ಇದು ಮಲೆನಾಡಲ್ಲ ಸ್ವಾಮಿ.. ಕೋಟೆ ನಾಡು: ಜೋಗಿಮಟ್ಟಿಯ ಸೊಬಗನ್ನು ಒಮ್ಮೆಯಾದ್ರೂ ನೋಡ ಬನ್ನಿ!
ಮಚ್ಚೇಂದ್ರನಾಥ ಎಂಬ ಜೋಗಿ ಈ ಅರಣ್ಯದಲ್ಲಿ ನೆಲೆಸಿದ್ದು ಜನೋಪಕಾರಿ ಆಗಿದ್ದರು. ಜನ-ಜಾನುವಾರುಗಳಿಗೆ ರೋಗ ರುಜನಿಗಳು ಆವರಿಸಿದಾಗ ಇಲ್ಲಿನ ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಪರಿಹಾರ ನೀಡುತ್ತಿದ್ದರು. ಆಧ್ಯಾತ್ಮದ ಮೂಲಕ ದೈವತ್ವಕ್ಕೇರಿದ್ದ ಸಂತ ನೆಲೆಸಿದ್ದರಿಂದ ಈ ಪ್ರದೇಶಕ್ಕೆ ಜೋಗಿಮರಡಿ, ಜೋಗಿಮಟ್ಟಿ ಎಂಬ ಹೆಸರು ಬಂದಿದೆ ಎಂದು ತಿಳಿದು ಬರುತ್ತದೆ.
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗವನ್ನು ಗಿರಿಶಿಖರಗಳೇ ಸುತ್ತುವರೆದಿವೆ. ಕಣ್ಣು ಅರಳಿಸಿದಲ್ಲೆಲ್ಲ ದೊಡ್ಡ ದೊಡ್ಡ ಕಲ್ಲುಬಂಡೆಗಳ ರಾಶಿ ಕಣ್ಣಿಗೆ ಬೀಳುತ್ತದೆ. ಕೋಟೆ ಕೊತ್ತಲಗಳು, ಗುಹಾಂತರ ದೇಗುಲಗಳು, ಕಲ್ಲರಳಿ ಹೂವಾದ ಕಲಾತ್ಮಕ ದೃಶ್ಯಗಳು, ಶಿಲ್ಪ ಕಲೆಗಳ ವೈಭವ ಕಣ್ಮನ ಸೆಳೆಯುತ್ತವೆ. ಬರೀ ಕಲ್ಲುಗುಡ್ಡಗಳು ಮಾತ್ರವಲ್ಲ ಕಲ್ಲಿನಕೋಟೆಯ ನಗರದಲ್ಲಿ ಅಪರೂಪದ ಯಾರೂ ಊಹಿಸಲಾಗದಷ್ಟು ಚಂದದ ಹಚ್ಚ ಹಸಿರಿನ ಗಿರಿಧಾಮವಿದೆ. ಅದರ ಹೆಸರು ಜೋಗಿಮಟ್ಟಿ.
ಗಗನದಲ್ಲಿ ಚಲಿಸುವ ಬೆಳ್ಳಿ ಮೋಡಗಳ ದೃಶ್ಯ ವೈಭವ ಬಲು ಸಂಭ್ರಮದಿಂದಲೇ ತುಂತುರು ಹನಿಯಾಗಿ ಧರೆಗಳಿಯುವ ವರುಣ ದೇವ. ಗಿರಿಧಾಮದ ಹಸಿರೆಲೆಗಳಿಗೆ ಇಬ್ಬನಿಯ ಸಿಹಿ ಮುತ್ತು. ನರ್ತಿಸುತ್ತ ಅಂಗಳಕೆ ಬಂದು ಪರಿಸರ ಪ್ರಿಯರಿಗೆ ತನ್ನ ಕ್ಷೇತ್ರಕ್ಕೆ ಪ್ರೀತಿಯ ಆಹ್ವಾನ ನೀಡುವ ನಾಟ್ಯ ಮಯೂರಿಯ ಗಮ್ಮತ್ತು.
ಇಂತಹದೊಂದು ಅದ್ಭುತ ಬಯಲು ಸೀಮೆಯ ಹಸಿರು ತಾರೆ ಜೋಗಿಮಟ್ಟಿಯ ಸೊಬಗು ನೋಡುವುದೇ ಒಂದು ರೀತಿಯ ಚಂದದ ಅನುಭವ. ಜೋಗಿಮಟ್ಟಿ ಅರಣ್ಯ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳ ಪೈಕಿ ಒಂದಾಗಿದೆ. ಸಮುದ್ರ ಮಟ್ಟದಿಂದ 1323 ಮೀಟರ್ ಎತ್ತರ ಪ್ರದೇಶದಲ್ಲಿದೆ. 22 ಸಾವಿರ ಎಕರೆ ಪ್ರದೇಶ ವ್ಯಾಪ್ತಿ ಹೊಂದಿದ್ದು ಹಲವು ವೈಶಿಷ್ಟ್ಯ, ವಿಸ್ಮಯಗಳ ಗಣಿಯಾಗಿದೆ.
ಮಚ್ಚೇಂದ್ರನಾಥ ಎಂಬ ಸಂತ ನೆಲೆಸಿದ್ದ ಆಲಯವೇ ಈಗ ಜೋಗಿಮಟ್ಟಿ ಮಚ್ಚೇಂದ್ರನಾಥ ಎಂಬ ಜೋಗಿ ಈ ಅರಣ್ಯದಲ್ಲಿ ನೆಲೆಸಿದ್ದು ಜನೋಪಕಾರಿ ಆಗಿದ್ದರು. ಜನ-ಜಾನುವಾರುಗಳಿಗೆ ರೋಗ ರುಜನಿಗಳು ಆವರಿಸಿದಾಗ ಇಲ್ಲಿನ ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಪರಿಹಾರ ನೀಡುತ್ತಿದ್ದರು. ಆಧ್ಯಾತ್ಮದ ಮೂಲಕ ದೈವತ್ವಕ್ಕೇರಿದ್ದ ಸಂತ ನೆಲೆಸಿದ್ದರಿಂದ ಈ ಪ್ರದೇಶಕ್ಕೆ ಜೋಗಿಮರಡಿ, ಜೋಗಿಮಟ್ಟಿ ಎಂಬ ಹೆಸರು ಬಂದಿದೆ ಎಂದು ತಿಳಿದು ಬರುತ್ತದೆ.
ಹಸಿರೆಲೆಗಳ ನಡುವೆ ನೂರಾರು ಮೆಟ್ಟಿಲೇರಿ ಸಾಗುವ ಗಿರಿಧಾಮದ ತುತ್ತ ತುದಿಯ ಸುಂದರ ಪರಿಸರದಲ್ಲಿ ಜೋಗಿಯ ಅಥವಾ ಕಾಲ ಭೈರವೇಶ್ವರ ದೇವಸ್ಥಾನವಿದೆ. ದೇಗುಲದ ಮುಂಭಾಗದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ವೀವ್ ಪಾಯಿಂಟ್ ಏರಿದರೆ ಆಕಾಶಕ್ಕೆ ಮೂರೇ ಗೇಣು. ಜೋರಾಗಿ ನೂಕುವ ಗಾಳಿಗೆ ಎದೆಯೊಡ್ಡುವ ಸಾಹಸವೇ ರೋಚಕ. ಜೋಗಿಮಟ್ಟಿಯ ಮೇಲ್ಭಾಗದ ಅಂಗಳದ ವಿಶಾಲ ಪ್ರದೇಶದಲ್ಲಿ 1905ರಲ್ಲಿ ಬ್ರಿಟಿಷರು ನಿರ್ಮಿಸಿದ ಭವ್ಯ ಬಂಗಲೆ ಮತ್ತು ವಿಶ್ರಾಂತಿ ಕೊಠಡಿಗಳಿವೆ. ಅರಣ್ಯ ಇಲಾಖೆಯ ಪರವಾನಿಗೆ ಪಡೆದರೆ ವಿಶ್ರಾಂತಿ ಗೃಹಗಳಲ್ಲಿ ಉಳಿದುಕೊಳ್ಳುವ ಅವಕಾಶವೂ ಇದೆ.
ಜೋಗಿಮಟ್ಟಿ ಮಡಿಲಲ್ಲಿ ಜೀವ ರಾಶಿ ಆಶ್ರಯ ಕಾಡು ಗುಡ್ಡದ ನಡುವೆ ಹಚ್ಚ ಹಸಿರೊದ್ದುಕೊಂಡು ಕಣ್ಮನ ಸೆಳೆಯುವ ನವ ತರುಣೆ ಜೋಗಿಮಟ್ಟಿ ಚಾರಣಿಗರ ಸ್ವರ್ಗವೂ ಹೌದು. ತಿಮ್ಮಣ್ಣ ನಾಯಕನ ಕೆರೆ, ದೊಡ್ಡಣ್ಣ ನಾಯಕನ ಕೆರೆ, ಈರಣ್ಣನ ಕಲ್ಲು, ಜಲಪಾತ ನೆನಪಿಸುವ ಬಸವನ ಬಾವಿ, ಗಾಳಿ ಗುಂಡು, ಸೀಳುಗಲ್ಲು , ಚಿರತೆ ಕಲ್ಲು, ನವಿಲು ಕೆರೆ ಸೇರಿದಂತೆ ಅನೇಕ ಕೆರೆ, ಹಳ್ಳ, ಗುಹೆ, ಬೆಟ್ಟಗಳನ್ನು ತನ್ನ ಒಡಲಾಳದಲ್ಲಿಟ್ಟುಕೊಂಡಿದೆ. ಹಾಗೂ ವಿವಿಧ ಜಾತಿಯ ವಿಷಕಾರಿ ಹಾವುಗಳು ಸೇರಿದಂತೆ ಬಗೆ ಬಗೆಯ ಸುಂದರ ಪಕ್ಷಿಗಳು ಮತ್ತು ಸಾವಿರಾರು ಜೀವರಾಶಿಗಳು ಜೋಗಿಮಟ್ಟಿಯಲ್ಲಿ ಆಶ್ರಯ ಪಡೆದಿವೆ. ಈ ಬೃಹತ್ ಅರಣ್ಯದಲ್ಲಿ ಲೆಕ್ಕವಿಲ್ಲದಷ್ಟು ವಿವಿಧ ಜಾತಿಯ ಔಷಧೀಯ ಸಸ್ಯಗಳು ಸಿಗುತ್ತವೆ. ಹೊನ್ನೆ , ತೇಗ, ಹೊಂಗೆ, ಶ್ರೀಗಂಧ, ಸೇರಿದಂತೆ ವಿವಿಧ ತಳಿಯ ಗಿಡಮರಗಳಿವೆ.
ಚಿತ್ರದುರ್ಗದ ಮದಕರಿ ನಾಯಕ ವೃತ್ತದಿಂದ ಜೋಗಿಮಟ್ಟಿ ರಸ್ತೆ ಮೂಲಕ 10 ಕಿ.ಮೀಟರ್ ನಷ್ಟು ಕಾಡಿನ ನಡುವೆ ಸಾಗಿದರೆ ಸಾಕು ಕೋಟೆನಾಡಿನ ಊಟಿ ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೊಬಗು ಸೌಂದರ್ಯ ಮಲೆನಾಡನ್ನು ನೆನಪಿಸುತ್ತದೆ. ಕೊರೆಯುವ ಚಳಿ, ಜೋರಾಗಿ ಬೀಸುವ ಗಾಳಿ ಪ್ರೇಮ ಕಾಶ್ಮೀರವನ್ನು ನೆನಪಿಸುತ್ತದೆ. ಬೆಳಗಿನ ಜಾವ ಜೋಗಿಮಟ್ಟಿಯತ್ತ ಹೆಜ್ಜೆ ಹಾಕಿದರೆ ನೂರಾರು ಜನ ವಾಯು ವಿಹಾರಿಗಳು ಜತೆಯಾಗುತ್ತಾರೆ.
ಒಂದು ಕಡೆ ಚಿರತೆ ಮತ್ತೊಂದು ಕಡೆ ಕರಡಿ ಆಕೃತಿಯ ಸುಂದರ ದ್ವಾರದಡಿ ಪ್ರವೇಶಿಸಿ ಹಸಿರ ಸಿರಿ ನಡುವೆ ಮುನ್ನೆಡೆದರೆ ಸಾಲು ಸಾಲು ನವಿಲುಗಳು ಸ್ವಾಗತಕ್ಕೆ ನಿಂತಿರುತ್ತವೆ. ಹಕ್ಕಿಗಳ ಚಿಲಿಪಿಲಿ ಗಾನ ಮನಸ್ಸಿಗೆ ಮುದ ನೀಡಿದರೆ ತಣ್ಣನೇ ಗಾಳಿ ಮೈಗೆ ಹಿತ ನೀಡುತ್ತದೆ. ಜೋಗಿಮಟ್ಟಿ ನೋಡುವುದೇ ಕಣ್ಣಿಗೆ ಹಬ್ಬ ಮನಸಿಗೆ ಆನಂದ. ನೀವೂ ಮಿಸ್ ಮಾಡದೇ ಒಮ್ಮೆ ನೋಡ ಬನ್ನಿ ದುರ್ಗದ ಸ್ವರ್ಗ. -ಬಸವರಾಜ ಮುದನೂರ್
Published On - 1:02 pm, Sun, 6 December 20