Tungabhadra Dam: ತುಂಗಭದ್ರಾ ಡ್ಯಾಂನಲ್ಲಿ ಮತ್ತೊಂದು ಸಮಸ್ಯೆ: ಶೀಘ್ರ ಕ್ರಮಕ್ಕೆ ರೈತರ ಆಗ್ರಹ
ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಡ್ಯಾಂ ನಲ್ಲಿ ವರ್ಷಗಳು ಕಳೆದಂತೆ ಹೂಳು ತುಂಬಿಕೊಳ್ಳುತ್ತಿದೆ. ಒಂದು ಅಂದಾಜಿನ ಪ್ರಕಾರ 28 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿದೆ ಎನ್ನುವ ಮಾಹಿತಿ ಇದೆ. ಹೀಗಾಗಿ ಡ್ಯಾಂನಲ್ಲಿ ಶೇಖರಣೆಯಾಗಿರುವ ಹೂಳನ್ನು ತೆರವುಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಒಂದು ವೇಳೆ ಮಾಡದಿದ್ದರೆ ರೈತರಿಗೆ ತೊಂದರೆಯಾಗುವುದರ ಜತೆಗೆ, ಡ್ಯಾಂಗೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಬಳ್ಳಾರಿ, ಏಪ್ರಿಲ್ 19: ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಡ್ಯಾಂನಲ್ಲಿ (Tungabhadra Dam) ವರ್ಷದಿಂದ ವರ್ಷಕ್ಕೆ ಬಾರೀ ಪ್ರಮಾಣದ ಹೂಳು ತುಂಬಿಕೊಳ್ಳುತ್ತಿದೆ. ಡ್ಯಾಂನಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವಂತೆ ಆಗ್ರಹಿಸಿ ರೈತರು, ಜನರು ನಿರಂತರವಾಗಿ ಸರ್ಕಾರದ (Karnataka Govt) ವಿರುದ್ಧ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಸಾವಿರಾರು ರೂಪಾಯಿ ಖರ್ಚಾಗುತ್ತದೆ ಎಂದು ಸಬೂಬು ನೀಡುತ್ತಾ ಬರುತ್ತಿದೆ. ಹೀಗಾಗಿ ಈ ವರ್ಷವಾದರೂ ಹೂಳು ತೆಗೆಯಲಿ ಎಂಬುದು ರೈತರ ಒತ್ತಾಯವಾಗಿದೆ. ಡ್ಯಾಂ ನಿರ್ಮಾಣವಾದಾಗ ಸುಮಾರು 132 ಟಿಎಂಸಿ ನೀರನ್ನು ಸಂಗ್ರಹ ಮಾಡುವ ಸಾಮರ್ಥ ಹೊಂದಿತ್ತು. ಆದರೆ, ಕಾಲ ಕಳೆದಂತೆ ಹೂಳಿನ ಪ್ರಮಾಣ ಹೆಚ್ಚಾಗುತ್ತಿದ್ದರಿಂದ ಪ್ರಸ್ತುತ 105 ಟಿಎಂಸಿ ನೀರು ಸಂಗ್ರಹ ಸಾಮರ್ಥ ಹೊಂದಿದೆ.
ಹೀಗಾಗಿ ವರ್ಷದಿಂದ ವರ್ಷಕ್ಕೆ ತುಂಗಭದ್ರಾ ಡ್ಯಾಂ ನೀರಿನ ಸಂಗ್ರಹದ ಪ್ರಮಾಣ ಕಡಿಮೆ ಆಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ, ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರ ಕೂಡಲೇ ಹುಳು ತೆಗೆಯುವ ಕಾರ್ಯಕ್ಕೆ ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.
ಇದನ್ನೂ ಓದಿ: ಆಯಸ್ಸು ಮುಗಿದರೂ ಬದಲಾಗದ ತುಂಗಭದ್ರಾ ಡ್ಯಾಂ ಕ್ರೆಸ್ಟ್ಗೇಟ್ಗಳು, ಮತ್ತೊಂದು ಅನಾಹುತದ ಭೀತಿ
ಟಿ ಬಿ ಡ್ಯಾಂನಲ್ಲಿ ಸರ್ವೆ ಪ್ರಕಾರ ಸರಿಸುಮಾರು 28 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿದೆ. ಹೀಗಾಗಿ 132 ಟಿಎಂಸಿ ನೀರನ್ನು ಸಂಗ್ರಹ ಮಾಡುವ ಬದಲು 103 ರಿಂದ 105 ಟಿಎಂಸಿ ನೀರು ಸಂಗ್ರಹ ಮಾಡಲಾಗುತ್ತಿದೆ. ಹಿಂದಿನ ಸರ್ಕಾರಗಳು ಹೂಳು ತೆಗೆಸಲು ಹಲವು ವಿದೇಶಿ ತಂತ್ರಜ್ಞಾನವನ್ನು ಬಳಕೆ ಮಾಡಲು ಮುಂದಾಗಿದ್ದವು. ಆದರೆ ಅದರ ಖರ್ಚುವೆಚ್ಚ ಸಾವಿರಾರು ಕೋಟಿ ರೂ. ಆಗುವ ಕಾರಣದಿಂದ ಆ ಪ್ರಾಜೆಕ್ಟ್ ಕೈಬಿಡಲಾಗಿತ್ತು.
ಕಾರ್ಯರೂಪಕ್ಕೆ ಬಾರದ ನವಲಿ ಡ್ಯಾಂ ಯೋಜನೆ
ಕೊಪ್ಪಳದ ಬಳಿ 45 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ನವಲಿ ಡ್ಯಾಂ ನಿರ್ಮಾಣ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿತ್ತು. ಆದರೆ, ಈವರಗೆ ಅದು ಕಾರ್ಯ ರೂಪಕ್ಕೆ ಬಂದಿಲ್ಲ. ಹೀಗಾಗಿ ಶೀಘ್ರದಲ್ಲಿ ನವಲಿ ಡ್ಯಾಂ ಆದರೂ ನಿರ್ಮಾಣ ಮಾಡಿ ಅಥವಾ ಟಿಬಿ ಡ್ಯಾಂನ ಹೂಳು ತೆಗೆದು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತಾದರೂ ಮಾಡಿ ಎಂದು ಜನ ಆಗ್ರಹಿಸಿದ್ದಾರೆ.