ಐತಿಹಾಸಿಕ ದೇವಸ್ಥಾನದ ಬಳಿಯೇ ಬ್ಲಾಸ್ಟಿಂಗ್: ಬಿರುಕು ಬಿಟ್ಟ ಬಳ್ಳಾರಿಯ ವರವಿನ ಮಲ್ಲಯ್ಯ ದೇವಸ್ಥಾನ!
Ballari News: ಚಾಲುಕ್ಯರ ಮತ್ತು ವಿಜಯನಗರದ ಅರಸರಿಂದ ನಿರ್ಮಿಸಲ್ಪಟ್ಟ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಹೊರವಲಯದಲ್ಲಿ ಕಲ್ಲು ಬೆಟ್ಟದ ಮೇಲಿರುವ ವರವಿನ ಮಲ್ಲೇಶ್ವರ ದೇವಸ್ಥಾನದ ಬಳಿ ಕಲ್ಲಿನ ಕ್ವಾರಿ ಕ್ರಶರ್ಗಳಲ್ಲಿ ಬ್ಲಾಸ್ಟಿಂಗ್ ನಡೆಯುತ್ತಿದ್ದು, ದೇವಸ್ಥಾನ ಅವಸಾನದ ಅಂಚಿಗೆ ತಲುಪುತ್ತಿದೆ.
ಬಳ್ಳಾರಿ, ಆಗಸ್ಟ್ 03: ಅದು ಬೇಡಿಕೊಂಡ ಇಷ್ಟಾರ್ಥಗಳನ್ನು ಈಡೇರಿಸುವ ದೇವಾಲಯ. ನೂರಾರು ವರ್ಷಗಳ ಇತಿಹಾಸವಿರುವ ಆ ದೇವಾಲಯದಲ್ಲಿ ಲಕ್ಷಾಂತರ ಭಕ್ತರು ಪೂಜೆ ಸಲ್ಲಿಸುತ್ತಾರೆ. ಆದರೆ ಬೇಡಿದ ವರವ ನೀಡುವ ದೇವಾಲಯವೇ ಇದೀಗ ಗಣಿಗಾರಿಕೆಯ ಬ್ಲಾಸ್ಟಿಂಗ್ (Blasting) ನಿಂದ ಉಳಿಸಿ ಅಂತಾ ಬೇಡಿಕೊಳ್ಳುವ ಸ್ಥಿತಿ ಬಂದಿದೆ. 10ನೇ ಶತಮಾನದಲ್ಲಿ ನಿರ್ಮಿಸಿರುವ ಆ ಐತಿಹಾಸಿಕ ದೇವಾಲಯದ ಸುತ್ತ ನಿತ್ಯ ಕಲ್ಲಿನ ಕ್ವಾರಿ ಕ್ರಶರ್ ಗಳಲ್ಲಿನ ಬ್ಲಾಸ್ಟಿಂಗ್ನಿಂದ ದೇವಸ್ಥಾನ ಅವಸಾನದ ಅಂಚಿಗೆ ತಲುಪಿದೆ.
ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಹೊರವಲಯದಲ್ಲಿ ಕಲ್ಲು ಬೆಟ್ಟದ ಮೇಲಿರುವ ವರವಿನ ಮಲ್ಲೇಶ್ವರ ದೇವಸ್ಥಾನ. ಚಾಲುಕ್ಯರ ಮತ್ತು ವಿಜಯನಗರದ ಅರಸರಿಂದ ನಿರ್ಮಿಸಲ್ಪಟ್ಟಿದ್ದು, ಕಲಾಶೈಲಿಯ ವಿಕಾಸ ಕೇಂದ್ರವಾಗಿದೆ. ಕಲ್ಯಾಣಿ ಚಾಲುಕ್ಯರ ಮತ್ತು ವಿಜಯನಗರ ಅರಸರ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯಕ್ಕೆ ರಾಜ್ಯ ಮತ್ತು ಸೀಮಾಂಧ್ರದಲ್ಲಿ ಲಕ್ಷಾಂತರ ಭಕ್ತರಿದ್ದಾರೆ.
ಆದರೆ ಐತಿಹಾಸಿಕ ಪರಂಪರೆ ಹೊಂದಿರುವ ವರವಿನ ಮಲ್ಲಯ್ಯ ದೇವಸ್ಥಾನ ಇದೀಗ ಕಲ್ಲು ಕ್ವಾರಿ ಕಶ್ರರ್ ಬ್ಲಾಸ್ಟಿಂಗ್ನಿಂದ ನಿತ್ಯ ಅವಸಾನದ ಅಂಚಿಗೆ ತಲುಪುತ್ತಿದೆ. ದೇವಸ್ಥಾನದ ಕೂಗಳತೆ ಹಾಗೂ ಹಳೇಕೋಟೆ ಭಾಗದ ಕ್ವಾರಿಗಳಲ್ಲಿ ಬೋರವೇಲ್ ಬ್ಲಾಸ್ಟಿಂಗ್ ನಡೆಸುತ್ತಿರುವುದರಿಂದ ಐತಿಹಾಸಿಕ ಸ್ಮಾರಕ ಬಿರುಕು ಬಿಡುತ್ತಲೇ ಸಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಆಪ್ತೆ, ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ವಿರುದ್ಧ ಎಫ್‌ಐಆರ್ ದಾಖಲು, ಏನಿದು ಪ್ರಕರಣ?
ವರವಿನ ಮಲ್ಲಯ್ಯ ದೇವಸ್ಥಾನದ ಪೂರ್ವ ದ್ವಾರದ ಗೋಪುರ ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ರಾಯ ಗೋಪುರ ಶೈಲಿಯಲ್ಲಿದ್ದು, ನೋಡಲು ಸುಂದರವಾಗಿದೆ. ದ್ವಾರ ಪಾಲಕರ ವಿಗ್ರಹ, ಆನೆಗಳ ಶಿಲ್ಪ, ಸಿಂಹ, ಹಂಸಗಳು ಹಾಗೂ ಉಬ್ಬು ಶಿಲ್ಪಗಳನ್ನು ತಳಪಾಯದಲ್ಲಿ ಕೆತ್ತಲಾಗಿದೆ. ಈ ಗೋಪುರದಲ್ಲಿ 6 ಅಂತಸ್ತುಗಳಿದ್ದು, ಗೋಪುರವನ್ನು ನಿರ್ಮಿಸಲು ಸುಟ್ಟ ಇಟ್ಟಿಗೆ ಬಳಸಲಾಗಿದೆ.
ದೇವಸ್ಥಾನದ ಸುತ್ತಲೂ ಆವರಣ ನಿರ್ಮಿಸಲಾಗಿದೆ. ಆವರಣದ ದಕ್ಷಿಣ ಭಾಗದಲ್ಲಿ ಮಂಟಪ, ವೀರಗಲ್ಲು ಶಿವಲಿಂಗ, ನಂದಿ ಸೇರಿ ಇತರೆ ಶಿಲ್ಪಗಳಿವೆ. ಈ ಸ್ಮಾರಕದ ಐತಿಹಾಸಿಕವಾಗಿರುವುದರಿಂದ ಪ್ರಾಚ್ಯವಸ್ತು ಇಲಾಖೆಗೆ ಒಳಪಟ್ಟಿದೆ. ಆದರೆ ದೇವಸ್ಥಾನದ ಸುತ್ತ ಬ್ಲಾಸ್ಟಿಂಗ್ ನಡೆಯುತ್ತಿರುವುದರಿಂದ ದೇವಸ್ಥಾನ ಬಿರುಕು ಬಿಡುತ್ತಿರುವುದು ಲಕ್ಷಾಂತರ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Bellary News: ಕೊಠಡಿಯ ಬಾಗಿಲೇ ಬ್ಲ್ಕಾಕ್ ಬೋರ್ಡ್, ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ದಯನೀಯ ಸ್ಥಿತಿ ನೋಡಿ
ದೇವಸ್ಥಾನ ಸುತ್ತ ನಡೆಯುತ್ತಿರುವ ಬ್ಲಾಸ್ಟಿಂಗ್ ನಿಷೇಧಿಸುವಂತೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಎಷ್ಠೇ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ದೇವಸ್ಥಾನದ ಅಳಿವಿಗೆ ಕಾರಣವಾಗಿದೆ. ಹೀಗಾಗಿ ಕೂಡಲೇ ಕ್ವಾರಿಗಳಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ನಿಷೇಧ ಮಾಡಬೇಕು ಅಂತಿದ್ದಾರೆ ಭಕ್ತರು.
10 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ದೇವಸ್ಥಾನ ಬ್ಲಾಸ್ಟಿಂಗ್ನಿಂದ ನಲುಗಿ ಹೋಗುತ್ತಿದೆ. ಹೀಗಾಗಿ ಹಳೇಕೋಟೆ, ತೆಕ್ಕಲಕೋಟೆ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿನ ಬ್ಲಾಸ್ಟಿಂಗ್ ತಡೆಯುವಂತೆ ಭಕ್ತರು ಸ್ಥಳೀಯರು ಹೋರಾಟಕ್ಕೆ ಇಳಿದಿದ್ದಾರೆ. ಇನಾದ್ದರೂ ಸ್ಮಾರಕಗಳನ್ನ ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೇ ಬ್ಲಾಸ್ಟಿಂಗ್ನಿಂದ ಐತಿಹಾಸಿಕ ದೇವಸ್ಥಾನದ ಪಳೆಯುಳಿಕೆ ಸಹ ಇಲ್ಲದಂತಾಗುವುದರಲ್ಲಿ ಎರಡು ಮಾತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.