ಮಂಗಗಳ ಹಸಿವು ನೀಗಿಸಲೆಂದೇ ಮನೆಯಲ್ಲಿ ತಯಾರಾಗುತ್ತದೆ ಅಧಿಕ ಅಡುಗೆ; ವಾನರ ಸೇನೆಗೆ ಮಾತೆ ಆದ ಬಾಗಲಕೋಟೆ ಮಹಿಳೆ

ಲಕ್ಷ್ಮಿಬಾಯಿ ಅವರು ಗುಳೇದಗುಡ್ಡ ಸಮೀಪದ ಆಸಂಗಿ ಗ್ರಾಮದ ಹನುಮದೇವರ ಭಕ್ತರು. ಆಸಂಗಿ ಹನುಮಂತ ಅಂದರೆ ಸಾಕು ಇವರಿಗೆ ಎಲ್ಲಿಲ್ಲದ ಭಕ್ತಿ. ಇದರಿಂದ ಮಂಗಗಳು ಹನುಮನ ಪ್ರತಿರೂಪ ಎಂದರಿತ ಇವರು ಅವುಗಳ ಆರೈಕೆ ಮಾಡೋದರ ಮೂಲಕ ಹನುಮಂತನ ಭಕ್ತಿ, ಆರಾಧನೆ ಮಾಡುತ್ತಿದ್ದಾರೆ.

  • ರವಿ ಮೂಕಿ
  • Published On - 20:46 PM, 5 Apr 2021
ಮಂಗಗಳ ಹಸಿವು ನೀಗಿಸಲೆಂದೇ ಮನೆಯಲ್ಲಿ ತಯಾರಾಗುತ್ತದೆ ಅಧಿಕ ಅಡುಗೆ; ವಾನರ ಸೇನೆಗೆ ಮಾತೆ ಆದ ಬಾಗಲಕೋಟೆ ಮಹಿಳೆ
ವಾನರ ಸೇನೆಗೆ ಮಾತೆ ಆದ ಬಾಗಲಕೋಟೆ ಮಹಿಳೆ ಲಕ್ಷ್ಮಿಬಾಯಿ

ಬಾಗಲಕೋಟೆ: ಸಾಮಾನ್ಯವಾಗಿ ಒಂದು ಮಂಗವನ್ನು ಸಾಕುವುದು ಎಂಬುದೇ ಕಷ್ಟ. ಅಂತಹದರಲ್ಲಿ ಬಾಗಕೋಟೆಯಲ್ಲೊಬ್ಬ ಮಹಿಳೆ ಪ್ರತಿದಿನ ಏನಿಲ್ಲವೆಂದರೂ 40 ರಿಂದ 50 ಮಂಗಳಿಗೆ ತಾಯಿಯಂತೆ ಆಹಾರ ನೀಡಿ ಸಲಹುತ್ತಿದ್ದಾರೆ. ಲಕ್ಷ್ಮಿಬಾಯಿ ಮಿರಜಕರ್ ಅವರ ಮನೆಗೆ ಯಾರಾದರೂ ತೆರಳಿದರೆ ವಾನರ ಸೈನ್ಯವೇ ಸ್ವಾಗತವನ್ನು ನೀಡುತ್ತದೆ. ಅಷ್ಟರಮಟ್ಟಿಗೆ ಮಂಗಗಳು ಇಲ್ಲಿ ವಾಸ ಹೂಡಿವೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ಕಂಟಿಪೇಟೆಯ ನಿವಾಸಿ ಲಕ್ಷ್ಮಿಬಾಯಿ ಕಂಡರೆ ಸಾಕು ಮಂಗಗಳು ಮಕ್ಕಳಂತೆ ಓಡೋಡಿ ಬರುತ್ತವೆ.

ಕಳೆದ ಹನ್ನೆರಡು ವರ್ಷಗಳಿಂದಲೂ ಲಕ್ಷ್ಮಿಬಾಯಿ ಅವರು ಮಂಗಗಳನ್ನು ಮಕ್ಕಳಂತೆ ಸಲುಹುತ್ತಿದ್ದಾರೆ. ದಿನಾಲೂ ಮಂಗಗಳ ಹಸಿವನ್ನು ನೀಗಿಸದೆ ಇವರ ಹೊಟ್ಟೆ ತುಂಬೋದಿಲ್ಲ.ಇವರು ಎಷ್ಟರಮಟ್ಟಿಗೆ ಮಂಗಗಳನ್ನು ಪ್ರೀತಿಸುತ್ತಾರೆ ಎಂದರೆ ಪ್ರತಿದಿನ ಇವರ ಮನೆಯಲ್ಲಿ ತಯಾರಾಗುವ ಅಡುಗೆಯಲ್ಲಿ ಮಂಗಗಳ ಪಾಲು ಇರಲೇಬೇಕು. ತಮ್ಮ ಕುಟುಂಬಸ್ಥರಿಗೆ ಆಹಾರ ಕಡಿಮೆಯಾದರೂ ಪರವಾಗಿಲ್ಲ, ಮಂಗಗಳಿಗೆ ಮಾತ್ರ ಆಹಾರ ಕಡಿಮೆಯಾಗಬಾರದು ಎಂಬುದು ಇವರ ನಿಯಮ. ಇದರಿಂದ ಮನೆಯಲ್ಲಿ ಎಲ್ಲ ಮಂಗಗಳಿಗೂ ಆಗುವಷ್ಟು ಆಹಾರ ತಯಾರಿಸುತ್ತಾರೆ. ದಿನಾಲೂ ಮನೆಯಲ್ಲಿ ಚಪಾತಿ, ರೊಟ್ಟಿ, ಅನ್ನ, ಮಂಗಗಳಿಗಾಗಿಯೇ ಹೆಚ್ಚು ತಯಾರು ಮಾಡುತ್ತಾರೆ. ಜೊತೆಗೆ ಬಾಳೆ ಹಣ್ಣು, ಬ್ರೆಡ್, ಬಿಸ್ಕಿಟ್ ಹೀಗೆ ಅನೇಕ ಆಹಾರ ನೀಡುವುದು ಇಲ್ಲಿ ನಿತ್ಯ ನಿರಂತರ.

ಲಕ್ಷ್ಮಿಬಾಯಿ ಅವರು ಕಳೆದ 12 ವರ್ಷಗಳಿಂದ ಮಂಗಗಳಿಗೆ ಆಹಾರ ನೀಡುತ್ತಾ ಬಂದಿದ್ದು, ಅವುಗಳ ಜೊತೆ ಪ್ರೀತಿ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ಒಂದು ದಿನ ಕೂಡ ಬಿಡದೆ ಮಂಗಗಳಿಗೆ ಆಹಾರ ನೀರು ನೀಡುತ್ತಾರೆ. ಒಂದು ವೇಳೆ ಅವರು ಪರ ಊರಿಗೆ ಹೋದರೆ ಮನೆಯ ಹೊರಗಡೆ ಆಹಾರ ಇಟ್ಟು ಮಂಗಗಳ ಹಸಿವು ನೀಗಿಸುವ ಕಾರ್ಯ ಮಾಡುತ್ತಾರೆ. ಒಂದೇ ಒಂದು ದಿನ ಆಹಾರ ಮಂಗಗಳಿಗೆ ನೀಡೋದರಲ್ಲಿ ವಿಫಲರಾದರೂ ಇವರು ತಾವೇ ಊಟ ಮಾಡೋದಿಲ್ಲ. ಅಷ್ಟರ ಮಟ್ಟಿಗೆ ಮಂಗಗಳ ಮೇಲೆ ಭಾವನಾತ್ಮಕ ಸಂಬಂಧ ಪ್ರೀತಿ ಹೊಂದಿದ್ದಾರೆ ಲಕ್ಷ್ಮಿಬಾಯಿ.

lakshmi

ಲಕ್ಷ್ಮಿಬಾಯಿ

ಲಕ್ಷ್ಮಿಬಾಯಿ ಅವರು ಗುಳೇದಗುಡ್ಡ ಸಮೀಪದ ಆಸಂಗಿ ಗ್ರಾಮದ ಹನುಮದೇವರ ಭಕ್ತರು. ಆಸಂಗಿ ಹನುಮಂತ ಅಂದರೆ ಸಾಕು ಇವರಿಗೆ ಎಲ್ಲಿಲ್ಲದ ಭಕ್ತಿ. ಇದರಿಂದ ಮಂಗಗಳು ಹನುಮನ ಪ್ರತಿರೂಪ ಎಂದರಿತ ಇವರು ಅವುಗಳ ಆರೈಕೆ ಮಾಡೋದರ ಮೂಲಕ ಹನುಮಂತನ ಭಕ್ತಿ, ಆರಾಧನೆ ಮಾಡುತ್ತಿದ್ದಾರೆ.

ದಿನಾಲೂ ನಮ್ಮ ಮನೆಗೆ 40ರಿಂದ 50ಮಂಗಗಳು ಬರುತ್ತವೆ. ಅವುಗಳನ್ನು ನಾನು ಸ್ವಂತ ಮಕ್ಕಳಂತೆ ಕಂಡಿದ್ದೇನೆ. ಜೊತೆಗೆ ಮಂಗಗಳು ಹನುಮನ ಪ್ರತಿರೂಪ ನಾವು ಆಸಂಗಿ ಹನುಮಂತನ ಭಕ್ತರಾಗಿದ್ದು, ಆಂಜನೇಯ ಅಂದರೆ ಎಲ್ಲಿಲ್ಲದ ಭಕ್ತಿ. ಒಂದು ದಿನ ಒಂದು ಮಂಗ ಹಸಿವಿನಿಂದ ಬಾಯಾರಿಕೆಯಿಂದ ನರಳಾಡೋದನ್ನು ಗಮನಿಸಿದೆ. ಆಗ ಅದರ ಪರಿಸ್ಥಿತಿ ಕಂಡು ಬಹಳ ದುಃಖವಾಯಿತು. ಆಗ ಆ ಮಂಗಕ್ಕೆ ಆಹಾರ ನೀಡಿ ನೀರುಣಿಸಿದ್ದೆ. ಅಂದಿನಿಂದ ಮನೆ ಮುಂದೆ ಬರುವ ಮಂಗಗಳಿಗೆ ಆಹಾರ ನೀಡೋದು ಮುಂದುವರೆದಿದೆ. ಅವುಗಳು ನನ್ನ ಮಕ್ಕಳಿದ್ದಂತೆ ಅವುಗಳಿಗೆ ಕೈ ತುತ್ತು ನೀಡದಿದ್ದರೆ ನನ್ನ ಹೊಟ್ಟೆ ತುಂಬೋದಿಲ್ಲ. ಅವುಗಳು ನನ್ನ ಮೇಲೆ ಅಷ್ಟೇ ಪ್ರೀತಿ ತೋರುತ್ತವೆ ಇದು ಹೀಗೆ ಮುಂದುವರೆಯುತ್ತದೆ ಎಂದು ಮಂಗಗಳಿಗೆ ಆಹಾರ ನೀಡುವ ಲಕ್ಷ್ಮಿಬಾಯಿ ಹೇಳಿದ್ದಾರೆ.

monkey

ಹನ್ನೆರಡು ವರ್ಷಗಳಿಂದಲೂ ಲಕ್ಷ್ಮಿಬಾಯಿ ಮಂಗಗಳಿಗೆ ಆಹಾರ ನೀಡುತ್ತಿದ್ದಾರೆ.

ಲಕ್ಷ್ಮಿಬಾಯಿ ಅವರ ಈ ಕಾರ್ಯವನ್ನು ಕಳೆದ ಹನ್ನೆರಡು ವರ್ಷಗಳಿಂದ ನೋಡುತ್ತಿದ್ದೇವೆ. ಮೊದಲು ಬೆರಳೆಣಿಕೆಯಷ್ಟಿದ್ದ ಮಂಗಗಳ ಸಂಖ್ಯೆ ಈಗ ಐವತ್ತಕ್ಕೂ ಹೆಚ್ಚಾಗಿದೆ. ಎಲ್ಲ ಮಂಗಗಳಿಗೂ ದಿನಾಲು ಲಕ್ಷ್ಮಿಬಾಯಿ ಅವರು ಆಹಾರ ನೀಡುತ್ತಾರೆ. ಮಂಗಗಳ ಮೇಲಿನ ಇವರ ಪ್ರೀತಿ ,ಮಮತೆ ನಿಜಕ್ಕೂ ಸ್ಫೂರ್ತಿದಾಯಕವಾದದ್ದು. ಸದ್ಯ ಬೇಸಿಗೆ ಇದ್ದು ಆಹಾರದ ಜೊತೆಗೆ ನೀರಿನ ಸಮಸ್ಯೆ ಇದೆ. ಪ್ರಾಣಿಗಳಿಗೆ ಆಹಾರ ನೀರು ಬಹಳ ಮುಖ್ಯ. ಆದ್ದರಿಂದ ಲಕ್ಷ್ಮಿಬಾಯಿ ಅವರ ರೀತಿ ಜನರು ಪ್ರಾಣಿಗಳಿಗೆ ಆಹಾರ ನೀಡುವುದರ ಜೊತೆಗೆ ತಮ್ಮ ತಮ್ಮ ಮನೆ ಮೇಲೆ ನೀರಿನ ತೊಟ್ಟಿಗಳನ್ನಿಟ್ಟು ಪ್ರಾಣಿ ಪಕ್ಷಿಗಳ ಬಾಯಾರಿಕೆ ನೀಗಿಸುವ ಕಾರ್ಯ ಮಾಡಬೇಕು ಎಂದು ಸ್ಥಳೀಯರಾದ ಮಹೇಶ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಲಕ್ಷ್ಮಿಬಾಯಿ ಅವರ ವಾನರ ಪ್ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಕ್ಷ್ಮಿಬಾಯಿ ಅವರ ಈ ಕಾರ್ಯ ನೋಡಿ ಕೇವಲ ಮೆಚ್ಚುಗೆ ವ್ಯಕ್ತಪಡಿಸದೆ ಜನರು ಕೂಡ ಬೇಸಿಗೆ ಅವಧಿಯಲ್ಲಿ ಪ್ರಾಣಿ ಪಕ್ಷಿಗಳ ಕಾಳಜಿ ಮಾಡಬೇಕಾಗಿದೆ. ಹಸಿವಿನ ಜೊತೆಗೆ ಪ್ರಾಣಿ ಪಕ್ಷಿಗಳ ಬಾಯಾರಿಕೆ ನೀಗಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ.

(ವರದಿ: ರವಿ ಮೂಕಿ-9980914144)

ಇದನ್ನೂ ಓದಿ:

ಲುಂಗಿ ಡ್ಯಾನ್ಸ್ ಹಾಡಿಗೆ ಸ್ಟೆಪ್ ಹಾಕಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್; ವಿಡಿಯೋ ವೈರಲ್

(Women from Bagalakot feeds monkeys with home made food everyday)