Monsoon failure: ಆ ಗ್ರಾಮಕ್ಕೆ ಕಾಲಿಟ್ಟರೆ ತೆರೆದ ಬಾಗಿಲಿನ ಮನೆಗಳು ಕಾಣಸಿಗುವುದೇ ಅಪರೂಪ. ಗ್ರಾಮದಲ್ಲಿ ಕೇವಲ ಬೀಗ ಹಾಕಿದ ಮನೆಗಳೇ ಸ್ವಾಗತ ಮಾಡುತ್ತವೆ. ಅಲ್ಲಲ್ಲಿ ಅಜ್ಜಿಯರು, ಹಿರಿಯರು ಕಟ್ಟೆ ಮೇಲೆ ಬಾಡಿದ ಮುಖದಲ್ಲಿ ಕೂತ ದೃಶ್ಯ ಸಾಮಾನ್ಯ. ಊರಿಗೆ ಊರು ಬಿಕೊ ಅಂತಿದ್ದು ಬರದ ಛಾಯೆಗೆ ಸಾಕ್ಷಿಯಾಗಿದೆ. ಅಷ್ಟಕ್ಕೂ ಅಂತಹ ಗ್ರಾಮ ಯಾವುದು? ಅಲ್ಲಿ ಮನೆಗಳಿಗೆ ಬೀಗ ಹಾಕಿರೋದಾದರೂ ಯಾಕೆ ಇಲ್ಲಿದೆ ನೋಡಿ ಡಿಟೇಲ್ಸ್.. ಸಾಲು ಸಾಲು ಮನೆಗಳಿಗೆ ಬೀಗ. ಅಲ್ಲಲ್ಲಿ ಕಟ್ಟೆ ಮೇಲೆ ಸುಮ್ಮನೆ ಕೂತ ವೃದ್ದರು. ಊರಲ್ಲಿ ಬಹುತೇಕ ಬಿಕೊ ಎಂಬ ಸ್ಮಶಾನಮೌನ ಸ್ಥಿತಿ. ಅಲ್ಲಿ ಯಾರೂ ಇಲ್ಲ, ಬರಿ ಮುದುಕರಷ್ಟೆ ಊರಲ್ಲಿದ್ದೇವೆ. ಎಲ್ಲರೂ ದುಡಿಯೋದಕ್ಕೆ ಹೋಗಿದ್ದಾರೆ ಅಂತಿರುವ ಅಜ್ಜಿಯರು. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ (lingapura village).
ಲಿಂಗಾಪುರ ಇದೊಂದು ಗ್ರಾಮಕ್ಕೆ ಕಾಲಿಟ್ಟರೆ ಸಾಕು ಬಾಗಲಕೋಟೆ ಜಿಲ್ಲೆಯಲ್ಲಿನ ಬರದ ನರಕದರ್ಶನವಾಗುತ್ತದೆ. ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳೋದಕ್ಕೆ ಮನೆ ಆಸ್ತಿಪಾಸ್ತಿ ಬಿಟ್ಟು ಗುಳೆ ಹೋಗಿದ್ದಾರೆ ಗ್ರಾಮದ ಜನರು. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆಯೇ ಆಗಿಲ್ಲ. ಬಿತ್ತನೆಯೆ ಆಗದಿದ್ದರೆ ಕೃಷಿ ಕೆಲಸ ಎಲ್ಲಿಂದ ಬಂತು. ಇನ್ನು ಕೇಂದ್ರದ ಎಮ್ ಎನ್ ಆರ್ ಇ ಜಿ ಕೆಲಸ ಒಂದು ವಾರ ಸಿಕ್ಕಿದರೆ ತಿಂಗಳು ಕಾಲ ಸಿಗೋದಿಲ್ಲ.
ಇದರಿಂದ ಜೀವನ ಸಾಗಿಸೋದು ದುಸ್ತರವಾಗಿದೆ. ಇದರಿಂದ ಅನಿವಾರ್ಯವಾಗಿ ಗ್ರಾಮದ ರೈತರು, ಯುವ ರೈತರು ಎಲ್ಲರೂ ಮನೆಗೆ ಬೀಗ ಹಾಕಿ ಮಂಗಳೂರು, ಉಡುಪಿ, ಗೋವಾ ರಾಜ್ಯಕ್ಕೆ ದುಡಿಯೋದಕ್ಕೆ ಗುಳೆ ಹೋಗಿದ್ದಾರೆ. ಮಳೆಯಿಲ್ಲ, ಬೆಳೆಯಿಲ್ಲ, ಕೆಲಸವಿಲ್ಲ, ಕುಡಿಯೋದಕ್ಕೂ ನೀರಿಲ್ಲ. ಇದರಿಂದ ನಮ್ಮಂತಹ ಮುದುಕರನ್ನು ಬಿಟ್ಟು ಎಲ್ಲರೂ ಗುಳೆ ಹೋಗಿದ್ದಾರೆ ಏನು ಮಾಡೋದು ಅಂತ ಅಳಲು ತೋಡಿಕೊಳ್ಳುತ್ತಿವೆ ಹಿರಿಯ ಜೀವಗಳು..
ಲಿಂಗಾಪುರ ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿವೆ. ಇನ್ನು ಗ್ರಾಮದಲ್ಲಿ 1500 ರಿಂದ 2 ಸಾವಿರ ಜನಸಂಖ್ಯೆಯಿದೆ. ಬಹುತೇಕ ಗ್ರಾಮದ ಜನರು ರೈತರು ಕೃಷಿಕಾರ್ಮಿಕರಾಗಿದ್ದಾರೆ. ಆದರೆ ಇದೀಗ ಊರಿನಲ್ಲಿ ಪ್ರತಿಶತ 80 ರಷ್ಟು ಜನರು ಊರನ್ನು ಬಿಟ್ಟು ಗುಳೆ ಹೋಗಿದ್ದಾರೆ. ಇದರಿಂದ ಗ್ರಾಮದಲ್ಲಿ ಸಾಲುಸಾಲು ಬೀಗ ಹಾಕಿರುವ ಮನೆಗಳೇ ಕಾಣುತ್ತವೆ. ಮನೆಗೆ ಬೀಗ ಹಾಕಿ ಪತ್ನಿ ಮಕ್ಕಳ ಸಮೇತ ರೈತರು ಊರನ್ನು ತೊರೆದಿದ್ದಾರೆ.
ಇನ್ನು ಕೆಲವು ಗ್ರಾಮಸ್ಥರು ವೃದ್ದರನ್ನು ಮನೆ ನೋಡಿಕೊಳ್ಳಲಿ ಅಂತ ಮನೆಯಲ್ಲಿಯೇ ಬಿಟ್ಟು ಹೋದ ಕಾರಣ ಅಲ್ಲಲ್ಲಿ ಹಿರಿಜೀವಗಳು ಮಾತ್ರ ಕಾಣುತ್ತವೆ. ಇದರಿಂದ ಗ್ರಾಮದಲ್ಲಿ ಯುವಕರು ಕಾಣೋದೆ ಅಪರೂಪ ಎಂಬಂತಾಗಿದೆ. ಇನ್ನೂ ಸ್ವಲ್ಪ ದಿನದಲ್ಲಿ ಮಳೆ ಆಗದೆ ಹೋದರೆ ಇದ್ದ ಅಲ್ಪ ಜನರು ಊರು ಬಿಡುವ ಸ್ಥಿತಿಯಿದೆ. ಕೆಲವಡಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಲಿಂಗಾಪುರ ಗುಳೆ ಲಿಂಗಾಪುರ ಎಂಬಂತಾಗಿದೆ.
ಅಷ್ಟರಮಟ್ಟಿಗೆ ಜನ ಗುಳೆ ಹೋಗಿದ್ದಾರೆ. ಗ್ರಾಮದಲ್ಲಿ ಕೃಷಿ ಜೊತೆಗೆ ಇತರೆ ಕೆಲಸ ಮಾಡಿಕೊಂಡಿರುವ ಕೆಲ ಜನರಿದ್ದು, ಈ ಭಾಗದಲ್ಲಿ ಕೈಗಾರಿಕೆಗಳು ಬರಬೇಕು. ಜಿಲ್ಲೆಯಲ್ಲಿ ಫ್ಯಾಕ್ಟರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಇಂತಹ ಸಂದರ್ಭದಲ್ಲಿ ಎಷ್ಟೊ ಜನರಿಗೆ ಆಸರೆಯಾಗುತ್ತವೆ. ಸರಕಾರ ಹಾಗೂ ಜನಪ್ರತಿನಿಧಿಗಳು ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡಿ ಕೈಗಾರಿಕೆ ತಂದರೆ ಮಾತ್ರ ಗುಳೆ ಹೋಗೋದು ತಪ್ಪುತ್ತದೆ. ಆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ.
ಒಟ್ಟಿನಲ್ಲಿ ಕೈಕೊಟ್ಟ ಮಳೆ ಬರದ ಸ್ಥಿತಿ ತಂದೊಡ್ಡಿದ್ದು, ಗ್ರಾಮೀಣ ಭಾಗದ ಜನರು ಅದರಲ್ಲೂ ರೈತರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಕಷ್ಟ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಈ ಗ್ರಾಮವೇ ಸಾಕ್ಷಿಯಾಗಿದೆ.
ಬಾಗಲಕೋಟ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ