ರೈತರ ಬಗ್ಗೆ ಕಾಂಗ್ರೆಸ್​ಗೆ ನಿಯತ್ತು ಇರಲಿಲ್ಲ: ಬಾಗಲಕೋಟೆಯಲ್ಲಿ ಅಮಿತ್​ ಶಾ ಭಾಷಣ

ಮೊದಲು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದಾಗ, ಕಾಂಗ್ರೆಸ್‌ನವರು ನಮ್ಮನ್ನು ನೋಡಿ ನಗುತ್ತಿದ್ದರು. ಈಗ ಕೇಂದ್ರದಿಂದ ರೈತರ ಆದಾಯ ದ್ವಿಗುಣಗೊಳಿಸಲು ಕೆಲಸವಾಗುತ್ತಿದೆ.

  • TV9 Web Team
  • Published On - 13:57 PM, 17 Jan 2021
ರೈತರ ಬಗ್ಗೆ ಕಾಂಗ್ರೆಸ್​ಗೆ ನಿಯತ್ತು ಇರಲಿಲ್ಲ: ಬಾಗಲಕೋಟೆಯಲ್ಲಿ ಅಮಿತ್​ ಶಾ ಭಾಷಣ
ಅಮಿತ್ ಶಾ

ಬಾಗಲಕೋಟೆ: ಕರ್ನಾಟಕದಲ್ಲಿ ಎರಡನೇ ದಿನದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಇಂದು ಬಾಗಲಕೋಟೆಗೆ ಭೇಟಿ ನೀಡಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ಅಮಿತ್ ಶಾ ಮಾತನಾಡಿದರು. ಬಾಗಲಕೋಟೆಯು ಘಟಪ್ರಭಾ ನದಿ ನೀರಿನಿಂದ ಕೃಷಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. ಈ ಕ್ಷೇತ್ರದ ಭೂಮಿಗೆ ನಾನು ನಮಿಸುತ್ತೇನೆ ಎಂದು ಜನರನ್ನುದ್ದೇಶಿಸಿ ಭಾಷಣ ಮಾಡಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಅವರು, ಮೋದಿ ಪೂರ್ಣ ಬಹುಮತದಿಂದ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದ ಜನತೆ ಮೋದಿ ಜೋಳಿಗೆಯನ್ನು ಮತಗಳಿಂದ ತುಂಬಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಎಥೆನಾಲ್ ಮೂಲಕ ಇಂಧನ ಸಮಸ್ಯೆ ಪರಿಹಾರದ ಕೆಲಸವಾಗಲಿದೆ. ಈ ನಿಟ್ಟಿನಲ್ಲಿ ನಿರಾಣಿ ಗ್ರೂಪ್ಸ್‌ ಕೆಲಸ ಮಾಡಲಿದೆ. ಎಥೆನಾಲ್ ಘಟಕಕ್ಕಿದ್ದ ಜಿಎಸ್‌ಟಿ ಕಡಿತಗೊಳಿಸಿದ್ದೇವೆ. ಎಥೆನಾಲ್‌ನಿಂದ ಇಂಧನ ಆಮದು ಇಳಿಕೆಯಾಗಲಿದೆ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಒಡೆತನದ ಎಥೆನಾಲ್ ಘಟಕ ಉದ್ಘಾಟಿಸಿದ ಬಳಿಕ ಅಮಿತ್ ಶಾ ತಿಳಿಸಿದರು.

ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳ ಬಗ್ಗೆ ಅಮಿತ್ ಶಾ ಮಾತನಾಡಿದರು. ಮೊದಲು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದಾಗ, ಕಾಂಗ್ರೆಸ್‌ನವರು ನಮ್ಮನ್ನು ನೋಡಿ ನಗುತ್ತಿದ್ದರು. ಆದರೆ, ಈಗ ಕೇಂದ್ರದಿಂದ ರೈತರ ಆದಾಯ ದ್ವಿಗುಣಗೊಳಿಸಲು ಕೆಲಸವಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಹಣ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಮಂಡಿಗಳಲ್ಲಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ರೈತರಿಗಾಗಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿದ್ದಾಗ ಏಕೆ ಇಂಥಾ ಯೋಜನೆಗಳು ಜಾರಿಯಾಗಲಿಲ್ಲ ಎಂದು ‘ಕೈ’ ನಾಯಕರ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು. ರೈತರ ಕೆಲಸದಲ್ಲಿ ಯಡಿಯೂರಪ್ಪ ಸರ್ಕಾರ ಹಿಂದೆಮುಂದೆ ನೋಡಿಲ್ಲ. ಕೇಂದ್ರ ಸರ್ಕಾರ ತಂದ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಮೂಲಕ ರಾಜ್ಯದ ರೈತರಿಗೆ ಯೋಜನೆ ತಲುಪಿಸುವ ಕೆಲಸವಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರೈತರ ವಿಚಾರದಲ್ಲಿಗೆ ನಿಯತ್ತಾಗಿ ಇರಲಿಲ್ಲ ಎಂದು ಶಾ ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದರು.

ಈ ಮೊದಲು, ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾಗೆ ಜಿಲ್ಲೆಯ ನಾಯಕರು, ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಅಭಯ್ ಪಾಟೀಲ್ ಸಹಿತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಮಹೇಶ್ ಕುಮಟಳ್ಳಿ ಹೂಗುಚ್ಛ ನೀಡಿ ಸ್ವಾಗತ ಕೋರಿದರು.

ಸಭೆಯ ಬಳಿಕ ಮಧ್ಯಾಹ್ನ 3.15ರ ವರೆಗೂ ಶಾ ಸರ್ಕ್ಯೂಟ್ ಹೌಸ್​ನಲ್ಲೇ ಇರಲಿದ್ದಾರೆ. ಹೀಗಾಗಿ, ಸರ್ಕ್ಯೂಟ್ ಹೌಸ್ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಓರ್ವ ಎಸ್‌ಪಿ ನೇತೃತ್ವದಲ್ಲಿ ಇನ್ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಧ್ಯಾಹ್ನದ ಭೋಜನವನ್ನು ಶಾ, ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ಸ್ವೀಕರಿಸಲಿದ್ದಾರೆ. ಅಮಿತ್ ಶಾ, ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಿದ್ಧಪಡಿಸಿರುವ ಗುಜರಾತ್ ಶೈಲಿಯ ಊಟವನ್ನು ಪಡೆಯಲಿದ್ದಾರೆ.

ಸಿಎಂ BSY ಸಭೆಯಿಂದ ನಿರ್ಗಮಿಸಿದ ಬಳಿಕವೂ ಅಮಿತ್ ಶಾ ಜೊತೆ ಚರ್ಚೆ: ಕುತೂಹಲ ಕೆರಳಿಸಿದ ನಾಯಕರ ಮೀಟಿಂಗ್