Tiger Attack | ಹೆಚ್ಚುತ್ತಿದೆ ಹುಲಿ ದಾಳಿ ಭೀತಿ: ಬಲಿಯಾಗುತ್ತಿವೆ ರೈತರ ಸಾಕು ಪ್ರಾಣಿಗಳು

ಭೀಮಗಡ್ ಅರಣ್ಯ ವಲಯ ವ್ಯಾಪ್ತಿಯ ಹೆಮ್ಮಡಗಾ ಗ್ರಾಮದಲ್ಲಿ ಹುಲಿ ಆತಂಕ ಹೆಚ್ಚಾಗಿದೆ. ಇಲ್ಲಿ ಕಳೆದ ಆರು ತಿಂಗಳಲ್ಲಿ 30 ರಿಂದ 40 ಸಾಕು ಪ್ರಾಣಿಗಳು ಬಲಿಯಾಗಿವೆ. ಇಲ್ಲಿನ ಗ್ರಾಮಸ್ಥರು ಮನೆಯಿಂದ ಹೊರಹೋಗಬೇಕೆಂದ್ರೆ ಕೈಯಲ್ಲಿ ದೊಣ್ಣೆ, ಪಿಕಾಸಿ ಹಿಡಿದು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

  • TV9 Web Team
  • Published On - 15:22 PM, 22 Feb 2021
Tiger Attack | ಹೆಚ್ಚುತ್ತಿದೆ ಹುಲಿ ದಾಳಿ ಭೀತಿ: ಬಲಿಯಾಗುತ್ತಿವೆ ರೈತರ ಸಾಕು ಪ್ರಾಣಿಗಳು
ಹುಲಿ ದಾಳಿಗೆ ಬಲಿಯಾಗಿರುವ ಹಸು

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ್ ಅರಣ್ಯ ವಲಯ ವ್ಯಾಪ್ತಿಯ ಹೆಮ್ಮಡಗಾ ಗ್ರಾಮದಲ್ಲಿ ಹುಲಿ ಆತಂಕ ಹೆಚ್ಚಾಗಿದೆ. ಇಲ್ಲಿ ಕಳೆದ ಆರು ತಿಂಗಳಲ್ಲಿ 30 ರಿಂದ 40 ಸಾಕು ಪ್ರಾಣಿಗಳು ಬಲಿಯಾಗಿವೆ. ಇಲ್ಲಿನ ಗ್ರಾಮಸ್ಥರು ಮನೆಯಿಂದ ಹೊರಹೋಗಬೇಕೆಂದ್ರೆ ಕೈಯಲ್ಲಿ ದೊಣ್ಣೆ, ಪಿಕಾಸಿ ಹಿಡಿದು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಭೀಮಗಡ್ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ದಾಳಿ ಭೀತಿ
ಭೀಮಗಡ್ ಅರಣ್ಯವ್ಯಾಪ್ತಿಯಲ್ಲಿ ಹೆಮ್ಮಡಗಾ, ಡೇಗಾಂವ, ಪಾಲಿ, ಜಾನಗಾಂವ, ಕೃಷ್ಣಾಪುರ, ಡೋಂಗರಗಾಂವ ಸೇರಿ ಒಟ್ಟು 12 ಗ್ರಾಮಗಳು ಬರುತ್ತವೆ. ಈ ಭೀಮಗಡ್ ಅರಣ್ಯದಲ್ಲಿ ಏಳರಿಂದ ಎಂಟು ಹುಲಿಗಳಿದ್ದು ಈಗ ಹುಲಿಗಳು ಆಹಾರ ಅರಸಿ ಗ್ರಾಮಗಳತ್ತ ಮುಖ ಮಾಡ್ತೀವೆ‌. ಕಳೆದ ಆರು ತಿಂಗಳಲ್ಲಿ ಮೂವತ್ತರಿಂದ ನಲವತ್ತು ಸಾಕು ಪ್ರಾಣಿಗಳು ಮೃತಪಟ್ಟಿದ್ದು ಇತ್ತೀಚೆಗೆ ಹೆಮ್ಮಡಗಾ ಗ್ರಾಮದ ಹೊರವಲಯದಲ್ಲಿ ಹುಲಿ ದಾಳಿಗೆ ಎರಡು ಆಕಳುಗಳು ಬಲಿಯಾಗಿವೆ. ಹೀಗಾಗಿ ಹೆಮ್ಮಡಗಾ ಗ್ರಾಮಸ್ಥರು ಜೀವಭಯದಲ್ಲೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಗ್ರಾಮದ ಹೊರವಲಯದಲ್ಲಿ ರೈತರ ಜಮೀನುಗಳಿದ್ದು ಜಮೀನಿಗೆ ತೆರಳಬೇಕಂದ್ರೆ ಕೈಯಲ್ಲಿ ದೊಣ್ಣೆ, ರಾಡ್, ಪಿಕಾಸಿ ಹಿಡಿದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಗ್ರಾಮದ ಹೊರವಲಯದಲ್ಲಿ ಎತ್ತುಗಳು ಎಮ್ಮೆಗಳು ಮೇಯಲು ಹೋದ ವೇಳೆ ಎಂಟು ದಿವಸಕ್ಕೊಮ್ಮೆ ತಮ್ಮ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. 40 ರಿಂದ 50 ಸಾವಿರ ರೂಪಾಯಿ ಮೌಲ್ಯದ ಆಕಳು ಹುಲಿ ದಾಳಿಗೆ ಬಲಿಯಾದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಪಂಚನಾಮೆ ಮಾಡಿ ಕೇವಲ 10 ಸಾವಿರ ರೂಪಾಯಿಯಷ್ಟು ಪರಿಹಾರ ನೀಡ್ತಾರೆ. ಆ ಪರಿಹಾರಕ್ಕಾಗಿ ಆರು ತಿಂಗಳ ಕಾಲ ಕಾಯಬೇಕು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭೀಮಗಡ್ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಲು ಹೊರಟ ಸರ್ಕಾರ
ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅರಣ್ಯ ಸಚಿವರಾದಾಗ ನೇಚರ್ ಕ್ಯಾಂಪ್ ಉದ್ಘಾಟನೆ ಮಾಡಲು ಬಂದಿದ್ರು ಈ ವೇಳೆ ಗ್ರಾಮಸ್ಥರು ಸತೀಶ್ ಜಾರಕಿಹೊಳಿಗೆ ಮನವಿ ಮಾಡಿದ್ರು. ಆದರೆ ಇದಾದ ಬಳಿಕ ಯಾರೊಬ್ಬ ಸಚಿವರು ಇಲ್ಲಿ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಭೀಮಗಡ್ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಲು ಸರ್ಕಾರ ಹೊರಟಿದೆ. ಹೇಗಾದರೂ ಮಾಡಿ ಭೀಮಗಡ್ ಅರಣ್ಯ ವ್ಯಾಪ್ತಿಯ ಗ್ರಾಮಗಳ ಸ್ಥಳಾಂತರ ಮಾಡಬೇಕೆನ್ನುತ್ತಿದ್ದಾರೆ‌. ಆದರೆ ನಾವು ನಮ್ಮ ಗ್ರಾಮಗಳ ಸ್ಥಳಾಂತರಕ್ಕೆ ಒಪ್ಪಲ್ಲ ಎಂದು ಗ್ರಾಮಸ್ಥರು ಹೇಳ್ತಾರೆ. ಅಷ್ಟೇ ಅಲ್ಲದೇ ನಮಗೆ ಶುದ್ಧ ಗಾಳಿ, ಶುದ್ಧ ಕುಡಿಯುವ ನೀರು ಇಲ್ಲಿ ಸಿಗುತ್ತೆ. ನಮಗೆ ಗೋವಾ ಹತ್ತಿರ ಆಗುವುದರಿಂದ ಅಲ್ಲಿ ಕೂಲಿ ಕೆಲಸಕ್ಕೆ ಹೋದ್ರೆ ಹೆಚ್ಚಿಗೆ ಹಣ ಸಿಗುತ್ತೆ ಎಂಬುದು ಗ್ರಾಮಸ್ಥರ ವಾದ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌, ‘ಅರಣ್ಯ ಇಲಾಖೆಯವರು ಗ್ರಾಮದ ಬಳಿ ಹುಲಿ ಆಗಮಿಸದಂತೆ ನಿಯಂತ್ರಣ ಮಾಡಬೇಕು. ಕ್ಯಾಮೆರಾ ಅಳವಡಿಸಿ ಹುಲಿಗಳ ಫೋಟೋ‌ ತಗೆದು ಹುಲಿ ಸೆರೆ ಹಿಡಿದು ಗ್ರಾಮಗಳಿಂದ ದೂರ ಬೇರೆಡೆ ಸ್ಥಳಾಂತರ ಮಾಡಬೇಕು. ಈ ಬಗ್ಗೆ ನಾನೂ ಸಹ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಕಾಡಂಚಿನ ಗ್ರಾಮಗಳ ಸ್ಥಳಾಂತರ ಮಾಡುವುದು ಕಷ್ಟವಾಗುತ್ತೆ. ಇದ್ದಿದ್ದರಲ್ಲಿಯೇ ಗ್ರಾಮಸ್ಥರಿಗೆ ರಕ್ಷಣೆ ಕೊಡಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇನ್ನು ನಿನ್ನೆಯಷ್ಟೇ ಹುಲಿ ದಾಳಿಗೆ ಕೊಡಗು ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಆ ರೀತಿಯ ಘಟನೆ ಖಾನಾಪುರ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಹುಲಿಗಳು ಗ್ರಾಮಗಳತ್ತ ಸುಳಿಯದಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಹುಲಿ ದಾಳಿಯಿಂದ ಮೃತಪಟ್ಟ ಜಾನುವಾರು ಮಾಲೀಕರಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹ.

Tiger Attack in belagavi

ವಿಶ್ರಾಂತಿ ಪಡೆಯುತ್ತಿರುವ ಹುಲಿ

ಇದನ್ನೂ ಓದಿ: Tiger Attack | ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ, ಕಾರ್ಯಾಚರಣೆಗೆ ಸಾಕಾನೆಗಳನ್ನು ಕರೆಸಿದ ಅರಣ್ಯ ಇಲಾಖೆ