AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ, ಸಂತಾನ ಭಾಗ್ಯ, ಮನೆ ಕಟ್ಟುವ …ಇಷ್ಟಾರ್ಥ ಸಿದ್ಧಿಗಾಗಿ ಲಜ್ಜಾಗೌರಿಗೆ ನಡೆಯುತ್ತೆ ವಿಶೇಷ ಪೂಜೆ! ಈ ಸುಕ್ಷೇತ್ರದ ಮಹಿಮೆ ಏನು?

ಲಜ್ಜೆ ಗೌರಿ ಇತಿಹಾಸ ಯುನೆಸ್ಕೋದಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿಯರು ಇಲ್ಲಿಗೆ ಬಂದು ಲಜ್ಜೆ ಗೌರಿ ಬಗ್ಗೆ ಸಂಶೋಧನೆ ಮಾಡುತ್ತಾರೆ. ಹೆಸರೇ ಸೂಚಿಸುವಂತೆ ಸಿದ್ದನಕೊಳ್ಳ ಕ್ಷೇತ್ರದಲ್ಲಿ ‌ಬಂದು ಬೇಡಿಕೊಂಡಿದ್ದೆಲ್ಲವೂ ಸಿದ್ದಿಸುತ್ತದೆ ಎಂಬುದು ನಂಬಿಕೆ. ಇಲ್ಲಿ ಬಂದು ಲಜ್ಜಾಗೌರಿಗೆ ಭಕ್ತರು ಯೋನಿ ಪೂಜೆ ಮಾಡೋದು ವಿಶೇಷ.

ಮದುವೆ, ಸಂತಾನ ಭಾಗ್ಯ, ಮನೆ ಕಟ್ಟುವ ...ಇಷ್ಟಾರ್ಥ ಸಿದ್ಧಿಗಾಗಿ ಲಜ್ಜಾಗೌರಿಗೆ ನಡೆಯುತ್ತೆ ವಿಶೇಷ ಪೂಜೆ! ಈ ಸುಕ್ಷೇತ್ರದ ಮಹಿಮೆ ಏನು?
ಇಷ್ಟಾರ್ಥ ಸಿದ್ಧಿಗಾಗಿ ಲಜ್ಜಾಗೌರಿಗೆ ವಿಶೇಷ ಪೂಜೆ! ಎಲ್ಲಿದೆ ಆ ಸುಕ್ಷೇತ್ರ?
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​|

Updated on:Jan 06, 2024 | 12:37 PM

Share

ಯುವಕ ಯುವತಿಯರು ವಯಸ್ಸಿಗೆ ಬಂದರೆ ಸಾಕು… ಮದುವೆ ಯಾವಾಗ ಅಂತ ಕೇಳೋಕೆ ಶುರು ಮಾಡ್ತಾರೆ. ಮದುವೆಯಾದ ಮೇಲೆ ಮಕ್ಕಳು ಯಾವಾಗ ಅಂತಾನೂ ಪ್ರಶ್ನೆ ಎದುರಾಗುತ್ತದೆ. ನಂತರ ಮನೆ ಕಟ್ಟೋದು ಯಾವಾಗ ಇಂತಹ ಪ್ರಶ್ನೆಗಳನ್ನು ಕೇಳಿ ಕೇಳಿ ಸಾಕಾಗಿರುತ್ತೆ. ಈ‌ ಮೂರು ಬೇಡಿಕೆಗೂ ಅದೊಬ್ಬ ದೇವಿ ಇಷ್ಟಾರ್ಥ ಸಿದ್ದಿಯಾಗಿದ್ದಾಳೆ. ಆ ದೇವಿ ಯಾರು? ಎಲ್ಲಿದೆ ಆ ಪುಣ್ಯಸ್ಥಳ, ಇಲ್ಲಿ ಹೇಳ್ತೀವಿ ನೋಡಿ. ಸುತ್ತಲೂ ದಟ್ಟವಾದ ಗುಡ್ಡ ಬೆಟ್ಟ ಹೊಂದಿರುವ ಪ್ರದೇಶ, ಬೆಟ್ಟದ ಮೇಲೆ ಸುಕ್ಷೇತ್ರದ ಶ್ರೀಮಠ, ಬೆಟ್ಟದ ಕೆಳಗೆ ತಗ್ಗು ಪ್ರದೇಶದಲ್ಲಿ ಲಜ್ಜಾಗೌರಿ ವಿಗ್ರಹ (Lajjegouri Temple). ಅಂದ ಹಾಗೆ ಇದು ಸ್ಥಾಪಿತವಾಗಿರುವುದು ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಸಿದ್ದನಕೊಳ್ಳ ಕ್ಷೇತ್ರದಲ್ಲಿ (Siddhanakolla in Ilekal taluk Bagalkote).

ಹೆಸರೇ ಸೂಚಿಸುವಂತೆ ಸಿದ್ದನಕೊಳ್ಳ ಕ್ಷೇತ್ರದಲ್ಲಿ ‌ಬಂದು ಬೇಡಿಕೊಂಡಿದ್ದೆಲ್ಲವೂ ಸಿದ್ದಿಸುತ್ತದೆ ಎಂಬುದು ನಂಬಿಕೆ. ಲಜ್ಜಾಗೌರಿ ಸಿದ್ದನಕೊಳ್ಳ ಕ್ಷೇತ್ರದಲ್ಲಿ ಎಲ್ಲ ಭಕ್ತರ ಕಲ್ಪತರುವಾಗಿದ್ದಾಳೆ. ಇಲ್ಲಿ ಬಂದು ಲಜ್ಜಾಗೌರಿಗೆ ಭಕ್ತರು ಯೋನಿ ಪೂಜೆ ಮಾಡೋದು ವಿಶೇಷ. ಲಜ್ಜಾಗೌರಿಗೆ ಪೂಜೆ ಮಾಡಿ ಪಕ್ಕದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡಿ ನಂತರ ಸುತ್ತಲೂ ಕಲ್ಲಿನ ಹಂದರ‌, ಮನೆ ಕಲ್ಲಿನ‌ ತೊಟ್ಟಿಲು ನಿರ್ಮಾಣ ಮಾಡಿ ಸಂತಾನ ಭಾಗ್ಯ ಕರುಣಿಸು ಎಂದು ಭಕ್ತರು ಪ್ರಾರ್ಥಿಸುತ್ತಾರೆ.

ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿದ್ದನಕೊಳ್ಳ ಮಠಕ್ಕೆ ಪ್ರತಿ ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ಭಕ್ತರು ಬಂದು ಪೂಜೆ, ಪುನಸ್ಕಾರ ಮಾಡುತ್ತಾರೆ. ಈ ಲಜ್ಜಾ ಗೌರಿ ಯುನೆಸ್ಕೊದ ಪ್ರತಿಷ್ಠಿತ ಸ್ಥಳಗಳು ದೇಗುಲಗಳ ಪಟ್ಟಿಯಲ್ಲಿ ಹೆಸರು ಪಡೆದಿದೆ. ಜೊತೆಗೆ ಸಿದ್ದನಕೊಳ್ಳ ಸುಕ್ಷೇತ್ರ ಮಠದ ಧರ್ಮಾಧಿಕಾರಿಗಳಾದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರು ಮಕ್ಕಳಾಗುವುದಕ್ಕೆ ಆರ್ಯುವೇದ ಔಷಧ ಸಹ ನೀಡುತ್ತಾರೆ. ಲಜ್ಜಾಗೌರಿ ಕೃಪೆ ಸ್ವಾಮೀಜಿಗಳ ಆಯುರ್ವೇಧ ಔಷಧ ಎರಡರ ಪ್ರಭಾವದಿಂದಾಗಿ ಅನೇಕರಿಗೆ ಸಂತಾನ ಭಾಗ್ಯವಾಗಿವೆಯಂತೆ.

8ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದ ಲಜ್ಜಾಗೌರಿಯ ಪವಾಡ ದೇವತೆಯಾಗಿದ್ದಳು ಇದು ಚಾಲುಕ್ಯರ ಶಾಸನಗಳಲ್ಲಿಯೂ ಉಲ್ಲೇಖವಾಗಿವೆ. ಲಜ್ಜೆ ಗೌರಿ ಇತಿಹಾಸ ಯುನೆಸ್ಕೋದಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿಯರು ಇಲ್ಲಿಗೆ ಬಂದು ಲಜ್ಜೆ ಗೌರಿ ಬಗ್ಗೆ ಸಂಶೋಧನೆ ಮಾಡುತ್ತಾರೆ. ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಅಮಾವಾಸ್ಯೆಗೆ ಭಕ್ತರು ಆಗಮಿಸಿ, ಲಜ್ಜೆ ಗೌರಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಇಲ್ಲಿನ ಪವಾಡ ಪುರುಷ ಸಿದ್ದ ಶ್ರೀಗಳ ಗದ್ದುಗೆ ದರ್ಶನ ಮಾಡಿಕೊಂಡು ಹೋಗುತ್ತಾರೆ. ಪ್ರತಿ ವರ್ಷ ಬೆಟ್ಟದ ಮೇಲಿರುವ ಸಿದ್ದನಕೊಳ್ಳದ ಲಜ್ಜಾಗೌರಿಗೆ ಸಂತಾನ ಭಾಗ್ಯಕ್ಕಾಗಿ ಬೇಡಿಕೊಂಡು ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇದನ್ನೂ ಓದಿ: Kamakhya Temple -ಅಸ್ಸಾಂನ ಗುವಾಹಟಿಯಲ್ಲಿದ್ದಾಳೆ ಋತುಸ್ರಾವದ ಮಹಿಳೆಯನ್ನು ಪ್ರತಿನಿಧಿಸುವ ದೇವತೆ

ಲಜ್ಜಾಗೌರಿ ಮೂರ್ತಿಯ ಮೇಲೆ ಚಿಕ್ಕ ಚಿಕ್ಕ ಕಲ್ಲುಗಳನ್ನಿಟ್ಟು‌ಮದುವೆಯಾಗದವರು ಹಂದರ ಕಟ್ಟುತ್ತಾರೆ. ಮಕ್ಕಳಾಗದವರು ಮನೆಗಳನ್ನು ಕಟ್ಟಿ ಹೋಗುತ್ತಾರೆ. ಮಕ್ಕಳಾಗದವರು ತೊಟ್ಟಿಲು ಕಟ್ಟಿ ಹೋಗ್ತಾರೆ. ಎಲ್ಲ ಇಷ್ಟಾರ್ಥ ತೀರಿದ ಬಳಿಕ ಆ ಕಲ್ಲಿನ ಚಿಕ್ಕ ಗೂಡನ್ನು ಕೆಡವಿ, ಹರಕೆ ತೀರಿಸುವುದು ಈ ಲಜ್ಜಾಗೌರಿಗೆ ಮಾಡಿಕೊಂಡು ಬಂದಿರುವ ಪೂಜಾ ವಿಧಾನವಾಗಿದೆ.

ಅದರಲ್ಲೂ ಲಜ್ಜಾಗೌರಿಗೆ ಯೋನಿಪೂಜೆ ಮಾಡಿದರೆ ಸಂತಾನಭಾಗ್ಯ ಕಟ್ಟಿಟ್ಟಬುತ್ತಿ. ಪ್ರಾಕೃತಿಕವಾಗಿ ಸೌಂದರ್ಯ ತುಂಬಿರುವ ಸಿದ್ದನಕೊಳ್ಳದ ಬೆಟ್ಟದಲ್ಲಿ ಗುಪ್ತಗಂಗೆ ಹರಿಯುತ್ತಿದ್ದು ಎಂದೂ ಬತ್ತೋದಿಲ್ಲವಂತೆ. ಹಾಗೆಯೇ ನೂರಾರು ವರ್ಷಗಳ ಇತಿಹಾಸ ಇರುವ ಸಿದ್ದೇಶ್ವರ ಮಂದಿರಕ್ಕೆ ಅನೇಕ ಭಕ್ತರು ನಡೆದುಕೊಳ್ಳುತ್ತಾರೆ. ಮಂದಿರದ ಕೆಳಗಡೆ ಇರುವ ಲಜ್ಜಾಗೌರಿ ಪೂಜೆಗೆಂದೇ ಅನೇಕ ಭಕ್ತರು ಬರುವುದು ವಾಡಿಕೆ.

ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಸಿದ್ದನಕೊಳ್ಳದಲ್ಲಿ ಲಜ್ಜಾಗೌರಿ ಇಷ್ಟಾರ್ಥ ಸಿದ್ಧಿದೇವತೆಯಾಗಿದ್ದಾಳೆ. ಬಂದ ಭಕ್ತರಿಗೆಲ್ಲ ವರ ಕರುಣಿಸಿ ಕಲ್ಪತರುವಾಗಿದ್ದಾಳೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:53 am, Sat, 6 January 24