ಶಾಸಕ ರಮೇಶ್​ ಜಾರಕಿಹೊಳಿ ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್​, ಇಂದು ಬೆಳಗ್ಗೆಯೇ ಸೀದಾ ಮನೆಗೆ

ಇದೀಗ ರಮೇಶ್ ಜಾರಕಿಹೊಳಿಗೆ ಬಿಪಿ, ಶುಗರ್ ಕಂಟ್ರೋಲ್ ಆಗಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಅವರನ್ನು ನೇರವಾಗಿ ಮನೆಗೆ ಕರೆದುಕೊಂಡು ಬಂದ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅವರು ರಮೇಶ್ ಜಾರಕಿಹೊಳಿ‌ಗೆ ಮನೆಯಲ್ಲೇ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ.

  • TV9 Web Team
  • Published On - 8:08 AM, 7 Apr 2021
ಶಾಸಕ ರಮೇಶ್​ ಜಾರಕಿಹೊಳಿ ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್​, ಇಂದು ಬೆಳಗ್ಗೆಯೇ ಸೀದಾ ಮನೆಗೆ
ಆಸ್ಪತ್ರೆಯಿಂದ ಹೊರಬಂದ ರಮೆಶ್​ ಜಾರಕಿಹೊಳಿ

ಬೆಳಗಾವಿ: ಎರಡು ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಯಿಂದ ಇಂದು ಬೆಳಗ್ಗೆಯೇ ಡಿಸ್ಚಾರ್ಜ್​ ಮಾಡಲಾಗಿದೆ. ಏಪ್ರಿಲ್ 4ರಂದು ರಾತ್ರಿ 10.30ರ ಸುಮಾರಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಬಿಪಿ, ಶುಗರ್ ಜಾಸ್ತಿಯಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಏಪ್ರಿಲ್ 1ರಂದು ರಮೇಶ್ ಜಾರಕಿಹೊಳಿ‌ಗೆ ಕೊರೊನಾ ಸೋಂಕು ಧೃಡವಾಗಿದ್ದು, ಮನೆಯಲ್ಲೇ ಕ್ವಾರಂಟೈನ್​ ಆಗಿದ್ದ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಗೋಕಾಕ ತಾಲೂಕು ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದರು. ಇದೀಗ ರಮೇಶ್ ಜಾರಕಿಹೊಳಿಗೆ ಬಿಪಿ, ಶುಗರ್ ಕಂಟ್ರೋಲ್ ಆಗಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಅವರನ್ನು ನೇರವಾಗಿ ಮನೆಗೆ ಕರೆದುಕೊಂಡು ಬಂದ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅವರು ರಮೇಶ್ ಜಾರಕಿಹೊಳಿ‌ಗೆ ಮನೆಯಲ್ಲೇ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ.

ರಮೇಶ್​ಗೆ ಕೊರೊನಾ ಬಂದಿದ್ದು ಸುಳ್ಳು: ಸಿಡಿ ಸಂತ್ರಸ್ತೆ ಪರ ವಕೀಲರಿಂದ ಆರೋಪ
ಶಾಸಕ ರಮೇಶ್​ ಜಾರಕಿಹೊಳಿ ವಿರುದ್ಧ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಪರ ವಕೀಲರಾದ ಕೆ.ಎನ್.ಜಗದಿಶ್ ಕುಮಾರ್ ಮತ್ತು ವಕೀಲ ಸೂರ್ಯ ಮುಕುಂದರಾಜ್ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್​ಗೆ ನಿನ್ನೆ ದೂರು ನೀಡಿದ್ದರು. ಶಾಸಕ ರಮೇಶ್​​ ಜಾರಕಿಹೊಳಿ ಅನಾರೋಗ್ಯ ಕಾರಣ ನೀಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದು, ಪ್ರಕರಣದ ವಿಚಾರಣೆಗಾಗಿ ಶಾಸಕ ರಮೇಶ್​​ ಜಾರಕಿಹೊಳಿ ಏಪ್ರಿಲ್ 5ರಂದು ಹಾಜರಾಗಬೇಕಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಸಚಿವ ಬೈರತಿ ಬಸವರಾಜ ಅವರು ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇದೆ ಎಂದು ಹೇಳಿದ್ದಾರೆ. ಈ ಮೂಲಕ ಎಸ್​ಐಟಿ ಮೇಲೆ ಒತ್ತಡ ಹೇರುವ ಕೆಲಸ ನಡೆಸಲಾಗಿದೆ. ಶಾಸಕ ರಮೇಶ್ ಜಾರಕಿಹೊಳಿ ಪಿಪಿಇ ಕಿಟ್ ಮತ್ತು ಬಟ್ಟೆ ಮಾಸ್ಕ್ ಧರಿಸಿರುವ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ ಎಂದು ದೂರಿನಲ್ಲಿ ಹೇಳಿದ್ದರು.

ಶಾಸಕ ರಮೇಶ್ ಜಾರಕಿಹೊಳಿ ಸಚಿವ ಡಾ. ಸುಧಾಕರ್ ಅವರಿಗೆ ಆತ್ಮೀಯ ಗೆಳೆಯರು. ಹೀಗಾಗಿ ಸರ್ಕಾರಿ ಅಸ್ಪತ್ರೆ ವೈದ್ಯರ ಮೇಲೆ ಪ್ರಭಾವ ಬೀರಿದ್ದಾರೆ. ಈ ಮೂಲಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾರೆ ಎಂದು ಅರೋಪಿಸಿ ದೂರು ನೀಡಲಾಗಿದೆ. ಶಾಸಕ ರಮೇಶ್ ಜಾರಕಿಹೊಳಿ ಕೊರೊನ ನಾಟಕ ಆಡುತ್ತಿದ್ದಾರೆ. ಹೀಗಾಗಿ ನುರಿತ ವೈದ್ಯರು ತಂಡದಿಂದ ಪರಿಶೀಲನೆ ಮಾಡಿಸಬೇಕು. ಹೈಕೋರ್ಟ್ ಪ್ರಕರಣದ ವರದಿಯನ್ನು ಕೇಳಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಪ್ರಭಾವ ಬಳಸಿ ತನಿಖೆ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರು ಸಲ್ಲಿಸಲಾಗಿದೆ.

ಇದನ್ನೂ ಓದಿ:
ರಮೇಶ್ ಜಾರಕಿಹೊಳಿಗೆ ಕೊರೊನಾ ಇಲ್ಲ, ಅವರದು ನಾಟಕ: ವಕೀಲ ಜಗದೀಶ್ ದೂರು 

ರಮೇಶ್​ ಜಾರಕಿಹೊಳಿಗೆ ಏನಾಗಿತ್ತು? ಉಸಿರಾಟದ ತೊಂದರೆಯಾಗಿ, ನಿನ್ನೆ ರಾತ್ರಿಯೇ ಐಸಿಯುಗೆ ದಾಖಲು ಎಂದ ಡಾ.ರವೀಂದ್ರ

(Ramesh Jarkiholi discharge from Gokak Taluk hospital ICU and Doctors suggest him to stay under Home quarantine)