ಬಾಗಲಕೋಟೆ, ಮಾ.31: ಸಾಮಾನ್ಯವಾಗಿ ದೇವಾಲಯದಲ್ಲಿ ಭಕ್ತರಿಗೆ ತೀರ್ಥವಾಗಿ ತೆಂಗಿನ ನೀರನ್ನು ಹಾಗೂ ಪ್ರಸಾದವಾಗಿ ವಿವಿಧ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಆದರೆ, ದೇವರಿಗೆ ನೈವೇದ್ಯವಾಗಿ ಸಾರಾಯಿ ಅರ್ಪಣೆ ಮಾಡುವುದು ಮತ್ತು ಅದನ್ನು ಭಕ್ತರಿಗೆ ತೀರ್ಥವಾಗಿ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಕರಾವಳಿ ಭಾಗದಲ್ಲಿ ದೈವಗಳಿಗೆ ಹರಕೆಯಾಗಿ ಮದ್ಯ ಅರ್ಪಣೆ ಮಾಡುವ ಪದ್ಧತಿ ಇದೆ. ಇದರ ಹೊರತಾಗಿ, ದೇವರಿಗೆ ನೈವೇದ್ಯವಾಗಿ ಮದ್ಯ ಅರ್ಪಣೆ ಮಾಡುವುದನ್ನು ಸಾಮಾನ್ಯವಾಗಿ ನೋಡಿರಲು ಸಾಧ್ಯವಿಲ್ಲ. ಆದರೆ, ಬಾಗಲಕೋಟೆ (Bagalkot) ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದ ಕನಕರಾಯ ದೇವರಿಗೆ ಸಾರಾಯಿಯನ್ನೇ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ದೇವಸ್ಥಾನದ ಮುಂದೆ ಸಾಲು ಸಾಲಾಗಿ ಕಂಟ್ರಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಏಕೆಂದರೆ, ಇಲ್ಲಿಗೆ ಭೇಟಿ ನೀಡುವ ಭಕ್ತರು ಕನಕರಾಯ ದೇವರಿಗೆ ಕಂಟ್ರಿ ಸಾರಾಯಿ, ವಿವಿಧ ಬ್ರ್ಯಾಂಡ್ನ ಮದ್ಯವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಬಳಿಕ ಅದನ್ನೇ ತೀರ್ಥವೆಂದು ಸೇವಿಸುತ್ತಾರೆ. ಇದರ ಜೊತೆಗೆ ಐದು ರೀತಿಯ ಕಾಳಿನ ಪಲ್ಯವನ್ನು ಪ್ರಸಾದವಾಗಿ ಹಂಚಲಾಗುತ್ತದೆ.
ಲಿಂಗಾಪುರ ಗ್ರಾಮದ ಕನಕರಾಯ ಹಾಗೂ ಕೆಲವಡಿ ಗ್ರಾಮದ ರಂಗನಾಥ ಇಬ್ಬರು ಸಹೋದರರು. ಇಬ್ಬರಿಗೂ ಸಾರಾಯಿ ನೈವೇದ್ಯ ಮಾಡುವುದು ಇಲ್ಲಿನ ಪದ್ಧತಿ. ದೇವಸ್ಥಾನದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಬರುವ ಭಕ್ತರು ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಮಾಡಿಸಿ, ತೀರ್ಥ ಸೇವನೆ ಮಾಡುವುದು ವಿಶೇಷ.
ಅಂದಾಜು 600 ವರ್ಷಗಳ ಇತಿಹಾಸ ಇರುವ ಕನಕರಾಯ ಹಾಗೂ ಲಕ್ಷ್ಮೀ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಹರಕೆ ತೀರಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಧ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಇದನ್ನೂ ಓದಿ: ರಂಭಾಪುರದಲ್ಲಿ ಜೋಳದ ಅಂಬಲಿ: ರೈತರು ಆಂಜನೇಯನಿಗೆ ಅರ್ಪಿಸುವ ಈ ನೈವೇದ್ಯದ ವಿಶೇಷತೆ ಏನು?
ಜಾತ್ರೆಯ ಮೊದಲ ದಿನವಾದ ಇಂದು ಕನಕರಾಯ ದೇವರಿಗೆ ಒಂದು ದಿನ ಮುಂಚೆ ಸಾರಾಯಿ ನೈವೇದ್ಯ ಅರ್ಪಿಸಲಾಗುತ್ತದೆ. ಕನಕರಾಯ ದೇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಳ್ಳಬಟ್ಟಿ ಸಾರಾಯಿಯನ್ನೇ ಭಕ್ತರು ನೈವೇದ್ಯ ಮಾಡುತ್ತಾರೆ. ಕನಕರಾಯ ದೇವಸ್ಥಾನದ ಮುಂದೆ ಸಾಲು ಸಾಲಾಗಿ ಕಳ್ಳಬಟ್ಟಿಯನ್ನು ನೈವೇದ್ಯಕ್ಕೆ ಮಾರಾಟ ಮಾಡುತ್ತಾರೆ. ನೈವೇದ್ಯ ಮಾಡಿ ಕೆಲ ಭಕ್ತರು ತೀರ್ಥ ಅಂತ ಅಲ್ಲೇ ಸೇವಿಸುತ್ತಾರೆ. ಈ ಸಂಪ್ರದಾಯ ಮುಂದುವರೆಯುತ್ತಿದೆ ಎಂದು ಅರ್ಚಕ ಅರ್ಜುನ ಪೂಜಾರಿ ಹೇಳುತ್ತಾರೆ.
ದೇವರಿಗೆ ಎಣ್ಣೆ ಕಾಣಿಕೆಯಾಗಿ ಸಲ್ಲಿಸುವುದು ಅಂತ ಜನರು ಹೇಳಿದರೂ ಕೂಡ ಭಕ್ತರು ಮಾತ್ರ ಅದು ತೀರ್ಥ ಅಂತಾರೆ. ದೇವರಿಗೆ ತಮ್ಮ ಬೇಡಿಕೆ ಈಡೇರಿಸಿದರೆ ಇಂತಿಷ್ಟು ಮದ್ಯದ, ಇಂತಿಷ್ಟು ಪ್ಯಾಕೆಟ್ ಸಾರಾಯಿ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಎಣ್ಣೆ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ.
ಕೆಲವರು ಹರಕೆ ತೀರಿಸಲು ಅಂತ ಮದ್ಯ ನೈವೇದ್ಯ ಅರ್ಪಿಸಿದರೆ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಜಾತ್ರೆ ಬಂತೆಂದರೆ ಸಾಕು ದೇವಸ್ಥಾನದ ಆವರಣ, ಗರ್ಭಗುಡಿ ಎಲ್ಲೆಂದರಲ್ಲಿ ಎಣ್ಣೆ ಬಾಟಲಿಗಳು, ಕಳ್ಳಬಟ್ಟಿ ಸೆರೆ ಪ್ಯಾಕೆಟ್ಗಳು ರಾರಾಜಿಸುತ್ತವೆ.
ಶತಶತಮಾನಗಳಿಂದ ನಡೆದು ಬಂದಿರುವ ಈ ಪದ್ಧತಿ ಈಗಲೂ ಮುಂದುವರೆದುಕೊಂಡು ಬಂದಿದೆ. ಇದಕ್ಕೆ ಕಾರಣ ಹಿಂದೆ ಈ ಭಾಗದಲ್ಲಿ ಬರ ಬಿದ್ದು ಜನರಿಗೆ ಕುಡಿಯೋದಕ್ಕೂ ನೀರಿಲ್ಲದೆ ಪರಿತಪಿಸುವಂತಾಗಿತ್ತಂತೆ. ಆಗ ಲಕ್ಷ್ಮಿರಂಗನಾಥ ದೇವರು ಮನುಜನ ರೂಪ ತಾಳಿ ಈ ಭಾಗಕ್ಕೆ ಬಂದು ಹಣ್ಣಿನ ರಸವನ್ನು ನೀರು ಮಾಡಿ ಬಾಯಾರಿಕೆ ನೀಗಿಸಲು ಜನರಿಗೆ ಹಣ್ಣಿನ ರಸ ನೀಡಿದರಂತೆ. ನಂತರ ಇದನ್ನು ತಿಳಿದ ಜನರು ದೇವರು ನಮಗೆ ಕೊಟ್ಟಿದ್ದು ಹಣ್ಣಿನ ರಸ, ಅಂದರೆ ಅದು ಸೋಮರಸ.
ಹಣ್ಣಿನ ರಸಕ್ಕೆ ಪ್ರತಿಯಾಗಿ ಲಕ್ಷ್ಮಿರಂಗನಾಥ ದೇವರು ಹಾಗೂ ಅವರ ಸಹೋದರ ಕನಕರಾಯ ದೇವರಿ ಸಾರಾಯಿ ನೈವೇದ್ಯ ಅರ್ಪಿಸಲು ಶುರು ಮಾಡಿದರಂತೆ ಎಂಬುದು ಭಕ್ತರ ನಂಬಿಕೆಯಾಗಿದೆ. ಜೊತೆಗೆ ಸುತ್ತಲೂ ಹಳ್ಳಿಯಿಂದ ಮಹಿಳೆಯರು ರೊಟ್ಟಿ ಕಾಳಿನ ಪಲ್ಯೆ,ಅನ್ನ ಎಲ್ಲವನ್ನೂ ತಂದೂ ಎಲ್ಲರೂ ಸೇರಿ ಊಟ ಪ್ರಸಾದ ಸೇವಿಸುತ್ತಾರೆ. ಎಲ್ಲರನ್ನೂ ಕರೆದು ಊಟ ಮಾಡಿಸಿ ಪುನೀತರಾಗುತ್ತಾರೆ.
ಸಾರಾಯಿ ಅರ್ಪಿಸಿದರೆ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಇದರಿಂದ ಇಂದಿಗೂ ಸಾರಾಯಿ ನೈವೇದ್ಯ ಪದ್ಧತಿ ಮುಂದುವರೆಯುತ್ತಲೇ ಸಾಗುತ್ತಿದೆ.ಅದೇನೆ ಇದ್ದರೂ ಎಲ್ಲವೂ ಭಕ್ತರ ನಂಬಿಕೆ ಮೇಲೆ ನಿಂತಿದ್ದು,ಇದೊಂದು ವಿಭಿನ್ನ ವಿಶೇಷ ದೇವಸ್ಥಾನ ಹಾಗೂ ವಿಚಿತ್ರ ಪದ್ಧತಿ ಎಂಬುದು ಮಾತ್ರ ನಿಜ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ