AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕರು ಸಿಗದೆ ಕಂಗಾಲಾಗಿದ್ದಾಗ ಎಸ್ಎಸ್ಎಲ್​ಸಿ ಓದಿದ ರೈತ ಮಾಡಿದ್ದೇನು ಗೊತ್ತಾ?

ಈ ಯಂತ್ರವನ್ನು ಚೆನ್ಬೈ, ಯುಪಿ, ಬೆಂಗಳೂರು ಕಡೆಯಿಂದ ವಿವಿಧ ಮಷಿನರಿಗಳನ್ನು ತರಿಸಿ ತಯಾರಿಸಿದ್ದು, ದಿನಕ್ಕೆ 30-40 ಕಬ್ಬು ಕಟಾವು ಮಾಡುವ ಸಾಮರ್ಥ್ಯ ಇದಕ್ಕಿದೆ. ಮುಂದೆ ಇನ್ನೂ ಇದರಲ್ಲಿ ಮಾರ್ಪಾಡು ಮಾಡಿ ದಿನಕ್ಕೆ 80 ಟನ್ ಕಬ್ಬು ಕಟಾವು ‌ಮಾಡುವ ಸಾಮರ್ಥ್ಯಕ್ಕೆ ತರುತ್ತೇವೆ. ಯಂತ್ರದ ಪೇಟೆಂಟ್ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಸಾಧಕ ರೈತ ಸಿದ್ದು ಚೌಧರಿ ಹೇಳಿದ್ದಾರೆ.

ಕಾರ್ಮಿಕರು ಸಿಗದೆ ಕಂಗಾಲಾಗಿದ್ದಾಗ ಎಸ್ಎಸ್ಎಲ್​ಸಿ ಓದಿದ ರೈತ ಮಾಡಿದ್ದೇನು ಗೊತ್ತಾ?
ಕಬ್ಬು ಕಟಾವು ಮಾಡುವ ಯಂತ್ರ
Follow us
TV9 Web
| Updated By: preethi shettigar

Updated on: Mar 08, 2022 | 7:30 PM

ಬಾಗಲಕೋಟೆ: ಕೇವಲ ಎಸ್​ಎಸ್​ಎಲ್​ಸಿ(SSLC) ಓದಿದ ರೈತ ಈಗ ಎಲ್ಲರೂ ತನ್ನತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. ಪ್ರತಿ ವರ್ಷ ಕಬ್ಬು(sugarcane) ಕಡಿಯುವ ವೇಳೆ ತಾನು ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಹಾಡಬೇಕೆಂದು ಪಣತೊಟ್ಟ ರೈತ, ಒಂದು ಯಂತ್ರ ನಿರ್ಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಹಳದೂರು ಗ್ರಾಮದ ವ್ಯಾಪ್ತಿಯಲ್ಲಿನ ರೈತ ಕಬ್ಬು ಕಟಾವು ಯಂತ್ರ ಮಾಡಿದ್ದಾರೆ. ಕಬ್ಬು ಕಟಾವು ಮಾಡುವ ಯಂತ್ರ(machine), ಇನ್ನೊಂದು ಕಬ್ಬು ಲೋಡ್ ಮಾಡುವ ಯಂತ್ರ ತಯಾರಿಸಿದ್ದಾರೆ. “ಸಿದ್ದು ಚೌಧರಿ ಕಬ್ಬು ಕಟಾವು ಯಂತ್ರ ,ಲೋಡಿಂಗ್ ಯಂತ್ರ ಎಂದು ಸದ್ಯಕ್ಕೆ ಇವುಗಳಿಗೆ ಹೆಸರಿಡಲಾಗಿದೆ. ಇದಕ್ಕೆ ಕಾರಣ ಇವುಗಳನ್ನು ತಯಾರಿಸಿದ್ದು ಸಿದ್ದು ಚೌಧರಿ ಎಂಬ  ರೈತ.

ಎಸ್​ಎಸ್​ಎಲ್​ಸಿ ಓದಿದ್ದ ರೈತ ಸಿದ್ದು ಚೌಧರಿ ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮದವರು‌. ಒಬ್ಬ ರೈತರಾಗಿ ಸ್ವಂತ ಎಂಟು ಎಕರೆ ಹೊಲ, ಇತರೆ ಲವಣಿ ಹೊಲ ಸೇರಿ 40 ಎಕರೆ ಕಬ್ಬು ಬೆಳೆಯುತ್ತಿದ್ದು, ಸಾವಿರಕ್ಕೂ ಅಧಿಕ ಟನ್ ಕಬ್ಬನ್ನು ಪ್ರತಿ ವರ್ಷ ಬೆಳೆಯುತ್ತಾರೆ. ಆದರೆ ಇವರಿಗೆ ಪ್ರತಿವರ್ಷ ಕಾರ್ಮಿಕರ ಸಮಸ್ಯೆ ಬಹಳ‌ ಕಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಕಬ್ಬು ಕಾರ್ಖಾನೆಗೆ ಸಾಗದೆ ಇಳುವರಿ ಹಾಗೂ‌ ಕ್ವಾಲಿಟಿ ತೂಕದ ಮೇಲೆ ಹೊಡೆತ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಹೊಂದುತ್ತಿದ್ದರು. ಕೊನೆಗೆ ಕಾರ್ಮಿಕ ಸಮಸ್ಯೆಗೆ ಶಾಸ್ವತವಾಗಿ ಮುಕ್ತಿ ಹಾಡಬೇಕೆಂದು ಪಣ ತೊಟ್ಟಾಗ ತಯಾರಾಗಿದ್ದೇ ಈ ಯಂತ್ರ.

ಈ ಯಂತ್ರವನ್ನು ಚೆನ್ಬೈ, ಯುಪಿ, ಬೆಂಗಳೂರು ಕಡೆಯಿಂದ ವಿವಿಧ ಮಷಿನರಿಗಳನ್ನು ತರಿಸಿ ತಯಾರಿಸಿದ್ದು, ದಿನಕ್ಕೆ 30-40 ಕಬ್ಬು ಕಟಾವು ಮಾಡುವ ಸಾಮರ್ಥ್ಯ ಇದಕ್ಕಿದೆ. ಮುಂದೆ ಇನ್ನೂ ಇದರಲ್ಲಿ ಮಾರ್ಪಾಡು ಮಾಡಿ ದಿನಕ್ಕೆ 80 ಟನ್ ಕಬ್ಬು ಕಟಾವು ‌ಮಾಡುವ ಸಾಮರ್ಥ್ಯಕ್ಕೆ ತರುತ್ತೇವೆ. ಯಂತ್ರದ ಪೇಟೆಂಟ್ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಸಾಧಕ ರೈತ ಸಿದ್ದು ಚೌಧರಿ ಹೇಳಿದ್ದಾರೆ.

ಕಳೆದ ಮೂರು ವರ್ಷದಿಂದ ಸಿದ್ದು ಚೌಧರಿ ಈ ಯಂತ್ರ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ಮೂರು ಬಾರಿ ಮಷಿನ್ ತಯಾರಿಸಿ ವಿಫಲರಾಗಿದ್ದಾರೆ. ಕೆಲ ನ್ಯೂನ್ಯತೆ ಕಂಡನಂತರ ಪುನಃ ರಿ ಅಸೆಂಬಲ್‌‌ಮಾಡಿದ್ದಾರೆ. ಕಟಾವು ಮಾಡುವ ಯಂತ್ರಕ್ಕಾಗಿ 50 ಹೆಚ್​ಪಿ ಸಾಮರ್ಥ್ಯದ ಟ್ರ್ಯಾಕ್ಟರ್ ಬಳಸಿಕೊಳ್ಳಲಾಗಿದೆ. ಅದಕ್ಕೆ 85 ಹೆಚ್​ಪಿ ಸಾಮರ್ಥ್ಯ ಹೆಡ್ರೋಲಿಕ್ ಸಿಸ್ಟಮ್ ಎಂಜಿನ್ ಅಳವಡಿಸಲಾಗಿದೆ. 20 ಹೈಡ್ರೋಲಿಕ್ ಮೋಟರ್ ಗಳಿದ್ದು, ಅವುಗಳ ಮೂಲಕ ರೂಲರ್ ರನ್ ಆಗುತ್ತವೆ. ಎರಡು ಕ್ರಾಪ್ ಡಿವೈಡರ್​ಗಳು, 16 ರೂಲರ್ ಗಳಿದ್ದು, ಕಬ್ಬನ್ನು ಒಳಜಗ್ಗಿ ಸವದಿಯನ್ನು ಕ್ಲೀನ್ ಮಾಡುತ್ತವೆ. ಇನ್ನು ಕಬ್ಬು ಲೋಡ್ ಮಾಡೋದಕ್ಕೂ 50 ಹೆಚ್​ಪಿ ಸಾಮರ್ಥ್ಯದ ಒಂದು ಪ್ರತ್ಯೇಕ ಟ್ರ್ಯಾಕ್ಟರ್ ಇದ್ದು, ಅದಕ್ಕೆ ಲೋಡರ್ ಅಳವಡಿಸಿದ್ದು ಕಟಾವು ಮಾಡಿದ ಕಬ್ಬನ್ನು ಅದು ಲೋಡ್ ಮಾಡುತ್ತದೆ. ಎರಡು ಟ್ರ್ಯಾಕ್ಟರ್ ಎಂಜಿನ್ ಹಾಗೂ ಕಟಾವು, ಲೋಡಿಂಗ್ ಯಂತ್ರ ಸೇರಿಬಿದರ ಬೆಲೆ 50 ಲಕ್ಷ ರೂಪಾಯಿ ಆಗುತ್ತದೆ.

ಇನ್ನು ಟನ್ ಕಬ್ಬು ಕಟಾವಿಗೆ ಮಷಿನ್​ಗೆ 400 ರೂಪಾಯಿ ಪಡೆಯಲಾಗುತ್ತದೆ. ದಿನಕ್ಕೆ 30-40 ಟನ್ ಕಬ್ಬು ಕಟಾವಾಗುತ್ತದೆ. ಇಲ್ಲಿ ಬೇರು ಸಮೇತ ಕಬ್ಬನ್ನು ಕಟಾವ್ ಮಾಡುವ ಈ ಮಷಿನ್ ಇಡೀ ಕಬ್ಬನ್ನು ತುಂಡು ತುಂಡಾಗಿ ‌ಮಾಡೋದಿಲ್ಲ. ಇಡೀ ಗಳವನ್ನು ಕಾರ್ಮಿಕರಂತೆ ಕತ್ತರಿಸಿ ಸವದಿ ತೆಗೆದು ಬಿಸಾಕುತ್ತದೆ. ಸವದಿ ತುಂಡಾಗೋದರಿಂದ ಇದು ಹೊಲಕ್ಕೆ ಗೊಬ್ಬರವಾಗಲಿದೆ. ಮಷಿನ್​ನಿಂದ ಸಮಯಕ್ಕೆ ಸರಿಯಾಗಿ ಕಾರ್ಖಾನೆಗೆ ಕಬ್ಬು ಸಾಗುತ್ತದೆ.

ಕಾರ್ಮಿಕರು ಒಂದು ಲೋಡ್ ಕಬ್ಬು ಕಟಾವಿಗೆ ಲಗಾನಿ(ರೈತರಿಂದ ಕಾರ್ಮಿಕರಿಗೆ ಖುಷಿಗೆ ಕೊಡುವ ಹಣ)ಅಂತ 5-6 ಸಾವಿರ ಕೇಳುತ್ತಾರೆ ಅದು ಕೂಡ ಉಳಿಯುತ್ತದೆ. ಮಷಿನ್ ಅನುಕೂಲಕರ ಅಂತ ರೈತರು  ಹೇಳಿದರು‌. ಇನ್ನು ಸ್ಥಳಕ್ಕೆ ಕೃಷಿ ಅಧಿಕಾರಿಗಳು ಭೇಡಿ ನೀಡಿ ರೈತನ ಸಾಧನೆಗೆ ಷಹಬ್ಬಾಷ್ ಹೇಳಿದರು. ಜೊತೆಗೆ ಈ ಯಂತ್ರದ ಬಗ್ಗೆ ಕೃಷಿ ಇಲಾಖೆ ಮೇಲಾಧಿಕಾರಿಗಳಿಗೆ ವರದಿ ಕಳಿಸುತ್ತೇವೆ. ಇಲಾಖೆ ಮೂಲಕ ಇದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಏನಾದರೂ ಸೂಚನೆ ನೀಡಿದರೆ ಆ ಪ್ರಕಾರ ಮುಂದುವರೆಯೋದಾಗಿ ರೈತ ಸಿದ್ದು ಚೌಧರಿ ಹೇಳಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ:

ಗುಂಡ್ಲುಪೇಟೆ ಬಳಿ ಆಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಗುಡ್ಡದ ಮೇಲಿನ ಬಂಡೆ ಕುಸಿದು 2 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ

ಬೇವಿನ ತೊಗಟೆಯು ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಸಹಕಾರಿ-ಅಧ್ಯಯನ