ಕೊರೊನಾ ನಂತರ ಬೆಂಗಳೂರಿನಲ್ಲಿ ವಾಹನ ಖರೀದಿ ದುಪ್ಪಟ್ಟು; ಟ್ರಾಫಿಕ್ ತಲೆಬಿಸಿಗೆ ತಜ್ಞರು ಸೂಚಿಸುವ ಪರಿಹಾರಗಳಿವು

ದೊಡ್ದದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರುವುದಕ್ಕಿಂತಲೂ ಕಾರ್ ಪೂಲಿಂಗ್, ರೈಡ್ ಶೇರಿಂಗ್ ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಗರದಲ್ಲಿ ಸುಗಮವಾಗಿ ನಡೆದಾಡಲು, ಸೈಕಲ್ ತುಳಿಯಲು ಅವಕಾಶ ಮಾಡಿಕೊಡಬೇಕು.

  • TV9 Web Team
  • Published On - 22:43 PM, 16 Mar 2021
ಕೊರೊನಾ ನಂತರ ಬೆಂಗಳೂರಿನಲ್ಲಿ ವಾಹನ ಖರೀದಿ ದುಪ್ಪಟ್ಟು; ಟ್ರಾಫಿಕ್ ತಲೆಬಿಸಿಗೆ ತಜ್ಞರು ಸೂಚಿಸುವ ಪರಿಹಾರಗಳಿವು
ಬೆಂಗಳೂರು

ಕೊರೊನಾ ಸಾಂಕ್ರಾಮಿಕ ಪಿಡುಗು ಹೆಚ್ಚಾದ ನಂತರ ಸಾರ್ವಜನಿಕ ಸಾರಿಗೆಗಿಂತಲೂ ಖಾಸಗಿ ವಾಹನಗಳ ಬಳಕೆಯೇ ಸುರಕ್ಷಿತ ಎಂಬ ಭಾವನೆ ಜನರಲ್ಲಿ ಬಂದಿದೆ. ಇದೇ ಕಾರಣದಿಂದಾಗಿ ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಜನವರಿ 2021ರ ಹೊತ್ತಿಗೆ  ನಗರದಲ್ಲಿ ನೋಂದಣಿಯಾದ ಒಟ್ಟು ವಾಹನಗಳ ಸಂಖ್ಯೆ 1 ಕೋಟಿ ದಾಟಿದೆ. ಇದರಲ್ಲಿ 64 ಲಕ್ಷ ದ್ವಿಚಕ್ರ ವಾಹನಗಳು, 20.38 ಲಕ್ಷ ಖಾಸಗಿ ಬಳಕೆಯ ಕಾರುಗಳು ಎಂಬುದು ಗಮನಾರ್ಹ ಸಂಗತಿ.

ವಾಹನಗಳ ಸಂಖ್ಯಾಸ್ಫೋಟ ಏಕಾಏಕಿ ಸಂಭವಿಸಿದ್ದಲ್ಲ. 2018ರ ನಂತರ ಬೆಂಗಳೂರಿನಲ್ಲಿ ಪ್ರತಿವರ್ಷ 6 ಲಕ್ಷ ಹೊಸ ವಾಹನಗಳು ನೋಂದಣಿಯಾಗುತ್ತಿವೆ. 2020-21ರಲ್ಲಿ ಈ ಸಂಖ್ಯೆ ದುಪ್ಪಟ್ಟಾಯಿತು. ಅಂದರೆ ಅದೊಂದೇ ವರ್ಷದಲ್ಲಿ 11.91 ಲಕ್ಷ ವಾಹನಗಳು ನೋಂದಣಿಯಾಗಿದ್ದವು. ಕಳೆದ 4 ವರ್ಷಗಳಿಂದ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆಯ ಏರಿಕೆ ಪ್ರಮಾಣ ಹೆಚ್ಚುಕಡಿಮೆ ಅಷ್ಟೇ ಒಂದೇ ರೀತಿಯಿತ್ತು. ಆದರೆ ಕಳೆದ ವರ್ಷ ಕಾರುಗಳ ನೋಂದಣಿ ಮಾತ್ರ ನಾಲ್ಕುಪಟ್ಟು ಹೆಚ್ಚಾಗಿತ್ತು ಎಂಬುದು ಗಮನಾರ್ಹ ಸಂಗತಿ.

ವಾಕಿಂಗ್, ಸೈಕ್ಲಿಂಗ್, ಸಾರ್ವಜನಿಕ ಸಾರಿಗೆಯೇ ಪರಿಹಾರ
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮತ್ತು ನಗರ ಯೋಜನಾ ತಜ್ಙ ಅಶೀಶ್ ವರ್ಮಾ,  ‘ಕೊರೊನಾ ಪಿಡುಗಿನಿಂದ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಏಪ್ರಿಲ್ 2020ರಲ್ಲಿಯೇ ಅಂದಾಜಿಸಿದ್ದೆವು. ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕ ವಾಹನಗಳಿಗಿಂತಲೂ ಖಾಸಗಿ ವಾಹನಗಳ ಬಳಕೆ ಸುರಕ್ಷಿತ ಎಂದು ಜನರು ಅಂದುಕೊಳ್ಳುವ ಸಾಧ್ಯತೆ ಇರುತ್ತದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಶೀಘ್ರದಲ್ಲಿಯೇ ಈ ನಗರವು ಟಾಮ್​-ಟಾಮ್ ಜಾಗತಿಕ ಟ್ರಾಫಿಕ್ ಸೂಚ್ಯಂಕದಲ್ಲಿ ಅತಿಹೆಚ್ಚು ಟ್ರಾಫಿಕ್ ಸಮಸ್ಯೆಗಳಿರುವ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಬಹುದು. ನಗರದ ವಾಯುಮಾಲಿನ್ಯ ಪ್ರಮಾಣವೂ ಹೆಚ್ಚಾಗಬಹುದು’ ಎಂದು ಜಾಲತಾಣವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಬೆಂಗಳೂರಿಗೆ ಯಡಿಯೂರಪ್ಪ ಬಜೆಟ್​ನಲ್ಲಿ ಸಿಕ್ಕಿದ್ದೇನು?

ಮೈಸೂರಿನ ಟ್ರಿಣ್​ಟ್ರಿಣ್ ಸೈಕಲ್ ಮಾದರಿ ಜನಪ್ರಿಯ (ಸಂಗ್ರಹ ಚಿತ್ರ)

‘ಟ್ರಾಫಿಕ್ ಸಮಸ್ಯೆಯನ್ನು ಸರ್ಕಾರ ಮತ್ತು ಮಹಾನಗರಪಾಲಿಕೆಗಳು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣದ ಪರಿಹಾರಗಳ ಕಡೆಗೆ ಹೆಚ್ಚು ಗಮನ ನೀಡುವ ಬದಲು, ದೀರ್ಘಾವಧಿ ಮತ್ತು ಶಾಶ್ವತ ಪರಿಹಾರಗಳಿಗೆ ಒತ್ತು ನೀಡಬೇಕು. ಜನರ ಬೇಡಿಕೆ ಅಥವಾ ತತ್​ಕ್ಷಣದ ಅಗತ್ಯವನ್ನು ಆಧರಿಸಿ ಸೌಲಭ್ಯಗಳನ್ನು ಒದಗಿಸಲು ಮುಂದಾಗುವ ಪರಿಕಲ್ಪನೆ ವಿಶ್ವದ ಯಾವುದೇ ದೇಶದಲ್ಲಿ ಯಶಸ್ವಿಯಾದ ಉದಾಹರಣೆಯಿಲ್ಲ. ಎಲಿವೇಟೆಡ್ ಕಾರಿಡಾರ್​ಗಳಂಥ ಕ್ರಮಗಳಿಂದ ಟ್ರಾಫಿಕ್ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂಬುದು ಅವರ ಖಚಿತ ನಿಲುವು.

‘ನೀತಿ, ಯೋಜನೆ ಮತ್ತು ಮೂಲಸೌಕರ್ಯಗಳ ಹಂತದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಆಗ ಮಾತ್ರ ಅಂದುಕೊಂಡಿದ್ದು ಸಾಧಿಸಲು ಆಗುತ್ತದೆ. ಸಾರ್ವಜನಿಕ ಸಾರಿಗೆ, ವಾಕಿಂಗ್ ಮತ್ತು ಸೈಕ್ಲಿಂಗ್​ ಬಳಕೆಗೆ ಹೆಚ್ಚು ಉತ್ತೇಜನ ಸಿಗಬೇಕು. ಇದನ್ನು ಸಾಧಿಸಲು ಸರ್ಕಾರ ಬಜೆಟ್​ನಲ್ಲಿ ತಕ್ಕಷ್ಟು ಅನುದಾನ ಒದಗಿಸಬೇಕು. ಬಸ್​, ಮೆಟ್ರೊ ಮತ್ತು ಉಪನಗರ ರೈಲು ಯೋಜನೆಗಳಿಗೆ ಬಜೆಟ್​ನಲ್ಲಿ ಆದ್ಯತೆ ಸಿಗಬೇಕು. ಬೆಂಗಳೂರು ನಗರದಲ್ಲಿ ಸಾರಿಗೆ ವ್ಯವಸ್ಥೆಯನ್ನು ಹಲವು ಸಂಸ್ಥೆಗಳು/ಇಲಾಖೆಗಳು ನಿರ್ವಹಿಸುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜನರ ಅನುಕೂಲಕ್ಕಿಂತಲೂ ಹೆಚ್ಚಾಗಿ ರಾಜಕೀಯ ಲಾಭದ ಬಗ್ಗೆ ಯೋಚಿಸಲಾಗುತ್ತದೆ. ನಗರದ ಸಾರಿಗೆ ವ್ಯವಸ್ಥೆ ಸುಧಾರಿಸುವ ಬಗ್ಗೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು’ ಎನ್ನುತ್ತಾರೆ ಅವರು.

ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್ ಹೋಗೋರಿಗೆ ಶುಭ ಸುದ್ದಿ, ಸದ್ಯದಲ್ಲೇ ಬರಲಿದೆ ಸ್ಪೆಷಲ್ ರೈಲು

 ಬಿಎಂಟಿಸಿ ಬಸ್​ ಡಿಪೊ

ಬೆಂಗಳೂರಿಗೆ ಕನಿಷ್ಠ 14,000 ನಗರ ಸಾರಿಗೆ ಬಸ್​ಗಳು ಬೇಕು
ಕೋವಿಡ್-19 ಲಾಕ್​ಡೌನ್ ಸಮಯದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದು ನಿರೀಕ್ಷಿತ ಬೆಳವಣಿಗೆ ಎನ್ನುತ್ತಾರೆ ಸಾರಿಗೆ ಯೋಜನಾ ತಜ್ಞ ಅರ್ಕದೀಪ್ ಹಲ್ದಾರ್.

‘ಟಾಮ್​ಟಾಮ್​ ಟ್ರಾಫಿಕ್ ಸೂಚ್ಯಂಕದಲ್ಲಿ ಬೆಂಗಳೂರು ವಿಶ್ವದಲ್ಲಿಯೇ 6ನೇ ಕೆಟ್ಟ ಟ್ರಾಫಿಕ್ ದಟ್ಟಣೆಯಿರುವ ನಗರವಾಗಿದೆ. ಲಾಕ್​ಡೌನ್ ವೇಳೆ ಬೆಂಗಳೂರು ನಗರದಲ್ಲಿ ಟ್ರಾಫಿಕ್​ ಜಾಂಗಳು ಕಡಿಮೆಯಾಗಿರಲಿಲ್ಲ. ಕೋವಿಡ್-19ರ ನಂತರ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಗರದ ಟ್ರಾಫಿಕ್ ಪರಿಸ್ಥಿತಿಯನ್ನು ಈ ಬೆಳವಣಿಗೆ ಇನ್ನಷ್ಟು ಹಾಳುಗೆಡವಿದೆ. 2025ರ ವೇಳೆಗೆ ಬೆಂಗಳೂರಿನ ರಸ್ತೆಗಳ ಧಾರಣ ಸಾಮರ್ಥ್ಯದಷ್ಟೇ ವಾಹನಗಳು ಬೆಂಗಳೂರಿನಲ್ಲಿ ಇರುತ್ತವೆ. ನಂತರದ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ’ ಎನ್ನುತ್ತಾರೆ ಅವರು.

‘2011ರ ಗಣತಿಯ ಪ್ರಕಾರ ಬೆಂಗಳೂರಿನಲ್ಲಿ 90 ಲಕ್ಷ ಜನಸಂಖ್ಯೆ ಇತ್ತು. ಈ ವರ್ಷ ನಡೆಯುವ ಗಣತಿಯ ಹೊತ್ತಿಗೆ ಜನಸಂಖ್ಯೆಯು 1.4 ಕೋಟಿ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಜನಸಂಖ್ಯೆಗೆ ಕನಿಷ್ಠ 14,000 ಬಸ್​ಗಳು ಬೇಕು. ಅಂದರೆ ಇಂದು ನಮ್ಮ ಬಿಎಂಟಿಸಿ ಹೊಂದಿರುವ ಒಟ್ಟು ಬಸ್​ಗಳಿಗೆ ಇದು ದುಪ್ಪಟ್ಟು ಪ್ರಮಾಣ. ಕಳೆದ 20 ವರ್ಷಗಳಲ್ಲಿ ಖಾಸಗಿ ವಾಹನಗಳ ಸಂಖ್ಯೆ ಐದಾರುಪಟ್ಟು ಹೆಚ್ಚಾಗಿದೆ. ಬಸ್​ಗಳ ಸಂಖ್ಯೆ 2ರಿಂದ ಎರಡೂವರೆ ಪಟ್ಟು ಮಾತ್ರವೇ ಹೆಚ್ಚಾಗಿದೆ. ನಮ್ಮ ಮೆಟ್ರೊದ 2ನೇ ಹಂತದ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕ ಸಾರಿಗೆ ಇನ್ನಷ್ಟು ಸುಧಾರಿಸಬೇಕಿದೆ’ ಎಂದು ಅವರು ಸಲಹೆ ಮಾಡಿದರು.

‘ಕೋವಿಡ್-19 ಪಿಡುಗಿನಿಂದಾಗಿ ವರ್ಕ್​ ಫ್ರಂ ಹೋಂ ಅನುಷ್ಠಾನಯೋಗ್ಯ ಉಪಾಯ ಎಂದು ಸಾಬೀತಾಗಿದೆ. ಇದು ಮುಂದುವರಿದರೆ ವಾರದ ಕೆಲಸದ ದಿನಗಳಲ್ಲಿ ರಸ್ತೆ ಮೇಲಿನ ವಾಹನಗಳ ಒತ್ತಡ ಕಡಿಮೆ ಮಾಡಬಹುದು. ಜನಸಂಚಾರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಮಾತ್ರವೇ ಟ್ರಾಫಿಕ್​ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬಲ್ಲದು. ಇದು ದೊಡ್ದದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರುವುದಕ್ಕಿಂತಲೂ ಕಡಿಮೆ ಖರ್ಚಿನಲ್ಲಿ ಮುಗಿಯುತ್ತದೆ. ಆದರೆ ಎಲ್ಲ ಭಾಗೀದಾರರು ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ.  ಕಾರ್ ಪೂಲಿಂಗ್, ರೈಡ್ ಶೇರಿಂಗ್ ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಗರದಲ್ಲಿ ಸುಗಮವಾಗಿ ನಡೆದಾಡಲು, ಸೈಕಲ್ ತುಳಿಯಲು ಅವಕಾಶ ಮಾಡಿಕೊಡಬೇಕು. ವಾಹನಗಳ ಮಾಲೀಕತ್ವದ ಬಗ್ಗೆಯೂ ಸರ್ಕಾರ ವಿವಿಧ ಇಲಾಖೆಗಳ ಮೂಲಕ ನಿಗಾ ಇರಿಸಬೇಕು’ ಎಂದು ಅನುಷ್ಠಾನಯೋಗ್ಯ ಸಲಹೆಗಳನ್ನು ಅವರು ನೀಡುತ್ತಾರೆ.