ಎದೆಗೆ ಕಲ್ಲು ಬಿದ್ದರೂ ಪ್ರಯಾಣಿಕರ ರಕ್ಷಣೆ; ಗಂಭೀರ ಗಾಯಗೊಂಡಿದ್ದ ಕೆಎಸ್​ಆರ್​ಟಿಸಿ ಚಾಲಕ ಸಾವು

ಕವಟಗಿ ಪುನರ್ವಸತಿ ಕೇಂದ್ರದ ಬಳಿ ಈ ಘಟನೆ ನಡೆದಿದ್ದು, ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಚಾಲಕನ ಮೇಲೆ ಕಲ್ಲೆಸೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಎನ್.ಕೆ. ಅವಟಿ ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

  • TV9 Web Team
  • Published On - 18:44 PM, 16 Apr 2021
ಎದೆಗೆ ಕಲ್ಲು ಬಿದ್ದರೂ ಪ್ರಯಾಣಿಕರ ರಕ್ಷಣೆ; ಗಂಭೀರ ಗಾಯಗೊಂಡಿದ್ದ ಕೆಎಸ್​ಆರ್​ಟಿಸಿ ಚಾಲಕ ಸಾವು
ಸಾರಿಗೆ ಬಸ್​ಗಳು

ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ವೇಳೆ ಕಿಡಿಗೇಡಿಗಳ ಕಲ್ಲೇಟಿನಿಂದ ಗಾಯಗೊಂಡಿದ್ದ ಕೆಎಸ್​ಆರ್​ಟಿಸಿ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೃತ ಕೆಎಸ್​ಆರ್​ಟಿಸಿ ಚಾಲಕನ ಪತ್ನಿ, ಸಾರಿಗೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಬಸ್​ಗೆ ಕಲ್ಲೆಸೆತವಾಗಿತ್ತು. ಚಾಲಕನ ಎದೆಗೆ ಕಲ್ಲು ಬಿದ್ದರೂ ಅವರು ಪ್ರಯಾಣಿಕರ ರಕ್ಷಣೆ ಮಾಡಿದ್ದರು. ಎದೆಗೆ ಕಲ್ಲು ಬಿದ್ದ ನೋವಲ್ಲೂ, ಬಸ್ ನಿಯಂತ್ರಿಸಿ, ನಿಲ್ಲಿಸಿ ಪ್ರಯಾಣಿಕರ ಪ್ರಾಣ ರಕ್ಷಿಸಿದ್ದರು. 

ಸಾರಿಗೆ ನೌಕರರ ಮುಷ್ಕರದ ವೇಳೆ ಪ್ರತಿನಿತ್ಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ಕೆಲಸಕ್ಕೆ ಬರಬೇಕೆಂದು ದಿನವೂ ಒತ್ತಾಯ ಮಾಡುತ್ತಿದ್ದರು. ಅವರ ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ದಕ್ಕೆ ಇಂಥಾ ಶಿಕ್ಷೆ ಸಿಕ್ಕಿದೆ. ಸಾರಿಗೆ ಸೇವೆಯ ಕರ್ತವ್ಯದಲ್ಲಿದ್ದಾಗ ನನ್ನ ಪತಿ ಕಲ್ಲೇಟಿಗೆ ಬಲಿಯಾಗಿದ್ದಾರೆ ಎಂದು ಮೃತರ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಈಗ ಯಾರು ನಮಗೆ ದಿಕ್ಕು ಎಂದು ಮೃತ ಚಾಲಕ ಎನ್.ಕೆ. ಅವಟಿ ಪತ್ನಿ ಶಹಿರಾಬಾನು ಕಣ್ಣೀರು ಹಾಕಿದ್ದಾರೆ.

ಕವಟಗಿ ಪುನರ್ವಸತಿ ಕೇಂದ್ರದ ಬಳಿ ಈ ಘಟನೆ ನಡೆದಿದ್ದು, ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಚಾಲಕನ ಮೇಲೆ ಕಲ್ಲೆಸೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಎನ್.ಕೆ. ಅವಟಿ ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕೋಲಾರದಲ್ಲಿ ಬಸ್​ಗೆ ಕಲ್ಲೆಸೆದ ದುಷ್ಕರ್ಮಿಗಳು
ಈ ನಡುವೆ, ಕೋಲಾರದಲ್ಲಿ ಸರ್ಕಾರಿ ಬಸ್​ಗೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಇಂದು ನಡೆದಿದೆ. ಕೋಲಾರ ತಾಲೂಕಿನ ತಂಬಿಹಳ್ಳಿ ಗೇಟ್ ಬಳಿ, ಬಸ್ ಮುಮುಳಬಾಗಿಲಿನಿಂದ ಕೋಲಾರಕ್ಕೆ ವಾಪಾಸ್ ಬರುವ ವೇಳೆ ಘಟನೆ ನಡೆದಿದೆ. ಕೊಲಾರದಲ್ಲಿ ಪೊಲೀಸರ ಭದ್ರತೆಯಲ್ಲಿ ಬಸ್ ಓಡಿಸಲಾಗುತ್ತಿತ್ತು. ಪೊಲೀಸರ ಭದ್ರತೆ ಇದ್ದರೂ ಬಸ್ ಮುಂಭಾಗದ ಗಾಜಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ.  ಹತ್ತು ದಿನದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ‌ದ ನಡುವೆ ಕಿಡಿಗೇಡಿಗಳ ಕೃತ್ಯ ನಡೆದಿದೆ. ಮುಷ್ಕರ ಕೈ ಬಿಟ್ಟು ಬಸ್ ಓಡಿಸ್ತಿರೋದನ್ನು ಖಂಡಿಸಿ ಕಲ್ಲೆಸೆದಿರುವ ಶಂಕೆ ವ್ಯಕ್ತವಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್​ಗೆ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆ ಸರಿಪಡಿಸೋ ಭರವಸೆ ನೀಡಿರೊ ಸಾರಿಗೆ ಸಚಿವ ಲಕ್ಷ್ಮಣ ಸವದಿ

ಇದನ್ನೂ ಓದಿ: ಸರ್ಕಾರ ಸಾರಿಗೆ ನೌಕರರು ಕುಟುಂಬ ಭಿಕ್ಷೆ ಬೇಡುವಂತೆ ಮಾಡಿದೆ, ಜನರೂ ಭಿಕ್ಷೆ ಬೇಡಬೇಕು- ಮಾಜಿ ಸಿಎಂ ಕುಮಾರಸ್ವಾಮಿ