ಬೆಳಗಾವಿ: ಲಾಕ್ ಡೌನ್ ಹಿನ್ನಲೆ ಮನೆಯಿಂದ ಯಾರು ಕೂಡ ಹೊರ ಬರುತ್ತಿಲ್ಲ. ಹೀಗಾಗಿ ಜನರ ಓಡಾಟ ಇಲ್ಲದ್ದನ್ನು ಕಂಡ ಜಿಂಕೆಯೊಂದು ಕಾಡಿನಿಂದ ನಾಡಿಗೆ ಬಂದು ಫಜೀತಿ ಪಟ್ಟ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಹೌದು ಲಾಕ್ಡೌನ್ನಿಂದಾಗಿ ಮನೆಯಿಂದ ಜನರು ಯಾರು ಹೊರ ಬರದ ಕಾರಣ ಆಹಾರ ಅರಸಿಕೊಂಡು ಜಿಂಕೆಯೊಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಗ್ರಾಮಕ್ಕೆ ಬಂದಿದೆ. ಆದ್ರೆ ಅದರ ಅದೃಷ್ಟ ಕೈಕೊಟ್ಟಿತ್ತು ಅಂತಾ ಕಾಣುತ್ತೆ. ಯಾಕಂದ್ರೆ ಆಹಾರ ಅರಸಿ ಬಂದ ಜಿಂಕೆ ಪಾಳು ಬಿದ್ದಿರುವ ಮನೆಯೊಂದರಲ್ಲಿ ಸಿಲುಕಿ ಹೊರ ಬರಲು ಗೊತ್ತಾಗದೆ ಸಂಕಷ್ಟದಲ್ಲಿತ್ತು.
ಜಿಂಕೆ ಭಕ್ಷಿಸದೇ ರಕ್ಷಿಸಿದ ಲೋಂಡಾ ಯುವಕರು ಇದನ್ನ ನೋಡಿದ ಸ್ಥಳೀಯ ಯುವಕರು ಪಿಡಿಓಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪಿಡಿಓ ಮತ್ತು ಸ್ಥಳೀಯ ಯುವಕರು ಸೇರಿ ಜಿಂಕೆಯನ್ನ ಹೊರ ತರುವ ಕೆಲಸ ಮಾಡಿದ್ದಾರೆ. ಬಿದ್ದಿರುವ ಮನೆಯ ಗೋಡೆಗಳ ಮೇಲೆ ಯುವಕರು ನಿಂತು ಓರ್ವ ಯುವಕನನ್ನ ಮನೆಯಿಂದ ಕೆಳಗೆ ಇಳಿಸಿ ಜಿಂಕೆ ಕಾಲಿಗೆ ಹಗ್ಗ ಕಟ್ಟಿಸಿದ್ದಾರೆ. ಇದಾದ ಬಳಿಕ ನಾಲ್ಕೈದು ಯುವಕರು ಸೇರಿ ಜಿಂಕೆಯನ್ನ ಮೇಲೆತ್ತಿದ್ದಾರೆ.
ಮತ್ತೇ ಕಾಡು ಸೇರಿದ ಜಿಂಕೆ ಮೇಲೆತ್ತಿದ ಬಳಿಕ ಸ್ವಲ್ಪ ದೂರ ಜಿಂಕೆಯನ್ನ ಹೊತ್ತುಕೊಂಡು ಹೋಗಿ ಕಾಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದಾರೆ. ತಕ್ಷಣ ಎದ್ನೋ ಬಿದ್ನೋ ಅಂತಾ ಜಿಂಕೆ ಮತ್ತೆ ಕಾಡು ಸೇರಿಕೊಂಡಿದೆ. ಲೋಂಡಾ ಗ್ರಾಮದ ಯುವಕರ ಈ ಕಾರ್ಯಕ್ಕೆ ಜಿಲ್ಲೆಯ ಜನರು ಮತ್ತು ಪ್ರಾಣಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. -ಸಹದೇವ ಮಾನೆ