ಬೆಳಗಾವಿ: ಜಿಲ್ಲೆಯಲ್ಲಿ ಸೇನೆಗೆ ಅತೀ ಹೆಚ್ಚು ಯುವಕರು ಸೇರ್ಪಡೆಯಾಗಿದ್ದಾರೆ. ಇನ್ನೂ ಆಗುತ್ತಿದ್ದಾರೆ. ಭಾರತೀಯ ಸೇನೆಗೆ ಬೆಳಗಾವಿಯ ಕೊಡುಗೆ ಅಪಾರವಾಗಿದೆ.
ಇಲ್ಲಿನ ಮರಾಠಾ ಲಘು ಪದಾತಿ ದಳ (ಎಂಎಲ್ಐಆರ್ಸಿ), ಏರ್ಮೆನ್ ತರಬೇತಿ ಶಾಲೆ, ಕಮಾಂಡೋ ತರಬೇತಿ ಕೇಂದ್ರಗಳಲ್ಲಿ ಕಠಿಣ ತರಬೇತಿ ನೀಡಿ ಸೈನಿಕರನ್ನು ಸಜ್ಜುಗೊಳಿಸಲಾಗುತ್ತಿದೆ. ಹಿಂದಿನಿಂದಲೂ ಇಲ್ಲಿ ತರಬೇತಿ ಪಡೆದ ಸಾವಿರಾರು ಮಂದಿ ಸೇನೆಯ ವಿವಿಧ ವಿಭಾಗಗಳಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಸೈನಿಕರಿಗೆ ಗೌರವ ಕೊಡುವ ಕೆಲಸಕ್ಕೆ ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಶಾಸಕರು ಮುಂದಾಗಿದ್ದಾರೆ.
ನಗರದ ಮಧ್ಯ ಭಾಗದಲ್ಲಿ ಸೈನಿಕ ಸ್ಮಾರಕ
ಭಾರತೀಯ ಸೇನೆಯ ಶೌರ್ಯ, ಸಾಧನೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಬೆಳಗಾವಿ ನಗರದ ಕೇಂದ್ರ ಭಾಗ ರೈಲು ನಿಲ್ದಾಣ ಸಮೀಪದಲ್ಲಿ ಸೈನಿಕ ಸ್ಮಾರಕ ಸ್ಥಾಪಿಸಲಾಗುತ್ತಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಿಲಿದ್ದು, ಇದಕ್ಕೆ ಸಂಬಂಧಿಸಿದ ಕೆಲಸ ಆರಂಭವಾಗಿದೆ.
ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಉದ್ಯಾನದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆರೆವುಗೊಳಿಸುವ ಮೂಲಕ ಆಕರ್ಷಕ ಸೈನಿಕ ಸ್ಮಾರಕ ಅಭಿವೃದ್ಧಿಪಡಿಸಲಾಗುತ್ತಿದೆ. ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ದಂಡು ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆಯಲಾಗಿದ್ದು, ನಗರದ ಹೊಸ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶವಿದೆ.
ಬಹುದಿನಗಳ ಕನಸು ನನಸಾಗುವ ಸಮಯ
ಮಿಲಟರಿ ದಂಡೇ ಬೆಳಗಾವಿಯಲ್ಲಿದ್ದು, ಸೈನಿಕರಿಗೆ ಗೌರವ ನೀಡುವ ಉದ್ದೇಶದಿಂದ ಸೈನಿಕನ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಬಹುದಿನಗಳ ಬೇಡಿಕೆ ಈ ಭಾಗದ ಜನರದ್ದಾಗಿತ್ತು. ಇದಕ್ಕೆ ಹೆಚ್ಚು ಆಸಕ್ತಿ ತೋರಿದ ಶಾಸಕ ಅನಿಲ ಬೆನಕೆ ಇದೀಗ ಒಂದೂವರೆ ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ನಗರದಲ್ಲಿ ಸೈನಿಕ ಸ್ಮಾರಕ ನಿರ್ಮಾಣ ಮಾಡುವ ಕನಸು ನನಸಾಗಿಸಲು ಒಂದೂವರೆ ವರ್ಷಗಳ ಸತತ ಪ್ರಯತ್ನ ನಡೆಸಿದ್ದೇನೆ. ಸ್ಮಾರಕದ ಮೂಲಕ, ಭಾರತೀಯ ಸೇನೆಗಳಾದ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಗೌರವ ಸೂಚಿಸುವ ಉದ್ದೇಶ ನಮ್ಮದಾಗಿದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ.
ಸೇನೆಯ ಸಾಹಸದ ಕುರಿತು ಮಾಹಿತಿ ಫಲಕ
ಸ್ಮಾರಕ ನಿರ್ಮಾಣದ ಕುರಿತು ಮರಾಠ ಲಘು ಪದಾತಿ ದಳದ ಅಧಿಕಾರಿಗಳು ಒಪ್ಪಿಕೊಂಡು ಸಹಕಾರ ನೀಡುತ್ತೇವೆಂದು ತಿಳಿಸಿದ್ದಾರೆ. ಸೈನಿಕ ಸ್ಮಾರಕ ಉದ್ಯಾನದಲ್ಲಿ ವಾಯುಸೇನೆಯ ಯುದ್ಧ ವಿಮಾನ, ಭೂ ಸೇನೆಯ 2 ಟ್ಯಾಂಕರ್ಗಳು ಹಾಗೂ ನೌಕಾಪಡೆಯ ಯುದ್ಧ ನೌಕೆಗಳನ್ನು ಇರಿಸಲಾಗುವುದು. ಅವುಗಳು ಯಾವ್ಯಾವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು ಎನ್ನುವ ಮಾಹಿತಿಯ ಫಲಕ ಅಳವಡಿಸಿ ಜನರಿಗೆ ತಿಳಿಸಲಾಗುತ್ತದೆ. ಈ ಮೂಲಕ ಸೇನೆಯ ಶೌರ್ಯವನ್ನು ಜನರಿಗೆ ತಿಳಿಸುವುದು ಮತ್ತು ವಿಶೇಷವಾಗಿ ಯುವಜನರನ್ನು ಸೇನೆಗೆ ಸೇರುವಂತೆ ಪ್ರೇರಣೆ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ.
ದೇಶಕ್ಕಾಗಿ ಹೋರಾಡುವ ಯೋಧರ ನೆನಪಿಗಾಗಿ ನಿರ್ಮಾಣವಾಗುತ್ತಿದೆ ನೂತನ ಸ್ಮಾರಕ ಎಲ್ಲಿ ಗೊತ್ತಾ?