ಬೆಳಗಾವಿ: ಭೀಕರ ಬರಗಾಲದಿಂದ ತತ್ತರಿಸಿದ ಕಬ್ಬು ಬೆಳೆಗಾರರು: ಸಕ್ಕರೆ ಉದ್ಯಮಕ್ಕೂ ಸಂಕಷ್ಟ?

ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿಯಲ್ಲಂತೂ ಜಲಮೂಲಗಳೇ ಬತ್ತಿ ಹೋಗಿದ್ದು ನಾಗರಮುನ್ನೋಳಿ, ಬೆಳಕೂಡ, ಇಟ್ನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದ ಕಬ್ಬು ಸಂಪೂರ್ಣ ಹಾನಿಯಾಗಿದೆ. ಹತ್ತಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಇರುವ ಚಿಕ್ಕೋಡಿ ಉಪವಿಭಾಗದಲ್ಲಿ ಸಕ್ಕರೆ ಉದ್ಯಮ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆ ಇದೆ.

ಬೆಳಗಾವಿ: ಭೀಕರ ಬರಗಾಲದಿಂದ ತತ್ತರಿಸಿದ ಕಬ್ಬು ಬೆಳೆಗಾರರು: ಸಕ್ಕರೆ ಉದ್ಯಮಕ್ಕೂ ಸಂಕಷ್ಟ?
ಕಬ್ಬು ಬೆಳೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2023 | 7:33 PM

ಬೆಳಗಾವಿ, ಅಕ್ಟೋಬರ್​​​​ 08: ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ ಇದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಎರಡು ಲಕ್ಷ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಕಬ್ಬು (Sugarcane) ಸಮರ್ಪಕವಾಗಿ ಬೆಳೆದಿಲ್ಲ. ಇದರಿಂದ ಉತ್ಪಾದನೆ ಕುಂಠಿತವಾಗಿದ್ದು ಲಕ್ಷಾಂತರ ರೂ. ವೆಚ್ಚ ಮಾಡಿ ಕಬ್ಬು ಬೆಳೆದ ಕಬ್ಬು ಬೆಳೆಗಾರರಿಗೆ ಸರ್ಕಾರ ನೆರವಾಗಬೇಕು ಎಂಬ ಆಗ್ರಹ ಕೇಳಿ ಬಂದಿದ್ದು. ಹತ್ತಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಇರುವ ಚಿಕ್ಕೋಡಿ ಉಪವಿಭಾಗದಲ್ಲಿ ಸಕ್ಕರೆ ಉದ್ಯಮ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆ ಇದೆ.

ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆ. ಚಿಕ್ಕೋಡಿ ಉಪವಿಭಾಗದ ಐದು ತಾಲೂಕುಗಳಲ್ಲಿ ಅಂದ್ರೆ ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ ತಾಲೂಕಿನಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತೆ. ಸರಿಸುಮಾರು ಎರಡು ಲಕ್ಷ ಹೆಕ್ಟೇರ್​ಗೂ ಅಧಿಕ ಕೃಷಿಭೂಮಿಯಲ್ಲಿ ಈ ಬಾರಿ ಕಬ್ಬು ನಾಟಿ ಮಾಡಲಾಗಿದೆ. ಆದರೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ನದಿಪಾತ್ರದ 63 ಹಳ್ಳಿಗಳನ್ನು ಹೊರತುಪಡಿಸಿ ಉಳಿದೆಡೆ ಇಳುವರಿ ಕುಂಠಿತವಾಗಿದೆ.

ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿಯಲ್ಲಂತೂ ಜಲಮೂಲಗಳೇ ಬತ್ತಿ ಹೋಗಿದ್ದು ನಾಗರಮುನ್ನೋಳಿ, ಬೆಳಕೂಡ, ಇಟ್ನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದ ಕಬ್ಬು ಸಂಪೂರ್ಣ ಹಾನಿಯಾಗಿದೆ. ಒಂದು ಎಕರೆಗೆ 70 ರಿಂದ 80 ಟನ್ ಇಳುವರಿ ಬರುವಂತಹ ಭೂಮಿಯಲ್ಲಿ 40 ಟನ್ ಇಳುವರಿ ಬರುವುದು ಸಹ ಕಷ್ಟವಾಗಿದ್ದು ಉತ್ಪಾದನೆ ಕುಂಠಿತವಾಗಿದೆ.

ಇದನ್ನೂ ಓದಿ: ಗದಗ: ಭೀಕರ ಬರಕ್ಕೆ‌ ಜನರು ಕಂಗಾಲು: ವರುಣನ ಕೃಪೆಗಾಗಿ ಪರ್ಜನ್ಯ ಯಾಗ

ಕಬ್ಬು ನಾಟಿ ಮಾಡಿ ಬೆಳೆಯಲು ಲಕ್ಷಾಂತರ ರೂ. ಖರ್ಚು ಮಾಡಿರುವ ರೈತರು ಈಗ ಆತಂಕದಲ್ಲಿದ್ದಾರೆ. ಹೀಗಾಗಿ ಈ ಬಾರಿ ಸಕ್ಕರೆ ಕಾರ್ಖಾನೆಗಳ ಜೊತೆಗೆ ಸರ್ಕಾರವು ಸಹ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ರೈತ ಬಾಪು, ಒಂದು ಎಕರೆಗೆ 50 ಸಾವಿರ ರೂ. ಖರ್ಚು ಮಾಡಿ ಕಬ್ಬು ಬೆಳೆದಿದ್ದೇವೆ. ಈ ಬಾರಿ ಬರಗಾಲ ಹಿನ್ನೆಲೆ ಒಂದು ಟನ್​ಗೆ ಕನಿಷ್ಠ 3500 ರೂ. ದರವನ್ನು ಕಾರ್ಖಾನೆಗಳು ನೀಡಬೇಕು. ಕಬ್ಬು ಬೆಳೆಗಾರರಿಗೆ ಕನಿಷ್ಠ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಬ್ಬು ಬೆಳೆ ಉತ್ಪಾದನೆ ಕುಸಿತ ಹಿನ್ನೆಲೆ ಸಕ್ಕರೆ ಉದ್ಯಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಇನ್ನು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಕುರಿತು ನಿನ್ನೆಯಷ್ಟೇ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಸಕ್ಕರೆ ಕಾರ್ಖಾನೆಗಳ ಮಾಲೀಕರ, ವ್ಯವಸ್ಥಾಪಕ ನಿರ್ದೇಶಕರ ಸಭೆ ನಡೆಸಿದ್ದರು. ನವೆಂಬರ್ ಒಂದರ ಬಳಿಕವೇ ಕಬ್ಬು ನುರಿಸುವಂತೆ ಆದೇಶ ನೀಡಿದ್ದಾರೆ. ಈ ಬಾರಿ ಬರಗಾಲ ಹಿನ್ನೆಲೆ ರೈತರ ಹಿತಾಸಕ್ತಿ ಕಾಪಾಡಿಕೊಳ್ಳಲು ಎಫ್​ಆರ್​​ಪಿ ದರಕ್ಕಿಂತ ಹೆಚ್ಚುವರಿ ದರ ನಿಗದಿಗೂ ಡಿಸಿ ನಿತೇಶ್ ಪಾಟೀಲ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬರಗಾಲದಿಂದ ತತ್ತರಿಸಿದ್ದ ಅನ್ನದಾತನಿಗೆ ಬೆಲೆ ಕುಸಿತದ ಶಾಕ್; ಸರ್ಕಾರದ ನೆರವಿಗೆ ಆಗ್ರಹ

ಪ್ರಸಕ್ತ ವರ್ಷ ಕಬ್ಬು ಇಳುವರಿ ಕಡಿಮೆ ಹಿನ್ನೆಲೆ ಕಬ್ಬು ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡುವಂತೆ ಮಾಜಿ ಶಾಸಕ ಪಿ.ರಾಜೀವ್ ಆಗ್ರಹಿಸಿದ್ದಾರೆ. ಈ ಕುರಿತು ಚಿಕ್ಕೋಡಿಯಲ್ಲಿ ಮಾತನಾಡಿರುವ ಮಾಜಿ ಶಾಸಕ ಪಿ.ರಾಜೀವ್, ಕಬ್ಬು ಬೆಳೆಗಾರರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಘೋಷಿಸಬೇಕು.

ಬೆಳಗಾವಿ ಜಿಲ್ಲೆಯಲ್ಲಿ ಐವತ್ತಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಉದ್ಯಮ ಅಷ್ಟೇ ಅಲ್ಲ ಇಂದು ಎಲ್ಲ ಉದ್ಯಮಗಳು ಬಿದ್ದು ಹೋಗಿವೆ. ಸರ್ಕಾರ ನಿದ್ದೆಯಿಂದ ಎದ್ದು ಕೆಲಸಕ್ಕೆ ಹತ್ತಬೇಕು. ಬೆಳಗಾವಿ ಜಿಲ್ಲೆಯಿಂದ 50 ರಿಂದ 60 ವರ್ಷಗಳಲ್ಲಿ ಬಾರದಂತ ಭೀಕರ ಬರಗಾಲ ಇದ್ದು ಒಂದು ಎಕರೆಗೆ 75 ರಿಂದ 80 ಟನ್ ಬೆಳೆಯುವ ಭೂಮಿಯಲ್ಲಿ ಇಂದು ಹದಿನೈದರಿಂದ ಇಪ್ಪತ್ತು ಟನ್ ಇಳವರಿ ಬರುತ್ತಿದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ಬೆಳೆಗಳು ಒಣಗುತ್ತಿವೆ. ರಾಜ್ಯ ಸರ್ಕಾರ ಮಾತ್ರ ಕುಂಭಕರ್ಣ ನಿದ್ರೆಯಲ್ಲಿದ್ದು ಅಧಿಕಾರಿಗಳ ವರ್ಗಾವಣೆಯಲ್ಲಿ ಬ್ಯುಸಿ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಬಾರಿ ಭೀಕರ ಬರಗಾಲ ಹಿನ್ನೆಲೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಲಕ್ಷಾಂತರ ವೆಚ್ಚ ಮಾಡಿ ಕಬ್ಬು ಬೆಳೆದಿದ್ದ ರೈತರು ಕಂಗಾಲಾಗಿದ್ದು ಸರ್ಕಾರ ತಕ್ಷಣ ನೆರವಿಗೆ ಧಾವಿಸಲಿ ಎಂಬುದು ಅನ್ನದಾತರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.