ಭೀಕರ ಬರಗಾಲ: ಗುಳೆ ಹೊರಟ ಕುಟುಂಬಗಳು: ಬಡ ಮಕ್ಕಳ ಶಿಕ್ಷಣಕ್ಕೆ ಕುತ್ತು!
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಿಂದೆಂದು ಕಂಡು ಕೇಳರಿಯದಂತಹ ಬರಗಾಲ ಇದೆ. ಜಮೀನು ಇದ್ದ ರೈತರೇ ಕೆಲಸವಿಲ್ಲದೇ ಖಾಲಿ ಇರುವಾಗ ಕೃಷಿ ಕಾಯಕವನ್ನೇ ನಂಬಿಕೊಂಡಿದ್ದ ಜಮೀನು ಇಲ್ಲದ ಅದೆಷ್ಟೋ ಬಡ ಕೃಷಿ ಕಾರ್ಮಿಕರು ಕೆಲಸ ಅರಸಿ ಮಹಾರಾಷ್ಟ್ರ ಸೇರಿ ವಿವಿಧೆಡೆ ಗುಳೆ ಹೋಗುತ್ತಿದ್ದಾರೆ. ಕುಟುಂಬ ಸಮೇತ ಗುಳೆ ಹೋಗುತ್ತಿರುವುದರಿಂದ ಬಡವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ.
ಚಿಕ್ಕೋಡಿ, ನವೆಂಬರ್ 20: ರಾಜ್ಯಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಅನ್ನದಾತ ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ ಜಮೀನು ಇಲ್ಲದ ಕೃಷಿಕಾರ್ಮಿಕರಿಗೂ ಸಹ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅದೆಷ್ಟೋ ಜನ ಕೆಲಸ ಅರಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಬಡ ಮಕ್ಕಳ ಶಿಕ್ಷಣ (education) ಕ್ಕೆ ತೊಂದರೆಯಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಅದಕ್ಕೆ ಕಾರಣ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳ ಸಮೀಕ್ಷೆ ವೇಳೆ ಬಹಿರಂಗವಾದ ಮಾಹಿತಿ. ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ? ಮುಂದೆ ಓದಿ.
ಗುಳೆ ಹೋಗುತ್ತಿರುವ ಕುಟುಂಬಗಳು: ಬಡವರ ಮಕ್ಕಳ ಶಿಕ್ಷಣಕ್ಕೆ ತೊಂದರೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಿಂದೆಂದು ಕಂಡು ಕೇಳರಿಯದಂತಹ ಬರಗಾಲ ಇದೆ. ಜಮೀನು ಇದ್ದ ರೈತರೇ ಕೆಲಸವಿಲ್ಲದೇ ಖಾಲಿ ಇರುವಾಗ ಕೃಷಿ ಕಾಯಕವನ್ನೇ ನಂಬಿಕೊಂಡಿದ್ದ ಜಮೀನು ಇಲ್ಲದ ಅದೆಷ್ಟೋ ಬಡ ಕೃಷಿ ಕಾರ್ಮಿಕರು ಕೆಲಸ ಅರಸಿ ಮಹಾರಾಷ್ಟ್ರ ಸೇರಿ ವಿವಿಧೆಡೆ ಗುಳೆ ಹೋಗುತ್ತಿದ್ದಾರೆ. ಕುಟುಂಬ ಸಮೇತ ಗುಳೆ ಹೋಗುತ್ತಿರುವುದರಿಂದ ಬಡವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಅದರಲ್ಲೂ ಚಿಕ್ಕೋಡಿ ಉಪವಿಭಾಗ ಮಹಾರಾಷ್ಟ್ರ ರಾಜ್ಯದೊಂದಿಗೆ ಗಡಿ ಹಂಚಿಕೊಂಡ ಜಿಲ್ಲೆ. ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ ಭಾಗದಲ್ಲಿ ಅದೆಷ್ಟೋ ಜನ ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ.
ಇದನ್ನೂ ಓದಿ: ವಿದ್ಯಾಕಾಶಿ ಧಾರವಾಡದಲ್ಲಿ ಈಗ ಹಾಸ್ಟೆಲ್ ಸಮಸ್ಯೆ: ಬಾಡಿಗೆ ಕಟ್ಟಡಗಳ ಮೊರೆಹೋದ ಜಿಲ್ಲಾಡಳಿತ
ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಯೋಜನಾ ಆಯೋಗದ ನಿರ್ದೇಶಕರ ನಿರ್ದೇಶನದಂತೆ ಶಾಲೆಯಿಂದ ದೂರ ಉಳಿದ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲೆಯಿಂದ ದೂರ ಉಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳ ಸಮೀಕ್ಷೆ ಕಾರ್ಯ ಮಾಡಲಾಗುತ್ತಿದೆ.
ಬೇರೆ ಶಾಲೆಯಲ್ಲಿ ದಾಖಲಾದ ಪ್ರವೇಶ ದಾಖಲಾತಿ ಪೆಂಡಿಂಗ್ ಬಗ್ಗೆ ಕ್ರಮ ವಹಿಸಿದ್ದೇವೆ. ಶೇಕಡ 99ರಷ್ಟು ಅಡ್ಮಿಶನ್ ಕ್ಲಿಯರ್ ಆಗಿದೆ. ಆರುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದು, 503 ವಿದ್ಯಾರ್ಥಿಗಳಲ್ಲಿ 373 ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳ ಶಾಲೆಗಳಲ್ಲಿ ಹಾಜರಾಗಿದ್ದಾರೆ. ಸ್ಟೂಡೆಂಟ್ ಅಟೆಂಡೆನ್ಸ್ ರ್ಯಾಂಕಿಂಗ ಸಿಸ್ಟಮ್ ಮೂಲಕ ವಿದ್ಯಾರ್ಥಿಗಳಿಗೆ ಒಂದು ನಂಬರ್ ನೀಡಿ ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆ ಇದೆ. ನಮ್ಮ ರಾಜ್ಯಗಳಲ್ಲಿ ಇರುವ ವಿದ್ಯಾರ್ಥಿಗಳ ಟ್ರ್ಯಾಕಿಂಗ್ ವಿವರ ದೊರೆತಿದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಇಲ್ಲದೇ ಇರೋದ್ರಿಂದ ನಮಗೆ ಅಪ್ಡೇಟ್ ಮಾಡಲು ಸಮಸ್ಯೆ ಆಗಿದೆ.
ರಾಜ್ಯ ಕಚೇರಿಗೆ ಪತ್ರ ಬರೆದು 373 ವಿದ್ಯಾರ್ಥಿಗಳು ಯಾವ ರಾಜ್ಯಗಳ ಶಾಲೆಗಳಲ್ಲಿ ಹಾಜರಾಗಿದ್ದಾರೆ ಎಂಬ ವಿವರ ಪಡೆದಿದ್ದೇವೆ. 130 ಮಕ್ಕಳ ಉಳಿದಿದ್ದು ಅದನ್ನು ಸಮೀಕ್ಷೆ ಮಾಡಿ ಆ ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರಲು ಶ್ರಮ ವಹಿಸುತ್ತೇವೆ. ಏಳು ದಿನಕ್ಕಿಂತ ಹೆಚ್ಚು ದಿನ ಗೈರಾದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದು ಮುಖ್ಯವಾಹಿನಿಗೆ ತರಲು ಕ್ರಮ ವಹಿಸುತ್ತೇವೆ. ಬೇರೆ ರಾಜ್ಯಗಳಿಗೆ ಕುಟುಂಬ ಸಮೇತ ದುಡಿಯಲು ಹೋಗುತ್ತಿರುವುದರಿಂದ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದೆ. ಮಕ್ಕಳನ್ನು ಕರೆದುಕೊಂಡು ಹೋಗುವ ಮೊದಲು ನಮ್ಮ ರಾಜ್ಯಗಳಲ್ಲಿ ವಸತಿ ಶಾಲೆ ಇವೆ. ಅಲ್ಲಿ ಇರಲು ನಾವು ವ್ಯವಸ್ಥೆ ಮಾಡುತ್ತೇವೆ.
ಅಂತಹ ಪಾಲಕರು ನಮ್ಮನ್ನ ಸಂಪರ್ಕಿಸಿದರೆ ಅವರ ಶಿಕ್ಷಣ ಮುಂದುವರಿಸಲು ಕ್ರಮ ವಹಿಸುತ್ತೇವೆ. ಈ ಪೈಕಿ ಶಾಲೆಯಿಂದ ದೂರ ಉಳಿದ 130 ಮಕ್ಕಳ ಮಾಹಿತಿ ಪಡೆಯುತ್ತಿದ್ದೇವೆ. ಮಕ್ಕಳನ್ನು ಕರೆದುಕೊಂಡು ಪಾಲಕರು ಬೇರೆ ರಾಜ್ಯಗಳಿಗೆ ದುಡಿಯಲು ಹೋಗುತ್ತಿದ್ದಾರೆ. ಕುಟುಂಬ ಸಮೇತ ಬೇರೆ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗೆ ಹೋಗುವ ಪಾಲಕರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಲ್ಲಿ ಇರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆಗ್ರಹ; ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದ ಸಾರ್ವಜನಿಕರು
ಜಿಲ್ಲೆ ಅಷ್ಟೇ ಅಲ್ಲದೆ ಬೇರೆ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ಕಬ್ಬು ಕಟಾವು ಮಾಡಲು ಹಲವು ಕೃಷಿ ಕಾರ್ಮಿಕರು ತೆರಳುತ್ತಿದ್ದಾರೆ. ಮಹಾರಾಷ್ಟ್ರದ ಅದೆಷ್ಟೋ ಕಾರ್ಮಿಕರು ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ಆಗಮಿಸುತ್ತಿದ್ದಾರೆ. ಹೀಗೆ ಕಬ್ಬು ಕಟಾವು ಮಾಡಲು ಆಗಮಿಸುವ ಕಾರ್ಮಿಕರು ತಮ್ಮ ಜೊತೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳ ಶಿಕ್ಷಣ ಮೇಲೆ ಪ್ರಭಾವ ಬೀರುತ್ತಿದೆ. ಹಲವಾರು ವಿದ್ಯಾರ್ಥಿಗಳು ಶಾಲೆಗೆ ಬರದೇ ಇರಲು ಇದೂ ಒಂದು ಕಾರಣ ಅಂತಾ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ ಹೇಳುತ್ತಾರೆ.
ಸಕ್ಕರೆ ಕಾರ್ಖಾನೆಗಳ ಬಳಿ ಮಾತನಾಡಿ ಕಬ್ಬು ಕಟಾವು ಮಾಡುವ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲು ಟೆಂಟ್ ಶಾಲೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಶಾಲಾ ಪುನರ್ಬಲನ ತರಬೇತಿಯಡಿ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನೂ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ ತಿಳಿಸಿದ್ದಾರೆ.
ಭೀಕರ ಬರಗಾಲದಿಂದ ರೈತರು ಅಷ್ಟೇ ಅಲ್ಲ ಕೃಷಿ ಕಾರ್ಮಿಕರು ಸೇರಿದಂತೆ ಹಲವರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಕೇವಲ ಬರಪೀಡಿತ ತಾಲೂಕು ಘೋಷಿಸಿರುವ ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪವೂ ಇದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲಿ. ಶಾಲೆಯಿಂದ ದೂರವಾಗುತ್ತಿರುವ ಬಡ ಮಕ್ಕಳ ಶಿಕ್ಷಣಕ್ಕೆ ತೊಡಕಾಗದಂತೆ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.