ಬೆಳಗಾವಿ, ಸೆ.27: ಗಡಿ ಜಿಲ್ಲೆ ಬೆಳಗಾವಿಯ ರೈತರು ಮಳೆ ಇಲ್ಲದ್ದಕ್ಕೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅದರಲ್ಲೂ ಬೆಳಗಾವಿ(Belagavi) ತಾಲೂಕಿನ ಯಳ್ಳೂರ ಎನ್ನುವ ಒಂದೇ ಗ್ರಾಮದಲ್ಲಿ 1200 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಸಂಪೂರ್ಣವಾಗಿ ಒಣಗಿ ಹೋಗಿದೆ. ಹೌದು, ಶೇಂಗಾ ಮೇಲ್ಭಾಗದಲ್ಲಿ ಹಸಿರಿದ್ದರೂ, ಒಳಗೆ ಕಾಯಿಯೇ ಬಿಡದೇ ಹಾಳಾಗಿ ಹೋಗಿದೆ. ಇನ್ನು ಗದ್ದೆಗಳಲ್ಲಿ ಬೆಳೆಗಿಂತ ಕಸವೇ ಹೆಚ್ಚಾಗಿ ಕಂಡು ಬಂದಿದ್ದು, ಹಳದಿಯಾಗಿ ಹಾಳಾಗಿದೆ. ಇದೀಗ ತಾನೇ ಕಷ್ಟಪಟ್ಟು ಬೆಳೆದು, ತನ್ನ ಕೈಯಾರೇ ಭತ್ತವನ್ನು ರೈತ ಕಿತ್ತೆಸೆಯುತ್ತಿದ್ದಾನೆ.
ಒಣಗಿದ ಭತ್ತ ಜಾನುವಾರುಗಳಿಗೆ ತಿನ್ನಲು ಕೂಡ ಬರದ ಕಾರಣ ತಾವೇ ಕಷ್ಟಪಟ್ಟು ಬೆಳೆಸಿದ್ದ ಬೆಳೆಯನ್ನು ಇದೀಗ ರೈತರು ಕಿತ್ತು ಎಸೆಯುತ್ತಿದ್ದಾರೆ. ಬೆಳಗಾವಿ ತಾಲೂಕು ಸೇರಿದಂತೆ ಇಡೀ ಜಿಲ್ಲೆಯಲ್ಲಿ ಇಪ್ಪತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ, ಇದೀಗ ಒಣಗಿ ಹಾಳಾಗಿದೆ. ಸರ್ಕಾರ ಪರಿಹಾರ ಕೊಡಬೇಕು ಇಲ್ಲವಾದರೆ, ಆತ್ಮಹತ್ಯೆ ಒಂದೇ ದಾರಿ ಎಂದು ರೈತರು ಒಡಲಾಳದ ಕಿಚ್ಚಿನಿಂದ ಮಾತಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ರೈತರ ಹೋರಾಟಕ್ಕೆ ಮಣಿದ ಸರ್ಕಾರ; ಭದ್ರಾ ಬಲದಂಡೆ , ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ
ಇದು ಬರೀ ಭತ್ತದ ಪರಿಸ್ಥಿತಿ ಮಾತ್ರ ಅಲ್ಲ, ಶೇಂಗಾ ಮತ್ತು ಸೋಯಾ ಪರಿಸ್ಥಿತಿಯೂ ಇದೇ ಹಂತಕ್ಕೆ ಬಂದು ತಲುಪಿದೆ. ಬೆಳಗಾವಿ ತಾಲೂಕಿನ ಔಚಾರಹಟ್ಟಿ ಗ್ರಾಮದಲ್ಲಿ ಅತೀ ಹೆಚ್ಚು ಶೇಂಗಾ ಮತ್ತು ಸೋಯಾ ಬೆಳೆಯನ್ನು ರೈತರು ಬೆಳೆದಿದ್ದು, ಇದೀಗ ಎರಡು ಬೆಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಶೇಂಗಾ ಬೆಳೆಯನ್ನ ಮೇಲ್ಭಾಗದಿಂದ ನೋಡಿದವರಿಗೆ ಭರಪೂರ ಬೆಳೆ ಬಂದಿದೆ ಎನ್ನುವ ರೀತಿ ಭಾಸವಾಗುತ್ತದೆ. ಆದ್ರೆ, ಅದೇ ಶೇಂಗಾ ಬಳ್ಳಿಯನ್ನು ಕಿತ್ತು ನೋಡಿದರೆ, ಎರಡ್ಮೂರು ಕಾಯಿ ಒಂದು ಗಿಡದಲ್ಲಿ ಆಗಿವೆ. ಅದು ಕೂಡ ಸರಿಯಾಗಿ ಬೆಳೆದಿಲ್ಲ.ಇದರಿಂದ ಶೇಂಗಾ ಬೆಳೆ ಕೂಡ ಕೈಕೊಟ್ಟಿದೆ.
ಇದರ ಜೊತೆಗೆ ಸೋಯಾ ಬೆಳೆಯನ್ನು ಕೆಲ ರೈತರು ಬೆಳೆದಿದ್ದು, ಸೋಯಾ ಬೆಳೆಗಿಂತ ಹೆಚ್ಚಾಗಿ ಕಸ ಬೆಳೆದು ನಿಂತಿದೆ. ಬೆಳೆದ ಸೋಯಾ ಕೂಡ ಸರಿಯಾಗಿ ಕಾಯಿ ಬಿಡದೇ ಆ ಬೆಳೆಯೂ ಇದೀಗ ಒಣಗಿ ಹಾಳಾಗುತ್ತಿದೆ. ಇಷ್ಟೆಲ್ಲ ರೈತರು ಸಂಕಷ್ಟಕ್ಕೆ ಸಿಲುಕಿ ನಲಗುತ್ತಿದ್ದರೂ, ಯಾವೊಬ್ಬ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುತ್ತಿಲ್ಲ, ಸರ್ವೇ ಮಾಡುತ್ತಿಲ್ಲ. ಎಕರೆಗೆ ಐವತ್ತರಿಂದ ಅರವತ್ತು ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದು, ಸರ್ಕಾರ ಕೂಡಲೇ ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಬಂದ್ ಪರಿಣಾಮ; ಚಿಕ್ಕಬಳ್ಳಾಪುರದಲ್ಲಿ ಕುಸಿದ ಹೂ ಬೆಲೆ, ಹೂಗಳನ್ನು ತಿಪ್ಪೆ ಗುಂಡಿಗೆ ಸುರಿದ ರೈತರು
ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಏಳು ನದಿಗಳು ಹರಿಯುತ್ತಿದ್ರೂ, ಯಾವುದಕ್ಕೂ ಪ್ರಯೋಜನ ಮಾತ್ರ ಆಗುತ್ತಿಲ್ಲ. ಇನ್ನೂ ಇದೇ ಬಾರಿ ಅತೀ ಕಡಿಮೆ ಮಳೆಯಾಗಿದ್ದು, ಇದರಿಂದ ಕಷ್ಟಪಟ್ಟು ಬೆಳೆದಿದ್ದ ಭತ್ತ, ಸೋಯಾ, ಶೇಂಗಾ ಸೇರಿದಂತೆ ಸಾಕಷ್ಟು ಬೆಳೆಗಳು ಹಾಳಾಗಿವೆ. ಸಾಲ ಮಾಡಿ ಬೆಳೆ ಬೆಳೆಯಲು ಮುಂದಾದ ರೈತರು ಇದೀಗ ದಿಕ್ಕೆ ತೋಚದ ಸ್ಥಿತಿಯಲ್ಲಿದ್ದು, ಕೂಡಲೇ ಸರ್ಕಾರ ಎಚ್ಚೆತ್ತು ಸರ್ವೇ ಮಾಡಿಸಿ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ಕೊಟ್ಟು ರೈತರನ್ನು ಬದುಕಿಸುವ ಕೆಲಸ ಮಾಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 am, Wed, 27 September 23