ಕಸದಿಂದ ರಸ ನೀತಿ ಯಶಸ್ವಿ: ಬಾಗಲಕೋಟೆ ನಗರಸಭೆಯ ಕಸದಿಂದ ದಿನಕ್ಕೆ 10 ಸಾವಿರ ಲಾಭ!

ಬಾಗಲಕೋಟೆ ನಗರಸಭೆ ಕಸದಿಂದ ರಸ ಎನ್ನುವ ಕಾರ್ಯದಲ್ಲಿ ಭಾರಿ ಯಶಸ್ಸು ಕಂಡಿದ್ದು ರಾಜ್ಯಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಈ ಘಟಕದ ಬಗ್ಗೆ ಹೇಳುವುದಾದರೆ ಕಸವನ್ನು ಜೆಸಿಬಿ ಮೂಲಕ ಟ್ರಿಪಲ್ ಡೆಕ್ ವೈಬ್ರೇಟರ್ ಸ್ಕ್ರೀನಿಂಗ್ ಮಷಿನ್​ಗೆ ಸಾಗಿಸುತ್ತಾರೆ.

  • Publish Date - 1:18 pm, Fri, 5 February 21 Edited By: Rashmi Kallakatta
ಕಸದಿಂದ ರಸ ನೀತಿ ಯಶಸ್ವಿ: ಬಾಗಲಕೋಟೆ ನಗರಸಭೆಯ ಕಸದಿಂದ ದಿನಕ್ಕೆ 10 ಸಾವಿರ ಲಾಭ!
ಕಸವನ್ನು ಸಂಸ್ಕರಣಾ ಯಂತ್ರಗಳಿಗೆ ಕಾರ್ಮಿಕರು ಲಿಫ್ಟ್ ಮಾಡುತ್ತಿರುವ ದೃಶ್ಯ

ಬಾಗಲಕೋಟೆ: ಕಸ ಅಂದರೆ ಸಾಕು ಇದೇನು ಬಿಡು ಇದರಿಂದೇನು ಪ್ರಯೋಜನ ಎಂದು ನಿರ್ಲಕ್ಷ್ಯ ಮಾಡುವವರೇ ಸುಮಾರು ಜನ. ಕಸದಿಂದ ರಸ ಮಾಡಬೇಕೆಂದು ಸಲಹೆ, ಸಂದೇಶ, ಜಾಗೃತಿ ಮೂಡಿಸುವವರಿಗಂತೂ ಕೊರತೆಯೇ  ಇಲ್ಲ.  ಇಲ್ಲೊಂದು ನಗರಸಭೆ ಕಸದಿಂದ ರಸ ಮಾಡುತ್ತಾ ನಗರದ ಸ್ವಚ್ಚತೆ ಜೊತೆಗೆ ನಗರಸಭೆಗೆ ಹೆಚ್ಚಿನ ಆದಾಯ ತರುತ್ತಿದೆ.

ರಾಶಿ ರಾಶಿ ಬಿದ್ದಿರುವ ಕಸವನ್ನು ಸಂಸ್ಕರಣಾ ಯಂತ್ರಗಳಿಗೆ ಕಾರ್ಮಿಕರು ಲಿಫ್ಟ್ ಮಾಡುತ್ತಿದ್ದು, ಕಸವನ್ನು ಶುದ್ಧ ಕಾಂಪೋಸ್ಟ್ ಗೊಬ್ಬರವಾಗಿ ಯಂತ್ರಗಳು ಪರಿವರ್ತಿಸುತ್ತಿವೆ. ಇನ್ನೊಂದು ಕಡೆ ಬಯೊಗ್ಯಾಸ್ ಮೂಲಕ ವಿದ್ಯುತ್ ತಯಾರಿಕೆಗಾಗಿ ಅಳವಡಿಸಿರುವ ಬಯೊಗ್ಯಾಸ್ ವಿದ್ಯುತ್ ಘಟಕವಿದ್ದು, ಬಾಗಲಕೋಟೆ ನಗರದ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕ ಈ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ.

ಅಷ್ಟಕ್ಕೂ ಇದು ಕೇವಲ ಕಸ ಮಾತ್ರ ಅಲ್ಲ ಇದು ರೈತರ ಜೀವಾಮೃತ. ಹೌದು ಬಾಗಲಕೋಟೆ ನಗರಸಭೆ ಈಗ ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದು, ಇಲ್ಲಿ ಕಸದಿಂದ ರಸ ಎಂಬ ನೀತಿಯನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಳ್ಳಲಾಗಿದೆ. ಸದ್ಯ ನಗರದಲ್ಲಿ ದಿನನಿತ್ಯ 15ರಿಂದ 20 ಟನ್​ನಷ್ಟು ಕಸ ಸಂಗ್ರಹವಾಗುತ್ತಿದ್ದು, ಇದೇ ಕಸವನ್ನ ಸಂಸ್ಕರಿಸಿ ಪ್ರತಿದಿನ ನಾಲ್ಕರಿಂದ ಐದು ಟನ್​ನಷ್ಟು ಶುದ್ಧವಾದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮಾಡಲಾಗುತ್ತಿದೆ.

ಬಾಗಲಕೋಟೆಯ ಕಸ ವಿಲೇವಾರಿ ಘಟಕದ ಚಿತ್ರಣ

ಇದರಿಂದಾಗಿ ಪ್ರತಿ ದಿನ 10ಸಾವಿರ ರೂಪಾಯಿ ಆದಾಯ ನಗರಸಭೆ ಖಜಾನೆ ಸೇರುತ್ತಿದೆ. ಇದಲ್ಲದೇ ಕೇಂದ್ರ ಸರ್ಕಾರದ ರಸಗೊಬ್ಬರ ಇಲಾಖೆ ಜೊತೆ ಒಪ್ಪಂದ  ಮಾಡಿಕೊಂಡಿದ್ದು, ಪ್ರತಿ ಟನ್​ಗೆ 1,500 ರೂಪಾಯಿ ಸಬ್ಸಿಡಿ ಕೂಡ ಸಿಗುತ್ತಿದೆ. ಹೀಗಾಗಿ ದಿನನಿತ್ಯ ಬರುವ ರಾಶಿ ರಾಶಿ  ಕಸವನ್ನು ಶುದ್ಧ ಗೊಬ್ಬರವಾಗಿ ಪರಿವರ್ತಿಸಿ ಎಲ್ಲರಿಗೂ ಮಾದರಿಯಾಗುತ್ತಿದೆ.

bahalkot garbage 2

ಕಸ ಸಂಸ್ಕರಣೆ ಆಗುತ್ತಿರುವ ದೃಶ್ಯ

ಇನ್ನೊಂದು ವಿಶೇಷ ಎಂದರೆ ಬಾಗಲಕೋಟೆ ನಗರಸಭೆ ಕಸದಿಂದ ರಸ ಎನ್ನುವ ಕಾರ್ಯದಲ್ಲಿ ಭಾರಿ ಯಶಸ್ಸು ಕಂಡಿದ್ದು ರಾಜ್ಯಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಈ ಘಟಕದ ಬಗ್ಗೆ ಹೇಳುವುದಾದರೆ ಕಸವನ್ನು ಜೆಸಿಬಿ ಮೂಲಕ ಟ್ರಿಪಲ್ ಡೆಕ್ ವೈಬ್ರೇಟರ್ ಸ್ಕ್ರೀನಿಂಗ್ ಮಷಿನ್​ಗೆ ಸಾಗಿಸುತ್ತಾರೆ. ನಂತರ ಅಲ್ಲಿಂದ ಕಸ 5 ಹಂತಗಳಲ್ಲಿ 5 ವಿಧದಲ್ಲಿ ಕಲ್ಲು, ಪ್ಲಾಸ್ಟಿಕ್, ಗೊಬ್ಬರ ಎಲ್ಲವನ್ನೂ ಪ್ರತ್ಯೇಕವಾಗಿ ಬೇರ್ಪಡಿಸಿದ ನಂತರ ಫಲವತ್ತಾದ ಕಾಂಪೋಸ್ಟ್ ಗೊಬ್ಬರವಾಗಿ ತಯಾರಾಗುತ್ತದೆ. ಹೀಗೆ ತಯಾರಾದ ಗೊಬ್ಬರವನ್ನು ನೇರವಾಗಿ ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತದೆ.

bahalkot garbage 3

ಟ್ರಿಪಲ್ ಡೆಕ್ ವೈಬ್ರೇಟರ್ ಸ್ಕ್ರೀನಿಂಗ್ ಮಷಿನ್​ ಮೂಲಕ ಕಸ ರವಾನೆ

ಬಾಗಲಕೋಟೆ ನಗರಸಭೆ ವಿಶೇಷತೆ ಏನೆಂದರೆ ನಗರದಲ್ಲಿ ತ್ಯಾಜ್ಯಗಳ ಸಂಗ್ರಹವನ್ನು ನೇರವಾಗಿ ಮಾಡಲಾಗುತ್ತದೆ. ಪ್ರತಿದಿನ ಕಸದ ವಾಹನಗಳಿಗೆ ಸಾರ್ವಜನಿಕರೇ ನೇರವಾಗಿ ಕಸವನ್ನು ಹಾಕುವ ಸೌಲಭ್ಯ ಕಲ್ಪಿಸಲಾಗಿದೆ. ಜನರೇ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ವಾಹನಗಳಿಗೆ ಸುರಿಯುತ್ತಾರೆ. ನಂತರ ಸಂಗ್ರಹವಾದ ಕಸ ವಿಲೇವಾರಿ ಘಟಕಕ್ಕೆ ರವಾನೆಯಾಗುತ್ತದೆ. ಅಲ್ಲಿ ಕೆಲ ದಿನಗಳ ಕಾಲ ಕಸವನ್ನು ಕೊಳೆಸಿ ಅದನ್ನ ಗೊಬ್ಬರವನ್ನಾಗಿ ತಯಾರು ಮಾಡಲಾಗುತ್ತದೆ.

bahalkot garbage 4

ಕಾಂಪೋಸ್ಟ್ ಗೊಬ್ಬರ ತಯಾರಿಕೆ

ಹೀಗೆ ತಯಾರಾದ ಫಲವತ್ತಾದ ಗೊಬ್ಬರವನ್ನು ರೈತರಿಗೆ 2 ರೂಪಾಯಿ ಕೆ.ಜಿಯಂತೆ ಮಾರಾಟ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ನಗರಸಭೆ ಪರಿಸರ ಅಭಿಯಂತರರಾದ ಎಫ್.ವೈ ಕಳಸರೆಡ್ಡಿ ಈ ಘಟಕದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಮುನ್ನಡೆಸುತ್ತಿದ್ದಾರೆ. ಇನ್ನು ಇಲ್ಲಿ ಪ್ಲಾಸ್ಟಿಕ್ ಕೂಡ ವೇಸ್ಟ್ ಮಾಡುವುದಿಲ್ಲ ಕಸದಲ್ಲಿ ಬಂದ ಪ್ಲಾಸ್ಟಿಕ್​ಗಳನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳಿಸುತ್ತಾರೆ. ಯಾವುದೇ ಒಂದು ವಸ್ತುವನ್ನು ಇಲ್ಲಿ ನಿರುಪಯುಕ್ತ ಎಂದು ಹೇಳುವ ಹಾಗಿಲ್ಲ. ಹೀಗೆ ಒಣ ಕಸದ ಬಳಕೆಯಾದರೆ ಇತ್ತ ಹಸಿ ಕಸದಿಂದ ಬಯೊಗ್ಯಾಸ್ ತಯಾರಿಸಲಾಗುತ್ತದೆ.

bagalkot garbage

ಬಾಗಲಕೋಟೆ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕ

ಈ ಬಯೊಗ್ಯಾಸ್ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಪ್ರತಿದಿನ 12 ಕೆವಿ ವಿದ್ಯುತ್ ತಯಾರಾಗುತ್ತದೆ. ಆ ವಿದ್ಯುತ್ ಮೂಲಕವೇ ಸಂಸ್ಕರಣಾ ಘಟಕದ ವಿದ್ಯುತ್ ಕಂಬದಲ್ಲಿ ಬಲ್ಬ್ ಬೆಳಗಿಸಲಾಗುತ್ತದೆ. ಸದ್ಯ ಬಾಗಲಕೋಟೆ ನಗರಸಭೆಯ ಈ ಕಾರ್ಯ ಸಾರ್ವಜನಿಕರಿಗೆ ತುಂಬಾನೆ ಮೆಚ್ಚುಗೆಯಾಗಿದ್ದು ಎಲ್ಲರೂ ಕೂಡ ಸಹಕಾರ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಕಸ ಎಂದು ನಿರ್ಲಕ್ಷ್ಯ ಮಾಡದೆ ಅದರಲ್ಲಿ ಮತ್ತೊಂದು ಮಹತ್ವದ ಪ್ರಯೋಜನಕ್ಕೆ ನಗರಸಭೆ ಮುಂದಾಗಿದೆ. ಇನ್ನೊಂದು ಕಡೆ ಕಸವನ್ನ ಎಲ್ಲೆಂದರಲ್ಲಿ ಬಿಸಾಡುತ್ತಿದ್ದ ಜನರು ಕೂಡ ನಗರಸಭೆ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಅದೇನೆ ಆಗಲಿ ಕಸದಿಂದ ರಸ ಮಾಡುವಲ್ಲಿ ಯಶಸ್ಸು ಕಂಡ ಬಾಗಲಕೋಟೆ ನಗರಸಭೆ ಇತರೆ ಇಲಾಖೆಗಳಿಗೂ ಮಾದರಿಯಾಗಿದೆ.

ಕ್ರೀಡಾಂಗಣದ ಕನಸು ಕಂಡಿದ್ದ ಜನರಿಗೆ ಕಸ ವಿಲೇವಾರಿ ಘಟಕ ಶಾಕ್.. ಮೈಸೂರು ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ