ಬೆಂಗಳೂರು, ಮಾರ್ಚ್ 11: ಬಿಬಿಎಂಪಿ (BBMP) ಶಾಲೆಗಳಲ್ಲಿ ನೀರು, ಶೌಚಾಲಯ ಸ್ಥಿತಿಗತಿ ವರದಿ ಸಲ್ಲಿಸದ ಹಿನ್ನೆಲೆ ಬಿಬಿಎಂಪಿ ವಿಳಂಬ ನೀತಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬಹಳ ಬಡತನದಲ್ಲಿರುವ ಮಕ್ಕಳು ಬಿಬಿಎಂಪಿ ಶಾಲೆಯಲ್ಲಿ ಓದುತ್ತಾರೆ. ನೀವು ಶಾಲೆಗಳ ಸೌಕರ್ಯ ಸುಧಾರಿಸುತ್ತಿಲ್ಲ. 10 ವರ್ಷವಾದರೂ ಬಿಬಿಎಂಪಿ ಶಾಲೆಗಳ ಸ್ಥಿತಿಗತಿ ವಿವರ ನೀಡಿಲ್ಲ. ಬಿಬಿಎಂಪಿ, ಬಿಡಿಎ, ಕೆಐಎಡಿಬಿ ಕೆಟ್ಟ ದಾವೆದಾರರು ಎಂದು ಸಿಜೆ ಎನ್.ವಿ.ಅಂಜಾರಿಯಾ, ನ್ಯಾ. ಕೃಷ್ಣ ದೀಕ್ಷಿತ್ರಿದ್ದ ಪೀಠ ಅಸಮಾಧಾನ ಹೊರಹಾಕಿದ್ದಾರೆ. 123 ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಶೌಚಾಲಯವಿದೆ. ಬಿಬಿಎಂಪಿ ತನ್ನ ಶಾಲೆಗಳಲ್ಲಿ ಸರ್ವೆ ನಡೆಸಿ ವರದಿ ನೀಡಬೇಕಿದೆ ಎಂದು ಹೈಕೋರ್ಟ್ಗೆ ಅಮೈಕಸ್ ಕ್ಯೂರಿ ಕೆ.ಎನ್.ಫಣೀಂದ್ರ ಹೇಳಿದ್ದು ಹೈಕೋರ್ಟ್ ಮಾ.27 ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ, ನಿರ್ವಹಣೆಯ ನಿರ್ಲಕ್ಷ್ಯ ಸೇರಿ ವಿವಿಧ ಕಾರಣಗಳಿಂದ ಇತ್ತೀಚೆಗಷ್ಟೇ ಬಿಬಿಎಂಪಿ ಶಾಲೆ-ಪಿಯು ಕಾಲೇಜುಗಳನ್ನ ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದರು. ಅದರಂತೆ ಬಿಬಿಎಂಪಿ ನಿರ್ವಹಣೆಯಲ್ಲಿದ್ದ 142 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, 17 ಪಿಯು ಕಾಲೇಜುಗಳನ್ನ ಸರ್ಕಾರ ಸುಪರ್ದಿಗೆ ಪಡೆಯುವ ನಿರ್ಧಾರವಾಗಿತ್ತು.
ಇದನ್ನೂ ಓದಿ: ಬಡ ಮಕ್ಕಳ ಕುಡಿಯುವ ನೀರಲ್ಲೂ ಹಣ ಮಾಡಲು ಮುಂದಾದ ಬಿಬಿಎಂಪಿ ಅಧಿಕಾರಿಗಳು; ಶಾಲೆ-ಕಾಲೇಜಿಗೆ ಕಳಪೆ ವಾಟರ್ ಫಿಲ್ಟರ್ ಅಳವಡಿಕೆ
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಖಾಸಗಿ ಶಾಲೆಗಳ ರೀತಿ BBMP ಶಾಲೆಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ಶಿಕ್ಷಣ ಇಲಾಖೆ ನಡೆಸಲಿದ್ದು, ಬಿಬಿಎಂಪಿಯಿಂದ ಶಾಲೆಗಳ ನಿರ್ವಹಣೆ ಮಾಡುತ್ತೇವೆ. ಆದರೆ ಶಿಕ್ಷಣದ ವಿಚಾರವಾಗಿ ಇಲಾಖೆ ನೋಡಿಕೊಳ್ಳುತ್ತದೆ ಎಂದು ಸ್ಪಷ್ಟನೆ ನೀಡಿದ್ದರು.
ರಾಜ್ಯದಲ್ಲಿ 2,000 ಪಬ್ಲಿಕ್ ಶಾಲೆ ಸ್ಥಾಪಿಸಲು ತೀರ್ಮಾನ ಮಾಡಿದ್ದೇವೆ. ಸಿಎಸ್ಆರ್ ಅಡಿಯಲ್ಲಿ ಈ ಶಾಲೆಗಳನ್ನ ನಿರ್ಮಾಣ ಮಾಡಲಿದ್ದೇವೆ. ಶಿಕ್ಷಣ ಸಂಸ್ಥೆಯವರು ಒಂದೊಂದು ಶಾಲೆ ದತ್ತು ತೆಗೆದುಕೊಳ್ಳಬೇಕು. ಶಾಲೆಗಳನ್ನು ದತ್ತು ತೆಗೆದುಕೊಂಡು ವೇತನವನ್ನು ಅವರೇ ಕೊಡಬೇಕು. ಆದರೆ ಆ ಶಾಲೆಗಳು ಕೂಡ ಸರ್ಕಾರಿ ರೀತಿಯಲ್ಲೇ ನಡೆಯಲಿದೆ. ಉಚಿತ ಶಿಕ್ಷಣ ನೀಡಲಿದ್ದಾರೆ, ಸಾರಿಗೆ ವೆಚ್ಚ ಮಾತ್ರ ಬರಬಹುದು. 1,900 ಕೋಟಿಯಷ್ಟು ಸಿಎಸ್ಆರ್ ಫಂಡ್ ಬರಬೇಕಿದೆ. ಜನವರಿಯಲ್ಲಿ ಸಿಎಸ್ಆರ್ ಫಂಡ್ ಬಗ್ಗೆ ಸಭೆ ಮಾಡುತ್ತೇವೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.