ಮಳೆಗಾಲದಲ್ಲಿ ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ; ಬಳ್ಳಾರಿ ಜನರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ

ಮಳೆ ನೀರಿನಿಂದ ಜಲಾವೃತಗೊಂಡ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯಿಂದ ಮೋಟಾರ್​ಗಳ ಮೂಲಕ ನೀರು ಖಾಲಿ ಮಾಡಲಾಗುತ್ತದೆ. ಇದು ಬಿಟ್ಟರೆ ಇದುವರೆಗೆ ಏನನ್ನೂ ಮಾಡಿಲ್ಲ. ಮತ್ತೆ ಮಳೆ ಬಂದರೆ ಅದೇ ಪರಿಸ್ಥಿತಿ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ನೀಡಿ ಬೇಸತ್ತು ಹೋಗಿದ್ದೇವೆ. ಹೀಗಾಗಿ ಈ ವರ್ಷವಾದರೂ ಮಳೆ ನೀರು ನಿಲ್ಲದಂತೆ ಶಾಶ್ವತ ಕಾಮಗಾರಿ ಮಾಡಬೇಕು ಎಂದು ಸ್ಥಳೀಯರಾದ ಅಶೋಕ್ ಕುಮಾರ್ ಮನವಿ ಮಾಡಿದ್ದಾರೆ.

ಮಳೆಗಾಲದಲ್ಲಿ ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ; ಬಳ್ಳಾರಿ ಜನರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ
ಮಳೆಗಾಲದಲ್ಲಿ ಮನೆಯಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ

ಬಳ್ಳಾರಿ: ಪ್ರತಿ ವರ್ಷ ಮಳೆಗಾಲದಲ್ಲಿ ಸಣ್ಣಪುಟ್ಟ ಅವಾಂತರಗಳು ಎಲ್ಲಾ ನಗರಗಳಲ್ಲೂ ನಡೆಯುತ್ತದೆ. ಇದು ಮಳೆಗಾಲ ಅರಂಭವಾದಾಗ ಸಾಮಾನ್ಯ. ಆದರೆ ಬಳ್ಳಾರಿ ಜಿಲ್ಲೆಯ ತಾಳೂರು ರಸ್ತೆಯಲ್ಲಿರುವ ರೇಣುಕಾ ನಗರದ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದ್ದು, ಯಾಕಪ್ಪ ಮಳೆ ಬರುತ್ತದೆ ಎಂದು ಇಲ್ಲಿನ ಜನ ಪರಿತಪಿಸುವಂತಾಗಿದೆ. ಏಕೆಂದರೆ ಈ ಭಾಗದ ಜನರಿಗೆ ಮಳೆಗಾಲ ಆರಂಭವಾದರೆ ಸಾಕು ಜೀವ ಭಯ ಶುರುವಾಗುತ್ತದೆ. ಮನೆಗಳೆಲ್ಲಾ ಜಲಾವೃತವಾಗಿ ಜೀವನ ನಡೆಸುವುದೇ ಕಷ್ಟವಾಗಿ ಬಿಡುತ್ತದೆ.

ಕಳೆದ 2-3 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ರೇಣುಕಾ ನಗರದ ಕೆಲ ಪ್ರದೇಶದ ಮನೆಗಳು ಜಲಾವೃತಗೊಂಡಿವೆ. ಮನೆ ಸುತ್ತ ಹಾಗೂ ಮನೆ ಮುಂಭಾಗ ಮಳೆ ನೀರು ನಿಂತುಕೊಂಡಿದ್ದು, ಕೆಲ ಮನೆಗಳಿಂದ ಜನರು ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಈ ವರ್ಷದ ಸಮಸ್ಯೆಯಲ್ಲ. ಕಳೆದ ಒಂದು ದಶಕದಿಂದಲೂ ಈ ಭಾಗದ ಜನರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಮಾತ್ರ ಇನ್ನು ಸಿಕ್ಕಿಲ್ಲ.

ಮಳೆ ನೀರಿನಿಂದ ಜಲಾವೃತಗೊಂಡ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯಿಂದ ಮೋಟಾರ್​ಗಳ ಮೂಲಕ ನೀರು ಖಾಲಿ ಮಾಡಲಾಗುತ್ತದೆ. ಇದು ಬಿಟ್ಟರೆ ಇದುವರೆಗೆ ಏನನ್ನೂ ಮಾಡಿಲ್ಲ. ಮತ್ತೆ ಮಳೆ ಬಂದರೆ ಅದೇ ಪರಿಸ್ಥಿತಿ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ನೀಡಿ ಬೇಸತ್ತು ಹೋಗಿದ್ದೇವೆ. ಹೀಗಾಗಿ ಈ ವರ್ಷವಾದರೂ ಮಳೆ ನೀರು ನಿಲ್ಲದಂತೆ ಶಾಶ್ವತ ಕಾಮಗಾರಿ ಮಾಡಬೇಕು ಎಂದು ಸ್ಥಳೀಯರಾದ ಅಶೋಕ್ ಕುಮಾರ್ ಮನವಿ ಮಾಡಿದ್ದಾರೆ.

ಜನರು ಮಳೆ ನೀರಿನಿಂದ ನರಕಯಾತನೆ ಅನುಭವಿಸುತ್ತಿರುವ ಸ್ಥಳಕ್ಕೆ ಶಾಸಕ ಸೋಮಶೇಖರ್ ರೆಡ್ಡಿ, ಡಿಸಿ ಪವನ್ ಕುಮಾರ್ ಮಾಲಪಾಟಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಲ್ಹೋಟ್ ಸೇರಿದಂತೆ, ಪಾಲಿಕೆ ಇಂಜಿನಿಯರ್​ಗಳ ತಂಡ ಭೇಟಿ ಪರಿಶೀಲನೆ ನಡೆಸಿತು. ಈ ಭಾಗದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದಾಗೆಲ್ಲಾ ಈ ಸಮಸ್ಯೆ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿ ವರ್ಷ ಮಹಾನಗರ ಕೇವಲ ಭರವಸೆ ನೀಡಿ ಕೈತೊಳೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಇಲ್ಲಿನ ಜನರಿಗೆ ತೊಂದರೆ ಆಗದಂತೆ ಶಾಶ್ವತ ಕಾಮಗಾರಿ ನಡೆಸುವಂತೆ ಬಿಗಿಪಟ್ಟು ಹಿಡಿಯುತ್ತೇವೆ. ಇದಕ್ಕೆ ಜಿಲ್ಲಾಧಿಕಾರಿಗಳು ಕೂಡ ಸಮ್ಮತಿ ಸೂಚಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಜತೆಗೆ ಈ ಮಳೆಗಾಲದಲ್ಲಿ ತೊಂದರೆ ಆಗದಂತೆ ಶಾಶ್ವತ ಕಾಮಗಾರಿ ನಡೆಸಲಾಗುವುದು ಎಂದು ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:

ದೇಶಾದ್ಯಂತ ಮುಂಗಾರು ಜೋರು: ಮುಂಗಾರು ತವರು ಕೇರಳದಲ್ಲಿ ಮಳೆ ಮಳೆ, ಮುಂಬೈನಲ್ಲಿ ಹೈಅಲರ್ಟ್​, ಈಶಾನ್ಯದಲ್ಲಿ ಚಂಡಮಾರುತ

ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಆಗಮನ; ಹೊಸ ಭರವಸೆಯೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿರುವ ರೈತರು