ಆಕ್ಸಿಜನ್​ ಸಿಗ್ತಾ ಇಲ್ಲ, ಸಮಸ್ಯೆ ಮುಂದುವರೆದರೆ ಬೆಳಗಾವಿಯ ಎಲ್ಲಾ ಖಾಸಗಿ ಆಸ್ಪತ್ರೆಗಳೂ ಕ್ಲೋಸ್: ವೈದ್ಯರ ಅಳಲು

ಅಧಿಕಾರಿಗಳಿಗೆ ಕರೆ ಮಾಡಿದ್ರೆ ಮ್ಯಾನೇಜ್ ಮಾಡಿ ಅಂತಾರೆ. ಔಷಧ ಇಲ್ಲದಿದ್ದರೆ ಪರ್ಯಾಯ ಔಷಧ ಕೊಡಬಹುದು. ಆಕ್ಸಿಜನ್ ಇಲ್ಲದಿದ್ರೆ ಕೈಯಲ್ಲಿ ಪಂಪ್ ಹೊಡೆಯೋಕ್ಕಾಗುತ್ತಾ? ಸರಿಯಾದ ಸಮಯಕ್ಕೆ ಇಂಜೆಕ್ಷನ್, ಆಕ್ಸಿಜನ್ ಕೊಟ್ರೆ ಆಸ್ಪತ್ರೆ ನಡೆಸುತ್ತೇವೆ: ಡಾ.ಸುಭಾಷ್ ಪಾಟೀಲ್

  • TV9 Web Team
  • Published On - 8:12 AM, 5 May 2021
ಆಕ್ಸಿಜನ್​ ಸಿಗ್ತಾ ಇಲ್ಲ, ಸಮಸ್ಯೆ ಮುಂದುವರೆದರೆ ಬೆಳಗಾವಿಯ ಎಲ್ಲಾ ಖಾಸಗಿ ಆಸ್ಪತ್ರೆಗಳೂ ಕ್ಲೋಸ್: ವೈದ್ಯರ ಅಳಲು
ಡಾ.ಸುಭಾಷ್ ಪಾಟೀಲ್ ಹಾಗೂ ಡಾ.ಅಮಿತ್ ಬಾಥೆ

ಬೆಳಗಾವಿ: ಕೊರೊನಾ ಎರಡನೇ ಅಲೆಯಿಂದಾಗಿ ಕರ್ನಾಟಕದ ಪರಿಸ್ಥಿತಿ ಹದಗೆಟ್ಟಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯರು ಹರಸಾಹಸ ಪಡುವಂತಾಗಿದೆ. ಇದೀಗ ಬೆಳಗಾವಿಯ ಖಾಸಗಿ ಆಸ್ಪತ್ರೆಗಳ ವೈದ್ಯರು ಈ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದು ಆಕ್ಸಿಜನ್, ಇಂಜೆಕ್ಷನ್ ವ್ಯವಸ್ಥೆ ಮಾಡದೇ ಇದ್ದರೆ ಆಸ್ಪತ್ರೆಯನ್ನು ಮುಚ್ಚುವುದಾಗಿ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ವೈದ್ಯರಾಗಿರುವ ಡಾ.ಸುಭಾಷ್ ಪಾಟೀಲ್ ಹಾಗೂ ಡಾ.ಅಮಿತ್ ಬಾಥೆ ಈ ಬಗ್ಗೆ ಧ್ವನಿ ಎತ್ತಿದ್ದು, ಮೆಡಿಕಲ್ ಆಕ್ಸಿಜನ್ ಪೂರೈಕೆ ಆಗದಿದ್ದರೆ ಆಸ್ಪತ್ರೆ ನಡೆಸುವುದು ಸಾಧ್ಯವೇ ಇಲ್ಲ. ಸರ್ಕಾರ ಕೂಡಲೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಎರಡನೇ ಅಲೆಯಲ್ಲಿ ಯುವಜನಾಂಗ, ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ಕಂಡು ಬರುತ್ತಿದೆ. ಸರ್ಕಾರ ಲಾಕ್​ಡೌನ್ ಮಾಡಿದೆ ಆದರೆ ಟೈಟ್ ಆಗಿ ಮಾಡ್ತಿಲ್ಲ. ಹೀಗಾಗಿ ನಮಗೇನೂ ಆಗಲ್ಲ ಅಂತ ಜನರು ಓಡಾಡ್ತಿದ್ದಾರೆ. ಇದಾದ ಬಳಿಕ ಆಕ್ಸಿಜನ್ ಬೆಡ್ ಕೊಡಿ ಅಂತ ಬರ್ತಿದ್ದಾರೆ. ಇಲ್ಲಿ ಆಕ್ಸಿಜನ್​ ಪೂರೈಕೆಯೇ ಸಮರ್ಪಕವಾಗಿಲ್ಲ. ಆದಷ್ಟು ಬೇಗ ಆಕ್ಸಿಜನ್ ಕೊಡದಿದ್ದರೆ ಬೆಳಗಾವಿಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದ್ ಆಗಬಹುದು ಎಂದು ಆತಂಕ ಹೊರಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಡಾ.ಸುಭಾಷ್ ಪಾಟೀಲ್, ಕಳೆದ 4 ದಿನಗಳಿಂದ ಸರಿಯಾಗಿ ಆಕ್ಸಿಜನ್ ಪೂರೈಕೆ ಆಗ್ತಿಲ್ಲ. ನಿನ್ನೆ 25 ರೋಗಿಗಳನ್ನ ಡಿಸ್ಚಾರ್ಜ್ ಮಾಡಿ ಬೇರೆಡೆ ಕಳಿಸಿದ್ದೇವೆ. ಪ್ರತಿನಿತ್ಯವೂ ಬೆಡ್ ಬೇಕೆಂದು 3-4 ರೋಗಿಗಳು ಕೇಳುತ್ತಿದ್ದಾರೆ. ಅಧಿಕಾರಿಗಳಿಗೆ ಕರೆ ಮಾಡಿದ್ರೆ ಮ್ಯಾನೇಜ್ ಮಾಡಿ ಅಂತಾರೆ. ಔಷಧ ಇಲ್ಲದಿದ್ದರೆ ಪರ್ಯಾಯ ಔಷಧ ಕೊಡಬಹುದು. ಆಕ್ಸಿಜನ್ ಇಲ್ಲದಿದ್ರೆ ಕೈಯಲ್ಲಿ ಪಂಪ್ ಹೊಡೆಯೋಕ್ಕಾಗುತ್ತಾ? ಸರಿಯಾದ ಸಮಯಕ್ಕೆ ಇಂಜೆಕ್ಷನ್, ಆಕ್ಸಿಜನ್ ಕೊಟ್ರೆ ಆಸ್ಪತ್ರೆ ನಡೆಸುತ್ತೇವೆ. ಇನ್ನು ಎರಡು ದಿನದಲ್ಲಿ ವ್ಯವಸ್ಥೆ ಆಗದಿದ್ದರೆ ಆಸ್ಪತ್ರೆ ಮುಚ್ಚುತ್ತೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಬಿಟ್ಟರೆ ಬೆಳಗಾವಿಯೇ ಸಮಸ್ಯೆ ಎದುರಿಸುತ್ತಿರುವ ಎರಡನೇ ನಗರವಾಗಿದೆ. ಜಿಲ್ಲಾಡಳಿತಕ್ಕೆ ಕಷ್ಟವಾಗ್ತಿದೆ ಒಪ್ಪಿಕೊಳ್ತೀವಿ, ಆದ್ರೆ ನಮಗೆ ರೋಗಿಗಳಿಗೆ ಉತ್ತರಿಸೋದು ಕಷ್ಟ ಆಗ್ತಿದೆ. ಜಿಲ್ಲಾಡಳಿತ, ಸಂಬಂಧಿತ ಅಧಿಕಾರಿಗಳಿಂದ ನಮಗೆ ಸಪೋರ್ಟ್ ಸಿಗ್ತಿಲ್ಲ. ನಿನ್ನೆ ಮತ್ತು ಮೊನ್ನೆ ಆಕ್ಸಿಜನ್ ಕೊರತೆಯಿಂದ ಬೆಳಗಾವಿಯಲ್ಲಿ ಹೆಚ್ಚು ಸಾವಾಗಿದೆ. ನಾವು 30 ಆಕ್ಸಿಜನ್ ಸಿಲಿಂಡರ್ ಕೇಳಿದಾಗ 10 ಸಿಲಿಂಡರ್ ಕೊಟ್ಟು ಮ್ಯಾನೇಜ್ ಮಾಡು ಅಂತಾರೆ. ಹತ್ತು ಸಾರಿ ಅಧಿಕಾರಿಗಳಿಗೆ ಕರೆ ಮಾಡಿದಾಗ ಒಮ್ಮೆ ರಿಸೀವ್ ಮಾಡ್ತಾರೆ. ಸಭೆ ಕರೆದು ಆಕ್ಸಿಜನ್ ಕೊರತೆ ಬಗ್ಗೆ ಯಾರಿಗೂ ಹೇಳ್ಬೇಡಿ ನಾವು ಕೊಡ್ತೀವಿ ಅಂತಾರೆ. ವೈದ್ಯಕೀಯ ಸೇವೆಗಿಂತ ನಮಗೆ ಕಾರಕೂನ ಕೆಲಸ ಜಾಸ್ತಿ ಆಗ್ತಿದೆ. ದಿನವೂ ಬೆಡ್ ಬೇಕು ಅಂತಾ ನೂರು ಜನ ಕರೆ ಮಾಡ್ತಿದ್ದಾರೆ. ಆಕ್ಸಿಜನ್ ಇಲ್ಲ ಅಂದ್ರೆ ಕೊಲ್ಲಲು ತೆಗೆದುಕೊಂಡಂತಾಗುತ್ತೆ. ಮನೆ, ಹೆಂಡತಿ, ಮಕ್ಕಳನ್ನು ಬಿಟ್ಟು ನಾವು ಸೇವೆ ಮಾಡ್ತಿದ್ದೇವೆ. ಇಲ್ಲಿ ಸುಮ್ಮನೇ ಒದ್ದಾಡೋದಕ್ಕಿಂತ ಆಸ್ಪತ್ರೆ ಮುಚ್ಚಿ ಅವರೊಂದಿಗೆ ಇರುತ್ತೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನೋರ್ವ ವೈದ್ಯ ಡಾ.ಅಮಿತ್ ಬಾಥೆ ಕೂಡಾ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಆದಷ್ಟು ಬೇಗ ಆಕ್ಸಿಜನ್ ಪೂರೈಸಬೇಕು. ಇಲ್ಲದಿದ್ರೆ ಬೆಳಗಾವಿಯ ಎಲ್ಲ ಖಾಸಗಿ ಆಸ್ಪತ್ರೆ ಮುಚ್ಚಬೇಕಾಗುತ್ತೆ. ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಆಕ್ಸಿಜನ್ ಸರಾಸರಿ ಶೂನ್ಯಕ್ಕೆ ತಲುಪಿದೆ. ಆಕ್ಸಿಜನ್ ಪೂರೈಕೆ ಆಗದಿದ್ದರೆ ಆಸ್ಪತ್ರೆ ನಡೆಸುವುದೇ ಕಷ್ಟವಾಗುತ್ತೆ. ಆಕ್ಸಿಜನ್ ವ್ಯವಸ್ಥೆ ಮಾಡಲು ರೋಗಿ ಸಂಬಂಧಿಗೆ ಹೇಳಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಕರ್ನಾಟಕದಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ಆಕ್ಸಿಜನ್​ ಕಳ್ಳ ಸಾಗಣೆ; ಕಲಬುರಗಿ ಜಿಲ್ಲಾಡಳಿತದಿಂದ ತಡರಾತ್ರಿ ಕಾರ್ಯಾಚರಣೆ 

ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್‌ ನೀಡಲು ನಿರ್ಧಾರ: ಸಂಸದೆ ಸುಮಲತಾ