ಆಕ್ಸಿಜನ್​ ಸಿಗದೆ ಬೆಳಗಾವಿಯಲ್ಲಿ ಮೂವರು ಸಾವು; ಆ್ಯಂಬುಲೆನ್ಸ್​ನಲ್ಲಿ ಒದ್ದಾಡಿ ಪ್ರಾಣಬಿಟ್ಟರೂ ಕೇಳುವವರಿಲ್ಲ

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆ್ಯಂಬುಲೆನ್ಸ್​ ಚಾಲಕ ಶಿವಾನಂದ ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ಕೊಟ್ಟವರಿಗೆ ಬೆಡ್ ಕೊಡ್ತಿದ್ದಾರೆ, ದಂಧೆ ಮಾಡ್ತಿದ್ದಾರೆ. ಕಳೆದ ಅರ್ಧ ಗಂಟೆಯಿಂದ ಕಾಯುತ್ತಿದ್ದೇನೆ. ಆದರೆ, ಯಾರು ಕೂಡ ಕ್ಯಾರೆ ಅನ್ನುತ್ತಿಲ್ಲ. ಹಣವಂತರಿಗೆ ಬೆಡ್ ಕೊಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • TV9 Web Team
  • Published On - 12:21 PM, 4 May 2021
ಆಕ್ಸಿಜನ್​ ಸಿಗದೆ ಬೆಳಗಾವಿಯಲ್ಲಿ ಮೂವರು ಸಾವು; ಆ್ಯಂಬುಲೆನ್ಸ್​ನಲ್ಲಿ ಒದ್ದಾಡಿ ಪ್ರಾಣಬಿಟ್ಟರೂ ಕೇಳುವವರಿಲ್ಲ
ಪ್ರಾತಿನಿಧಿಕ ಚಿತ್ರ

ಬೆಳಗಾವಿ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಸೋಂಕಿತರು ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದೇ ಪ್ರಾಣ ಬಿಡುತ್ತಿದ್ದಾರೆ. ಇಂದು (ಮಾರ್ಚ್​ 4) ಬೆಳಗಾವಿಯಲ್ಲಿ ಆಕ್ಸಿಜನ್​ ಕೊರತೆಯಿಂದಾಗಿ ಮೂವರು ಆ್ಯಂಬುಲೆನ್ಸ್​ನಲ್ಲಿಯೇ ಒದ್ದಾಡಿ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ನಿನ್ನೆ (ಮಾರ್ಚ್​ 3) ಚಾಮರಾಜನಗರದಲ್ಲಿ 24 ಮಂದಿ ಆಕ್ಸಿಜನ್​ ಸಮಸ್ಯೆಯಿಂದ ಮೃತಪಟ್ಟಿದ್ದು ಇಂದು ಬೆಳಗಾವಿಯಲ್ಲೇ ಮತ್ತದೇ ರೀತಿಯ ಘಟನೆ ಮರುಕಳಿಸುವ ಮೂಲಕ ಸಾವಿನ ಸರಣಿ ಮುಂದುವರೆದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆ್ಯಂಬುಲೆನ್ಸ್​ ಚಾಲಕ ಶಿವಾನಂದ, ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ಕೊಟ್ಟವರಿಗೆ ಬೆಡ್ ಕೊಡ್ತಿದ್ದಾರೆ, ದಂಧೆ ಮಾಡ್ತಿದ್ದಾರೆ. ಕಳೆದ ಅರ್ಧ ಗಂಟೆಯಿಂದ ಕಾಯುತ್ತಿದ್ದೇನೆ. ಆದರೆ, ಯಾರು ಕೂಡ ಕ್ಯಾರೆ ಅನ್ನುತ್ತಿಲ್ಲ. ಹಣವಂತರಿಗೆ ಬೆಡ್ ಕೊಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೀಗ ಮತ್ತೊಂದು ರೋಗಿಯನ್ನ ಆ್ಯಂಬುಲೆನ್ಸ್ ಡ್ರೈವರ್ ಶಿವಾನಂದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಮ್ಲಜನಕ ಸಿಗದಿದ್ದರೆ ಈ ರೋಗಿಯೂ ಸಾಯಲಿದ್ದಾರೆ ಎಂದು ಸ್ವತಃ ಚಾಲಕ ಆತಂಕ ತೋಡಿಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದ ಇಲ್ಲಿವರೆಗೂ ಆಕ್ಸಿಜನ್ ಸಿಗದೇ ನನ್ನ ಆ್ಯಂಬುಲೆನ್ಸ್​ನಲ್ಲಿಯೇ ಮೂರು ಜನರು ಸತ್ತಿದ್ದಾರೆ. ಯಾರಿಗೆ ಸಮಸ್ಯೆ ಹೇಳೋದು ಎಂದು ಬೇಸರ ಹೊರಹಾಕಿದ್ದಾರೆ.

ಜನ ಜೀವ ಕಳೆದುಕೊಳ್ಳದಿರುವುದು ಮುಖ್ಯ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ತಪರಾಕಿ
ದೆಹಲಿ: ಕೊವಿಡ್ 19ರ ನಿರ್ವಹಣೆಯ ಕುರಿತು ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್, ಜನರ ಜೀವ ಉಳಿಸುವುದು ಮುಖ್ಯ. ಯಾವುದೇ ಕಾರಣಕ್ಕೂ ಜನರು ಜೀವ ಕಳೆದುಕೊಳ್ಳಬಾರದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇತರ ದೇಶಗಳಿಂದ ಆಮದಾಗುತ್ತಿರುವ ಮೆಡಿಕಲ್ ಆಕ್ಸಿಜನ್​ ಭಾತವನ್ನು ತಲುಪಿದೆಯೇ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಕೊವಿಡ್​ಗೆ ಸಂಬಂಧಿಸಿದ ಸ್ವಯಂ ಪ್ರೇರಿತ ದೂರಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಹಂಚಿಕೆ ಮಾಡಬೇಕು. ಆಮ್ಲಜನಕ ಲಭ್ಯವಿದ್ದರೂ ಸಹ ಇತರ ಕಾರಣಗಳಿಂದ ಜನರು ಜೀವ ಕಳೆದುಕೊಳ್ಳಬಾರದು. ಇತರ ದೇಶಗಳಿಂದ ಆಮದಾಗುವ ಆಕ್ಸಿಜನ್​ನ್ನು ಯುದ್ಧೋಪಾದಿಯಲ್ಲಿ ತರಿಸಿಕೊಂಡು ರಾಜ್ಯಗಳಿಗೆ ಹಂಚಿಕೆ ಮಾಡಿ ಎಂದು  ನಿರ್ದೇಶಿಸಿದೆ.

ಇದೇ ವೇಳೆ ಸುಪ್ರೀಂಕೋರ್ಟ್​ನಲ್ಲಿಯೂ ಕೊವಿಡ್ ಸಂಬಂಧಿತ ವಿಚಾರಣೆ  ನಡೆದಿದೆ.  ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರತಿದಿನ ಅಗತ್ಯವಿರುವ 700 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್​ನ್ನು ಪೂರೈಸುವ ಕುರಿತು ಇಂದು ರಾತ್ರಿಯ ಒಳಗೆ ಖಚಿತಪಡಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಗಂಭೀರ ಸೂಚನೆ ನೀಡಿದೆ. ಈ ಮುಂಚಿನ 490 ಮೆಟ್ರಿಕ್ ಟನ್ ಆಮ್ಲಜನಕದ ಬೇಡಿಕೆ ಬದಲಾದ ಪರಿಸ್ಥಿತಿಯಲ್ಲಿ ಶೇ 133ರಷ್ಟು ಏರಿಕೆಯಾಗಿದೆ. ಹೀಗಾಗಿ 700 ಮೆಟ್ರಿಕ್ ಟನ್ ಆಕ್ಸಿಜನ್​ನ್ನು ಪೂರೈಸುವ ಕುರಿತು ಖಚಿತಪಡಿಸಲು ಕೋರ್ಟ್ ತಿಳಿಸಿದೆ.

ಇದನ್ನೂ ಓದಿ:
ಬೆಡ್​ ಸಿಕ್ಕಿಲ್ಲ.. ಮೆಟ್ರೋ ನಿಲ್ದಾಣದ ಕೆಳಗೆ ಆ್ಯಂಬುಲೆನ್ಸ್​ನಲ್ಲೇ ಚಿಕಿತ್ಸೆ | ಅಧಿಕಾರಿಗಳೇ ಇತ್ತ ನೋಡಿ..! 

24 ಗಂಟೆಗಳ ಅವಧಿಯಲ್ಲಿ 1,400 ಕಿ.ಮೀ ಪ್ರಯಾಣಿಸಿ ಗೆಳೆಯನಿಗೆ ಆಕ್ಸಿಜನ್ ನೀಡಿದ್ದಾರೆ ಈ ವ್ಯಕ್ತಿ!