ಸರ್ಕಾರದ ವಿಫಲ ಕಾರ್ಯನೀತಿ, ಜನರ ಅಸಹಕಾರ: ಕೊರೊನಾ ಬೆಂಗಳೂರಿಗರನ್ನು ಹೇಗೆ ಕಾಡುತ್ತಿದೆ ನೋಡಿ, ಇಲ್ಲಿದೆ ಸಂಪೂರ್ಣ ವಿವರ

Coronavirus Updates: ಬೆಂಗಳೂರಿನಲ್ಲಿ ಕಳೆದ ವರ್ಷದಿಂದ ಇಲ್ಲಿಯ ತನಕ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 8,87,086 ಆಗಿದ್ದು ಅದರ ಸುಮಾರು ಶೇ.17ರಷ್ಟು ಭಾಗ ಏಪ್ರಿಲ್ 29ರಿಂದ ಮೇ 5ರ ತನಕ ಕೇವಲ ಒಂದೇ ಒಂದು ವಾರದಲ್ಲಿ ಕಂಡುಬಂದಿದೆ.

ಸರ್ಕಾರದ ವಿಫಲ ಕಾರ್ಯನೀತಿ, ಜನರ ಅಸಹಕಾರ: ಕೊರೊನಾ ಬೆಂಗಳೂರಿಗರನ್ನು ಹೇಗೆ ಕಾಡುತ್ತಿದೆ ನೋಡಿ, ಇಲ್ಲಿದೆ ಸಂಪೂರ್ಣ ವಿವರ
ಕೊರೊನಾ ವೈರಸ್
Follow us
Skanda
|

Updated on:May 07, 2021 | 2:42 PM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಉಂಟುಮಾಡುತ್ತಿರುವ ಹಾನಿ ಬಹುಗಂಭೀರವಾದದ್ದು. ಬಹುತೇಕ ಒಂದು ತಿಂಗಳ ಹಿಂದೆಯೇ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಆಗುವ ಸುಳಿವು ರಾಜ್ಯಕ್ಕೆ ಸಿಕ್ಕಿತ್ತಾದರೂ ಆರಂಭಿಕ ಹಂತದಲ್ಲಿಯೇ ಅದನ್ನು ನಿಯಂತ್ರಣ ಮಾಡದ ಕಾರಣ ಸಮಸ್ಯೆ ಬಿಕ್ಕಟ್ಟಾಗಿ ಪರಿವರ್ತನೆ ಆಗಿದೆ. ಇಡೀ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಶೇ.25ರಷ್ಟು ಭಾಗವನ್ನು ಹೊಂದಿರುವ 10 ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ. ಅಂದರೆ ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆ ಬೆಂಗಳೂರು ನಗರ ಎನ್ನುವುದು ನಿಜಕ್ಕೂ ಕಳವಳಕಾರಿ ಸಂಗತಿ. ಇನ್ನೊಂದು ಗಮನಾರ್ಹ ವಿಚಾರವೆಂದರೆ ಮೊದಲ ಸ್ಥಾನದಲ್ಲಿರುವ ಬೆಂಗಳೂರು ಶೇ.25ರಲ್ಲಿ ಶೇ.9.13ರಷ್ಟು ಪಾಲನ್ನು ಹೊಂದಿದ್ದರೆ ಎರಡನೇ ಸ್ಥಾನದಲ್ಲಿರುವ ಪುಣೆ ಕೇವಲ ಶೇ.3.16ರಷ್ಟು ಪ್ರಕರಣಗಳನ್ನು ಹೊಂದಿದೆ. ಅಂದರೆ ತನ್ನ ಬೆನ್ನಿಗಿರುವ ಪುಣೆಗಿಂತಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶೇ.5.97ರಷ್ಟು ಅಧಿಕ ಪ್ರಕರಣಗಳು ದಾಖಲಾಗಿವೆ.

ಕಳೆದ ಒಂದು ವಾರದ ಅವಧಿಯಲ್ಲಿ (ಏಪ್ರಿಲ್ 29-ಮೇ 5) ಬೆಂಗಳೂರು ನಗರದಲ್ಲಿ ಸುಮಾರು 1.5ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೆಚ್ಚೂಕಡಿಮೆ 1,27,65,000 ಜನರನ್ನು ಹೊಂದಿರುವ ನಗರವೊಂದರಲ್ಲಿ ಕೇವಲ ಒಂದು ವಾರದಲ್ಲಿ 1.5ಲಕ್ಷ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರೆ ಎಂದರೆ ಇದು ಆಘಾತಕಾರಿ ಬೆಳವಣಿಗೆಯಾಗಿದೆ. ನೆರೆಯ ಮುಂಬೈ ನಗರದಲ್ಲಿ ಇದುವರೆಗೆ ದಾಖಲಾದ ಗರಿಷ್ಠ ಕೊರೊನಾ ಪ್ರಕರಣಗಳಿಗಿಂತ ಮೂರು ಪಟ್ಟು ಅಧಿಕ ಪ್ರಕರಣ ಈಗ ಬೆಂಗಳೂರಿನಲ್ಲಿ ದಾಖಲಾಗಿದೆಯೆನ್ನುವುದು ಪರಿಸ್ಥಿತಿಯ ಗಂಭೀರತೆಗೆ ಕೈಗನ್ನಡಿಯಾಗಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷದಿಂದ ಇಲ್ಲಿಯ ತನಕ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 8,87,086 ಆಗಿದ್ದು ಅದರ ಸುಮಾರು ಶೇ.17ರಷ್ಟು ಭಾಗ ಏಪ್ರಿಲ್ 29ರಿಂದ ಮೇ 5ರ ತನಕ ಕೇವಲ ಒಂದೇ ಒಂದು ವಾರದಲ್ಲಿ ಕಂಡುಬಂದಿದೆ. ಈ ಅವಧಿಯಲ್ಲಿ ದಾಖಲಾದ ಪ್ರಕರಣಗಳು ಕಳೆದ ವರ್ಷ ಕೊರೊನಾ ಉತ್ತುಂಗಕ್ಕೆ ತಲುಪಿದಾಗ ದಾಖಲಾಗುತ್ತಿದ್ದ ಪ್ರಕರಣಗಳಿಗಿಂತಲೂ 5 ಪಟ್ಟು ಹೆಚ್ಚಾಗಿದೆ. ಇನ್ನೂ ಆಘಾತಕಾರಿಯೆಂದರೆ 3 ತಿಂಗಳ ಹಿಂದೆ ದಾಖಲಾಗುತ್ತಿದ್ದ ಪ್ರಕರಣಗಳಿಗಿಂತಲೂ ಇದು ಶೇ.100ರಷ್ಟು ಹೆಚ್ಚಾಗಿದೆ. ಸದರಿ ವಾರದಲ್ಲಿ ಪಾಸಿಟಿವ್​ ರೇಟ್ ಕೂಡ ಅತ್ಯಧಿಕವಾಗಿದ್ದು ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಒಟ್ಟು ಜನರಲ್ಲಿ ಶೇ.37ರಷ್ಟು ಜನರಿಗೆ ಸೋಂಕು ದೃಢಪಟ್ಟಿದೆ. ಈ ಪ್ರಮಾಣವು ಕಳೆದ ವಾರ ಶೇ.20ರಷ್ಟಿದ್ದು, ಅದಕ್ಕೂ ಹಿಂದಿನ ವಾರದಲ್ಲಿ ಕೇವಲ ಶೇ.12ರಷ್ಟಿತ್ತು. ಏತನ್ಮಧ್ಯೆ ಇದರಲ್ಲಿ ಪತ್ತೆಯಾಗದ ಪ್ರಕರಣಗಳ ಪಾಲು ಎಷ್ಟಿದೆ ಎನ್ನುವುದು ಇನ್ನೂ ತಿಳಿದಿಲ್ಲವಾದ್ದರಿಂದ ಈ ಬೆಳವಣಿಗೆ ತಜ್ಞರಲ್ಲಿ ವಿಪರೀತ ಆತಂಕ ಹುಟ್ಟುಹಾಕಲು ಕಾರಣವಾಗಿದೆ.

ಸಾವಿನ ಪ್ರಕರಣದಲ್ಲೂ ಗಣನೀಯ ಏರಿಕೆ ಕಳೆದ ಒಂದು ವಾರದಲ್ಲಿ ಬೆಂಗಳೂರು ಸಕ್ರಿಯ ಪ್ರಕರಣಗಳಲ್ಲಿ ಕಂಡಂತಹ ಏರಿಕೆಯನ್ನು ಮರಣ ಪ್ರಮಾಣದಲ್ಲೂ ಕಂಡಿದೆ. ಮೇ.5ರ ಅಂತ್ಯಕ್ಕೆ ಸರಿಯಾಗಿ ಒಂದು ವಾರದ ಅವಧಿಯಲ್ಲಿ ಬೆಂಗಳೂರು 867 ಕೊರೊನಾ ಸೋಂಕಿತರ ಸಾವಿಗೆ ಸಾಕ್ಷಿಯಾಗಿದೆ. ಇದು ಮುಂಬೈ ನಗರ ಎರಡನೇ ಅಲೆಯ ಅತಿ ಕೆಟ್ಟ ಪರಿಸ್ಥಿತಿಯಲ್ಲಿ ಕಂಡ ಸಾವಿನ ಪ್ರಮಾಣಕ್ಕಿಂತಲೂ ಜಾಸ್ತಿಯಾಗಿದ್ದು, ಬೆಂಗಳೂರಿನಲ್ಲಿ ಕಳೆದ ವರ್ಷದಿಂದ ಇಲ್ಲಿಯ ತನಕ ದಾಖಲಾದ ಒಟ್ಟು ಮರಣ ಪ್ರಮಾಣದ ಶೇ.12ರಷ್ಟು ಪಾಲು ಹೊಂದಿದೆ ಎನ್ನುವುದು ಗಮನಿಸಲೇಬೇಕಾದ ವಿಚಾರ. ಇದೇ ಸಂದರ್ಭದಲ್ಲಿ ಸೋಂಕಿನಿಂದ ಸತ್ತಿದ್ದರೂ ಬೆಳಕಿಗೆ ಬಾರದ ಪ್ರಕರಣಗಳು ಒಂದಿಷ್ಟಿವೆ ಎಂಬ ಗುಮಾನಿ ಇದ್ದು, ಅದೆಲ್ಲವನ್ನೂ ಸೇರಿಸಿದರೆ ಬೆಂಗಳೂರಿನ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದು ಅವಲೋಕಿಸಬಹುದು.

ಪ್ರಸ್ತುತ ಮೇ.6ರ ಅಂತ್ಯಕ್ಕೆ ಕರ್ನಾಟಕದಲ್ಲಿ 5,17,075 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಬೆಂಗಳೂರಿನಲ್ಲಿ ರಾಜ್ಯದ ಅರ್ಧಕ್ಕಿಂತಲೂ ಅಧಿಕ (3,32,732) ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಎರಡನೇ ಅಲೆಯ ಆರಂಭಿಕ ಹಂತದಲ್ಲಿ ತಜ್ಞರು ಎಚ್ಚರಿಕೆ ನೀಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡುವುದಿಲ್ಲ ಎಂದೇ ಹಟ ಸಾಧಿಸುತ್ತಾ ಬಂದಿತ್ತು. ನಂತರದಲ್ಲಿ ಕೊರೊನಾ ಕರ್ಫ್ಯೂ ಎಂಬ ಹೆಸರಿಟ್ಟು ಲಾಕ್​ಡೌನ್​ಗಿಂತ ಸಡಿಲವಾದ ನಿಯಮಗಳನ್ನು ಜಾರಿಗೊಳಿಸಿತು. ಕಟ್ಟಡ ಕಾಮಗಾರಿ ಕೆಲಸಗಳಿಂದ ಹಿಡಿದು ಪ್ರಮುಖ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿದರೆ ಸರ್ಕಾರದ ಬೊಕ್ಕಸಕ್ಕೆ ಖೋತಾ ಆಗುತ್ತದೆ ಎಂದು ಯೋಚಿಸಿದ ಸರ್ಕಾರ ಕರ್ಫ್ಯೂ ಮೂಲಕವೇ ಕೊರೊನಾ ನಿಯಂತ್ರಿಸುವುದಾಗಿ ಹೇಳುತ್ತಾ ಬಂತು. ಜತೆಗೆ ಚುನಾವಣೆಗಳೂ ಇದ್ದ ಕಾರಣ ಇದೆಲ್ಲದರ ಬಗ್ಗೆ ದಿವ್ಯ ನಿರ್ಲಕ್ಷ್ಯ ಸಾಧಿಸಿದ ಸರ್ಕಾರವೀಗ ಕೈ ಚೆಲ್ಲುವ ಪರಿಸ್ಥಿತಿಗೆ ಬಂದು ನಿಂತಿದೆ.

ಬೇರೆ ಜಿಲ್ಲೆಗಳೂ ಅಪಾಯದ ಸುಳಿಯಲ್ಲಿ ಇದೀಗ ರಾಜ್ಯ ಸರ್ಕಾರ ಮೇ.10ರಿಂದ ಮೇ.25ರ ತನಕ 15 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಮಾಡುವುದಾಗಿ ಹೇಳಿದೆಯಾದರೂ ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಈ ಪ್ರಯತ್ನ ಯಾವ ರೀತಿಯಲ್ಲೂ ಭರವಸೆ ಮೂಡಿಸುತ್ತಿಲ್ಲ. ಬೆಂಗಳೂರಿನ ಬೆನ್ನಲ್ಲೇ ಮೈಸೂರು, ತುಮಕೂರು, ಬೆಳಗಾವಿ, ಹಾಸನ, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲೂ ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು, ಇನ್ನು ಜನರು ತಮ್ಮ ಆರೋಗ್ಯವನ್ನು ತಾವು ಕಾಪಾಡಿಕೊಳ್ಳುವತ್ತ ಗಮನ ಹರಿಸದಿದ್ದರೆ ಬೇರೆ ಜಿಲ್ಲೆಗಳೂ ಬೆಂಗಳೂರಿನಂತೆ ಸಂಕಷ್ಟ ಎದುರಿಸುವ ಪರಿಸ್ಥಿತಿ ಉದ್ಭವವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

(Bengaluru facing the worst hit by Coronavirus since the beginning of Covid 19 pandemic)

ಇದನ್ನೂ ಓದಿ: Corona Alert: ಒಂದು ವರ್ಷದ ಹಿಂದೆ ಇಡೀ ಜಗತ್ತಿನಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಹಾಗೂ ಮರಣ ಪ್ರಮಾಣ ಇಂದು ಭಾರತದಲ್ಲಿದೆ

Published On - 2:33 pm, Fri, 7 May 21