ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು

ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು, ಫೆಬ್ರವರಿ 16ರಂದು ಬಾಗಲಕೋಟೆಯ ಮಲ್ಲಯ್ಯನಗುಡಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಈ ಮದುವೆಗೆ ಹುಡುಗಿ ಮನೆಯವರ ವಿರೋಧವಿದ್ದು ರಕ್ಷಣೆ ಕೋರಿ ಪ್ರೇಮಿಗಳು ಎಸ್​ಪಿ ಮೊರೆ ಹೋಗಿದ್ದಾರೆ.

  • ರವಿ ಮೂಕಿ
  • Published On - 14:44 PM, 27 Feb 2021
ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು
ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು

ಬಾಗಲಕೋಟೆ: ಒಂದು ಕಡೆ ಪ್ರೀತಿಸಿ ಮದುವೆಯಾಗಿದ್ದೇವೆ, ನಮಗೆ ರಕ್ಷಣೆ ಕೊಡಿ ಎಂದು ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಅನ್ಯಕೋಮಿನ ಯುವಕನ ಜೊತೆ ಮದುವೆಯಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವತಿಯ ಸಹೋದರ ಎಸ್​ಪಿ ಕಚೇರಿಯಲ್ಲಿಯೇ ಕಪಾಳ ಮೋಕ್ಷ ಮಾಡಿದ್ದಾನೆ. ಜೊತೆಗೆ ಯುವತಿಯ ತಂದೆ ಎಸ್​ಪಿ ಕಾಲಿಗೆ ಬಿದ್ದು ಒಬ್ಬಳೇ ಮಗಳು ಕಳುಹಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದು ಬಾಗಲಕೋಟೆಯ ಎಸ್​ಪಿ ಕಚೇರಿಯಲ್ಲಿ ಒಂದು ಕ್ಷಣ ಬಿಗಡಾಯಿಸಿದ ಸನ್ನಿವೇಶ ಕಂಡುಬಂತ್ತು.

ಬಾಗಲಕೋಟೆಯ‌ ನವನಗರದ ಸೆಕ್ಟರ್ ನಂ 44ರ ನಿವಾಸಿಗಳಾದ ಈ ಪ್ರೇಮಿಗಳ ಹೆಸರು ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು. ಅಕ್ಕಪಕ್ಕದಲ್ಲಿಯೇ ಇಬ್ಬರ ಮನೆ ಇದ್ದು, ಕಳೆದ ಏಳು ವರ್ಷದಿಂದ ನವೀನ ಪಕ್ಕದ ಮನೆಯ ಮಹಜಬಿನ್ ಅನ್ನು ಪ್ರೀತಿಸುತ್ತಿದ್ದಾನೆ. ಸದ್ಯ ಯುವತಿ ಮಹಜಬಿನ್​ಗೆ 19 ವರ್ಷ, ಅಂದರೆ 12 ವರ್ಷದ ಬಾಲ್ಯದಲ್ಲೇ ಇವರಿಬ್ಬರ ನಡುವೆ ಪ್ರೀತಿ ಆರಂಭವಾಗಿದ್ದು, ಈಗ ಪ್ರಾಯದ ಹಂತಕ್ಕೆ ಬಂದು ಮದುವೆ ಕೂಡ ಆಗಿದೆ.

ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು, ಫೆಬ್ರವರಿ 16ರಂದು ಬಾಗಲಕೋಟೆಯ ಮಲ್ಲಯ್ಯನಗುಡಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಈ ಮದುವೆಗೆ ಹುಡುಗಿ ಮನೆಯವರ ವಿರೋಧವಿದ್ದು ರಕ್ಷಣೆ ಕೋರಿ ಪ್ರೇಮಿಗಳು ಎಸ್​ಪಿ ಮೊರೆ ಹೋಗಿದ್ದರು. ಈ ವೇಳೆ ಮಗಳ ಹಿಂದೆ ಬಂದ ತಂದೆ ಸಲೀಂ ಹಾಗೂ ಸಹೋದರ ಅಹ್ಮದ್ ಅಲಿ ಪ್ರೇಮಿಗಳ ಮೇಲೆ ಹಲ್ಲೆ‌ ಮಾಡಲು ಮುಂದಾಗಿದ್ದಾರೆ. ಯುವತಿಯ ಸಹೋದರ ಅಹ್ಮದ್ ಅಲಿ ಎಸ್​ಪಿ ಕಚೇರಿಯಲ್ಲೇ ಸಹೋದರಿಗೆ ಕಪಾಳಮೋಕ್ಷ ಮಾಡಿದ ಘಟನೆ ಕೂಡ ನಡೆಯಿತು.

ಸದ್ಯ ಇಬ್ಬರು ಪ್ರೇಮಿಗಳು ನಾವು ಒಬ್ಬರನ್ನೊಬ್ಬರು ಬಿಟ್ಟು ಬದುಕುವುದಿಲ್ಲ, ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಎಸ್​ಪಿ ಅವರು ರಿಜಿಸ್ಟರ್ ಮದುವೆಯಾಗಿ ರಕ್ಷಣೆ ‌ನೀಡುತ್ತೇವೆ ಎಂದು ಹೇಳಿದ್ದು, ಸದ್ಯ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

love marriage

ಯುವತಿಯ ತಂದೆ ಎಸ್​ಪಿ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತಿರುವ ದೃಶ್ಯ

ನವೀನ್ ಹಾಗೂ ಮಹಜಬಿನ್ ಅಕ್ಕಪಕ್ಕದ ಮನೆಯವರಾದ್ದರಿಂದ ಚಿಕ್ಕಂದಿನಲ್ಲೇ ಸ್ನೇಹ ಬೆಳೆದು ನಂತರ ಅದು ಪ್ರೀತಿಗೆ ತಿರುಗಿದೆ. ಜೊತೆಗೆ ಇಬ್ಬರೂ ದೇವಸ್ಥಾನದಲ್ಲಿ  ಹಿಂದೂ ಧರ್ಮದ ಪ್ರಕಾರ ಮದುವೆ ಕೂಡ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಹುಡುಗನ ಮನೆಯವರ ವಿರೋಧ ಕಂಡುಬಂದಿಲ್ಲ. ಬದಲಿಗೆ ಹುಡುಗಿ‌ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇವರಿಗೆ ಜೀವಬೆದರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಎಸ್​ಪಿ ಬಳಿ ಬಂದ ತಂದೆ ಸಲೀಂ ನನಗೆ ಒಬ್ಬಳೇ ಮಗಳು ಸರ್. ಏನಾದರೂ ಮಾಡಿ‌ ಮನೆಗೆ ಕಳಿಸಿಕೊಡಿ ಎಂದು ಕಾಲಿಗೆರಗಿ ಕೈ ಮುಗಿದು ಕಣ್ಣೀರು ಹಾಕಿದ್ದಾರೆ. ಇನ್ನೊಂದು ಕಡೆ ಎಸ್​ಪಿ ಕಚೇರಿ ಮೈದಾನದಲ್ಲಿ ಮಗಳು ಮದುವೆಯಾಗಿದ್ದನ್ನು ತಿಳಿದ ತಾಯಿ‌ ಕುಸಿದು ಬಿದ್ದಿರುವ ದೃಶ್ಯ ಎಲ್ಲರ ಮನ ಕಲುಕುವಂತಿತ್ತು.

ಮುದ್ದಾಗಿ ಬೆಳೆಸಿದ್ದ ತಂದೆ-ತಾಯಿಗೆ ಮಗಳ ನಿರ್ಧಾರದಿಂದ ಕಣ್ಣೀರು
ಈ ವಿಚಾರವಾಗಿ ಖಾಸಗಿ ಬ್ಯಾಂಕ್​ನಲ್ಲಿ ನೌಕರನಾಗಿರು ಯುವಕ ನವೀನ್ ಮತ್ತು ಪಿಯುಸಿ ಓದಿರುವ ಯುವತಿಯನ್ನು ಕರೆಸಿ ವಿಚಾರಣೆ ನಡೆಸಿದ ಎಸ್​ಪಿ ಲೋಕೇಶ್ ಜಗಲಾಸರ್ ಇಬ್ಬರೂ ವಯಸ್ಕರಾಗಿದ್ದು, ಮದುವೆಯಾಗಿದ್ದಾರೆ. ಅವರ ಜೀವನ ನಿರ್ಧಾರ.. ಅವರಿಗೆ ಬಿಟ್ಟಿದ್ದು. ರಕ್ಷಣೆ ಕೋರಿ ನಮ್ಮ ಬಳಿ  ಬಂದಿದ್ದಾರೆ. ರಕ್ಷಣೆ ನೀಡುವಂತೆ ನವನಗರ ಠಾಣೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೋಷಕರು ನೊಂದುಕೊಂಡಿದ್ದಾರೆ. ಎರಡೂ ಕಡೆಯ ಪೋಷಕರನ್ನು ಕರೆಯಿಸಿ ಪರಿಸ್ಥಿತಿ ತಿಳಿಗೊಳಿಸಲಾಗುವುದು ಎಂದು ಹೇಳಿದರು.

ಒಟ್ಟಿನಲ್ಲಿ ಒಂದು ಕಡೆ ಪ್ರೇಮಿಗಳು ರಕ್ಷಣೆ ನೀಡಿ ಅಂತಿದ್ದರೆ, ಚಿಕ್ಕಂದಿನಿಂದ ಮುದ್ದಾಗಿ ಬೆಳೆಸಿದ ತಂದೆ- ತಾಯಿ ಮಗಳ ಈ ನಿರ್ಧಾರದಿಂದ ಕಣ್ಣೀರು ಹಾಕುತ್ತಿದ್ದಾರೆ. ಅದೇನೆ ಇರಲಿ ಜಾತಿ ಭೇದ ಮೀರಿದ ಪ್ರೇಮ ಕಥೆ ಇದಾಗಿದ್ದು, ಪೊಲೀಸರು ಪ್ರೇಮಿಗಳಿಗೆ ಸೂಕ್ತ ರಕ್ಷಣೆ ನೀಡಿ ಭಯದಿಂದ‌ ಮುಕ್ತಗೊಳಿಸಬೇಕಾಗಿದ್ದು, ಪೋಷಕರ ಮನವೊಲಿಸಿ ಪ್ರೇಮಿಗಳ ಸುಗಮ‌ ಜೀವನಕ್ಕೆ ದಾರಿ ಮಾಡಿಕೊಡಬೇಕಿದೆ.

ಇದನ್ನೂ ಓದಿ: ಮಗಳ Love Marriageಗೆ ವಿರೋಧ; ಕೋಪದಿಂದ ಅಳಿಯನಿಗೆ ಸೇರಿದ 250 ಅಡಿಕೆ ಮರ ಕಡಿದು ಬಿಸಾಕಿದ ಪೋಷಕರು!