ಸಾರಿಗೆ ಮುಷ್ಕರಕ್ಕೆ ಕಾಂಗ್ರೆಸ್​ ಬೆಂಬಲ: ನೌಕರರ ಪರ ದನಿಯೆತ್ತಿದ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ

ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ಕಾರ ಏನನ್ನೂ ಮಾಡಲಾಗಲ್ಲ. ಕಾನೂನು ಇದೆ ಎಂದು ಎಲ್ಲಾ ಕಡೆ ಪ್ರಯೋಗ ಮಾಡಲು ಆಗುವುದಿಲ್ಲ. ಸರ್ಕಾರಕ್ಕೆ ತಾಳ್ಮೆ ಇರಬೇಕು ಎಂದು ಕಾಂಗ್ರೆಸ್ ನಾಯಕರು ಸಲಹೆ ಮಾಡಿದ್ದಾರೆ.

  • TV9 Web Team
  • Published On - 18:33 PM, 8 Apr 2021
ಸಾರಿಗೆ ಮುಷ್ಕರಕ್ಕೆ ಕಾಂಗ್ರೆಸ್​ ಬೆಂಬಲ: ನೌಕರರ ಪರ ದನಿಯೆತ್ತಿದ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ
ಡಿ.ಕೆ.ಶಿವಕುಮಾರ್

ಬೆಳಗಾವಿ: ಕರ್ನಾಟಕದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರಕ್ಕೆ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದಾರೆ. ನಗರದಲ್ಲಿ ಗುರುವಾರ (ಏಪ್ರಿಲ್ 8) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕರಾದ ರಾಮಲಿಂಗಾರೆಡ್ಡಿ ಮತ್ತು ಎಚ್​​.ಎಂ.ರೇವಣ್ಣ ‘ನೌಕರರ ಬೇಡಿಕೆಗಳಿಗೆ ನಮ್ಮ ಸಹಮತವಿದೆ’ ಎಂದು ಹೇಳಿದರು. ಈ ಮೂಲಕ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ​ ಕೆಸರೆರಚಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಕಾಣಿಸಿದೆ.

ನಗರದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ‘6ನೇ ವೇತನ ಆಯೋಗ ಜಾರಿಗಾಗಿ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸಿಬ್ಬಂದಿಯ ಎಲ್ಲಾ ಬೇಡಿಕೆ ಈಡೇರಿಸಲು ಆಗದಿರಬಹುದು. ಆದರೆ ಮುಷ್ಕರ ನಿರತ ಸಿಬ್ಬಂದಿಯನ್ನು ಕರೆದು ಚರ್ಚೆ ನಡೆಸಬೇಕು. ಅವರನ್ನು ನೌಕರರು ಅನ್ನಬೇಡಿ, ಅವರೂ ವ್ಯವಸ್ಥೆಯ ಭಾಗ,’ ಎಂದು ಹೇಳಿದರು.

‘ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ಕಾರ ಏನನ್ನೂ ಮಾಡಲಾಗಲ್ಲ. ಕಾನೂನು ಇದೆ ಎಂದು ಎಲ್ಲಾ ಕಡೆ ಪ್ರಯೋಗ ಮಾಡಲು ಆಗುವುದಿಲ್ಲ. ಸರ್ಕಾರಕ್ಕೆ ತಾಳ್ಮೆ ಇರಬೇಕು, ತಾಳ್ಮೆ ಮತ್ತು ಸಹಾನುಭೂತಿಯಿಂದ ಪರಿಸ್ಥಿತಿಯನ್ನು ಅವಲೋಕಿಸಿ ನೆರವು ನೀಡಬೇಕು,’ ಎಂದು ಶಿವಕುಮಾರ್ ಸಲಹೆ ನೀಡಿದರು.

ಮುಷ್ಕರಕ್ಕೆ ಸಚಿವರೇ ಕಾರಣ: ಎಚ್​.ಎಂ.ರೇವಣ್ಣ
ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಲು ರಾಜ್ಯ ಸರ್ಕಾರ ಮತ್ತು ಸಚಿವರೇ ಕಾರಣ ಎಂದು ಮಾಜಿ ಸಚಿವ ಎಚ್​.ಎಂ.ರೇವಣ್ಣ ಆರೋಪಿಸಿದರು. ನೌಕರರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕಾಗಿತ್ತು. ನೌಕರರು ಮುಷ್ಕರ ನಡೆಸದಂತೆ ನೋಡಿಕೊಳ್ಳಬೇಕಿತ್ತು. ಇದು ಸಾರಿಗೆ ನೌಕರರ ತಪ್ಪಲ್ಲ, ಅನನುಭವಿ ಸಚಿವರ ತಪ್ಪು. ನಿಗಮಗಳು ನಷ್ಟದಲ್ಲಿದ್ದಾಗ ಹೊಸ ಬಸ್​ಗಳನ್ನು ಖರೀದಿಸಿದ್ದು ಏಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲಕ್ಕಾಗಿ ಕಟ್ಟಡಗಳನ್ನು ಒತ್ತೆ ಇಡುತ್ತಾರೆ. ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ಬಿಡಿಸಿಕೊಳ್ಳುತ್ತೇವೆ. ಒಟ್ಟಾರೆ ಸಮಸ್ಯೆಯನ್ನು ಗ್ರಹಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಸಾರಿಗೆ ಸಚಿವರು ಮತ್ತು ಸರ್ಕಾರ ಎಡವಿದೆ. ಸಚಿವರ ಕಾರಿಗೆ ಬಸ್​ ಡಿಪೋದಿಂದ ಡೀಸೆಲ್ ಹಾಕಿಸಿಕೊಳ್ತಾರೆ. ಅಂತಹವರಿಗೆ ನೌಕರರ ಬಗ್ಗೆ ಯಾವ ಚಿಂತೆ ಇರುತ್ತದೆ. ಒಂದು ಸ್ಥಾನದಲ್ಲಿದ್ದಾಗ ಅದರ ಗೌರವ ಕಾಪಾಡಬೇಕು ಎಂದು ರೇವಣ್ಣ ಹೇಳಿದರು

‘ಸಾರಿಗೆ ನಿಗಮಗಳ ನೌಕರರಿಗೆ 6ನೇ ವೇತನ ಆಯೋಗ ಜಾರಿ ಮಾಡಲು ಆಗದಿದ್ದರೆ ಸರ್ಕಾರ ಮೊದಲೇ  ಅದನ್ನು ಸ್ಪಷ್ಟವಾಗಿ ಹೇಳಬೇಕಿತ್ತು. ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು. ತೆರಿಗೆ ಕಟ್ಟದ, ಫಿಟ್‌ನೆಸ್ ಇಲ್ಲದ ಬಸ್ ಓಡಿಸುತ್ತಿದ್ದಾರೆ. ಇಂಥವುಗಳಿಗೆ ಸರ್ಕಾರ ಹೇಗೆ ಅನುಮತಿ ನೀಡಲು ಸಾಧ್ಯ? ಏನಾದರೂ ಅನಾಹುತವಾದರೆ ಇವರು ಹೊಣೆಯಾಗುತ್ತಾರಾ ಎಂದು ಪ್ರಶ್ನಿಸಿದರು. ಇವರು ತಿಳಿವಳಿಕೆ ಇಲ್ಲದ ಮೂರ್ಖ ಸಚಿವ. ನೌಕರರ ಮೇಲೆ ಬಲ ಪ್ರಯೋಗ, ಎಸ್ಮಾ ಜಾರಿ ಸರಿಯಲ್ಲ. ಕಾರ್ಮಿಕರು, ರೈತರನ್ನು ಸಾಯಿಸೋದೇ ಈ ಸರ್ಕಾರದ ಕೆಲಸ,’ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರೇವಣ್ಣ ತೀವ್ರ ವಾಗ್ದಾಳಿ ನಡೆಸಿದರು.

ಸಾರಿಗೆ ನಿಗಮದಿಂದ ಲಾಭ ನಿರೀಕ್ಷೆ ತಪ್ಪು: ರಾಮಲಿಂಗಾರೆಡ್ಡಿ
ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುವುದು ಸಹಜ. ಸರ್ಕಾರ ಮೊದಲು ಅದನ್ನು ಸ್ಪಷ್ಟವಾಗಿ ಕೇಳಬೇಕು. ನೌಕರರ ಮುಖಂಡರನ್ನು ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಾರಿಗೆ ಸಚಿವರು ಆಗಾಗ ಸಭೆಗಳನ್ನು ಮಾಡಬೇಕು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಸಾರಿಗೆ ನಿಗಮ ನಡೆಸುವಾಗ ಲಾಭ-ನಷ್ಟದ ಪ್ರಶ್ನೆಯೇ ಬರುವುದಿಲ್ಲ. ಜನರ ಅನುಕೂಲಕ್ಕಾಗಿ ಬಸ್‌ಗಳನ್ನು ಓಡಿಸಬೇಕು. ಇದನ್ನು ಸರ್ಕಾರ ಒಂದು ಉದ್ದಿಮೆಯಾಗಿ ನೋಡಬಾರದು. ಜನರ ನಿತ್ಯದ ಬದುಕಿನೊಂದಿಗೆ ಒಡನಾಟ ಇರುವ ಸಾರಿಗೆ ಇಲಾಖೆಗೆ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕು. ಕೂಡಲೇ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಪರಸ್ಪರ ಚರ್ಚೆ ನಡೆಸಬೇಕು,’ ಎಂದು ರಾಮಲಿಂಗಾ ರೆಡ್ಡಿ ಸಲಹೆ ಮಾಡಿದರು.

ಲಾಭ ಇಲ್ಲದಿದ್ದರೆ ಖಾಸಗಿಯವರು ಬಸ್ ಓಡಿಸಲ್ಲ. 4 ವರ್ಷಗಳ ಹಿಂದೆ ವೇತನ ಪರಿಷ್ಕರಣೆ ಮಾಡಿದ್ದೆವು. ಈಗ ದಿನನಿತ್ಯದ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಿದೆ. ಟ್ಯಾಕ್ಸ್, ವಿಮೆ ಇಲ್ಲದ ಬಸ್‌ಗಳನ್ನು ಈಗ ರಸ್ತೆಗೆ ಬಿಟ್ಟಿದ್ದಾರೆ. ಕಾನೂನು ಪ್ರಕಾರ ಅದು ತಪ್ಪು. ಏನಾದರೂ ಅನಾಹುತವಾದರೆ ರಾಜ್ಯ ಸರ್ಕಾರವೇ ಹೊಣೆ ಆಗುತ್ತೆ ಎಂದು ರೆಡ್ಡಿ ಎಚ್ಚರಿಸಿದರು. ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ತುರ್ತಾಗಿ ಪರಸ್ಪರ ಚರ್ಚಿಸಬೇಕು. ಸಾರಿಗೆ ನೌಕರರು ಕೂಡ ನಮ್ಮಂತೆ ಮನುಷ್ಯರು. ಅವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಸಾರಿಗೆ ಇಲಾಖೆಯ ಮಾಜಿ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.

(Congress Leaders DK Shivakumar Ramalingareddy HM Revanna Speaks for KSRTC BMTC Staff)

ಇದನ್ನೂ ಓದಿ: ಸಾರಿಗೆ ಮುಷ್ಕರ ಮುಂದುವರೆದರೆ ಜನರೇ ಬಸ್ ಖಾಸಗೀಕರಣದ ಧ್ವನಿ ಎತ್ತುತ್ತಾರೆ -ಸಂಸದ ಪ್ರತಾಪ್ ಸಿಂಹ ಗುಡುಗು

ಇದನ್ನೂ ಓದಿ: ನಾಳೆಯೂ ಮುಂದುವರೆಯಲಿದೆ ಬಸ್ ಮುಷ್ಕರ -ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ