ಬಳ್ಳಾರಿ ಬಾಣಂತಿಯರ ಸಾವು: ಆರೋಗ್ಯ ಸಚಿವ ಗುಂಡೂರಾವ್​ ಬಿಚ್ಚಿಟ್ಟ ಸತ್ಯ ಏನು? ಇಲ್ಲಿದೆ ಓದಿ

| Updated By: ವಿವೇಕ ಬಿರಾದಾರ

Updated on: Dec 17, 2024 | 2:55 PM

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಐದು ಬಾಣಂತಿಯರು ಮೃತಪಟ್ಟಿದ್ದಾರೆ. ನವೆಂಬರ್ 9-11ರ ನಡುವೆ 34 ಸಿಸೇರಿಯನ್ ಶಸ್ತ್ರಚಿಕಿತ್ಸೆಗಳಾದವು. ಶಸ್ತ್ರಚಿಕಿತ್ಸೆಯ ಬಳಿಕ ಐದು ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಔಷಧ ಕಂಪನಿಯಿಂದ ಪೂರೈಕೆಯಾದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿ ದೋಷ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ನಡೆಯುತ್ತಿದ್ದು, ಒಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಬಳ್ಳಾರಿ ಬಾಣಂತಿಯರ ಸಾವು: ಆರೋಗ್ಯ ಸಚಿವ ಗುಂಡೂರಾವ್​ ಬಿಚ್ಚಿಟ್ಟ ಸತ್ಯ ಏನು? ಇಲ್ಲಿದೆ ಓದಿ
ಸಚಿವ ದಿನೇಶ್​ ಗುಂಡೂರಾವ್
Follow us on

ಬೆಳಗಾವಿ, ಡಿಸೆಂಬರ್​ 17: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (BIMS) ಐವರು ಬಾಣಂತಿಯರು ಮೃತಪಟ್ಟಿರುವ ವಿಚಾರ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಾಣಂತಿಯರ ಸಾವು ಕರ್ನಾಟಕ ಸರ್ಕಾರದ (Karnataka Government) ನಿದ್ದೆಗೆಡಿಸಿದೆ. ಬಾಣಂತಿಯರ ಸಾವಿನ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಪರಿಷತ್​ನಲ್ಲಿ​ ಉತ್ತರ ನೀಡಿದ್ದು, ನವೆಂಬರ್​ 11 ರಿಂದ ಬಿಮ್ಸ್​ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಾಗಿದೆ ಎಂದು ಹೇಳಿದರು.

ಬಾಣಂತಿಯರ ಸಾವಿನ ವಿಚಾರವಾಗಿ ವಿಧಾನ​ ಪರಿಷತ್ ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿದ ಅವರು, ನವೆಂಬರ್ 9, 10 ಮತ್ತು 11 ಮೂರು ದಿನಗಳಲ್ಲಿ 34 ಸಿಸೇರಿಯನ್ ಶಸ್ತ್ರಚಿಕಿತ್ಸೆಗಳಾಗಿವೆ. ಶಸ್ತ್ರಚಿಕಿತ್ಸೆ ಬಳಿಕ ಏಳು ಮಂದಿ ಬಾಣಂತಿಯರಿಗೆ ತೊಂದರೆಯಾಗಿದ್ದು, ಇದರಲ್ಲಿ ಐವರು ಮೃತಪಟ್ಟಿದ್ದಾರೆ. ಘಟನೆ ವರದಿಯಾದ ಕೂಡಲೇ ನುರಿತ ವೈದ್ಯರ ತಂಡವನ್ನು ರಚನೆ ಮಾಡಿ, ತನಿಖೆ ನಡೆಸಲಾಯಿತು. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ 1 ಹೊಸ ಬ್ಯಾಚ್ ​ಅನ್ನು ನವೆಂಬರ್‌ 9 ರಂದು ಬಳಸಲಾಗಿದೆ. ಇದರಿಂದ ತೊಂದರೆಯಾಗಿರಬಹುದು ಎಂದು ವೈದ್ಯರ ತಂಡ ಹೆಚ್ಚು ಸಂಶಯವನ್ನು ವ್ಯಕ್ತಪಡಿಸಿದರು ಎಂದು ತಿಳಿಸಿದರು.

ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಗ್ಗೆ 10 ತಿಂಗಳ ಹಿಂದೆಯೇ ಅನುಮಾನ ವ್ಯಕ್ತವಾಗಿತ್ತು. ಮಾರ್ಚ್​ನಿಂದ ಆಗಸ್ಟ್​ವರೆಗೆ ಈ ದ್ರಾವಣ ಬಳಸಲು ಅನುಮತಿ ನೀಡಿರಲಿಲ್ಲ. 22 ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಬ್ಯಾಚ್​ಗಳನ್ನು ಬಳಸದಂತೆ ಸೂಚನೆ ನೀಡಿದ್ದೇವು. ಎಲ್ಲ ಕಡೆ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಯನ್ನು ಹಿಂಪಡೆದಿದ್ದೇವೆ ಎಂದರು.

ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವಿಗೆ ಔಷಧ ಮಾತ್ರ ಕಾರಣವಲ್ಲ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ಫೋಟಕ ಹೇಳಿಕೆ

ಪಶ್ಚಿಮ ಬಂಗಾಳದ ಫಾರ್ಮಾಸ್ಯುಟಿಕಲ್ಸ್ ಔಷಧ ಕಂಪನಿ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಕೆ ಮಾಡಿದೆ. ಕೇಂದ್ರ ಔಷಧ ನಿಯಂತ್ರಣ ಇಲಾಖೆ ವರದಿಯನ್ನು ಸಲ್ಲಿಸಿತ್ತು. ಹೀಗಾಗಿ ನಮಗೆ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಸುವುದು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದರು.

ಬಳ್ಳಾರಿಯಲ್ಲಿ ಬಾಣಂತಿಯರ ಸಾವಾದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ನಮಗೆ ಫಾರ್ಮ್ಯಾಸುಟಿಕಲ್‌ ಕಂಪನಿಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದಲ್ಲಿ ಡ್ರಗ್ ಫಾರ್ಮಾ ಕಂಪನಿಗಳು ಅತಿ ಹೆಚ್ಚಾಗಿವೆ. ಅನೇಕ ರೀತಿ ರಕ್ಷಣೆ ಫಾರ್ಮಾ ಕಂಪನಿಗಳಿಗೆ ಸಿಗುತ್ತಿದೆ. ಕೆಲವು ಕಂಪನಿಗಳು ವಿದೇಶಕ್ಕೆ ಒಂದು ಕ್ವಾಲಿಟಿ, ನಮ್ಮ ದೇಶಕ್ಕೆ ಒಂದು ಕ್ವಾಲಿಟಿ ಪೂರೈಕೆ ಮಾಡುತ್ತವೆ. ಕ್ವಾಲಿಟಿ ಕಾಂಪ್ರಮೈಸ್ ಆಗುತ್ತಿದೆ ಎಂದು ಹೇಳಿದರು.

ಟ್ವಿಟರ್​ ಪೋಸ್ಟ್​

ಬಳ್ಳಾರಿಯ ಪ್ರಕರಣ ಕುರಿತು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಪತ್ರ ಬರೆದು ಮಾಹಿತಿ ಪಡದಿದ್ದೇವೆ. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯ ತೋರಿದ ಔಷಧ ನಿಯಂತ್ರಕ ಡಾ.ಉಮೇಶ್​ರನ್ನು ಅಮಾನತು ಮಾಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯಪಸ್ಥಾಪಕ ನಿರ್ದೇಶಕರಿಗೆ ಇಲಾಖಾ ವಿಚಾರಣೆಗೆ ಶೋಕಾಸ್ ನೊಟೀಸ್ ನೀಡಲಾಗಿದೆ. ಎನ್ಎಬಿಎಲ್​ ಲ್ಯಾಬ್​ಗಳ ಪ್ರಯೋಗ ವಿಧಾನದ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ಕೂಲಂಕುಷ ವರದಿಗೆ ಸಮಿತಿ ರಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಕಳೆದ 5 ವರ್ಷದಲ್ಲಿ ತಾಯಂದಿರ ಮರಣ ಪ್ರಮಾಣ

2019-20ರಲ್ಲಿ- 662, 2020-21ರಲ್ಲಿ- 714, 2021-22ರಲ್ಲಿ  – 594, 2022-23ರಲ್ಲಿ – 527, 2023-24ರಲ್ಲಿ – 518, 2024-25 (ನವೆಂಬರ್​ವರೆಗೆ)- 348 ತಾಯಂದಿರು ಮೃತಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:48 pm, Tue, 17 December 24