Anti Conversion Bill: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಶಾಸಕರ ಮನವಿ
ವಿಧೇಯಕದ ವ್ಯಾಖ್ಯಾನದ ಭಾಗದಲ್ಲಿ ಮತಾಂತರಕ್ಕಾಗಿ ಆಮಿಷ ಎನ್ನುವ ಪರಿಕಲ್ಪನೆಯ ವ್ಯಾಪ್ತಿಗೆ ಮದುವೆ ಭರವಸೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನೂ ಸೇರ್ಪಡೆ ಮಾಡಲು ಬಿಜೆಪಿ ಶಾಸಕರು ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ: ಬಹುಚರ್ಚಿತ ಮತಾಂತರ ನಿಷೇಧ ವಿಧೇಯಕಕ್ಕೆ ತಿದ್ದುಪಡಿ ತರಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಬಿಜೆಪಿ ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ವಿಧೇಯಕದಲ್ಲಿ ಈಗಾಗಲೇ ಇರುವ ಕೆಲ ಅಂಶಗಳ ತಿದ್ದುಪಡಿ ಮತ್ತು ಹೊಸದಾಗಿ ಕೆಲ ಅಂಶಗಳ ಸೇರ್ಪಡೆ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ವಿಧೇಯಕದ ವ್ಯಾಖ್ಯಾನದ ಭಾಗದಲ್ಲಿ ಮತಾಂತರಕ್ಕಾಗಿ ಆಮಿಷ ಎನ್ನುವ ಪರಿಕಲ್ಪನೆಯ ವ್ಯಾಪ್ತಿಗೆ ಮದುವೆ ಭರವಸೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನೂ ಸೇರ್ಪಡೆ ಮಾಡಲು ಬಿಜೆಪಿ ಶಾಸಕರು ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಿಧೇಯಕ ವಿವರಣೆಯಲ್ಲಿರುವ ಗೊಂದಲ ನಿವಾರಣೆಗೆ ನೀಡಿರುವ ಮೂರು ಸಲಹೆಗಳು
1) ಜೈನ್, ಸಿಖ್, ಪಾರ್ಸಿ ಮತ್ತು ಬೌದ್ಧರು ಹಿಂದೂ ಧರ್ಮದ ಜತೆಗೆ ಮುಂದುವರಿಕೆ 2) ಶಿಯಾ ಮತ್ತು ಸುನ್ನಿಗಳು ಮುಸ್ಲಿಂ ಧರ್ಮದ ಜತೆಗೆ ಶಾಖೆಗಳಾಗಿ ಮುಂದುವರಿಕೆ 3) ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟರು ಕ್ರಿಶ್ಚಿಯನ್ ಧರ್ಮದ ಜತೆ ಶಾಖೆಗಳಾಗಿ ಮುಂದುವರಿಕೆ
ಅಂತರ್ ಧರ್ಮೀಯ ವಿವಾಹ ಬಗೆಗಿನ ಗೊಂದಲ ನಿವಾರಣೆಗೆ ಈ ಕ್ರಮ ಸೂಚಿಸಲಾಗಿದೆ. ಜೈನ, ಸಿಖ್, ಪಾರ್ಸಿ, ಬೌದ್ಧ ಹಾಗೂ ಹಿಂದೂಗಳ ನಡುವಿನ ವಿವಾಹಕ್ಕೆ ತಡೆಯಿಲ್ಲ. ಈ ಧರ್ಮಗಳ ನಡುವೆ ಮತಾಂತರದ ಬಗ್ಗೆ ಪ್ರಸ್ತಾವವಿಲ್ಲ. ಮತಾಂತರ ಕಾಯ್ದೆಯ ನಿರ್ಬಂಧವೂ ಅನ್ವಯವಾಗುವುದಿಲ್ಲ.
ಮತಾಂತರ ನಿಷೇಧ ವಿಧೇಯಕದ ಸೆಕ್ಷನ್ 4ಕ್ಕೆ ತಿದ್ದುಪಡಿ ತರಲು ಯೋಚಿಸಲಾಗಿದೆ. ದೂರು ನೀಡುವ ವಿಚಾರದಲ್ಲಿ ಸಹೋದ್ಯೋಗಿ ಎಂಬ ಪದ ತೆಗೆದುಹಾಕಲು ಸಲಹೆ ನೀಡಲಾಗಿದೆ. ಬಲವಂತದ ಮತಾಂತರದ ಮಾಹಿತಿಯಿದ್ದ ಯಾವುದೇ ವ್ಯಕ್ತಿ ದೂರು ನೀಡಬಹುದು ಎನ್ನುವ ಅಂಶವನ್ನು ಕಾಯ್ದೆಯಲ್ಲಿ ಸೇರಿಸಲು ಸಲಹೆ ನೀಡಲಾಗಿದೆ.
ತಿದ್ದುಪಡಿ ವಿಧೇಯಕವನ್ನು ಸರ್ಕಾರ ಇಂದೇ ಮಂಡಿಸಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಕಾನೂನು ಸಚಿವರು ಪ್ರತಿಕ್ರಿಯಿಸಿಲ್ಲ. ತಿದ್ದುಪಡಿ ಮಂಡನೆಯ ಬಗ್ಗೆ ಅವರಿಂದ ಮಧ್ಯಾಹ್ನದ ಕಲಾಪದಲ್ಲಿ ತಿದ್ದುಪಡಿ ಮಂಡಿಸಲು ರಾಜ್ಯ ಸರ್ಕಾರದ ಸಿದ್ಧತೆ ನಡೆಸಿದೆ.
ಮುಖ್ಯ ಅಂಶಗಳಿವು ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತಾರೂಢ ಬಿಜೆಪಿ ಸರ್ಕಾರವು ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021’ ಮಂಡಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದ್ದಾರೆ. ಒಟ್ಟು 14 ಸೆಕ್ಷನ್ಗಳಿರುವ ಈ ವಿಧೇಯಕವನ್ನು ಜನಸಾಮಾನ್ಯರ ಭಾಷೆಯಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ಎಂದು ಕರೆಯಲಾಗಿದೆ. ಈ ಕಾಯ್ದೆಯ ಮುಖ್ಯ ಅಂಶಗಳು ಹೀಗಿವೆ…
1) ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು. 2) ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡತಕ್ಕದ್ದು 3) ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡತಕ್ಕದ್ದು 4) ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡತಕ್ಕದ್ದು 5) ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು 6) ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸತಕ್ಕದ್ದು 7) ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡತಕ್ಕದ್ದು 8) ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡತಕ್ಕದ್ದು 9) ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ ಸ್ವಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮವಹಿಸುವುದು
ಇದನ್ನೂ ಓದಿ: Anti Conversion Bill: ಸರ್ಕಾರದ ನಿರ್ಧಾರದಿಂದ ನಮಗೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್ ಮಚೋಡೊ ಇದನ್ನೂ ಓದಿ: Anti Conversion Bill Highlights: ಮತಾಂತರ ನಿಷೇಧ ಕಾಯ್ದೆಯ ಮುಖ್ಯ ಅಂಶಗಳು, ಪ್ರತಿಪಕ್ಷಗಳ ಆಕ್ಷೇಪಗಳಿವು
Published On - 3:45 pm, Thu, 23 December 21