ಗಣಿನಾಡಿನಲ್ಲಿ ವೆಂಟಿಲೇಟರ್ ಕೊರತೆ; ಸಾವಿನ ಕದ ತಟ್ಟುತ್ತಿರುವ ಕೊರೊನಾ ಸೋಂಕಿತರು

ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ. ಜಿಂದಾಲ್ ಕಂಪನಿಯಲ್ಲಿಯೇ ಆಕ್ಸಿಜನ್ ಉತ್ಪಾದನೆ ಆಗುವುದರಿಂದ ಜಿಲ್ಲೆಗೆ ಬೇಕಾಗುವಷ್ಟು ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಆದರೆ ವೆಂಟಿಲೇಟರ್​ಗಳ ಸಂಖ್ಯೆ ಕಡಿಮೆ ಇದೆ.

  • ಬಸವರಾಜ ಹರನಹಳ್ಳಿ
  • Published On - 11:13 AM, 30 Apr 2021
ಗಣಿನಾಡಿನಲ್ಲಿ ವೆಂಟಿಲೇಟರ್ ಕೊರತೆ; ಸಾವಿನ ಕದ ತಟ್ಟುತ್ತಿರುವ ಕೊರೊನಾ ಸೋಂಕಿತರು
ಬಳ್ಳಾರಿ ಜಿಲ್ಲಾಸ್ಪತ್ರೆ

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ದಿಢೀರನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೋಂಕಿತರಿಗೆ ವೆಂಟಿಲೇಟರ್ ಸಿಗುತ್ತಿಲ್ಲ. ಹೀಗಾಗಿ ಸೋಂಕಿತರು ಸಾವಿನ ಕದ ತಟ್ಟುತ್ತಿದ್ದಾರೆ. ಕೇವಲ ಆರು ದಿನಗಳಲ್ಲಿ 59 ಸೋಂಕಿತರು ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದು ಗಣಿನಾಡಿನಲ್ಲಿ ಆತಂಕ ಸೃಷ್ಟಿಸಿದೆ.

ಜಿಲ್ಲೆಯಲ್ಲಿ 68 ವೆಂಟಿಲೇಟರ್​ಗಳಿದ್ದು, ಈಗಾಗಲೇ 68 ವೆಂಟಿಲೇಟರ್​ಗಳು ಫುಲ್ ಆಗಿವೆ. ಹೀಗಾಗಿ ಚಿಕಿತ್ಸೆಗೆ ಬದ್ದ ಸೋಂಕಿತರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ವೆಂಟಿಲೇಟರ್ ಸಮರ್ಪಕವಾಗಿ ಸಿಗದ ಕಾರಣ ಸೋಂಕಿತರು ಸಾವಿಗೀಡಾಗಿದ್ದಾರೆ. ಟ್ರಾಮಾ ಕೇರ್ ಸೆಂಟರ್, ವಿಮ್ಸ್​ನ ದಂತ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇದೆ. ಆದರೆ ದಿನದಿಂದ ದಿನಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಬರುತ್ತಿರುವುದರಿಂದ ವೆಂಟಿಲೇಟರ್ ಬೇಡಿಕೆ ಹೆಚ್ಚಾಗಿದೆ.

ಹೊಸದಾಗಿ 50 ವೆಂಟಿಲೇಟರ್​ಗಳ ಖರೀದಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವೆಂಟಿಲೇಟರ್ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ. ಜಿಂದಾಲ್ ಕಂಪನಿಯಲ್ಲಿಯೇ ಆಕ್ಸಿಜನ್ ಉತ್ಪಾದನೆ ಆಗುವುದರಿಂದ ಜಿಲ್ಲೆಗೆ ಬೇಕಾಗುವಷ್ಟು ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಕೊರೊನಾ ಸೋಂಕಿತರಿಗಾಗಿ ಆಕ್ಸಿಜನ್ ಬೆಡ್​ಗಳನ್ನು ಕೂಡ ಹೆಚ್ಚಳ ಮಾಡಲಾಗಿದೆ. ಜಿಂದಾಲ್ ಕಂಪನಿಯಲ್ಲಿ ಒಂದು ಸಾವಿರ ಆಕ್ಸಿಜನ್ ಬೆಡ್​ಗಳನ್ನ ಸಿದ್ಧಗೊಳಿಸಿ ತೀರ್ಮಾನ ಮಾಡಲಾಗಿದೆ. ಆದರೆ ವೆಂಟಿಲೇಟರ್​ಗಳ ಸಂಖ್ಯೆ ಕಡಿಮೆ ಇದೆ.

ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ವೆಂಟಿಲೇಟರ್ ಬೇಕೇ ಬೇಕು. ಆದರೆ ವೆಂಟಿಲೇಟರ್ ಕೊರತೆ ಸಾಕಷ್ಟು ಇರುವ ಕಾರಣ ಸಮರ್ಪಕವಾಗಿ ಚಿಕಿತ್ಸೆ ಸಿಗದೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಸೋಂಕಿತರು ಯಾರು ಗಂಭೀರ ಸ್ಥಿತಿಯಲ್ಲಿರುವವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಬೇಕಾಗುತ್ತದೆ. ಜೊತೆಗೆ ಕೊವಿಡ್ ಹೊರತಾಗಿಯೂ ಬೇರೆ ರೋಗಿಗಳಿಗೆ ವೆಂಟಿಲೇಟರ್​ಗಳು ಬೇಕಾಗುತ್ತವೆ. ವೆಂಟಿಲೇಟರ್ ಕೊರತೆಯ ಸಮಸ್ಯೆಯನ್ನ ನಿವಾರಿಸುವುದೇ ದೊಡ್ಡ ಸವಾಲಾಗಿದೆ. ಹೆಚ್ಚುವರಿ ವೆಂಟಿಲೇಟರ್​ಗಳ ಸೌಲಭ್ಯವಾದರೆ ಗಂಭೀರ ಸ್ಥಿತಿಯಲ್ಲಿರುವವರಿಗೆ ತಕ್ಷಣಕ್ಕೆ ವೆಂಟಿಲೇಟರ್ ಸಿಕ್ಕು, ಗುಣಮುಖರಾಗುವ ಸಾಧ್ಯತೆ ಇರುತ್ತದೆ ಎಂದು ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ಹೇಳಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಜೊತೆಗೆ ಸಾವಿನ ಸರಣಿಯೇ ಮುಂದುವರಿದಿದೆ. ವೆಂಟಿಲೇಟರ್ ಎಲ್ಲಾ ಸೋಂಕಿತರಿಗೆ ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕಾಗಿದೆ ಎನ್ನುವುದು ಟಿವಿ9 ಡಿಜಿಟಲ್​ನ ಆಶಯ.

ಇದನ್ನೂ ಓದಿ:

ವೆಂಟಿಲೆಟರ್ ಇಲ್ಲದೆ SPBಗೆ ಚಿಕಿತ್ಸೆ ಕೊಡಲು ಸಾಧ್ಯವಾಗ್ತಿಲ್ಲ, ಆತಂಕದಲ್ಲಿ ವೈದ್ಯರು

ಖಾಸಗಿ ಆಸ್ಪತ್ರೆಗಳ ಧನದಾಹ ಬಿಚ್ಚಿಟ್ಟ ಸಚಿವ ಸೋಮಣ್ಣ; ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ ಎಂದ ಮಾಜಿ ಸಚಿವ ಕೆ.ಜೆ. ಜಾರ್ಜ್

(Covid ventilators scarcity in Ballari and patients suffers death)