AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆರಿಗೆ ನೋವು ಕಾಣಿಸಿದರೂ ಚಂದ್ರಗ್ರಹಣವೆಂದು ಹೆರಿಗೆಗೆ ಒಪ್ಪದ ಮಹಿಳೆಯರು! ಮನವೊಲಿಸಲು ಹೈರಾಣಾದ ವೈದ್ಯರು

ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಂದ್ರಗ್ರಹಣದ ಸಮಯದಲ್ಲಿ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯರು ಹೆರಿಗೆಗೆ ನಿರಾಕರಿಸಿದ ಘಟನೆ ನಡೆದಿದೆ. ಇದರಿಂದಾಗಿ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಎದುರಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ಕೊನೆಗೂ ಅಲ್ಲಿನ ವೈದ್ಯರು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ನಿಭಾಯಿಸಿ, ಮಹಿಳೆಯರ ಮನವೊಲಿಸಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.

ಹೆರಿಗೆ ನೋವು ಕಾಣಿಸಿದರೂ ಚಂದ್ರಗ್ರಹಣವೆಂದು ಹೆರಿಗೆಗೆ ಒಪ್ಪದ ಮಹಿಳೆಯರು! ಮನವೊಲಿಸಲು ಹೈರಾಣಾದ ವೈದ್ಯರು
ಸಾಂದರ್ಭಿಕ ಚಿತ್ರ
Ganapathi Sharma
|

Updated on: Sep 09, 2025 | 8:54 AM

Share

ಬಳ್ಳಾರಿ, ಸೆಪ್ಟೆಂಬರ್ 9: ಒಂದೆಡೆ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯರನ್ನು ಹೆರಿಗೆ ಮಾಡಿಸಲು ಕರೆದೊಯ್ಯಬೇಕಾದ ತರಾತುರಿಯಲ್ಲಿರುವ ವೈದ್ಯಕೀಯ ಸಿಬ್ಬಂದಿ. ಮತ್ತೊಂದೆಡೆ, ಈಗ ಬೇಡ ಚಂದ್ರಗ್ರಹಣ (Lunar Eclipse) ಮುಗಿಯಲಿ ಎಂದು ಬೇಡಿಕೊಳ್ಳುತ್ತಿರುವ ಮಹಿಳೆಯರು. ನೋವು ಕಾಣಿಸಿಕೊಂಡ ಕೂಡಲೇ ಹೆರಿಗೆ ಮಾಡಿಸದಿದ್ದರೆ ತಾಯಿ-ಮಗುವಿನ ಜೀವಕ್ಕೆ ಅಪಾಯ ಎಂದು ಮಹಿಳೆಯರ ಮನವೊಲಿಸಲು ಸಾಹಸಪಡುತ್ತಿರುವ ವೈದ್ಯರು! ಇಂಥದ್ದೊಂದು ವಿಚಿತ್ರ ಹಾಗೂ ಅಪರೂಪದ ವಿದ್ಯಮಾನಕ್ಕೆ ಬಳ್ಳಾರಿ ಜಿಲ್ಲಾ (Ballari) ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿರುವ ಬಗ್ಗೆ ವರದಿಯಾಗಿದೆ.

ಚಂದ್ರಗ್ರಹಣದ ಸಮಯದಲ್ಲಿ, ಅನೇಕ ಗರ್ಭಿಣಿಯರು ಹೆರಿಗೆಗೆ ನಿರಾಕರಿಸಿದ್ದಾರೆ. ತೀವ್ರವಾದ ಹೆರಿಗೆ ನೋವು ಅನುಭವಿಸುತ್ತಿದ್ದರೂ, ಮಹಿಳೆಯರು ಶಸ್ತ್ರಚಿಕಿತ್ಸಾ ಕೋಣೆಗೆ ಪ್ರವೇಶಿಸಲು ನಿರಾಕರಿಸಿದ್ದಾರೆ. ಅಲ್ಲದೆ, ಮರುದಿನ ಗ್ರಹಣ ಮುಗಿಯುವವರೆಗೆ ತಮ್ಮ ಹೆರಿಗೆಯನ್ನು ಮುಂದೂಡಬೇಕೆಂದು ಒತ್ತಾಯಿಸಿದ್ದಾರೆ ಎಂಬುದಾಗಿ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ವೈದ್ಯಕೀಯ ಸಲಹೆಗಳನ್ನು ನೀಡಿದರೂ ಗರ್ಭಿಣಿಯರು ಹೆರಿಗೆಗೆ ಒಪ್ಪಲೇ ಇಲ್ಲ. ಚಂದ್ರಗ್ರಹಣದ ಸಮಯದಲ್ಲಿ ಹೆರಿಗೆಯಾಗುವುದರಿಂದ ನವಜಾತ ಶಿಶು ಮತ್ತು ತಾಯಿ ಇಬ್ಬರಿಗೂ ಅಪಾಯ ಎದುರಾಗಬಹುದು ಎಂಬ ನಂಬಿಕೆಯನ್ನು ಪ್ರತಿಪಾದಿಸಿದ್ದಾರೆ. ನಂತರ ಇಬ್ಬರು ಗರ್ಭಿಣಿಯರಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಲು ಶುರುವಾಗಿ ಪರಿಸ್ಥಿತಿ ಉಲ್ಬಣಗೊಂಡಿತು. ಇದರಿಂದಾಗಿ ಆಸ್ಪತ್ರೆ ಅಧಿಕಾರಿಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ಹಿರಿಯ ವೈದ್ಯರು ವಾರ್ಡ್‌ಗೆ ಧಾವಿಸಿ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ತಕ್ಷಣದ ಆರೋಗ್ಯ ಅಪಾಯಗಳ ಬಗ್ಗೆ ಮನವೊಲಿಸುವಲ್ಲಿ ಯಶಸ್ವಿಯಾದರು ಎಂದು ವರದಿ ತಿಳಿಸಿದೆ.

ಕೆಲವು ಅತಿಯಾದ ನಂಬಿಕೆಗಳು ಮಹಿಳೆಯರಲ್ಲಿ ಇದ್ದುದರಿಂದ ಹೆರಿಗೆ ನೋವು ಅನುಭವಿಸುತ್ತಿರುವವರು ಕೂಡ ಹೆರಿಗೆ ಮುಂದೂಡುವಂತೆ ಮನವಿ ಮಾಡುವಂತಾಯಿತು. ಅಂತಹ ಅತಿಯಾದ ನಂಬಿಕೆ, ಕಲ್ಪನೆಗಳನ್ನು ನಿರ್ಲಕ್ಷಿಸುವುದು ಅತ್ಯಗತ್ಯ ಎಂದು ಬಳ್ಳಾರಿಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಮೇಶ್ ಬಾಬು ವೈ ಒತ್ತಿ ಹೇಳಿದರು. ಅದೃಷ್ಟವಶಾತ್, ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಯರನ್ನು ಹೆರಿಗೆ ಮಾಡಿಸಿಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ.

ಇದನ್ನೂ ಓದಿ: Lunar Eclipse: ಚಂದ್ರ ಗ್ರಹಣ, ಬೆಂಕಿ ಚೆಂಡಿನಂತಾದ ಚಂದಿರ: ನಭೋ ಮಂಡಲಡದ ಅಪರೂಪದ ಚಮತ್ಕಾರ ಇಲ್ಲಿ ನೋಡಿ

ಮಹಿಳೆಯರು ಹೆರಿಗೆ ನೋವು ಅಥವಾ ಗರ್ಭಧಾರಣೆಗೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದಾಗಲೆಲ್ಲಾ, ಶುಭ ಅಥವಾ ಅಶುಭ ಸಮಯಗಳ ಬಗ್ಗೆ ಮೂಢನಂಬಿಕೆಗಳನ್ನು ಪರಿಗಣಿಸದೆ ತಕ್ಷಣ ಕ್ರಮ ಕೈಗೊಳ್ಳಬೇಕು. ಭಾನುವಾರ ನಡೆದ ಕೊನೆಯ ಚಂದ್ರಗ್ರಹಣದ ಸಮಯದಲ್ಲಿ ನಮ್ಮ ವೈದ್ಯಕೀಯ ಸಿಬ್ಬಂದಿ ಇದೇ ರೀತಿಯ ಸನ್ನಿವೇಶವನ್ನು ಎದುರಿಸಿದರು, ಆದರೆ ಅವರು ಹಿಂಜರಿಯದೆ ಏನು ಮಾಡಬೇಕೋ ಅದನ್ನು ಮಾಡಿದರು. ಆ ದಿನ ಹಲವಾರು ಹೆರಿಗೆಗಳಿಗೆ ಅನುಕೂಲ ಮಾಡಿಕೊಟ್ಟರು ಎಂದು ರಮೇಶ್ ಬಾಬು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ