗಿ ಆಸರೆ ಯೋಜನೆಯಲ್ಲಿ ಈ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಆದರೆ ಇಷ್ಟೊಂದು ಚಿಕ್ಕದಾದ ಮನೆಯಲ್ಲಿ ಮಕ್ಕಳು ಮರಿ ಕಟ್ಟಿಕೊಂಡು ಬದುಕೋದು ಕಷ್ಟಸಾಧ್ಯ. ಇದರಿಂದ ಸಂತ್ರಸ್ತರು ಈ ಮನೆಗಳಲ್ಲಿ ಬಂದು ವಾಸ ಮಾಡುತ್ತಿಲ್ಲ. ಮನೆ ಕಟ್ಟಿಸಿದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಹಕ್ಕು ಪತ್ರ ಕೊಡೋದಕ್ಕೆ ಬಾರಿ ವಿಳಂಬ ಮಾಡಿದರು.
ಹಕ್ಕುಪತ್ರ ಕೊಡುವಷ್ಟರಲ್ಲಿ ಎಷ್ಟೋ ಮನೆಗಳು ಬಾಗಿಲು, ಕಿಡಕಿ ಕಳ್ಳತನವಾಗಿವೆ. ಸಂತ್ರಸ್ತರು ಬಂದು ವಾಸ ಮಾಡದ ಕಾರಣ ಪುನರ್ವಸತಿ ಕೇದ್ರ ಜಾಲಿ ಜಂಗಲ್ನಂತಾಗಿದೆ.ಇಲ್ಲಿ ವಾಸ ಮಾಡುವ ಸಂತ್ರಸ್ತರಿಗೆ ಹಾವು ಹುಳು ಹುಪ್ಪಡಿಗಳ ಕಾಟ ಶುರುವಾಗಿದೆ. ಒಟ್ಟು 147 ಮನೆಗಳಿದ್ದು, ಇದುವರೆಗೂ 95 ಮನೆಗಳ ಸಂತ್ರಸ್ತರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಉಳಿದ ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ.
ಇದನ್ನೂ ಓದಿ: ಗದಗ-ವಾಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯಾವಾಗ ಮುಗಿಯುತ್ತೆ? ಮಾಹಿತಿ ನೀಡಿದ ಎಂಬಿ ಪಾಟೀಲ್
54 ಖಾಲಿ ನಿವೇಶನಗಳು ಅಲ್ಲಿವೆ. ಆದರೆ ಇಲ್ಲಿ ಸಂತ್ರಸ್ತರು ಬಂದು ವಾಸ ಮಾಡದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಾಕಿ ಇರುವ ಹಕ್ಕು ಪತ್ರ ನೀಡಬೇಕು, ಸ್ಥಳದಲ್ಲಿರುವ ಜಾಲಿಕಂಟಿ ತೆರವುಗೊಳಿಸಬೇಕು. ಪುನರ್ವಸತಿ ಕೇಂದ್ರದಲ್ಲಿ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಆ ಮೂಲಕ ಸಂತ್ರಸ್ತರು ಇಲ್ಲಿ ಬಂದು ನೆಲೆಸುವ ವಾತಾವರಣ ಕಲ್ಪಿಸಬೇಕು ಅಂತಿದ್ದಾರೆ ಸ್ಥಳೀಯರು.
ಈ ಬಗ್ಗೆ ಮಾತಾಡಿದ ಪಟ್ಟಣಪಂಚಾಯಿತಿ ಅಧಿಕಾರಿಗಳು, ಹಕ್ಕು ಪತ್ರ ಕೊಡೋದು ಕಂದಾಯ ಇಲಾಖೆಯವರಿಗೆ ಸಂಬಂಧಿಸಿದೆ.ಆದರೆ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರು ಯಾರು ಬಂದು ವಾಸ ಮಾಡದ ಕಾರಣ ಮನೆಗಳು ಇಂತಹ ಸ್ಥಿತಿಗೆ ತಲುಪಿವೆ. ನಾವು ವಿದ್ಯುತ್ ,ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇವೆ. ಆದರೆ ಒಳಚರಂಡಿ ವ್ಯವಸ್ಥೆ ಮಾತ್ರ ಇಲ್ಲ. ಸ್ಥಳದಲ್ಲಿ ಜಾಲಿ ಕಂಟಿ ತೆರವುಗೊಳಿಸಿ ಸ್ವಚ್ಚ ವಾತಾವರಣ ಕಲ್ಪಿಸುವ ಕಾರ್ಯ ಸಮರ್ಪಕ ನೀರು ಸರಬರಾಜು ಮಾಡುವ ಕಾರ್ಯ ಮಾಡುತ್ತೇವೆ ಅಂತಿದ್ದಾರೆ.
ಸಂತ್ರಸ್ತರಿಗೆ ಆಸರೆಯಾಗಬೇಕಿದ್ದ ಮನೆಗಳು ಅನಾಥವಾಗಿವೆ. ಕೋಟ್ಯಾಂತರ ರೂ ಖರ್ಚು ಮಾಡಿದ ಹಣ ಪೋಲಾಗಿದೆ. ಒಂದು ಕಡೆ ಸಂತ್ರಸ್ತರು ಬಾರದೆ ಇರೋದು. ಅಧಿಕಾರಿಗಳ ನಿರ್ಲಕ್ಷ್ಯ ಎಲ್ಲ ಕಾರಣದಿಂದ ಮನೆಗಳು ಭೂತಬಂಗಲೆಗಳಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿರೋದು ವಿಪರ್ಯಾಸ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.