ಬೆಳಗಾವಿ: ನಂಜಿನಕೊಡಲ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಗ್ರಾ.ಪಂ. ಸದಸ್ಯರ ಕಾರು ತಡೆದು ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂಜಿನಕೊಡಲ ಮತದಾನಕ್ಕೆ ಬಂದ ಗ್ರಾ.ಪಂ. ಸದಸ್ಯರ ಕಾರು ತಡೆದು ಜುಂಜುವಾಡ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ನಿನ್ನೆ (ಫೆ.03) ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೀತು. ಈ ವೇಳೆ ಇಂತಹದೊಂದು ಹೈಡ್ರಾಮಾ ನಡೆದಿದೆ.
ನಂಜಿನಕೊಡಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಐದು ಗ್ರಾಮಗಳು ಬರುತ್ತವೆ. ಸಾಗರೆ, ಜುಂಜವಾಡ, ಕೊಂಚಿಕೊಪ್ಪ, ಗದ್ದಿಬೈಲ ಗ್ರಾಮಗಳು ನಂಜಿನಕೊಡಲ ಗ್ರಾ.ಪಂ.ವ್ಯಾಪ್ತಿಗೆ ಬರುತ್ತವೆ. ಗ್ರಾ.ಪಂ. ಅಧ್ಯಕ್ಷರಾಗಿ ಸಾಗರೆ ಗ್ರಾಮದ ಜಾನವ್ ಪಾಟೀಲ್ ಆಯ್ಕೆಯಾಗಿದ್ದರು. ಹಾಗೂ ಉಪಾಧ್ಯಕ್ಷರಾಗಿ ನಂಜಿನಕೊಡಲ ಗ್ರಾಮದ ಜಯಶ್ರೀ ಆಯ್ಕೆಯಾಗಿದ್ದರು. ಆದ್ರೆ ಅಧ್ಯಕ್ಷರಾಗಿ ಜಾನವ್ ಪಾಟೀಲ್ ಬೆಂಬಲಿಸಿದ್ದಕ್ಕೆ ಮತ್ತೊಂದು ಪೆನಲ್ ವಿರೋಧ ವ್ಯಕ್ತಪಡಿಸಿದೆ.
ಅಲ್ಲದೆ ಜುಂಜವಾಡ ಗ್ರಾಮದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಕಾರು ತಡೆದು ಜುಂಜವಾಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಲಘು ಲಾಠಿ ಪ್ರಹಾರ ಮಾಡುವ ಮೂಲಕ ಪೊಲೀಸರು ಜನರನ್ನ ನಿಯಂತ್ರಿಸಿದ್ರು. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.